ಬೆಂಗಳೂರು: ರಾಜ್ಯಕ್ಕೆ ಪ್ರತಿ ತಿಂಗಳಿಗೆ ಕನಿಷ್ಠ 1.5 ಕೋಟಿ ಡೋಸ್ ಕೋವಿಡ್ ಲಸಿಕೆಗಳನ್ನು ಒದಗಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದರು. ಕೋವಿಡ್ ಪರಿಸ್ಥಿತಿ ಕುರಿತಂತೆ 6 ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿದ ಸಭೆಯಲ್ಲಿ ಕರ್ನಾಟಕದ ಕೊರೋನಾ ಪರಿಸ್ಥಿತಿ ಮತ್ತು ಕೈಗೊಂಡಿರುವ ಕ್ರಮಗಳ ಬಗ್ಗೆ ಸಿಎಂ ಯಡಿಯೂರಪ್ಪ ಮಾಹಿತಿ ನೀಡಿದರು.
ಕೋವಿಡ್ 19ರ ಪಾಸಿಟಿವಿಟಿ ದರ, ಪ್ರಕರಣಗಳ ಸಂಖ್ಯೆ ಹಾಗೂ ತಾಂತ್ರಿಕ ಸಲಹಾ ಸಮಿತಿಯ ಅಭಿಪ್ರಾಯವನ್ನು ಆಧರಿಸಿ, ನಿರ್ಬಂಧಗಳನ್ನು ವಿಧಿಸಲು ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಕೋವಿಡ್ ಸೂಕ್ತ ನಡವಳಿಕೆಯನ್ನು ಖಾತರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆಗಳನ್ನು ಸಹ ನೀಡಲಾಗಿದೆ ಎಂದು ಸಿಎಂ ತಿಳಿಸಿದರು.
ಕರ್ನಾಟಕದಲ್ಲಿ ಕೋವಿಡ್ -19 ಪ್ರಕರಣಗಳು ಇಳಿಮುಖವಾಗಿದ್ದು, 1900ಕ್ಕೆ ಇಳಿದಿದೆ. ಬೆಂಗಳೂರಿನಲ್ಲಿ ಸುಮಾರು 400ಕ್ಕೆ ಇಳಿದಿದೆ. ಪಾಸಿಟಿವಿಟಿ ದರ ಶೇ. 1.42 ರಷ್ಟಿದ್ದು, ಮರಣ ಪ್ರಮಾಣ ಶೇ. 1.25 ಕ್ಕೆ ಇಳಿದಿದೆ. ರಾಜ್ಯದಲ್ಲಿ ಈ ವರೆಗೆ 2.62 ಕೋಟಿ ಲಸಿಕೆ ನೀಡಲಾಗಿದ್ದು, ಪ್ರತಿ ದಿನ 5 ಲಕ್ಷ ಡೋಸ್ ಗಳಂತೆ ತಿಂಗಳಿಗೆ 1.5 ಕೋಟಿ ಡೋಸ್ ಲಸಿಕೆ ಒದಗಿಸುವಂತೆ ಈ ವೇಳೆ ಕೇಂದ್ರ ಸರ್ಕಾರಕ್ಕೆ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿದರು.
