
ಬೆಂಗಳೂರು, ಡಿಸೆಂಬರ್ 26: ಕರ್ನಾಟಕ ರಾಜಕೀಯದಲ್ಲಿ, ವಿಶೇಷವಾಗಿ ಕಾಂಗ್ರೆಸ್ (Congress) ಪಕ್ಷದೊಳಗಿನ ನಾಯಕತ್ವ ಬದಲಾವಣೆ ವಿಚಾರ ಮತ್ತೊಂದು ಮಗ್ಗುಲಿಗೆ ಹೊರಳಿದೆ. ಇತ್ತೀಚೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಸ್ಥಳೀಯವಾಗಿ ಸೃಷ್ಟಿಯಾಗಿರುವ ಸಮಸ್ಯೆಯನ್ನು ಅಲ್ಲಿನವರೇ ಬಗೆಹರಿಸಿಕೊಳ್ಳಬೇಕು’ ಎಂದು ಹೇಳಿರುವುದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಇಬ್ಬರೂ ಕೂತು ಸಮಸ್ಯೆ ಬಗೆಹರಿಸಿಕೊಳ್ಳಬೇಕೆಂಬ ಸಂದೇಶವಾಗಿಯೇ ವ್ಯಾಖ್ಯಾನಿಸಲಾಗುತ್ತಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವಿಚಾರವನ್ನು ರಾಹುಲ್ ಗಾಂಧಿಯವರೇ ಬಗೆಹರಿಸಬೇಕೆಂದು ಹೇಳಿರುವುದು, ಹೈಕಮಾಂಡ್ ಮೇಲೆಯೇ ನಿರ್ಧಾರದ ಹೊಣೆ ಹಾಕುವ ಪ್ರಯತ್ನವೆಂದು ಹೇಳಲಾಗುತ್ತಿದೆ. ಈ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿ ರಾಹುಲ್ ಗಾಂಧಿ ಭೇಟಿ ಮಾಡಲು ಯತ್ನಿಸಿದ್ದರೂ, ಭೇಟಿ ಸಾಧ್ಯವಾಗದೆ ವಾಪಸ್ ಬಂದಿದ್ದಾರೆ.
ಈ ಬೆಳವಣಿಗೆಯ ಬೆನ್ನಲ್ಲೇ ಡಿಕೆ ಶಿವಕುಮಾರ್ ತಮ್ಮ ಪಕ್ಷ ನಿಷ್ಠೆ ವಿಚಾರವನ್ನು ಮುಂಚೂಣಿಗೆ ತರುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ನಿವಾಸದ ಮುಂದೆಯೇ ಮಾತನಾಡಿದ ಡಿಕೆ ಶಿವಕುಮಾರ್, ‘ನಾನು ಈ ಪಕ್ಷವನ್ನು ಕಟ್ಟಿದ್ದೇನೆ, ಬಾವುಟ ಕಟ್ಟಿದ್ದೇನೆ, ಕಸವೂ ಗುಡಿಸಿದ್ದೇನೆ. ಕೇವಲ ಬಂದು ಭಾಷಣ ಮಾಡಿ ಹೋಗಿಲ್ಲ’ ಎಂದು ಹೇಳುವ ಮೂಲಕ ತಮ್ಮ ಹೋರಾಟದ ಹಿನ್ನೆಲೆಯನ್ನು ನೆನಪಿಸಿದ್ದಾರೆ. ಒಂದು ದಿನ ಹಿಂದಷ್ಟೇ, ತಾನು ಪಕ್ಷದ ಸಾಮಾನ್ಯ ಕಾರ್ಯಕರ್ತ ಎಂದಿದ್ದ ಡಿಕೆ, ಮರುದಿನವೇ ಪಕ್ಷ ಕಟ್ಟಿದ ಮಾತುಗಳನ್ನಾಡಿದ್ದಾರೆ.
‘ನನ್ನಿಂದ ಪಕ್ಷ ಅಧಿಕಾರಕ್ಕೆ ಬಂತು, ನಾನೇ ಪಕ್ಷ ಕಟ್ಟಿದ್ದು’ ಎಂದು ಯಾರೂ ಹೇಳಬಾರದು ಎಂದು ಖರ್ಗೆ ಎರಡು ದಿನಗಳ ಹಿಂದಷ್ಟೇ ಹೇಳಿದ್ದರು. ಆದರೆ, ಇದೀಗ ಡಿಕೆಶಿ ಮತ್ತದೇ ಮಾತುಗಳನ್ನಾಡಿದ್ದಾರೆ. ಹೀಗಾಗಿ, ‘ಪಕ್ಷಕ್ಕೆ ನಾನು ಎಲ್ಲವನ್ನೂ ಕೊಟ್ಟಿದ್ದೇನೆ’ ಎಂಬ ಡಿಕೆ ಮಾತುಗಳು ಕಾಂಗ್ರೆಸ್ ಒಳಗಿನ ಅಸಮಾಧಾನವನ್ನು ಬಹಿರಂಗಪಡಿಸಿದಂತಿವೆ.
ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಇಬ್ಬರೂ 2 ಬಾರಿ ಒಟ್ಟಾಗಿ ‘ಬ್ರೇಕ್‌ಫಾಸ್ಟ್ ಮೀಟಿಂಗ್’ ನಡೆಸಿ ‘ನಾವು ಒಟ್ಟಿಗೆ’ ಎಂಬ ಸಂದೇಶ ನೀಡಲು ಪ್ರಯತ್ನಿಸಿದ್ದರೂ, ಇಬ್ಬರ ನಡೆ ಮತ್ತು ನುಡಿ ಒಂದೇ ದಿಕ್ಕಿನಲ್ಲಿ ಸಾಗುತ್ತಿಲ್ಲ ಎಂಬ ಚರ್ಚೆ ಗಟ್ಟಿಯಾಗುತ್ತಿದೆ. ಅಧಿಕಾರ ಹಂಚಿಕೆ ವಿಚಾರದಲ್ಲಿ ಸಿದ್ದರಾಮಯ್ಯ ಅವರು ಹೈಕಮಾಂಡ್ ಮೇಲೆಯೇ ಭಾರ ಹಾಕಿದ್ದು, ತಮ್ಮ ಸ್ಥಾನಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ ಎಂಬ ವಿಶ್ವಾಸದಲ್ಲಿದ್ದಾರೆ ಎನ್ನಲಾಗುತ್ತಿದೆ.
ಈ ನಡುವೆ ಡಿಕೆ ಶಿವಕುಮಾರ್ ಅವರ ಸಹೋದರ ಡಿಕೆ ಸುರೇಶ್ ಸಾಮಾಜಿಕ ಜಾಲತಾಣದಲ್ಲಿ ಮಾರ್ಮಿಕವಾಗಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ‘ಗುರಿಯನ್ನು ಬೇಗ ತಲುಪಬೇಕೆಂದವರು ದಾರಿಯಲ್ಲಿ ವಿಶ್ರಾಂತಿ ಪಡೆಯುತ್ತಾ ಕುಳಿತುಕೊಳ್ಳಬಾರದು’ ಎಂಬ ಪಾಟೀಲ್ ಪುಟ್ಟಪ್ಪನವರ ಉಕ್ತಿಯನ್ನು ಅವರು ಉಲ್ಲೇಖಿಸಿದ್ದು, ರಾಜಕೀಯದಲ್ಲಿ ಹಲವು ಅರ್ಥಗಳಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.
ಡಿಸೆಂಬರ್ 27ರಂದು ದೆಹಲಿಯಲ್ಲಿ ನಡೆಯಲಿರುವ ಕಾರ್ಯಕಾರಣಿ (CWC) ಸಭೆ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಈ ಹಿಂದೆ ಈ ಸಭೆಗೆ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಆಹ್ವಾನ ನೀಡಲಾಗುತ್ತಿತ್ತು. ಆದರೆ ಈ ಬಾರಿ ಡಿಕೆಗೆ ಆಹ್ವಾನ ನೀಡಲಾಗಿಲ್ಲ ಎನ್ನಲಾಗಿದೆ. ಅದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಹ್ವಾನ ಬಂದಿದ್ದು, ಅವರು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ಇದನ್ನೂ ಓದಿ: ಮಾರ್ಮಿಕವಾಗಿ ಮಾಜಿ ಸಂಸದ ಡಿ.ಕೆ. ಸುರೇಶ್ ಪೋಸ್ಟ್: ಟಾರ್ಗೆಟ್ ಯಾರು?
ಒಟ್ಟಿನಲ್ಲಿ, ಕಾಂಗ್ರೆಸ್ ಒಳಗಿನ ಪಟ್ಟದಾಟದಲ್ಲಿ ಅಡೆತಡೆಗಳಿದ್ದರೂ, ಡಿಕೆ ಶಿವಕುಮಾರ್ ಅವರ ಪ್ರಯತ್ನ ಮಾತ್ರ ನಿಲ್ಲುತ್ತಿಲ್ಲ. ‘ನಾನು ಪಕ್ಷಕ್ಕಾಗಿ ಬಾವುಟ ಕಟ್ಟಿದ್ದೇನೆ’ ಎಂಬ ಮಾತಿನ ಮೂಲಕ, ಅವರು ತಮ್ಮ ಎದುರಾಳಿಗಳಿಗೆ ಪರೋಕ್ಷವಾಗಿ ಖಡಕ್ ಸಂದೇಶ ರವಾನಿಸಿದ್ದಾರೆ.