
ಬೆಂಗಳೂರು, ಅಕ್ಟೋಬರ್ 19: 2008-09ರಲ್ಲಿ ಗ್ರಾಮ ನ್ಯಾಯಾಲಯ ಸ್ಥಾಪನೆ ಬಗ್ಗೆ ಕಾನೂನು ತರಲಾಗಿತ್ತು. ಅದರಂತೆ 100 ಗ್ರಾಮ ನ್ಯಾಯಾಲಯಗಳ (Grama Nyayalayas) ಸ್ಥಾಪನೆಗೆ ಸಚಿವ ಸಂಪುಟ ತಾತ್ವಿಕ ಒಪ್ಪಿಗೆ ಮೂಲಕ ಅನುಮತಿ ನೀಡಿದೆ ಎಂದು ಸಚಿವ ಹೆಚ್ಕೆ ಪಾಟೀಲ್ (HK patil) ಗುರುವಾರ ಸಂಜೆ ತಿಳಿಸಿದರು. ಸಚಿವ ಸಂಪುಟ (Karnataka Cabinet) ಸಭೆಯ ಬಳಿ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಗ್ರಾಮ ನ್ಯಾಯಾಲಯಗಳ ಸ್ಥಾಪನೆಗೆ ಸಂಬಂಧಿಸಿ ಮಾಹಿತಿ ನೀಡಿದರು. 100 ಗ್ರಾಮ ಕೋರ್ಟ್ ಸ್ಥಾಪನೆಗೆ ಅಂದಾಜು 25-30 ಕೋಟಿ ಆಗಬಹುದು ಎಂದರು. ಜತೆಗೆ, ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾದ ವಿಷಯಗಳ ಮತ್ತು ಕೈಗೊಳ್ಳಲಾದ ನಿರ್ಧಾರಗಳ ಬಗ್ಗೆ ಮಾಹಿತಿ ನೀಡಿದರು.
ಒಟ್ಟು ಕೃಷಿ ತೋಟಾಗಾರಿಕೆ ನಷ್ಟ 33,770 ಕೋಟಿ ರೂಪಾಯಿ ಆಗಿದ್ದು, ನಾವು ಕೃಷಿ ತೋಟಗಾರಿಕೆ ನಷ್ಟಕ್ಕೆ 4,414 ಕೋಟಿ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದೇವೆ. 5,326 ಕೋಟಿ ರೂಪಾಯಿ ಒಟ್ಟು ನಷ್ಟ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದೇವೆ. ರಾಜ್ಯ ಮಂತ್ರಿಗಳು ಕೇಂದ್ರ ಮಂತ್ರಿಗಳ ಭೇಟಿ ಮಾಡುವುದಕ್ಕೆ ಪದೇ ಪದೇ ಸಮಯ ಕೇಳ್ತಿದ್ದಾರೆ ಎಂದು ಹೆಚ್ಕೆ ಪಾಟೀಲ್ ತಿಳಿಸಿದರು.
ಕಡ್ಡಾಯ ಗ್ರಾಮೀಣ ಸೇವೆಯಿಂದ ವೈದ್ಯರಿಗೆ ವಿನಾಯಿತಿ ನೀಡಿ ನಿರ್ಧಾರ ಕೈಗೊಳ್ಳಲಾಗಿದೆ. ಕಡ್ಡಾಯ ಗ್ರಾಮೀಣ ಸೇವೆ ತಿದ್ದುಪಡಿ ಬಿಲ್‌ಗೆ ಸಂಪುಟ ಸಭೆ ಅನುಮೋದನೆ ನೀಡಿದೆ. ಸುಗ್ರೀವಾಜ್ಞೆ ಮೂಲಕ ವಿಧೇಯಕಕ್ಕೆ ಅನುಮೋದನೆ ಪಡೆಯಲು ನಿರ್ಧಾರ ಕೈಗೊಳ್ಳಲಾಗಿದೆ. ವೈದ್ಯರಿಗೆ ಕಡ್ಡಾಯ ಗ್ರಾಮೀಣ ಸೇವೆಯನ್ನು ಬದಲಾವಣೆ ಮಾಡಲು ತೀರ್ಮಾನಿಸಲಾಗಿದ್ದು, ಖಾಲಿ ಹುದ್ದೆಗಳಿಗೆ ಅಗತ್ಯವಿರುವಷ್ಟು ಮಾತ್ರ ಕಡ್ಡಾಯ ಗ್ರಾಮೀಣ ಸೇವೆ ನಿಗದಿಪಡಿಸಲು ತೀರ್ಮಾನ ಕೈಗೊಳ್ಳಲಾಗಿದೆ.
ನೈಋತ್ಯ ಮುಂಗಾರಿನಲ್ಲಿ ಮಳೆ ಕೊರತೆಯಿಂದ ಬರಗಾಲ ಘೋಷಣೆ ಮಾಡಲಾಗಿದೆ. 195 ತಾಲೂಕುಗಳು ಬರಪೀಡಿತ ಎಂದು ಘೋಷಣೆ ಮಾಡಿದ್ದೆವು. ಇದರ ಜೊತೆಗೆ 21 ತಾಲೂಕುಗಳು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಹೊಸದಾಗಿ 21 ತಾಲೂಕು ಬರಪೀಡಿತ ಎಂದು ಘೋಷಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಹೆಚ್ಕೆ ಪಾಟೀಲ್ ಮಾಹಿತಿ ನೀಡಿದರು.
ಅಹಾರ ಇಲಾಖೆಯಿಂದ ಅಕ್ಕಿ ಒದಗಿಸುವ ವ್ಯವಸ್ಥೆ ಬಗ್ಗೆ ಚರ್ಚೆಯಾಗಿದೆ. ಈಗ ಇರುವ ಪದ್ಧತಿಯನ್ನೇ ಮುಂದುವರೆಸಲು ನಿರ್ಧಾರ ಕೈಗೊಳ್ಳಲಾಗಿದೆ. ಐದು ಕೆಜಿ ಅಕ್ಕಿ ಕೊಡಬೇಕಾ ಅಥವಾ ನೀಡಲಾಗುತ್ತಿರುವ ಹಣ ಮುಂದುವರಿಸಬೇಕಾ ಎಂಬ ಚರ್ಚೆಯಾಗಿದೆ. ಸದ್ಯದ ಪದ್ದತಿಯನ್ನೇ ಮುಂದುವರಿಸಲು ಕ್ಯಾಬಿನೆಟ್ ನಿರ್ಧಾರ ಕೈಗೊಂಡಿದೆ ಎಂದು ಪಾಟೀಲ್ ತಿಳಿಸಿದರು.
ವಾಹನಗಳ ಸಿಎನ್ಜಿ, ಗೃಹ ಬಳಕೆಯ ಪಿಎನ್ಜಿ ಬಳಕೆಗೆ ರಾಜ್ಯ ಅನಿಲ ನೀತಿ ರೂಪಿಸಲು ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಷನ್ ನೆಟ್ವರ್ಕ್ ಪಾಲಿಸಿಗೆ ಅನುಮೋದನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ಇದನ್ನೂ ಓದಿ: ನಗರ ಪ್ರದೇಶದ ಅನಧಿಕೃತ ಸ್ವತ್ತುಗಳಿಗೆ ‘ಬಿ’ ಖಾತೆ: ಈಶ್ವರ ಖಂಡ್ರೆ ಅಧ್ಯಕ್ಷತೆಯ ಉಪಸಮಿತಿಯ ಸಭೆಯಲ್ಲಿ ನಿರ್ಧಾರ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:47 pm, Thu, 19 October 23