ಸಂಪುಟದಿಂದ ರಾಜಣ್ಣ ವಜಾ, ಮಧುಗಿರಿ ಬಂದ್: ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ರಾಜಣ್ಣ ಬೆಂಬಲಿಗ

ಸಚಿವ ಕೆಎನ್​ ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡಿದ್ದಕ್ಕೆ ಅವರ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಮಧುಗಿರಿ ಬಂದ್​​ಗೆ ಕರೆ ನೀಡಿ ಆಕ್ರೋಶ ಹೊರಹಾಕಿದ್ದಾರೆ. ಇನ್ನು ರಾಜಣ್ಣರನ್ನು ವಜಾ ಮಾಡಿದ್ದನ್ನೇ ಅಸ್ತ್ರ ಮಾಡಿಕೊಂಡಿರುವ ಪ್ರತಿಪಕ್ಷ ಬಿಜೆಪಿ, ಸದನದ ಹೊರಗೂ ಒಳಗೂ ಕಾಂಗ್ರೆಸ್ ನಾಯಕರನ್ನು ಮಾತಿನಲ್ಲೇ ಕಟ್ಟಿ ಹಾಕುವ ಯತ್ನ ಮಾಡಿದೆ.

ಸಂಪುಟದಿಂದ ರಾಜಣ್ಣ ವಜಾ, ಮಧುಗಿರಿ ಬಂದ್: ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ರಾಜಣ್ಣ ಬೆಂಬಲಿಗ
ಮಧುಗಿರಿಯಲ್ಲಿ ರಾಜಣ್ಣ ಬೆಂಬಲಿಗರಿಂದ ಪ್ರತಿಭಟನೆ

Updated on: Aug 12, 2025 | 2:11 PM

ಬೆಂಗಳೂರು, ಆಗಸ್ಟ್ 12: ಸಚಿವ ಸ್ಥಾನದಿಂದ ಕೆಎನ್ ರಾಜಣ್ಣ (KN Rajanna) ಅವರನ್ನು ವಜಾ ಮಾಡಿದ್ದನ್ನು ಖಂಡಿಸಿ ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದಲ್ಲಿ ರಾಜಣ್ಣ ಬೆಂಬಲಿಗರು, ಅಭಿಮಾನಿಗಳು ಮಂಗಳವಾರ ಬೃಹತ್​​ ಪ್ರತಿಭಟನೆ ನಡೆಸಿದರು. ಮಧುಗಿರಿ ಬಂದ್​ಗೆ (Madhugiri Bandh) ಕರೆ ನೀಡಿ ಆಕ್ರೋಶ ಹೊರಹಾಕಿದರು. ಪ್ರತಿಭಟನೆಯಲ್ಲಿ ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು ಭಾಗಿಯಾದರು. ಈ ವೇಳೆ ರಾಜಣ್ಣ ಅಭಿಮಾನಿಯೊಬ್ಬ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸುವಂತೆ ಹೈಡ್ರಾಮಾ ಮಾಡಿದ. ಕೂಡಲೇ ಸ್ಥಳದಲ್ಲಿದ್ದವರು ಆತನ ಮೇಲೆ ನೀರು ಸುರಿದು ರಕ್ಷಿಸಿದರು.

ಸಾಮೂಹಿಕ ರಾಜೀನಾಮೆಗೆ ಮುಂದಾದ ರಾಜಣ್ಣ ಬೆಂಬಲಿಗರು

ಮಧುಗಿರಿಯ ಪುರಸಭೆ ವಾರ್ಡ್​ ಸಂಖ್ಯೆ 22 ರ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಸಾಮೂಹಿಕ ರಾಜೀನಾಮೆಗೆ ಮುಂದಾಗಿದ್ದಾರೆ. 10ನೇ ವಾರ್ಡ್ ಸದಸ್ಯೆ ಗಿರಿಜಾ ಮಂಜುನಾಥ್ ಉಪ ವಿಭಾಗಾಧಿಕಾರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಅತ್ತ ರಾಜಣ್ಣ ಅಭಿಮಾನಿಗಳು ಪ್ರತಿಭಟನೆ ಹಾದಿ ತುಳಿದಿದ್ದರೆ, ಇತ್ತ ಬಿಜೆಪಿಗೆ ರಾಜಣ್ಣರನ್ನು ವಜಾ ಮಾಡಿದ್ದೇ ಅಸ್ತ್ರವಾಗಿ ಸಿಕ್ಕಿದೆ.

