
ಬೆಂಗಳೂರು, (ಫೆಬ್ರವರಿ 09): ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರಿಂದ ಪೊಲೀಸರ (Police) ಮೇಲೆ ಸಾಕಷ್ಟು ಆರೋಪಗಳು ಕೇಳಿಬರುತ್ತಿರುವುದು ವರದಿಯಾಗಿವೆ. ಹೀಗಾಗಿ ರಾಜ್ಯದ ಪೊಲೀಸರಿಗೆ ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ, ಐಜಿಪಿ) ಎಂಎ ಸಲೀಂ (DG IGP dr Saleem) ಮಹತ್ವದ ಸೂಚನೆ ನೀಡಿದ್ದರು. ಪೊಲೀಸರು ಜನರ ಜೊತೆ ಹೇಗೆ ನಡೆದುಕೊಳ್ಳಬೇಕೆಂದು ಮಾರ್ಗಸೂಚಿಯನ್ನು ಹೊರಡಿಸಿದ್ದರು. ಇದರ ಬೆನ್ನಲ್ಲೇ ಇದೀಗ ಸಾಮಾಜಿಕ ಜಾಲತಾಣಗಳಲ್ಲಿನ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ ಪೊಲೀಸರು ಎಫ್‌ಐಆರ್ ದಾಖಲಿಸುವುದು ಮತ್ತು ಆರೋಪಿಗಳನ್ನು ಬಂಧಿಸುವ ಕುರಿತು ಡಿಜಿ, ಐಜಿಪಿ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ. ಎರಡು ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ ನೀಡಿದ
ತೀರ್ಪಿನ ಮೇಲೆ ಮಾರ್ಗಸೂಚಿ ಪ್ರಕಟಿಸಿದ್ದಾರೆ.
ಇತ್ತೀಚಿನ ಪ್ರಕರಣವೊಂದರಲ್ಲಿ ನೀಡಿದ ನಿರ್ದೇಶನಗಳನ್ನು ಪಾಲಿಸುವಂತೆ ರಾಜ್ಯದ ಎಲ್ಲ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ನಿಯಮಗಳನ್ನು ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳು ಮತ್ತು ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ತಿಳಿಸಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿನ ಪೋಸ್ಟ್‌ಗಳ ಬಗ್ಗೆ ಪ್ರಾಥಮಿಕ ವಿಚಾರಣೆ ನಡೆಸದೆಯೇ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿರುವುದು ಕಂಡುಬಂದಿದ್ದು, ಇದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.
ದೂರುದಾರರ ಅರ್ಹತೆ ಪರಿಶೀಲನೆ: ಮಾನಹಾನಿ ಅಥವಾ ಅಂತಹುದೇ ಪ್ರಕರಣಗಳಲ್ಲಿ ದೂರು ನೀಡುವವರು ಕಾನೂನಿನ ಪ್ರಕಾರ ‘ನೊಂದ ವ್ಯಕ್ತಿ’ ಆಗಿರಬೇಕು. ಸಂಬಂಧವಿಲ್ಲದ ಮೂರನೇ ವ್ಯಕ್ತಿ ನೀಡುವ ದೂರುಗಳನ್ನು (ಗಂಭೀರ ಅಪರಾಧಗಳನ್ನು ಹೊರತುಪಡಿಸಿ) ಸ್ವೀಕರಿಸಬಾರದು.
ಪ್ರಾಥಮಿಕ ವಿಚಾರಣೆ ಕಡ್ಡಾಯ:ದೂರಿನಲ್ಲಿ ಉಲ್ಲೇಖಿಸಲಾದ ವಿಷಯವು ಮೇಲ್ನೋಟಕ್ಕೆ ಅಪರಾಧವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಎಫ್‌ಐಆರ್ ದಾಖಲಿಸುವ ಮುನ್ನ ಕಡ್ಡಾಯವಾಗಿ ಪ್ರಾಥಮಿಕ ವಿಚಾರಣೆ ನಡೆಸಬೇಕು.
ಹಿಂಸಾಚಾರಕ್ಕೆ ಪ್ರಚೋದನೆ ಇದ್ದರೆ ಮಾತ್ರ ಕೇಸ್: ದ್ವೇಷ ಬಿತ್ತುವುದು, ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವುದು ಅಥವಾ ದೇಶದ್ರೋಹದಂತಹ ಆರೋಪಗಳಿದ್ದಾಗ, ಹಿಂಸಾಚಾರಕ್ಕೆ ಪ್ರಚೋದನೆ ನೀಡುವಂತಹ ಸ್ಪಷ್ಟ ಸಾಕ್ಷ್ಯಗಳಿದ್ದರೆ ಮಾತ್ರ ಪ್ರಕರಣ ದಾಖಲಿಸಬೇಕು. ಕೇದಾರನಾಥ್ ಸಿಂಗ್ ಮತ್ತು ಶ್ರೇಯಾ ಸಿಂಘಾಲ್ ಪ್ರಕರಣದ ತೀರ್ಪುಗಳನ್ನು ಇಲ್ಲಿ ಪರಿಗಣಿಸಬೇಕು.
