ಬೆಂಗಳೂರು: ಸೆಪ್ಟೆಂಬರ್ 17ರಂದು ಕರ್ನಾಟಕದಲ್ಲಿ ಬೃಹತ್ ಕೊರೊನಾ ಲಸಿಕೆ (Covid Vaccine Drive) ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸೆಪ್ಟೆಂಬರ್ 17 ರಂದು ಬೃಹತ್ ಕೋವಿಡ್ ಲಸಿಕೆ ಅಭಿಯಾನ ಆಯೋಜಿಸಿದ್ದು, ಈ ಕಾರ್ಯಕ್ರಮದಡಿ 30 ಲಕ್ಷ ಲಸಿಕೆ ಹಾಕಬೇಕು ಎಂದು ನಿರ್ಧರಿಸಲಾಗಿದೆ. ಅದಕ್ಕೆ ಸೂಕ್ತ ತಯಾರಿ ಮಾಡಿಕೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಅವರು ಇಂದು ಬೃಹತ್ ಲಸಿಕೆ ಕಾರ್ಯಕ್ರಮದ ಪೂರ್ವಭಾವಿಯಾಗಿ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು.
ರಾಜ್ಯದಲ್ಲಿ ಲಸಿಕೆ ಕಾರ್ಯಕ್ರಮ ಚುರುಕಾಗಿ ಸಾಗಿದ್ದು, ಉತ್ತರ ಪ್ರದೇಶದ ನಂತರ ಅತಿ ಹೆಚ್ಚು ಲಸಿಕೆ ನೀಡಿದ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆಗಸ್ಟ್ ತಿಂಗಳಲ್ಲಿ ಅತಿ ಹೆಚ್ಚು, ಅಂದರೆ 1.10 ಕೋಟಿ ಲಸಿಕೆ ನೀಡಲಾಗಿದೆ. ನವೆಂಬರ್ ಅಂತ್ಯದ ವೇಳೆಗೆ ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಎರಡೂ ಡೋಸ್ ಲಸಿಕೆ ನೀಡಬೇಕು ಎಂಬ ಚಿಂತನೆ ಇದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಅಮೆರಿಕ ಸೇರಿದಂತೆ ಕೆಲವು ದೇಶಗಳಿಗಿಂತಲೂ ತ್ವರಿತವಾಗಿ ಕೊರೊನಾ ಲಸಿಕೆಗಳನ್ನು ವಿತರಣೆ ಮಾಡುತ್ತಿರುವ ಭಾರತದ 5 ರಾಜ್ಯಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಆ 5 ರಾಜ್ಯಗಳ ಪೈಕಿ ಕರ್ನಾಟಕವೂ ಸೇರಿದೆ. ಭಾರತದಲ್ಲಿ ಅತ್ಯಂತ ವೇಗವಾಗಿ ಕೊವಿಡ್ ಲಸಿಕೆಗಳನ್ನು ವಿತರಿಸುತ್ತಿರುವ ಟಾಪ್ 5 ರಾಜ್ಯಗಳಲ್ಲಿ ಕರ್ನಾಟಕ ಸ್ಥಾನ ಪಡೆದ ಬೆನ್ನಲ್ಲೇ ಸೆ. 17ರಂದು ಬೃಹತ್ ಲಸಿಕಾ ಅಭಿಯಾನವನ್ನು ಆಯೋಜನೆ ಮಾಡಲಾಗಿದೆ.
ಅಮೆರಿಕ ಮುಂತಾದ ವಿದೇಶಗಳಿಗಿಂತಲೂ ವೇಗವಾಗಿ ಭಾರತದ ಕರ್ನಾಟಕ, ಗುಜರಾತ್, ಮಧ್ಯಪ್ರದೇಶ, ಹರಿಯಾಣ, ಉತ್ತರ ಪ್ರದೇಶದಲ್ಲಿ ಕೊರೊನಾ ಲಸಿಕೆಗಳನ್ನು ವಿತರಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಘೋಷಿಸಿತ್ತು. 2021ರ ಅಂತ್ಯದ ವೇಳೆಗೆ ಭಾರತದ ಎಲ್ಲ ನಾಗರಿಕರಿಗೂ ಕೊರೊನಾ ಲಸಿಕೆ ನೀಡುವ ಉದ್ದೇಶ ಹೊಂದಿರುವ ಕೇಂದ್ರ ಸರ್ಕಾರ ಇಡೀ ವಿಶ್ವದಲ್ಲೇ ಅತಿ ಹೆಚ್ಚು ಕೊರೊನಾ ಲಸಿಕೆಗಳನ್ನು ವಿತರಣೆ ಮಾಡುತ್ತಿದೆ.
