ಬರ ಪರಿಹಾರ ಬಿಡುಗಡೆ ಮಾಡದ ಕೇಂದ್ರ ಸರ್ಕಾರ ವಿರುದ್ಧ ಸುಪ್ರೀಂ ಕೋರ್ಟ್​​ನಲ್ಲಿ ರಿಟ್​ ಅರ್ಜಿ: ಸಿದ್ದರಾಮಯ್ಯ

| Updated By: ವಿವೇಕ ಬಿರಾದಾರ

Updated on: Mar 23, 2024 | 4:38 PM

ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿದ್ದರೂ ಕೂಡ ಕೇಂದ್ರ ಸರ್ಕಾರ ಇನ್ನೂ ಬರ ಪರಿಹಾರ ಘೋಷಣೆ ಮಾಡಿಲ್ಲ. ಹೀಗಾಗಿ ಬರ ಪರಿಹಾರ ಕೊಡಿಸುವಂತೆ ಸುಪ್ರೀಂ ಕೋರ್ಟ್​ನಲ್ಲಿ ಆರ್ಟಿಕಲ್ 32ರ ಅಡಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ರಿಟ್ ಅರ್ಜಿ ಸಲ್ಲಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬರ ಪರಿಹಾರ ಬಿಡುಗಡೆ ಮಾಡದ ಕೇಂದ್ರ ಸರ್ಕಾರ ವಿರುದ್ಧ ಸುಪ್ರೀಂ ಕೋರ್ಟ್​​ನಲ್ಲಿ ರಿಟ್​ ಅರ್ಜಿ: ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ
Follow us on

ಬೆಂಗಳೂರು, ಮಾರ್ಚ್​ 23: ರಾಜ್ಯದಲ್ಲಿ ತೀವ್ರ ಬರಗಾಲ (Karnataka Drought) ಆವರಿಸಿದ್ದರೂ ಕೂಡ ಕೇಂದ್ರ ಸರ್ಕಾರ ಇನ್ನೂ ಬರ ಪರಿಹಾರ ಘೋಷಣೆ ಮಾಡಿಲ್ಲ. ಐದು ತಿಂಗಳ ಕಾಲ ಕಾದರೂ ಇನ್ನೂ ಬಿಡುಗಡೆ ಮಾಡಿಲ್ಲ. ಹೀಗಾಗಿ ಬರ ಪರಿಹಾರ ಕೊಡಿಸುವಂತೆ ಸುಪ್ರೀಂ ಕೋರ್ಟ್​ನಲ್ಲಿ ಆರ್ಟಿಕಲ್ 32ರ ಅಡಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ರಿಟ್ ಅರ್ಜಿ ಸಲ್ಲಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದರು. ಬೆಂಗಳೂರಿನಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸುಪ್ರೀಂಕೋರ್ಟ್​ನ ವಾರದ ರಜೆ  ಮುಗಿದ ಬಳಿಕ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳುತ್ತಾರೆ. ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.

ರಾಜ್ಯದ ಬರಗಾಲದ ಕುರಿತು ಕಳೆದ ವರ್ಷ ಸೆಪ್ಟೆಂಬರ್ ಮತ್ತು ಅಕ್ಟೋಬರ್​ ಅವಧಿಯಲ್ಲಿ ರಾಜ್ಯ ಸರ್ಕಾರ ಅಧ್ಯಯನ ನಡೆಸಿತು. ಅಧ್ಯಯನ ಬಳಿಕ ರಾಜ್ಯದಲ್ಲಿ 223 ತಾಲೂಕುಗಳು ಬರಪೀಡಿತ ಎಂದು ಘೋಷಿಸಿದ್ದೇವೆ. ಇದರಲ್ಲಿ 196 ತಾಲೂಕುಗಳು ತೀವ್ರ ಬರಗಾಲದಿಂದ ಕೂಡಿವೆ. ಬರಗಾಲದಿಂದ 48 ಲಕ್ಷ ಹೆಕ್ಟೇರ್ ಪ್ರದೇಶ ಕೃಷಿ, ತೋಟಗಾರಿಕೆ ಬೆಳೆ ನಷ್ಟ ಆಗಿದೆ. ಅಧ್ಯಯನ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಕೇಂದ್ರ ಸರ್ಕಾರಕ್ಕೆ 2023ರ ಸೆಪ್ಟೆಂಬರ್​ 23, ನವೆಂಬರ್​ 15 ಮತ್ತು ಅಕ್ಟೋಬರ್​​ 20 ಎಂದು ಮೂರು ಬಾರಿ ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.

