ಬೆಂಗಳೂರು: ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫರ್ನಾಂಡಿಸ್ (80) ಇಂದು ನಿಧನರಾಗಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಆಸ್ಕರ್ ಫರ್ನಾಂಡಿಸ್ಗೆ ಶ್ರದ್ಧಾಂಜಲಿ ಸಭೆ ನಡೆಸಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಹೆಚ್.ಕೆ.ಪಾಟೀಲ್, ಜಿ.ಪರಮೇಶ್ವರ್, ಆರ್.ಧ್ರುವನಾರಾಯಣ, ಈಶ್ವರ ಖಂಡ್ರೆ ಸಭೆಯಲ್ಲಿ ಭಾಗವಹಿಸಿ ಆಸ್ಕರ್ ಫರ್ನಾಂಡಿಸ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫರ್ನಾಂಡಿಸ್ ಸಂತಾಪ ಸೂಚಕ ಸಭೆಯಲ್ಲಿ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದ್ದಾರೆ. ಆಸ್ಕರ್ ಫರ್ನಾಂಡಿಸ್ ನನಗೆ ಚಿರಪರಿಚಿತರಾಗಿದ್ದರು. ಯಾವುದೇ ಗೌಪ್ಯ ವಿಚಾರವಿದ್ದರೂ ನನ್ನ ಜತೆ ಚರ್ಚಿಸುತ್ತಿದ್ದರು. ಆಸ್ಕರ್ ಫರ್ನಾಂಡಿಸ್‌ರಂತಹ ಮನುಷ್ಯ ಮತ್ತೆ ಸಿಗುವುದಿಲ್ಲ. ಯಾವುದೇ ಸಹಾಯ ಮಾಡಿದರೂ ಆತ ಹೇಳಿಕೊಳ್ಳುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.
ಮೊನ್ನೆ ಮಂಗಳೂರಿಗೆ ಹೋದಾಗ ಆಸ್ಕರ್ ಅವರನ್ನು ನೋಡಲು ಹೋಗಿದ್ದೆ. ಅಲ್ಲಿ ಅವರನ್ನು ನೋಡಲು ಅವಕಾಶ ಇರದಿದ್ದರೂ ನನ್ನನ್ನು ಕರೆದೊಯ್ದು ತೋರಿಸಿದರು. ನನ್ನನ್ನು ನೋಡಲು ಅವರ ಕಣ್ಣು ತೆರೆಸಲು ಪ್ರಯತ್ನಿಸಿದರು. ನನಗೆ ಜೋರಾಗಿ ಕೂಗಿ ಆಸ್ಕರ್ ಅಂತ ಕರೆಯಿರಿ ಅಂತ ಅವರ ಪತ್ನಿ ಹೇಳಿದರು. ಆದರೆ ವೈದ್ಯರು ಅದು ಸಾಧ್ಯವಿಲ್ಲ ಅಂದ್ರು. ಆಸ್ಕರ್ ಕೋಮಾದಲ್ಲಿದ್ದಾರೆ ಅಂತ ಡಾಕ್ಟರ್ ಹೇಳಿದ್ರು. ಮೊನ್ನೆ ಶನಿವಾರ 12 ರಿಂದ 1 ಗಂಟೆವರೆಗೆ ಅಲ್ಲೇ ಕುಟುಂಬದವರ ಮಾತಾಡಿಸಿ ಬಂದೆ ಎಂದು ಖರ್ಗೆ ತಿಳಿಸಿದ್ದಾರೆ.