ಉತ್ತರ ಪ್ರದೇಶದಲ್ಲಿ ಇದುವರೆಗೂ ಅತಿ ಹೆಚ್ಚು ಕೊರೊನಾ ಲಸಿಕೆಗಳನ್ನು ನೀಡಲಾಗಿದೆ. ಉತ್ತರ ಪ್ರದೇಶದಲ್ಲಿ ಪ್ರತಿದಿನ 11.73 ಲಕ್ಷ ಡೋಸ್ ಕೊವಿಡ್ ಲಸಿಕೆಗಳನ್ನು ನೀಡುವ ಮೂಲಕ ಅಮೆರಿಕಕ್ಕಿಂತಲೂ ಹೆಚ್ಚು ಲಸಿಕೆಯನ್ನು ನೀಡಿದ ರಾಜ್ಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಮೆರಿಕದಲ್ಲಿ ದಿನವೊಂದಕ್ಕೆ 8.7 ಲಕ್ಷ ಡೋಸ್ ಕೊರೊನಾ ಲಸಿಕೆಗಳನ್ನು ನೀಡಲಾಗುತ್ತಿದೆ. ಉಳಿದಂತೆ 2ನೇ ಸ್ಥಾನದಲ್ಲಿ ಗುಜರಾತ್, ಮೂರನೇ ಸ್ಥಾನದಲ್ಲಿ ಕರ್ನಾಟಕವಿದೆ.
ಉತ್ತರ ಪ್ರದೇಶದ ಕೊರೊನಾ ಲಸಿಕೆಯ ದರ ಅಮೆರಿಕ, ಮೆಕ್ಸಿಕೋ, ರಷ್ಯಾ, ಫ್ರಾನ್ಸ್, ಕೆನಡಾಗಿಂತಲೂ ಹೆಚ್ಚಿದೆ. ಭಾರತದಲ್ಲಿ ಈಗಾಗಲೇ 75 ಕೋಟಿಗೂ ಅಧಿಕ ಡೋಸ್ ಕೊವಿಡ್ ಲಸಿಕೆ ನೀಡಲಾಗಿದೆ. ಸಿಕ್ಕಿಂ, ಹಿಮಾಚಲ ಪ್ರದೇಶ, ಗೋವಾ, ದಾದ್ರಾ ಮತ್ತು ನಾಗರ್, ಹವೇಲಿ, ಲಡಾಖ್ ಮತ್ತು ಲಕ್ಷದ್ವೀಪದಲ್ಲಿ ಎಲ್ಲಾ ವಯಸ್ಕರಿಗೆ ಮೊದಲ ಡೋಸ್ ನೀಡಲಾಗಿದೆ.
ಇದನ್ನೂ ಓದಿ: ಕೊವಿಡ್ ಮೂರನೇ ಅಲೆಯ ಸಾಧ್ಯತೆ ಕಡಿಮೆಯಿದ್ದರೂ ಶಾಲೆ ಮರು ಆರಂಭಕ್ಕೆ ಆತುರ ಬೇಡ; ವಿಜ್ಞಾನಿಗಳ ಸಲಹೆ
‘ದೇಶದಲ್ಲಿ ಕೊರೊನಾ ವೈರಸ್ 3ನೇ ಅಲೆ ಪ್ರಾರಂಭ; ಮಕ್ಕಳಿಗೆ ಇಲ್ಲ ಅಪಾಯ, ಮಾರಣಾಂತಿಕವೂ ಅಲ್ಲ
(Karnataka CM Basavaraj Bommai Decided to Hold Largest Covid Vaccine Drive in India on September 17)
Published On - 2:41 pm, Tue, 14 September 21