ಯಡಿಯೂರಪ್ಪ ಸಭೆ: ಸಾರಿಗೆ ನೌಕರರ ಮುಷ್ಕರದ ಬಗ್ಗೆ ಮುಂದುವರಿದ ಬಿಗಿ ನಿಲುವು, ಕೋವಿಡ್-19 ನಿಯಂತ್ರಣಕ್ಕೆ ಹೊಸ ಕ್ರಮ

|

Updated on: Apr 13, 2021 | 7:24 PM

ಸಾರಿಗೆ ನೌಕರರ ಮುಷ್ಕರದ ವಿಚಾರದಲ್ಲಿ ಸರ್ಕಾರದ ಬಿಗಿ ನಿಲುವು ಸಡಿಲಿಸುವ ಯಾವುದೇ ಉದ್ದೇಶ ತಮಗಿಲ್ಲವೆಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು. ಖಾಸಗಿ ಆಸ್ಪತ್ರೆಗಳಿಗೆ ರೆಮೆಡಿಸಿವಿರ್ ಔಷಧಿ ಪೂರೈಕೆ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಯಡಿಯೂರಪ್ಪ ಸಭೆ: ಸಾರಿಗೆ ನೌಕರರ ಮುಷ್ಕರದ ಬಗ್ಗೆ ಮುಂದುವರಿದ ಬಿಗಿ ನಿಲುವು, ಕೋವಿಡ್-19 ನಿಯಂತ್ರಣಕ್ಕೆ ಹೊಸ ಕ್ರಮ
ಬಿ.ಎಸ್.ಯಡಿಯೂರಪ್ಪ
Follow us on

ಬೆಂಗಳೂರು: ಸಾರಿಗೆ ನಿಗಮಗಳ ನೌಕರರ ಮುಷ್ಕರ ಹಾಗೂ ರಾಜ್ಯದಲ್ಲಿ ಕೋವಿಡ್-19 ಎರಡನೇ ಅಲೆ ನಿಯಂತ್ರಣಕ್ಕೆ ತರುವ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಗಳವಾರ ಉನ್ನತ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು. ಸಾರಿಗೆ ನೌಕರರ ಮುಷ್ಕರದ ವಿಚಾರದಲ್ಲಿ ಸರ್ಕಾರದ ಬಿಗಿ ನಿಲುವು ಸಡಿಲಿಸುವ ಯಾವುದೇ ಉದ್ದೇಶ ತಮಗಿಲ್ಲವೆಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು. ಕೋವಿಡ್-19 ಸ್ಥಿತಿಗತಿ ಮತ್ತು ಲಭ್ಯತೆಯನ್ನು ಪರಿಶೀಲಿಸಿ ಖಾಸಗಿ ಆಸ್ಪತ್ರೆಗಳಿಗೆ ರೆಮೆಡಿಸಿವಿರ್ ಔಷಧಿ ಪೂರೈಕೆ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಕೆಲಸಕ್ಕೆ ಹಾಜರಾಗುವ ಸಾರಿಗೆ ನಿಗಮಗಳ ನೌಕಕರಿಗೆ ಭದ್ರತೆ ನೀಡಬೇಕು. ಸಂಸ್ಥೆಯ ಬಸ್​ಗಳಿಗೆ ಹಾನಿ‌ ಮಾಡುವ ಹಾಗೂ ನೌಕರರ ಮೇಲೆ ಹಲ್ಲೆ ನಡೆಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಸೂಚಿಸಲಾಯಿತು. 6ನೇ ವೇತನ‌ ಜಾರಿ ಅಸಾಧ್ಯ ಎಂಬ ಮಾತನ್ನು ಮುಖ್ಯಮಂತ್ರಿ ಪುನರುಚ್ಚರಿಸಿದರು. ಈ ಬಗ್ಗೆ ನೌಕರರಿಗೆ ಮನವರಿಕೆ ಮಾಡಿಕೊಡಲು ಸಭೆ ನಿರ್ಧರಿಸಿತು. ಅವಶ್ಯಕತೆ ಇದ್ದರೆ ಪ್ರತಿ ಬಸ್​ಗೆ ಒಬ್ಬ ಕಾನ್ಸ್‌ಟೇಬಲ್ ನಿಯೋಜಿಸಿ ಭದ್ರತೆ ಒದಗಿಸಿ. ಕೆಲಸಕ್ಕೆ ಬಾರದ ನೌಕರರ ವಿರುದ್ಧ ಇನ್ನಷ್ಟು ಬಿಗಿ ಕ್ರಮಕೈಗೊಳ್ಳಬೇಕು ಎಂದು ಯಡಿಯೂರಪ್ಪ ಸೂಚಿಸಿದರು.

