ಬೆಂಗಳೂರು, ಆಗಸ್ಟ್ 29: ಕೇಂದ್ರ ಸರ್ಕಾರದ ಕಸ್ತೂರಿರಂಗನ್ ಸಮಿತಿಯ ಶಿಫಾರಸುಗಳನ್ನು ಕರ್ನಾಟಕ ಸರ್ಕಾರ ಪೂರ್ಣವಾಗಿ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ. ಬುಧವಾರ ನಡೆದ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ನೀಡಿದ ಸಲಹೆಗಳ ಆಧಾರದ ಮೇಲೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕರ್ನಾಟಕ ವ್ಯಾಪ್ತಿಯಲ್ಲಿ 20,668 ಚದರ ಕಿಲೋಮೀಟರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯವೆಂದು ಅಧಿಸೂಚನೆ ಹೊರಡಿಸುವ ಸಮಿತಿಯ ಶಿಫಾರಸುಗಳನ್ನು ಪೂರ್ಣವಾಗಿ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಸಂಪುಟ ಉಪ ಸಮಿತಿಯ ಅಧ್ಯಕ್ಷರೂ ಆಗಿರುವ ಅರಣ್ಯ, ಪರಿಸರ ಮತ್ತು ಪರಿಸರ ಸಚಿವ ಈಶ್ವರ್ ಬಿ ಖಂಡ್ರೆ ತಿಳಿಸಿದ್ದಾರೆ.
ರಾಜ್ಯ ಸರ್ಕಾರವು ಈಗಾಗಲೇ 16,632 ಚದರ ಕಿ.ಮೀ. ಪ್ರದೇಶವನ್ನು ಅಭಯಾರಣ್ಯಗಳು, ರಾಷ್ಟ್ರೀಯ ಉದ್ಯಾನವನಗಳು ಮತ್ತು ಪರಿಸರ ಸೂಕ್ಷ್ಮ ವಲಯಗಳನ್ನಾಗಿ ಘೋಷಣೆ ಮಾಡಿದೆ. ಉಳಿದ ಪ್ರದೇಶದಲ್ಲಿ 1,533 ಮನೆಗಳು, ಗ್ರಾಮಗಳು ಮತ್ತು ಇತರ ವಸತಿ ಆವಾಸಸ್ಥಾನಗಳಿವೆ. ಜನರ ಹಕ್ಕುಗಳು ಮತ್ತು ಜೀವನೋಪಾಯವನ್ನು ರಕ್ಷಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಮಾಡಿದ ಚರ್ಚೆ ಹಾಗೂ ಶಿಫಾರಸುಗಳನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ತಿಳಿಸಲಾಗುವುದು. ನಂತರ ಸಚಿವ ಸಂಪುಟ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಆ ಮಾಹಿತಿಯನ್ನು ಕೇಂದ್ರಕ್ಕೆ ತಿಳಿಸಲಾಗುವುದು ಎಂದು ಖಂಡ್ರೆ ಹೇಳಿದ್ದಾರೆ.
ರಾಜ್ಯಗಳಿಗೆ ತಮ್ಮ ಉತ್ತರಗಳನ್ನು ಸಲ್ಲಿಸಲು ಸೆಪ್ಟೆಂಬರ್ ಅಂತ್ಯದವರೆಗೆ ಸಮಯವಿದೆ. ಅಲ್ಲದೆ, ಕರ್ನಾಟಕದ ಪಶ್ಚಿಮ ಘಟ್ಟ ವ್ಯಾಪ್ತಿಯ 10 ಜಿಲ್ಲಾಡಳಿತಗಳ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುತ್ತದೆ. ಈ ಜಿಲ್ಲೆಗಳ ಜನಪ್ರತಿನಿಧಿಗಳ ಅಭಿಪ್ರಾಯವನ್ನು ಸಹ ಪಡೆಯಲಾಗುತ್ತದೆ. ಅವುಗಳನ್ನು ಕೂಡ ಸಿಎಂಗೆ ಸಲ್ಲಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ವಯನಾಡಿನಲ್ಲಿ ಗುಡ್ಡ ಕುಸಿತ; ಮಾಧವ್ ಗಾಡ್ಗೀಳ್ ಸಮಿತಿಯ ವರದಿ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ?
ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದ ನಂತರ ಕಸ್ತೂರಿ ರಂಗನ್ ವರದಿಯಲ್ಲಿನ ಶಿಫಾರಸುಗಳನ್ನು ಜಾರಿಗೊಳಿಸುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿತ್ತು. ಈ ಮಧ್ಯೆ, ಕಸ್ತೂರಿ ರಂಗನ್ ವರದಿಯಲ್ಲಿನ ಶಿಫಾರಸುಗಳನ್ನು ಜಾರಿಗೊಳಿಸುವ ಬಗ್ಗೆ ಕೇಂದ್ರ ಸರ್ಕಾರ ಕೂಡ ರಾಜ್ಯಗಳ ಅಭಿಪ್ರಾಯ ಕೇಳಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