ರಾಜಣ್ಣ ವಜಾ ಮಾಡಿದ್ದೇಕೆ? ಸದನದಲ್ಲಿ ಉತ್ತರಕ್ಕೆ ಬಿಜೆಪಿ ಪಟ್ಟು

ವಿಧಾನಸಭೆ ಕಲಾಪದ ಆರಂಭದಲ್ಲಿ, ಅಂದರೆ ಪ್ರಶ್ನೋತ್ತರ ವೇಳೆ ಶುರುವಾಗುವ ಮುನ್ನ ವಿಪಕ್ಷ ನಾಯಕ ಆರ್​ ಅಶೋಕ್ ಮಾತನಾಡಿ, ರಾಜಣ್ಣರನ್ನು ವಜಾ ಮಾಡಿದ್ದೇಕೆ? ಸರ್ಕಾರ ಇದಕ್ಕೆ ಉತ್ತರ ಕೊಡಬೇಕೆಂದು ಆಗ್ರಹಿಸಿದರು. ಈ ವೇಳೆ, ಸ್ಪೀಕರ್ ಖಾದರ್ ಇದು ಅವರ ಪಕ್ಷದ ಆಂತರಿಕ ವಿಚಾರ ಎಂದಿದ್ದಕ್ಕೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಇದನ್ನೂ ಓದಿ
ರಾಜಣ್ಣ ತಲೆದಂಡಕ್ಕೆ ಕಾರಣ ಒಂದೆರಡಲ್ಲ: ಈ ವಿಚಾರಗಳೇ ಮುಳುವಾಯ್ತು ನೋಡಿ!
ನನ್ನನ್ನು ವಜಾ ಮಾಡಿರುವುದರ ಹಿಂದೆ ಷಡ್ಯಂತ್ರ, ಪಿತೂರಿ ಇದೆ: ಕೆಎನ್​ ರಾಜಣ್ಣ
ಕೆಪಿಸಿಸಿ ಅಧ್ಯಕ್ಷನ ಜೊತೆಗಿನ ತಿಕ್ಕಾಟವೇ ರಾಜಣ್ಣನಿಗೆ ಮುಳುವಾಯಿತೇ?
ಕೆಎನ್​ ರಾಜಣ್ಣ ರಾಜೀನಾಮೆ ನೀಡಿದ್ದಲ್ಲ ಸಂಪುಟದಿಂದ ತೆಗೆದಿದ್ದು!

ಇಷ್ಟಕ್ಕೆ ಸುಮ್ಮನಾಗದ ಆರ್​.ಅಶೋಕ್, ಮತ ಕಳ್ಳತನದ ಕುರಿತು ರಾಜಣ್ಣ ಸತ್ಯ ಹೇಳಿದ್ದಾರೆ. ಸತ್ಯ ಹೇಳಿದ್ದಕ್ಕೆ ಅವರನ್ನು ಬಲಿ ಪಡೆದುಕೊಂಡಿದ್ದಾರೆಯೇ ಎಂದು ಪ್ರಶ್ನಿಸಿದರು.

ಇತ್ತ ವಿಧಾನ ಪರಿಷತ್​ನಲ್ಲೂ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪತ್ರವನ್ನು ಓದಿದರು. ಇದಕ್ಕೆ ಕಾಂಗ್ರೆಸ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಸಭಾಪತಿ ಹೊರಟ್ಟಿ, ಪ್ರಶ್ನೋತ್ತರ ಕಲಾಪದ ಬಳಿಕ ಬಳಿಕ ಪ್ರಸ್ತಾಪಿಸುವಂತೆ ಸೂಚನೆ ನೀಡಿದರು. ಆಗ ಬಿಜೆಪಿ ಸದಸ್ಯರು ಈಗಲೇ ಸರ್ಕಾರ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದರು.

ವಿಧಾನಸಭೆಯಲ್ಲಿ ಡಿಸಿಎಂ ಡಿಕೆ ಕೆಮ್ಮಿದ್ದಕ್ಕೆ ಕಿಚಾಯಿಸಿದ ಬಿಜೆಪಿ

ಇದೆಲ್ಲದರ ನಡುವೆ ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪ ನಡೆಯುತ್ತಿರುವಾಗ ಉತ್ತರ ನೀಡಲು ಎದ್ದು ನಿಂತ ಡಿಸಿಎಂ ಡಿಕೆ ಶಿವಕುಮಾರ್ ಜೋರಾಗಿ ಕೆಮ್ಮತೊಡಗಿದರು. ಈ ವೇಳೆ, ಬಿಜೆಪಿ ಶಾಸಕ ಸುನಿಲ್ ಕುಮಾರ್, ‘ನೀವು ಕೆಮ್ಮಿದರೆ ಯಾರಿಗೆ ಅಪಾಯ ಕಾದಿದೆಯೋ ಗೊತ್ತಿಲ್ಲ’ ಎಂದು ಕಾಲೆಳೆದರು. ಸುನೀಲ್ ಕುಮಾರ್ ಮಾತಿಗೆ ಸದನ ನಗೆ ಗಡಲಲ್ಲಿ ತೇಲಿತು. ಏನೂ ಪ್ರತಿಕ್ರಿಯೆ ನೀಡದ ಡಿಕೆ ಶಿವಕುಮಾರ್ ಉತ್ತರ ಮುಂದುವರಿಸಿದರು.

ಇದನ್ನೂ ಓದಿ: ಕೆಎನ್ ರಾಜಣ್ಣ ತಲೆದಂಡಕ್ಕೆ ಕಾರಣ ಒಂದೆರಡಲ್ಲ: ಈ ವಿಚಾರಗಳೇ ಮುಳುವಾಯ್ತು ನೋಡಿ!

ಸದನದ ಹೊರಗೂ ಮಾತನಾಡಿರುವ ಬಿಜೆಪಿ ನಾಯಕರು, ರಾಜಣ್ಣ ವಜಾ ಮಾಡುವಂಥ ಅಪರಾಧ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:09 pm, Tue, 12 August 25