ರಾಜಕೀಯ ಟೀಕೆಗಳಿಗೆ ರಕ್ಷಣೆ:ಕಟುವಾದ ಅಥವಾ ಆಕ್ಷೇಪಾರ್ಹ ರಾಜಕೀಯ ಭಾಷಣ/ಪೋಸ್ಟ್‌ಗಳಿಗೆ ಯಾಂತ್ರಿಕವಾಗಿ ಕೇಸ್ ದಾಖಲಿಸಬಾರದು. ಸಂವಿಧಾನದ 19(1)(ಎ) ಅಡಿಯಲ್ಲಿರುವ ವಾಕ್ ಸ್ವಾತಂತ್ರ್ಯವನ್ನು ಗೌರವಿಸಬೇಕು. ಪೋಸ್ಟ್‌ನಿಂದ ಸಾರ್ವಜನಿಕ ಶಾಂತಿಗೆ ತಕ್ಷಣದ ಅಪಾಯವಿದ್ದರೆ ಮಾತ್ರ ಕಾನೂನು ಕ್ರಮ ಕೈಗೊಳ್ಳಬೇಕು.
ಮಾನಹಾನಿ ಅಸಂಜ್ಞೇಯ ಅಪರಾಧ:ಮಾನಹಾನಿಯು ‘ಅಸಂಜ್ಞೇಯ ಅಪರಾಧ’ ಆಗಿರುವುದರಿಂದ ಪೊಲೀಸರು ನೇರವಾಗಿ ಎಫ್‌ಐಆರ್ ದಾಖಲಿಸುವಂತಿಲ್ಲ. ದೂರುದಾರರಿಗೆ ನ್ಯಾಯಾಲಯದ (ಮ್ಯಾಜಿಸ್ಟ್ರೇಟ್) ಮೊರೆ ಹೋಗಲು ಸೂಚಿಸಬೇಕು.
ಬಂಧನದ ನಿಯಮಗಳು:ಸುಪ್ರೀಂ ಕೋರ್ಟ್‌ನ ಅರ್ನೇಶ್ ಕುಮಾರ್ ಪ್ರಕರಣದ ಮಾರ್ಗಸೂಚಿಯಂತೆ, ಅನಗತ್ಯವಾಗಿ ಅಥವಾ ಯಾಂತ್ರಿಕವಾಗಿ ಯಾರನ್ನೂ ಬಂಧಿಸಬಾರದು.
ಕಾನೂನು ಸಲಹೆ ಪಡೆಯಬೇಕು :ರಾಜಕೀಯ ಪೋಸ್ಟ್‌ಗಳು ಅಥವಾ ಸೂಕ್ಷ್ಮ ವಿಚಾರಗಳಿಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸುವ ಮುನ್ನ ಸರ್ಕಾರಿ ಅಭಿಯೋಜಕರಿಂದ ಕಾನೂನು ಸಲಹೆ ಪಡೆಯುವುದು ಕಡ್ಡಾಯ.
ಒಂದು ವೇಳೆ ದೂರುಗಳು ಸುಳ್ಳು, ದ್ವೇಷಪೂರಿತ ಅಥವಾ ರಾಜಕೀಯ ಪ್ರೇರಿತ ಎಂದು ಕಂಡುಬಂದರೆ, ಅಂತಹ ಪ್ರಕರಣಗಳನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) ಸೆಕ್ಷನ್ 176(1) ಅಡಿಯಲ್ಲಿ ಮುಕ್ತಾಯಗೊಳಿಸಬೇಕು ಎಂದು ಮಾರ್ಗಸೂಚಿಯಲ್ಲಿ ಖಡಕ್ ಆಗಿ ಸೂಚನೆ ನೀಡಲಾಗಿದೆ. ಈ ಮೂಲಕ ಪ್ರತಿಯೊಂದಕ್ಕೂ ಎಫ್‌ಐಆರ್ ದಾಖಲಿಸುವದಕ್ಕೆ ಕಡಿವಾಣ ಹಾಕಿದಂತಾಗಿದೆ.
Published On - 4:11 pm, Mon, 9 February 26