ಮೊದಲ ಮನವಿ ಕೊಟ್ಟ ಬಳಿಕ, ಒಂದು ವಾರದೊಳಗೆ ಕೇಂದ್ರ ಅಧ್ಯಯನ ತಂಡ ರಾಜ್ಯಕ್ಕೆ ಆಗಮಿಸಿ ಅಧ್ಯಯನ ನಡೆಸಬೇಕು. ಆದರೆ ಕೇಂದ್ರದ ತಂಡ ಅಕ್ಟೋಬರ್ ತಿಂಗಳಲ್ಲಿ‌ ಬಂದಿದ್ದತ್ತು. ಅ.9 ರಿಂದ 14ರ ವರೆಗೆ 10 ಅಧಿಕಾರಿಗಳು ಮೂರು ತಂಡ ಮಾಡಿಕೊಂಡು ಪರಿಶೀಲನೆ ನಡೆಸಿದರು. ಪರಿಶೀಲನೆ ಬಳಿಕ‌ ತಂಡ ಕೇಂದ್ರ ಸರ್ಕಾರಕ್ಕೆ ವರದಿ‌ ನೀಡಿದೆ. ವರದಿ ನೀಡಿ ಒಂದು ತಿಂಗಳಲ್ಲಿ ಆಯಾ ರಾಜ್ಯಗಳಿಗೆ ಪರಿಹಾರ ಕೊಡಬೇಕು. ಬರ ಪರಿಹಾರವನ್ನು ಕೇಂದ್ರ ಸರ್ಕಾರ ಶೇ.75ರಷ್ಟು ಮತ್ತು ರಾಜ್ಯ ಸರ್ಕಾರ ಶೇ.25ರಷ್ಟು  ನೀಡುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ದಾವಣಗೆರೆ: ಬರಗಾಲದಿಂದ 1.50 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ನಾಶ, 119 ಕೋಟಿ ರೂ. ನಷ್ಟ

ಇದರ ನಂತರವೂ ಡಿಸೆಂಬರ್​ 20ರಂದು ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ರಾಜ್ಯದಲ್ಲಿನ ಬರದ ಕುರಿತಾಗಿ ವಿವರಿಸಿ, ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದೇವು. ಅಲ್ಲದೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರಿಗೂ ಭೇಟಿಯಾಗಿ, ರಾಜ್ಯದ ಪರಿಸ್ಥಿತಿಯನ್ನು ವಿವರಿಸಿದ್ದೇವು. ಆಗ ಅಮಿತ್​ ಶಾ ಅವರು ಡಿಸೆಂಬರ್​ 23ರಂದು ಸಭೆ ಕರೆದಿದ್ದೇವೆ, ಬಳಿಕ ನಿರ್ಧರಿಸುವುದಾಗಿ ಹೇಳಿದರು. ಅಲ್ಲದೆ ಪ್ರಧಾನಿ ಮೋದಿ‌ ಬೆಂಗಳೂರಿಗೆ ಬಂದಾಗಲೂ ಮನವಿ ಮಾಡಿದ್ದೇವು. ಆಗ ಹಣ ಬಿಡುಗಡೆ ಮಾಡುವುದಾಗಿ ಹೇಳಿದರು. ಆದರೆ ಈವರೆಗೂ ಹಣ ಬಿಡುಗಡೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬರ ಪರಿಹಾರ ವಿಚಾರದಲ್ಲಿ ಕೇಂದ್ರ ಸರ್ಕಾರ ಕಾಯ್ದೆ ಉಲ್ಲಂಘಿಸಿದೆ. ಕಾನೂನು ಮಾಡೋದು ಸಂವಿಧಾನದ ಅಡಿಯಲ್ಲಿ ಅಲ್ವಾ? ನಿಯಮ ಮೀರಿದರೇ ಕೋರ್ಟ್​ನಲ್ಲಿ‌ ನ್ಯಾಯ ಕೇಳಬೇಕು ಅಲ್ವಾ? ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯ ಆಗಿದೆ. ಕೇಂದ್ರ ಸರ್ಕಾರದಿಂದ ಎಲ್ಲವೂ ನಿಯಮ ಬಾಹಿರ ಆಗಿದೆ. ರೈತರಿಗೆ ಕಷ್ಟ ಇದೆ ಅಂತೇಳಿ‌ ನಾವು ತಾತ್ಕಾಲಿಕವಾಗಿ 2,000 ಹಣ ಕೊಟ್ಟಿದ್ದೇವೆ. 33 ಲಕ್ಷದ 44 ಸಾವಿರ ರೈತರಿಗೆ 650 ಕೋಟಿ‌ ಬಿಡುಗಡೆ ಮಾಡಿದ್ದೇವೆ. ಬರಗಾಲ ನಿಭಾಯಿಸುವ ಕೆಲಸವನ್ನ ನಾವು ಯಶಸ್ವಿಯಾಗಿ ಮಾಡಿದ್ದೇವೆ ಎಂದು ತಿಳಿಸಿದರು.

48 ಲಕ್ಷ ಹೆಕ್ಟೇರ್ ಬೆಳೆ ನಷ್ಟ ಆಗಿದೆ, ರೈತರಿಗೆ ಅನ್ಯಾಯ ಆಗಿದೆ. ಇದು ಚುನಾವಣಾ ಸಮಸ್ಯೆ ಆಗಲ್ಲ, ಕಾನೂನು ರೀತಿಯ ವಿಚಾರ. ಮುಂಗಾರು‌ ಶುರುವಾಗುತ್ತೆ, ರೈತರಿಗೆ ಕಾಯುವುದಕ್ಕೆ ಆಗುವುದಿಲ್ಲ. ನಾವು ತಾತ್ಕಾಲಿಕವಾಗಿ ಪರಿಹಾರ ಕೊಟ್ಟಿದ್ದೇವೆ. ಇನ್ಪುಟ್​ ಸಬ್ಸಿಡಿ 18,171 ಕೋಟಿ‌ ರೂ. ಪರಿಹಾರ ಕೇಳಿದ್ದೇವೆ ