ಲೋಕಾಯುಕ್ತ ಪ್ರಕರಣದಲ್ಲಿ ತಪ್ಪಿತಸ್ಥ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿಗೆ ಸಚಿವ ಸಂಪುಟ ಸಭೆ ಅನುಮೋದನೆ

ಇಂದು ನಡೆದ ಕರ್ನಾಟಕ ಸಚಿವ ಸಂಪುಟ ಸಭೆಯಲ್ಲಿ ಕ್ಯಾಬಿನೇಟ್ ಮೀಟಿಂಗ್ ನಲ್ಲಿ 16 ವಿಷಯಗಳ ಮೇಲೆ ಚರ್ಚೆ ನಡೆದಿದೆ. ಅದರಂತೆ, ಲೋಕಾಯುಕ್ತ ಪ್ರಕರಣದಲ್ಲಿ ತಪ್ಪಿತಸ್ಥ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ಸೇರಿದಂತೆ ಅನೇಕ ಮಸೂದೆಗಳಿಗೆ ಅನುಮೋದನೆ ದೊರಕಿದೆ.

ಲೋಕಾಯುಕ್ತ ಪ್ರಕರಣದಲ್ಲಿ ತಪ್ಪಿತಸ್ಥ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿಗೆ ಸಚಿವ ಸಂಪುಟ ಸಭೆ ಅನುಮೋದನೆ
ಲೋಕಾಯುಕ್ತ(ಸಂಗ್ರಹ ಚಿತ್ರ)
Follow us
| Updated By: Rakesh Nayak Manchi

Updated on:Aug 10, 2023 | 2:51 PM

ಬೆಂಗಳೂರು, ಆಗಸ್ಟ್ 10: ಲೋಕಾಯುಕ್ತ (Lokayukta) ಪ್ರಕರಣದಲ್ಲಿ ತಪ್ಪಿತಸ್ಥ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿಗೆ ಸಚಿವ ಸಂಪುಟ ಸಭೆ (Cabinet Meeting) ಅನುಮೋದನೆ ನೀಡಿದೆ. ಲೋಕಾಯುಕ್ತ ಪ್ರಕರಣ ಸಂಬಂಧ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಡಾ.ಎಂ. ಎಚ್. ನಾಗೇಶ್ ಅವರಿಗೆ ಐದು ವರ್ಷಗಳ ಶಿಕ್ಷೆ ಆಗಿರುವ ಹಿನ್ನೆಲೆ ಅನುಮೋದನೆ ನೀಡಲಾಗಿದೆ.

ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಒಟ್ಟು 16 ವಿಷಗಳ ಮೇಲೆ ಚರ್ಚೆ ನಡೆದಿದೆ ಎಂದು ಹೇಳಿದ ಸಚಿವ ಎಚ್​.ಕೆ. ಪಾಟೀಲ್, ಹಣಕಾಸು ದುರುಪಯೋಗ ಬೇಜವಾಬ್ದಾರಿ ಬಗ್ಗೆ ಕೋರ್ಟ್​​ನಿಂದ ಶಿಕ್ಷೆ ಪ್ರಕಟವಾಗಿದ್ದ ಹಿನ್ನೆಲೆಯಲ್ಲಿ ಸರ್ಕಾರಿ ಸೇವೆಯಿಂದ ವಜಾ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ ಎಂದರು.

ಲೋಕಾಯುಕ್ತ ಟ್ರ್ಯಾಪ್​ನಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲಾ ಆಸ್ಪತ್ರೆ ಸ್ತ್ರೀ ರೋಗ ತಜ್ಞೆ ಡಾ‌.ಉಷಾ ಕದರಮಂಡಲಗಿ, ಇಂದಿರಾನಗರ ಆಸ್ಪತ್ರೆಯ ಸ್ತ್ರೀ ರೋಗ ತಜ್ಞೆ ಡಾ.ಎಸ್.ಟಿ ನಾಗಮಣಿ ಅವರಿಗೆ ಕಡ್ಡಾಯ ನಿವೃತ್ತಿ ದಂಡನೆಗೆ ಸಂಪುಟ ನಿರ್ಣಯ ಕೈಗೊಂಡಿದೆ ಎಂದು ಸಚಿವರು ಹೇಳಿದರು. ಅಲ್ಲದೆ, ಪೋಕ್ಸೋ ಕೇಸಿನಲ್ಲಿ ಶಿಕ್ಷೆ ಪ್ರಕಟವಾದ ಹಿನ್ನೆಲೆಯಲ್ಲಿ ಹೂವಿನಹಡಗಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಎನ್ ಹಳ್ಳಿಗುಡಿ ಅವರನ್ನು ಸೇವೆಯಿಂದ ವಜಾಗೊಳಿಸಲು ನಿರ್ಣಯ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಒಂದನೇ ತರಗತಿಗೆ ಪ್ರವೇಶ ಪಡೆಯಲು 6 ವರ್ಷ ತುಂಬಿರಬೇಕು; ರಾಜ್ಯ ಸರ್ಕಾರದ ಅಧಿಸೂಚನೆ ಎತ್ತಿಹಿಡಿದ ಹೈಕೋರ್ಟ್

ಸಂಚಾರಿ ಆರೋಗ್ಯ ಘಟಕಗಳ ಅನುಷ್ಟಾನಕ್ಕೆ ಅನುದಾನ ಬಿಡುಗಡೆಗೆ ಅನುಮೋದನೆ

ಎಸ್.ಸಿ. ಎಸ್.ಟಿ. ಮೀಸಲು ಕ್ಷೇತ್ರಗಳಲ್ಲಿ 20 ಸಂಚಾರಿ ಆರೋಗ್ಯ ಘಟಕಗಳ ಅನುಷ್ಟಾನಕ್ಕೆ 20.07 ಕೋಟಿ ಅನುದಾನ ಬಿಡುಗಡೆಗೆ ಸಂಪುಟ ಅನುಮೋದನೆ ನೀಡಿದೆ. ಏರೋ ಸ್ಪೇಸ್ ಉತ್ಪಾದನೆ ಹಾಗೂ ರಕ್ಷಣಾ ಉತ್ಕೃಷ್ಟತಾ ಕೇಂದ್ರದ ಸ್ಥಾಪನೆಗೂ ಅನುಮೋದನೆ ದೊರಕಿದೆ. ಸೈಬರ್ ಅಪರಾಧ ತಡೆಗಟ್ಟುವುದು ಸೇರಿದಂತೆ ಕ್ರಮ ತೆಗೆದುಕೊಳ್ಳಲು ಕೇಂದ್ರದ ಉಪಯೋಗ ಪಡೆಯುವುದು ಹಾಗೂ ಇದರ ಪರಿಷ್ಕೃತ ವೆಚ್ಚ 391 ಕೋಟಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದರು.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ

ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ 325 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸಂಪುಟದಲ್ಲಿ ಚರ್ಚೆ ನಡೆದಿದ್ದು, ಆಸ್ಪತ್ರೆ ಕಟ್ಟಡದ ಪರಿಷ್ಕೃತ ವೆಚ್ಚ 187.90 ಕೋಟಿಗೆ ಆಡಳಿತಾತ್ಮಕ ಅನುಮೋದನೆ ದೊರಕಿದೆ.

ಕರಾವಳಿ ಅಭಿವೃದ್ಧಿ ಮಂಡಳಿ ವಿಧೇಯಕ 2023 ಅನುಮೋದನೆ

ಕರಾವಳಿ ಅಭಿವೃದ್ಧಿ ಮಂಡಳಿ ವಿಧೇಯಕ 2023ಕ್ಕೆ ಸಂಪುಟ ಅನುಮೋದನೆ ನೀಡಿದ್ದು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಹೆಸರು ಬದಲಾವಣೆ ಮಾಡಿ ಕರಾವಳಿ ಪ್ರದೇಶಾಭಿವೃದ್ಧಿ ಮಂಡಳಿ ಎಂದು ನಾಮಕರಣ ಮಾಡಲು ಸಭೆಯಲ್ಲಿ ಅಸ್ತು ಎನ್ನಲಾಗಿದೆ. ಉಡುಪಿ, ಉತ್ತರ ಕನ್ನಡ ಚಿಕ್ಕಮಗಳೂರನ್ನು ಕರಾವಳಿ ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಗೆ ಒಳಪಡಿಸಿ ಅನುಮೋದನೆ ನೀಡಲಾಗಿದೆ.

KSRTC ವೆಹಿಕಲ್ ಟ್ರ್ಯಾಕಿಂಗ್ ವ್ಯವಸ್ಥೆ

ಕೆಎಸ್​ಆರ್​ಟಿಸಿ ವಾಹನಗಳಲ್ಲಿ ವೆಹಿಕಲ್ ಟ್ರ್ಯಾಕಿಂಗ್ ವ್ಯವಸ್ಥೆ ಹಾಗೂ ಪ್ಯಾನಿಕ್ ಬಟನ್ ವ್ಯವಸ್ಥೆ ಅಳವಡಿಕೆಗೆ 30.74 ಕೋಟಿ ರೂ. ವೆಚ್ಚದ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ದೊರಕಿದೆ. ಕರ್ನಾಟಕ ಸಹಕಾರಿ ಕೃಷಿ ಅಭಿವೃದ್ಧಿ ಗ್ರಾಮೀಣಾಭಿವೃದ್ದಿ ಬ್ಯಾಂಕ್​ಗೆ ನಬಾರ್ಡ್ ಮೂಲಕ 1600 ಕೋಟಿ ಹಣ ಪಡೆಯಲು ಸರ್ಕಾರದ ಖಾತರಿ ವಿಸ್ತರಣೆಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ. ಅಲ್ಲದೆ, ಈ ಬ್ಯಾಂಕ್​ನ ಶೇ.1 ರಷ್ಟು ಗ್ಯಾರಂಟಿ ಶುಲ್ಕ ವಿಧಿಸುವುದನ್ನು ನಿರ್ಣಯಿಸಲು ಮುಖ್ಯಮಂತ್ರಿಗೆ ಅಧಿಕಾರ ನೀಡಿದ ಕ್ಯಾಬಿನೆಟ್ ಅಸ್ತು ಎಂದಿದೆ.

ಪಿಪಿಪಿ ಮಾಡೆಲ್​ಗೆ ಕ್ಯಾಬಿನೆಟ್ ಅನುಮೋದನೆ

ರಾಜ್ಯದ ಐದು ಜಿಲ್ಲಾ ಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನ್, 15 ಜಿಲ್ಲಾ ಆಸ್ಪತ್ರೆಗಳಲ್ಲಿ ಎಂಆರ್​ಐ ಘಟಕ ಅಳವಡಿಕೆ ಮಾಡುವ ಪಿಪಿಪಿ ಮಾಡೆಲ್​ಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ. ಇದಕ್ಕೆ 47 ಕೋಟಿ ಅನುದಾನ ಬಿಡುಗಡೆಗೆ ಒಪ್ಪಿಗೆ ಸೂಚಿಸಲಾಗಿದೆ.

ರಾಜ್ಯದ ವಿವಿಧ ಸ್ಟೇಷನ್​ಗಳಲ್ಲಿ ದಾಖಲಾಗಿದ್ದ ಮೇಕೆದಾಟು ಪಾದಯಾತ್ರೆ ಸಂದರ್ಭದಲ್ಲಿನ 9 ಕ್ರಿಮಿನಲ್ ಪ್ರಕರಣಗಳನ್ನು ರಾಜ್ಯ ಸರ್ಕಾರ ವಾಪಸ್​ ಪಡೆದಿದೆ. ಅಶೋಕ್ ಪಟ್ಟಣ್ ಅರ್ಜಿಯನ್ನು ಆಧರಿಸಿ ಈ ನಿರ್ಣಯ ಕೈಗೊಳ್ಳಲಾಗಿದೆ. ಮೇಕೆದಾಟು ಪಾದಯಾತ್ರೆ ವೇಳೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ಮುಖಂಡರ ಮೇಲೆ ಇದ್ದ ಪ್ರಕರಣಗಳು ವಾಪಸ್​ ಪಡೆಯಲು ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಅಡಿ ಪೌಷ್ಟಿಕ ಆಹಾರ ತಯಾರಿಕೆಗೆ ಪಾಮ್ ಆಯಿಲ್ ಬದಲು ಸೂರ್ಯಕಾಂತಿ ಎಣ್ಣೆ ಬಳಕೆಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ. ಪಾಮ್ ಆಯ್ಲ್ ವಿಶ್ವಾಸಾರ್ಹತೆಯ ಪ್ರಶ್ನೆ ಎದುರಾದ ಹಿನ್ನೆಲೆ ಈ ಬದಲಾವಣೆಗೆ ನಿರ್ಣಯ ಕೈಗೊಳ್ಳಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:47 pm, Thu, 10 August 23