ಅವರು ಯಾರಿಗೇ ಸಹಾಯ ಮಾಡಿದರು ಸಹ ನನ್ನಿಂದ ಸಹಾಯ ಆಯ್ತು ಅಂತ ಹೇಳಿಕೊಳ್ತಿರಲಿಲ್ಲ. ನಾನು ಒಮ್ಮೆ ಮಲೇಷಿಯಾಗೆ ಹೋಗಿದ್ದೆ, ಆಗ ನನಗೆ ಆಸ್ಕರ್ ಸಡನ್ ಫೋನ್ ಮಾಡಿದ್ರು. ಖರ್ಗೆ ಅವರೇ ನೀವು ಬರಬೇಕು ಅಂದ್ರು, ಯಾಕೆ ಅಂದೆ. ಮೇಡಂ ಕರೀತಿದಾರೆ, ನೀವು ಬರಲೇಬೇಕು ಅಂದರು. ಏನು ಅಂತ ಹೇಳಲಿಲ್ಲ, ಬರಲೇಬೇಕು ಅಂದ್ರು. ನಾನು ಹೋದ ಕೂಡಲೇ ನೀವು ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಬೇಕು ಅಂದರು. ನಾನು ಆಗ ಆಗಲ್ಲ, ನಾನು ಮೂರು ಹೆಸರು ಕೊಡ್ತೀನಿ ಅವರ ಪೈಕಿ ಯಾರನ್ನಾದರೂ ಮಾಡಿ ಅಂದೆ. ಆದರೆ ಆಗ ಆಸ್ಕರ್ ಇಲ್ಲ ಈಗಾಗಲೇ ಮೇಡಂ ನಿಮ್ಮ ಹೆಸರು ಫೈನಲ್ ಮಾಡಿದಾರೆ ಅಂದರು. ಹೀಗೆ ಅವರು ಗೌಪ್ಯತೆ ಕಾಪಾಡುವ ಜೊತೆಗೆ ಮಾಡಿದ ಸಹಾಯ ತೋರಿಸಿಕೊಳ್ತಿರಲಿಲ್ಲ ಎಂದು ಖರ್ಗೆ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಆಸ್ಕರ್ ಫರ್ನಾಂಡಿಸ್ರದ್ದು ಪಕ್ಷ ಸಂಘಟನೆಯಲ್ಲಿ ಎತ್ತಿದ ಕೈ. ಅವರು ನಮ್ಮ ಜತೆ ಇಲ್ಲ ಅನ್ನೋದು ನಂಬುವುದಕ್ಕೆ ಆಗ್ತಿಲ್ಲ. ಆಸ್ಕರ್ ಫರ್ನಾಂಡಿಸ್‌ರಂತಹವರು ಸಿಗುವುದು ತೀರಾ ವಿರಳ. ಆಸ್ಕರ್ ಫರ್ನಾಂಡಿಸ್ ಸಹಾಯಮಾಡಿದ್ದನ್ನ ಹೇಳಿದವರಲ್ಲ ಎಂದು ಖರ್ಗೆ ಹೇಳಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫರ್ನಾಂಡಿಸ್ ಸಂತಾಪ ಸೂಚಕ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಚಾಲಕರ ಅಸೋಸಿಯೇಷನ್ ಕಟ್ಟಿದವರು ಆಸ್ಕರ್. ಪಕ್ಷದಲ್ಲಿ ಹಲವು ಸ್ಥಾನಗಳನ್ನ ಹತ್ತಿದವರು. ಆಸ್ಕರ್ ಅವರಿಗೆ ಯಾವುದೇ ದುಶ್ಚಟಗಳಿರಲಿಲ್ಲ. ಅವರಿಗಿದ್ದ ಚಟ ಕಾರ್ಯಕರ್ತರ ಭೇಟಿ. ಬೆಳಗಿನ ಜಾವ 3 ರವರೆಗೆ ಭೇಟಿ ಮಾಡ್ತಿದ್ರು. ಯಾವತ್ತೂ ಅಹಂ ತೋರಿದವರಲ್ಲ. ಅವರು ಯುವಕರಿಗೆ ಹೆಚ್ಚು ಪ್ರೋತ್ಸಾಹ ಕೊಡುತ್ತಿದ್ದರು. ಅಂತವರು ಇಂದ ನಮ್ಮ ಜೊತೆಯಿಲ್ಲ. ಅವರ ನಿಧನ ತುಂಬಲಾರದ ನಷ್ಟ ಎಂದು ಆಸ್ಕರ್ ನಿಧನಕ್ಕೆ ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.
