ಬೆಂಗಳೂರು: ಗೋಹತ್ಯೆ ನಿಷೇಧ ಕಾನೂನು ಜಾರಿಯಾದ ನಂತರ ವಿವಿಧ ಜಿಲ್ಲೆಗಳಲ್ಲಿ ಅನಾಥ ಗೋವುಗಳು ರಸ್ತೆಯ ಮೇಲೆ ಕಾಣಿಸಿಕೊಳ್ಳುವ ಪ್ರಮಾಣ ಹೆಚ್ಚಾಗಿತ್ತು. ವಯಸ್ಸಾದ ಮತ್ತು ಅಂಗವಿಕಲ ಗೋವುಗಳನ್ನು ಸಾಕುವ ಕಷ್ಟಗಳ ಬಗ್ಗೆ ರೈತರು ಸಹ ಅಸಹಾಯಕತೆ ತೋಡಿಕೊಂಡಿದ್ದರು. ಬಜೆಟ್ ಭಾಷಣದಲ್ಲಿ ಇದಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಿಲ್ಲೆಗೊಂದು ಗೋಶಾಲೆ ನಿರ್ಮಿಸುವುದಾಗಿ ಘೋಷಿಸಿದ್ದಾರೆ. ಈಗಾಗಲೇ ಬಹುತೇಕ ಜಿಲ್ಲೆಗಳಲ್ಲಿ ಗೋಶಾಲೆಗಳಿವೆ. ಖಾಸಗಿ ನಿರ್ವಹಣೆಯಲ್ಲಿರುವ ಗೋಶಾಲೆಗಳ ಪರಿಸ್ಥಿತಿ ಸರಿಯಿಲ್ಲ ಎಂಬ ಮಾತುಗಳಿವೆ. ಬಜೆಟ್ನಲ್ಲಿ ಘೋಷಣೆಯಾಗಿರುವ ಗೋಶಾಲೆಗಳು ಖಾಸಗಿ ನಿರ್ವಹಣೆಯ ಗೋಶಾಲೆಗಳ ಪರಿಸ್ಥಿತಿ ಸುಧಾರಿಸಲು ನೆರವಾಗುವುದೋ ಅಥವಾ ಸರ್ಕಾರವೇ ಹೊಸ ಗೋಶಾಲೆಗಳನ್ನು ಸ್ಥಾಪಿಸಲಿದೆಯೋ ಎಂಬ ಬಗ್ಗೆ ನಿಖರ ಮಾಹಿತಿ ಮುಂದಿನ ದಿನಗಳಲ್ಲಿ ತಿಳಿಯಬಹುದು.
ರಾಜ್ಯದಲ್ಲಿ ಗೋಹತ್ಯೆ ತಡೆಗೆ ಜಿಲ್ಲೆಗೊಂದು ಗೋಶಾಲೆ ನಿರ್ಮಿಸಲಾಗುವುದು. ದೇಸಿ ತಳಿಗಳಾದ ಗೀರ್, ಸಾಹಿವಾಲ್, ಓಂಗೋಲ್, ಥಾರ್ಪಾರ್ಕರ್ ಮತ್ತು ದೇವಣಿ ತಳಿಗಳ ಸಂವರ್ಧನೆಗಾಗಿ ‘ಸಮಗ್ರ ಗೋಸಂಕುಲ ಸಮೃದ್ಧಿ ಯೋಜನೆ’ ಜಾರಿಗೊಳಿಸಲಾಗುವುದು ಎಂದು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದರು.
ಬೆಂಗಳೂರಿನ ಹೆಸರಘಟ್ಟದಲ್ಲಿ 100 ಎಕರೆ ವಿಸ್ತೀರ್ಣದಲ್ಲಿ ಹಸು, ಕೋಳಿ ಮತ್ತು ವಿವಿಧ ದೇಸಿ ಪಶುತಳಿಗಳ ಸಂವರ್ಧನೆ ಮತ್ತು ಪ್ರದರ್ಶನಕ್ಕಾಗಿ ಥೀಮ್ ಪಾರ್ಕ್ ರೂಪಿಸಲಾಗುವುದು ಎಂದು ಅವರು ಇದೇ ಸಂದರ್ಭ ಘೋಷಿಸಿದರು.
ರಾಜ್ಯದಲ್ಲಿ ಈಚಿನ ದಿನಗಳಲ್ಲಿ ಜನಪ್ರಿಯವಾಗಿರುವ ನಂದಿಗುರ್ಗ ಮೇಕೆ ತಳಿಗಳ ಅಭಿವೃದ್ಧಿಗೆ ₹ 1 ಕೋಟಿ, ನಾರಿಸುವರ್ಣ ಕುರಿತಳಿ ಸಂವರ್ಧನೆಗೆ ಕೊಪ್ಪಳದಲ್ಲಿ ಸಂವರ್ಧನಾ ಕೇಂದ್ರ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು. ಆಕಸ್ಮಿಕವಾಗಿ ಕುರಿಗಳು ಸಾವನ್ನಪ್ಪಿದಾಗ ಅವುಗಳ ಮಾಲೀಕರು ಆರ್ಥಿಕ ನಷ್ಟ ಅನುಭವಿಸುತ್ತಾರೆ. ಇಂಥವರಿಗೆ ಪರಿಹಾರ ನೀಡುವ ಯೋಜನೆಯನ್ನು ಈ ವರ್ಷವೂ ಮುಂದುವರಿಸಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.
ಇದನ್ನೂ ಓದಿ: ಮಠ-ಸಾಂಸ್ಕೃತಿಕ ಕೇಂದ್ರಗಳಿಗೆ ಅನುದಾನ; ಅಯೋಧ್ಯೆಯಲ್ಲಿ ಯಾತ್ರಿ ನಿವಾಸಕ್ಕೆ ₹ 10 ಕೋಟಿ
ಇದನ್ನೂ ಓದಿ: ಬಜೆಟ್ನಲ್ಲಿ ಮಹಿಳೆಯರಿಗೆ ಸಿಕ್ಕಿದ್ದೇನು? ಹೊಸ ಯೋಜನೆಗಳೇನು?