ಬೆಂಗಳೂರು, ನವೆಂಬರ್ 9: ಪ್ರಧಾನಿ ನರೇಂದ್ರ ಮೋದಿಗೆ ತವರು ರಾಜ್ಯ ಗುಜರಾತ್ ಬಗ್ಗೆ ಎಲ್ಲಿಲ್ಲದ ಅಭಿಮಾನ, ಹೀಗಾಗಿ ಪ್ರಮುಖ ಯೋಜನೆಗಳ ವಿಚಾರದಲ್ಲಿ ದಕ್ಷಿಣದ ರಾಜ್ಯಗಳನ್ನು ಕಡೆಗಣಿಸಲಾಗುತ್ತಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅವರು, ಯೋಜನೆಗಳ, ಅನುದಾನದ ವಿಚಾರದಲ್ಲಿ ಕೇಂದ್ರದಲ್ಲಿ ಧ್ವನಿಯೆತ್ತದ ರಾಜ್ಯ ಬಿಜೆಪಿ ಸಂಸದರ ನಡೆಯನ್ನೂ ಪ್ರಶ್ನಿಸಿದ್ದಾರೆ.
ಪ್ರಮುಖ ಹೂಡಿಕೆಗಳನ್ನು (ಸೆಮಿಕಂಡಕ್ಟರ್ ಪ್ಲಾಂಟ್‌ಗಳಿಂದ ಪ್ರಮುಖ ಉತ್ಪಾದನಾ ಕೇಂದ್ರಗಳವರೆಗೆ) ಕರ್ನಾಟಕ, ತಮಿಳುನಾಡು ಮತ್ತು ತೆಲಂಗಾಣದಂತಹ ಪ್ರವರ್ಧಮಾನಕ್ಕೆ ಬರುತ್ತಿರುವ ರಾಜ್ಯಗಳಿಂದ ದೂರವಿಡಲಾಗಿದೆ ಮತ್ತು ವಿಶೇಷ ಸಬ್ಸಿಡಿಗಳು ಮತ್ತು ಪ್ರೋತ್ಸಾಹ ಧನಗಳೊಂದಿಗೆ ಗುಜರಾತ್‌ಗೆ ಹಸ್ತಾಂತರಿಸಲಾಗಿದೆ. ಇದು ಮೋದಿ ಅವರ ಎಲ್ಲಿಲ್ಲದ ಗುಜರಾತ್ ಒಲವನ್ನು ತೋರಿಸುತ್ತದೆ ಎಂದು ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ.
PM @NarendraModi’s relentless favouritism toward Gujarat is clear as day, with major investments – from semiconductor plants to key manufacturing hubs – being coaxed away from thriving states like Karnataka, Tamil Nadu, and Telangana, and handed to Gujarat with exclusive…
— Siddaramaiah (@siddaramaiah) November 9, 2024
ನಮ್ಮ ಕರ್ನಾಟಕದ ಬಿಜೆಪಿ ಸಂಸದರು ಮೌನವಾಗಿದ್ದಾರೆ. ಕರ್ನಾಟಕದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನ ಮತ್ತು ಉತ್ಪಾದನಾ ಪರಿಸರ ವ್ಯವಸ್ಥೆಯ ಬಗೆಗಿನ ಈ ನಿರ್ದಾಕ್ಷಿಣ್ಯ ನಿರ್ಲಕ್ಷವನ್ನು ಪ್ರಶ್ನಿಸಲು ಅವರಿಂದ ಆಗುತ್ತಿಲ್ಲ. ಇದರ ಬದಲಿಗೆ, ಮೋದಿಯವರ ‘ಹೆಲಿಕಾಪ್ಟರ್ ರಾಜತಾಂತ್ರಿಕತೆ’ಗೆ ಗುಜರಾತಿನ ಸೇವೆಗೆ ಮಾತ್ರ ಅವಕಾಶ ಮಾಡಿಕೊಟ್ಟು ನಮ್ಮ ರಾಜ್ಯವನ್ನು ಬದಿಗೊತ್ತಿ ಬಿಡುತ್ತಾರೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
ಬಿಜೆಪಿ ಸಂಸದರ ಮೌನ ಕರ್ನಾಟಕದ ಹಿತಾಸಕ್ತಿಗಳಿಗೆ ಬಗೆದ ದ್ರೋಹವಾಗಿದೆ. ಅವರು ಮೌನವನ್ನು ಮುರಿದು, ನಮ್ಮ ರಾಜ್ಯದ ಪರವಾಗಿ ಮಾತನಾಡುವ, ಕರ್ನಾಟಕ ಮತ್ತು ದಕ್ಷಿಣ ಭಾರತಕ್ಕೆ ನ್ಯಾಯಸಮ್ಮತ ಮತ್ತು ಸಮಾನ ಅವಕಾಶವನ್ನು ಕೋರುವ ಸಮಯ ಇದಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಅಮೆರಿಕ ಮೂಲದ ಸೆಮಿಕಂಡಕ್ಟರ್ ಕಂಪನಿಯ ಪ್ರತಿನಿಧಿಗಳು ತಮಿಳುನಾಡಿನಲ್ಲಿ ಕಾರ್ಖಾನೆಯನ್ನು ಸ್ಥಾಪಿಸುವ ಉದ್ದೇಶದಿಂದ ಕೇಂದ್ರ ವಾಣಿಜ್ಯ ಸಚಿವರನ್ನು ಭೇಟಿಯಾಗಿದ್ದರು. ಮಾತುಕತೆ ವೇಳೆ, ಯೋಜನೆಯನ್ನು ಸ್ಥಾಪಿಸಲು ಮನವೊಲಿಸುವ ಸಲುವಾಗಿ ಅವರನ್ನು ಮೋದಿಯವರ ತವರು ರಾಜ್ಯವಾದ ಗುಜರಾತ್‌ನ ಸ್ಥಳಕ್ಕೆ ಕರೆದೊಯ್ಯಲಾಯಿತು ಎಂಬ ಆರೋಪಗಳಿವೆ. ಈ ಹಿನ್ನೆಲೆಯಲ್ಲಿ ಮೋದಿ ವಿರುದ್ಧ ಸಿದ್ದರಾಮಯ್ಯ ‘ಹೆಲಿಕಾಪ್ಟರ್ ರಾಜತಾಂತ್ರಿಕತೆ’ ಪದ ಉಲ್ಲೇಖಿಸಿ ಟೀಕಿಸಿದ್ದಾರೆ.
ಇದನ್ನೂ ಓದಿ: ಮೂರೂವರೆ ವರ್ಷ ನಾನೇ ಸಿಎಂ: ಸಿದ್ದರಾಮಯ್ಯ ಹೇಳಿಕೆಯಿಂದ ಶುರುವಾಯ್ತು ಹೊಸ ಚರ್ಚೆ
ಈ ಹಿಂದೆ, ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಕೂಡ ಮೋದಿ ತವರು ರಾಜ್ಯಕ್ಕೆ ಅನುಕೂಲವಾಗುವಂತೆ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