ಕೊಪ್ಪಳ: ನಟಿ ರಾಧಿಕಾ ಕುಮಾರಸ್ವಾಮಿ ಮತ್ತು ಯುವರಾಜ್ ಸ್ವಾಮಿ ನಡುವಿನ ಅವ್ಯವಹಾರ ಪ್ರಕರಣ ಇಡೀ ರಾಜ್ಯದ ಗಮನ ಸೆಳೆದಿದೆ. ವಂಚಕ ಯುವರಾಜ್ ರಾಜ್ಯದ ಪ್ರಮುಖ ರಾಜಕಾರಣಿಗಳ ಜೊತೆ ಇರುವ ಫೋಟೋ ಹರಿದಾಡಿದ್ದು, ಇದೀಗ ವಿವಾದಕ್ಕೆ ತುತ್ತಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಇಂದು ಕೊಪ್ಪಳದಲ್ಲಿ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಬ್ಬರ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಅವ್ಯವಹಾರ ಆರೋಪ ಎದುರಿಸುತ್ತಿರುವ ರಾಧಿಕಾ ಕುಮಾರಸ್ವಾಮಿ ನಿನ್ನೆಯಷ್ಟೇ ಸಿಸಿಬಿ ಎದುರು ಹಾಜರಾಗಿ ತನಿಖೆ ಎದುರಿಸಿದ್ದರು ಎಂದು ಹೇಳಿದ್ದಾರೆ.
ಯುವರಾಜ್ ಸ್ವಾಮಿ ಜೊತೆ ರಾಜಕಾರಣಿಗಳ ಫೋಟೋ ಇದ್ದ ಮಾತ್ರಕ್ಕೆ ಅಲ್ಲಿದ್ದವರೆಲ್ಲಾ ಅಪರಾಧಿಗಳು ಎಂದು ಹೇಳಲಾಗುವುದಿಲ್ಲ. ತನಿಖೆಯ ನಂತರ ಸತ್ಯಾಂಶ ಹೊರ ಬರಲಿದೆ ಎಂದು ತಿಳಿಸಿದ್ದಾರೆ.