ಆಸ್ಕರ್ ಫರ್ನಾಂಡಿಸ್ ಅಂತಿಮ ದರ್ಶನ, ಅಂತ್ಯಕ್ರಿಯೆ ಮಾಹಿತಿ
ಸೆ.14ರಂದು ಬೆಳಿಗ್ಗೆ 10 ಗಂಟೆಯಿಂದ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿ, ಉಡುಪಿ ಚರ್ಚ್ ಮತ್ತು ಪೂರ್ವಜರ ಮನೆಯಲ್ಲಿ ಪಾರ್ಥಿವ ಶರೀರದ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಸೆ.15ರಂದು ಬೆಳಿಗ್ಗೆ 10 ಗಂಟೆಯಿಂದ ಮಂಗಳೂರಿನ ಮಿಲಾಗ್ರೆಸ್ ಚರ್ಚ್‌ನಲ್ಲಿ ಮಾಸ್ ಮತ್ತು ದರ್ಶನ. ಸಂಜೆ ಬೆಂಗಳೂರಿಗೆ ಏರ್ಲಿಫ್ಟ್
ಸೆ.16ರಂದು ಬೆಳಿಗ್ಗೆ 10ರಿಂದ 12ರವರೆಗೆ ಕೆಪಿಸಿಸಿ ಕಚೇರಿಯಲ್ಲಿ ಗೌರವ. 3.30ರ ನಂತರ ಸೇಂಟ್ ಪ್ಯಾಟ್ರಿಕ್ ಚರ್ಚ್‌ನಲ್ಲಿ ಅಂತಿಮ ಆಶೀರ್ವಚನ, ಹೊಸೂರು ಸೆಮಿಟ್ರಿಯಲ್ಲಿ ಸಮಾಧಿ
ಡಿ.ಕೆ.ಶಿವಕುಮಾರ್ ಹೇಳಿಕೆ
ಆಸ್ಕರ್ ಫರ್ನಾಂಡಿಸ್ ಕುಟುಂಬಸ್ಥರ ಸಂಪರ್ಕದಲ್ಲಿದ್ದೇನೆ. ಆಸ್ಕರ್ ಪಾರ್ಥಿವ ಶರೀರ ಬೆಂಗಳೂರಿಗೆ ತರುವ ಬಗ್ಗೆ ಚರ್ಚೆ ಮಾಡಿದ್ದೇನೆ. ನಾಳೆ ಉಡುಪಿ, ಮಂಗಳೂರಿನ ಚರ್ಚ್‌ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫರ್ನಾಂಡಿಸ್ ನಿಧನದ ಬಳಿಕ, ಟಿವಿ9ಗೆ ಮಾಜಿ ಸಚಿವ ರಮಾನಾಥ ರೈ ಅಂತಿಮ ದರ್ಶನ ಹಾಗೂ ಆಸ್ಕರ್ ಅಂತ್ಯಕ್ರಿಯೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಅಂತಿಮ ದರ್ಶನ ವ್ಯವಸ್ಥೆ ಮಾಡಲಾಗುವುದು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ, ರಾಷ್ಟ್ರ ಮತ್ತು ರಾಜ್ಯದ ನಾಯಕರು ಭಾಗಿ ಸಾಧ್ಯತೆ ಇದೆ. ಬಳಿಕ ಬೆಂಗಳೂರಿನಲ್ಲಿ ಫರ್ನಾಂಡಿಸ್ ಅಂತ್ಯಕ್ರಿಯೆ ನಡೆಸಲಾಗುವುದು. ಸೇಂಟ್ ಪ್ಯಾಟ್ರಿಕ್ಸ್ ಚರ್ಚ್‌ನಲ್ಲಿ ಅಂತ್ಯಕ್ರಿಯೆ ನಡೆಸ್ತೇವೆ ಎಂದು ಟಿವಿ9ಗೆ ಮಾಜಿ ಸಚಿವ ರಮಾನಾಥ ರೈ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಪೋತು ಬಲೆ ಆಸ್ಕರಣ್ಣ, ಕಾಲನ ಗರ್ಭ ಸೇರಿದ ಆಸ್ಕರ್ ಫರ್ನಾಂಡಿಸ್: ಪುರುಷೋತ್ತಮ ಬಿಳಿಮಲೆ ಬರಹ
ಇದನ್ನೂ ಓದಿ: ಆಸ್ಕರ್ ಫರ್ನಾಂಡಿಸ್ ನಿಧನಕ್ಕೆ ಪ್ರಧಾನಿ ಮೋದಿ, ಸೋನಿಯಾ ಗಾಂಧಿ, ದೇವೇಗೌಡ ಸೇರಿ ಗಣ್ಯರಿಂದ ಸಂತಾಪ
Published On - 6:03 pm, Mon, 13 September 21