ಪ್ರಸ್ತುತ ಮೂರನೇ ಅಲೆಯನ್ನು ಎದುರಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದ್ದು, ಎಲ್ಲ ಆರೋಗ್ಯ ಸೇವಾ ಸಂಸ್ಥೆಗಳಲ್ಲಿ ಆಕ್ಸಿಜನೇಟೆಡ್ ಬೆಡ್ ಗಳು, ವೆಂಟಿಲೇಟರ್ ಬೆಡ್ ಗಳು ಹಾಗೂ ಮಕ್ಕಳ ಐಸಿಯುಗಳು ಮೊದಲಾದ ಸೌಲಭ್ಯ ಹೆಚ್ಚಿಸಲಾಗುತ್ತಿದ್ದು, ವೈದ್ಯರು, ಸ್ಟಾಫ್ ನರ್ಸ್, ಪ್ರಯೋಗಾಲಯ ತಂತ್ರಜ್ಞರ ಸೇವೆ ಒದಗಿಸಲಾಗುತ್ತಿದೆ. ಜೊತೆಗೆ ಕೋವಿಡ್ ಚಿಕಿತ್ಸೆಗೆ ಅಗತ್ಯ ಪರಿಕರಗಳನ್ನೂ ಸಹ ಸಾಕಷ್ಟು ಸಂಖ್ಯೆಯಲ್ಲಿ ಖರೀದಿಸಲಾಗುತ್ತಿದೆ. ಹೊಸ RTPCR ಪ್ರಯೋಗಾಲಯಗಳ ಸ್ಥಾಪನೆ ಹಾಗೂ ಜಿನೋಮ್ ಸೀಕ್ವೆನ್ಸಿಂಗ್ ಲ್ಯಾಭೊರೇಟರಿಗಳನ್ನು ಸ್ಥಾಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೊರೋನಾ ಮೂರನೇ ಅಲೆಯನ್ನು ಎದುರಿಸಲು ಕೇಂದ್ರ ಸರ್ಕಾರದಿಂದ ಲಸಿಕೆ ಹಂಚಿಕೆ ಹೆಚ್ಚಳ, 800 ನಿಯೊ-ನೇಟಲ್ ಮತ್ತು ಪಿಡಿಯಾಟ್ರಿಕ್ ವೆಂಟಿಲೇಟರುಗಳನ್ನು ಪಿಎಂ-ಕೇರ್ಸ್ ಅಡಿ ಒದಗಿಸುವಂತೆ ಸಿಎಂ ಯಡಿಯೂರಪ್ಪ ಮನವಿ ಮಾಡಿದರು.
ಜೊತೆಗೆ, ತಾಲ್ಲೂಕು ಆಸ್ಪತ್ರೆಗಳಿಗೆ 40 ಪಿಎಸ್ ಎ ಆಕ್ಸಿಜನ್ ಉತ್ಪಾದನಾ ಘಟಕಗಳ ಹಂಚಿಕೆ ಮಾಡುವಂತೆ ಹಾಗೂ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಹಂಚಿಕೆಯ ವಿಕೇಂದ್ರೀಕರಣ ಮಾಡುವಂತೆ ಮನವಿ ಮಾಡಲಾಯಿತು. ಮ್ಯುಕೊರ್ಮೈಕೊಸಿಸ್ ಆಂಫೊಟೆರಿಸಿನ್-ಬಿ ಮತ್ತು ಮಕ್ಕಳಿಗೆ ಐವಿಐಜಿ ಹಂಚಿಕೆಯನ್ನು ಹೆಚ್ಚಿಸಬೇಕು ಎಂದು ವಿನಂತಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಕರ್ನಾಟಕ ಸೇರಿದಂತೆ 6 ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿದ್ದಾರೆ. ಈ ವೇಳೆ, ಯುರೋಪ್ ಮತ್ತಿತರ ರಾಷ್ಟ್ರಗಳಲ್ಲಿ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸಬೇಕು. ಕೋವಿಡ್ ಹೆಚ್ಚುತ್ತಿರುವ ಕಡೆ ತಕ್ಷಣ ಕ್ರಮ ತೆಗೆದುಕೊಳ್ಳಿ. ಮೈಕ್ರೋ ಕಂಟೇನ್‌ಮೆಂಟ್ ಜೋನ್‌ಗಳ ಬಗ್ಗೆ ಎಚ್ಚರವಹಿಸಿ ಎಂದು ಮುಖ್ಯಮಂತ್ರಿಗಳಿಗೆ ಪ್ರಧಾನಿ ಮೋದಿ ಸೂಚನೆ ನೀಡಿದ್ದಾರೆ. ಕೊವಿಡ್ ನಿಯಂತ್ರಣಕ್ಕೆ ಪ್ರಧಾನಿ ಮೋದಿಯಿಂದ 4T ಸೂತ್ರ ನೀಡಲಾಗಿದ್ದು, ಟೆಸ್ಟಿಂಗ್, ಟ್ರೇಸಿಂಗ್, ಟ್ರೀಟ್‌ಮೆಂಟ್, ಟೀಕಾ ಈ ಸೂತ್ರಗಳನ್ನು ಅಳವಡಿಸಿಕೊಳ್ಳಲು ಸೂಚಿಸಲಾಗಿದೆ. ಕೋವಿಡ್ ಪರೀಕ್ಷೆ, ಪತ್ತೆ ಹಚ್ಚುವುದು, ಚಿಕಿತ್ಸೆ, ಲಸಿಕೆಯನ್ನು ನೀಡುವ ಮೂಲಕ ಕೋವಿಡ್ ಹರಡುವಿಕೆಯ ಪ್ರಮಾಣವನ್ನು ನಿಯಂತ್ರಣ ಮಾಡಲು ಸಾಧ್ಯವಿದೆ ಎಂದು ಮೋದಿ ಹೇಳಿದ್ದಾರೆ.
ಈಗಲೇ ಪರಿಸ್ಥಿತಿ ನಿಭಾಯಿಸದಿದ್ದರೆ ಮುಂದೆ ಕಷ್ಟವಾಗುತ್ತದೆ. ಮಕ್ಕಳನ್ನು ಕೊವಿಡ್‌ನಿಂದ ರಕ್ಷಿಸಲು ಅಗತ್ಯ ಕ್ರಮಕೈಗೊಳ್ಳಿ. ಅನ್‌ಲಾಕ್ ಬಳಿಕದ ಪರಿಸ್ಥಿತಿ ಆತಂಕ ಮೂಡಿಸುತ್ತಿದೆ. ಅನ್‌ಲಾಕ್ ಬಳಿಕ ಬೇಜವಾಬ್ದಾರಿತನ ಹೆಚ್ಚುತ್ತಿದೆ.ಅಮೆರಿಕ, ಯುರೋಪ್, ಪಾಶ್ಚಿಮಾತ್ಯ ದೇಶಗಳಲ್ಲಿ ಕೊರೋನಾ ಮತ್ತೆ ಹೆಚ್ಚುತ್ತಿದೆ. ಆ ದೇಶಗಳಲ್ಲಿ ಕೊರೊನಾ ಪ್ರಕರಣ ವೇಗವಾಗಿ ಹರಡುತ್ತಿದೆ. ಕೊರೊನಾ ಸೋಂಕು ನಮ್ಮಿಂದ ದೂರ ಹೋಗಿಲ್ಲ. ಹೀಗಾಗಿ, ಇನ್ನೂ ಹೆಚ್ಚಿನ ಎಚ್ಚರ ಅಗತ್ಯ ಎಂದು 6 ರಾಜ್ಯಗಳ ಸಿಎಂಗಳ ಜತೆ ಸಭೆಯಲ್ಲಿ ಪ್ರಧಾನಿ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಅನ್‌ಲಾಕ್ ಬಳಿಕ ಜನರಲ್ಲಿ ಬೇಜವಾಬ್ದಾರಿತನ ಹೆಚ್ಚಾಗಿದೆ; ಸಿಎಂಗಳ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಆತಂಕ
ಇದನ್ನೂ ಓದಿ: ಹೆಚ್ಎಲ್ಆರ್ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 1 ಗಂಟೆಗೆ ದೆಹಲಿ ಕಡೆಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪ್ರಯಾಣ
(Karnataka CM BS Yediyurappa Urges PM Narendra Modi to Provide atleast 1.5 Crore Covid Vaccine Dose per Month)
Published On - 1:52 pm, Fri, 16 July 21