
ಬೆಂಗಳೂರು, ಸೆಪ್ಟೆಂಬರ್ 12: ಹಿಮಾಚಲ ಪ್ರದೇಶದಲ್ಲಿ ಜೂನ್ 20ರಂದು ಮಾನ್ಸೂನ್ ಆರಂಭವಾದಾಗಿನಿಂದ ಇದುವರೆಗೂ ಮಳೆ, ಪ್ರವಾಹ, ಭೂಕುಸಿತದಂತಹ ದುರಂತಗಳಿಂದ ಒಟ್ಟು 380 ಜನರು ಸಾವನ್ನಪ್ಪಿದ್ದಾರೆ. ಹಿಮಾಚಲ ಪ್ರದೇಶದಲ್ಲಿ (Himachal Pradesh Floods) ಉಂಟಾಗಿರುವ ನೈಸರ್ಗಿಕ ದುರಂತಕ್ಕೆ ಸಂತಾಪ ಸೂಚಿಸಿರುವ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹಿಮಾಚಲ ಪ್ರದೇಶದ ವಿಪತ್ತು ಪರಿಹಾರ ಮತ್ತು ಪುನರ್ವಸತಿಗೆ ಸಹಾಯ ಮಾಡಲು 5 ಕೋಟಿ ರೂ. ಹಣ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ.
‘ಹಿಮಾಚಲ ಪ್ರದೇಶ ರಾಜ್ಯದಲ್ಲಿ ಇತ್ತೀಚೆಗೆ ಉಂಟಾದ ಪ್ರವಾಹಕ್ಕೆ ಅಮೂಲ್ಯ ಜೀವಗಳು ಬಲಿಯಾಗಿವೆ, ಸಾವಿರಾರು ಮನೆಗಳು ಕೊಚ್ಚಿಹೋಗಿವೆ, ಮೂಲಸೌಕರ್ಯಗಳು ನಾಶವಾಗಿವೆ. ಇದಕ್ಕೆ ಕರ್ನಾಟಕದ ಜನರು ತೀವ್ರ ಸಂತಾಪ ಸೂಚಿಸುತ್ತಾರೆ. ಪ್ರಕೃತಿ ನಮ್ಮ ಮೇಲೆ ಮುನಿಸಿಕೊಂಡಾಗ, ಇಂತಹ ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗ ಒಗ್ಗಟ್ಟಾಗಿ ಅದನ್ನು ಎದುರಿಸಬೇಕು. ಹೀಗಾಗಿ, ಕರ್ನಾಟಕ ಹಿಮಾಚಲ ಪ್ರದೇಶದ ಜನರ ಜೊತೆ ಹೆಗಲಿಗೆ ಹೆಗಲಾಗಿ ನಿಲ್ಲುತ್ತದೆ. ನಿಮ್ಮ ಕಷ್ಟಕಾಲದಲ್ಲಿ ನಾವು ನಿಮ್ಮೊಂದಿದ್ದೇವೆ’ ಎಂದು ಸಿಎಂ ಸಿದ್ದರಾಮಯ್ಯ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರಿಗೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿ: ಪ್ರವಾಹ ಪೀಡಿತ ಹಿಮಾಚಲ ಪ್ರದೇಶದಲ್ಲಿ ಪ್ರಧಾನಿ ಮೋದಿ ವೈಮಾನಿಕ ಸಮೀಕ್ಷೆ
ಹಾಗೇ, ವಿಪತ್ತಿಗೀಡಾದ ಹಿಮಾಚಲ ಪ್ರದೇಶಕ್ಕೆ ಕರ್ನಾಟಕ ಸರ್ಕಾರದಿಂದ 5 ಕೋಟಿ ರೂ. ಹಣವನ್ನು ನೀಡುವುದಾಗಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ‘ನಾವು ನೀಡುವ ಈ ಹಣದಿಂದ ನಿಮ್ಮ ರಾಜ್ಯಕ್ಕಾದ ನಷ್ಟವನ್ನು, ಬಲಿಯಾ ಜೀವಗಳನ್ನು ವಾಪಾಸ್ ತಂದುಕೊಡಲು ಸಾಧ್ಯವಿಲ್ಲ ಎಂಬುದು ನಮಗೆ ತಿಳಿದಿದೆ. ಆದರೆ, ಈ ದುರಂತದಿಂದ ಸಂಕಷ್ಟಕ್ಕೀಡಾದ ಕುಟುಂಬಗಳಿಗೆ ಈ ಹಣದಿಂದ ತುರ್ತು ಸೌಲಭ್ಯ ಕಲ್ಪಿಸಲು ಸಹಾಯವಾಗಲಿ ಎಂಬ ಉದ್ದೇಶ ನಮ್ಮದು’ ಎಂದು ಸಿಎಂ ಪತ್ರದಲ್ಲಿ ತಿಳಿಸಿದ್ದಾರೆ.