ಖಾಸಗಿ ಆಸ್ಪತ್ರೆ ಬೆಡ್​ಗಳ ಮಾಹಿತಿ
ಖಾಸಗಿ ಆಸ್ಪತ್ರೆಗಳಲ್ಲಿ ಖಾಲಿಯಿರುವ ಬೆಡ್​ಗಳ ಕ್ಷಣಕ್ಷಣದ ಮಾಹಿತಿ ಪಡೆಯಲು ಸಭೆ ತೀರ್ಮಾನ ಮಾಡಲಾಯಿತು. ಲಸಿಕೆ ಕೊರತೆ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯದ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಅವಶ್ಯಕತೆಗೆ ಅನುಗುಣವಾಗಿ‌ ಲಸಿಕೆಯ ದಾಸ್ತಾನು ಪಡೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ಕೊರೊನಾ ಸೋಂಕು ತಡೆ ದೃಷ್ಟಿಯಿಂದ ನೈಟ್ ಕರ್ಫ್ಯೂವನ್ನು ಇನ್ನಷ್ಟು ಬಿಗಿಗೊಳಿಸಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ರಾಜ್ಯದಲ್ಲಿ ಅಗತ್ಯವಿರುವ ಸ್ಥಳಗಳಲ್ಲಿ ಮೈಕ್ರೊಕಂಟೇನ್​ಮೆಂಟ್ ವಲಯಗಳನ್ನು ಘೋಷಿಸಲು ಮುಖ್ಯಮಂತ್ರಿ ಸೂಚನೆ ನೀಡಿದರು. ಇಂಥ ವಲಯಗಳಲ್ಲಿ ಪರೀಕ್ಷೆಗಳನ್ನು ಹೆಚ್ಚಿಸಬೇಕು. ಸಂಪರ್ಕಿತರನ್ನು ಪತ್ತೆಹಚ್ಚಲು ಗಮನ ನೀಡಬೇಕು. ಮಾಸ್ಕ್​ ಹಾಕದಿರುವುದು ಮತ್ತು ಇತರ ಕೊವಿಡ್ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕೆಂದು ಯಡಿಯೂರಪ್ಪ ಹೇಳಿದರು.

ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಲಭ್ಯತೆ ಬಗ್ಗೆ ಕ್ಷಣಕ್ಷಣದ ಮಾಹಿತಿ ಅಪ್​ಡೇಟ್ ಮಾಡಿಕೊಳ್ಳಬೇಕು. ಪರಿಸ್ಥಿತಿ ನೋಡಿಕೊಂಡು ನೈಟ್ ಕರ್ಫ್ಯೂ ಮುಂದುವರಿಸುವ ಅಥವಾ ನಿಲ್ಲಿಸುವ ಬಗ್ಗೆ ಆರೋಗ್ಯ ಕಾರ್ಯಪಡೆ ಸದಸ್ಯರ ಅಭಿಪ್ರಾಯ ಪಡೆಯಲು ಸೂಚಿಸಲಾಯಿತು. ಮನೆಯಲ್ಲಿ ಐಸೋಲೇಷನ್ ಇರುವವರ ಬಗ್ಗೆ ನಿರಂತರ ಮಾಹಿತಿ ಪಡೆಯಲು ಈ ಹಿಂದಿನ‌ ಕ್ರಮ ಅನುಸರಿಸಲು ಸೂಚನೆ ನೀಡಲಾಯಿತು. ಕೊರೊನಾ ಸೋಂಕಿತರ ಚಿಕಿತ್ಸೆಗೆ ಬಳಸುವ ರೆಮೆಡಿಸಿವಿರ್ ಔಷಧಿಯನ್ನು ಲಭ್ಯತೆಗೆ ಅನುಗುಣವಾಗಿ ಖಾಸಗಿ ಆಸ್ಪತ್ರೆಗಳಿಗೆ ಒದಗಿಸುವ ಬಗ್ಗೆ ಸಭೆ ತೀರ್ಮಾನಿಸಿತು.

ಸಭೆಯಲ್ಲಿ ಮುಖ್ಯಕಾರ್ಯದರ್ಶಿ ರವಿಕುಮಾರ್, ಪೋಲೀಸ್ ಕಮಿಷನರ್ ಕಮಲ್ ಪಂಥ್, ಸಾರಿಗೆ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

(Karnataka CM BS Yediyurappa Meeting with top officials in Bengaluru on KSRTC Strike coronavirus situation)

ಇದನ್ನೂ ಓದಿ: ರಾಜ್ಯದಲ್ಲಿ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ; ಡಿಸಿ ಕಚೆರಿ ಮುಂದೆ ತಟ್ಟೆ ಲೋಟ ಬಡಿದು ಪ್ರತಿಭಟನೆ

ಇದನ್ನೂ ಓದಿ: Coronavirus India Update: ಕಳೆದ 24 ಗಂಟೆಗಳಲ್ಲಿ 1.61ಲಕ್ಷ ಹೊಸ ಕೊವಿಡ್ ಪ್ರಕರಣ ಪತ್ತೆ, 879 ಮಂದಿ ಸಾವು