ಹಿಮಾಚಲ ಪ್ರದೇಶದ ಪ್ರವಾಹ:
ಹಿಮಾಚಲ ಪ್ರದೇಶದಲ್ಲಿ ಪ್ರವಾಹ, ಭೂಕುಸಿತದಿಂದ 380 ಜನರು ಮೃತಪಟ್ಟಿದ್ದಾರೆ. ಈ ಪೈಕಿ 215 ಜನರು ಭೂಕುಸಿತ, ದಿಢೀರ್ ಪ್ರವಾಹ, ನೀರಿನಲ್ಲಿ ಮುಳುಗುವುದು ಮತ್ತು ಮನೆ ಕುಸಿತದಂತಹ ಮಳೆ ಸಂಬಂಧಿತ ಘಟನೆಗಳಲ್ಲಿ ಸಾವನ್ನಪ್ಪಿದ್ದರೆ, 165 ಜನರು ಮಳೆಯಿಂದ ಹಾನಿಗೊಳಗಾದ ಹೆದ್ದಾರಿಗಳು ಮತ್ತು ಪರ್ವತ ರಸ್ತೆಗಳಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ. ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (SEOC) ಬಿಡುಗಡೆ ಮಾಡಿದ ಸಂಚಿತ ಹಾನಿಯ ಅಂದಾಜಿನ ಪ್ರಕಾರ, ಹಿಮಾಚಲ ಪ್ರದೇಶ ರಾಜ್ಯದಲ್ಲಿ 447 ಜನರು ಗಾಯಗೊಂಡಿದ್ದಾರೆ ಮತ್ತು 1,520 ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ. ಇನ್ನೂ 40 ಅಂಗಡಿಗಳು, 28,958 ಜಾನುವಾರುಗಳು ಮತ್ತು 289 ಕೋಳಿಗಳು ನಷ್ಟವಾಗಿವೆ. 5,762 ಮನೆಗಳು ಭಾಗಶಃ ಹಾನಿಗೊಳಗಾಗಿವೆ.
ಇದನ್ನೂ ಓದಿ: ಪ್ರವಾಹ ಪೀಡಿತ ಹಿಮಾಚಲ ಪ್ರದೇಶಕ್ಕೆ ಪ್ರಧಾನಿ ಮೋದಿ ಭೇಟಿ; ಸಂತ್ರಸ್ತರಿಗೆ 1,500 ಕೋಟಿ ರೂ. ನೆರವು ಘೋಷಣೆ
ಪ್ರಧಾನಿ ಮೋದಿ ಭೇಟಿ:
ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಪ್ರವಾಹಪೀಡಿತ ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಿ, ವೈಮಾನಿಕ ಸಮೀಕ್ಷೆಯನ್ನು ನಡೆಸಿದ್ದರು. ಈ ವೇಳೆ 1,500 ಕೋಟಿ ರೂ. ಆರ್ಥಿಕ ನೆರವು ಘೋಷಿಸಿದ್ದರು. ಈ ಕಷ್ಟದ ಸಮಯದಲ್ಲಿ ಕೇಂದ್ರ ಸರ್ಕಾರವು ಹಿಮಾಚಲ ಪ್ರದೇಶ ಸರ್ಕಾರಕ್ಕೆ ಸಾಧ್ಯವಿರುವ ಎಲ್ಲಾ ಸಹಾಯವನ್ನು ನೀಡುತ್ತದೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದ್ದರು. ಪ್ರವಾಹದಿಂದ ಮೃತರಾದವರ ಹತ್ತಿರದ ಸಂಬಂಧಿಕರಿಗೆ 2 ಲಕ್ಷ ರೂ. ಮತ್ತು ಗಾಯಗೊಂಡವರಿಗೆ 50,000 ರೂ. ಪರಿಹಾರವನ್ನು ಪ್ರಧಾನಿ ಮೋದಿ ಘೋಷಿಸಿದ್ದರು. ಹಾಗೇ, ರಕ್ಷಣಾ ಪಡೆಗಳು ಜೊತೆ, ಸಂತ್ರಸ್ತರ ಜೊತೆ ಪ್ರಧಾನಿ ಮೋದಿ ಸಂವಾದ ನಡೆಸಿದ್ದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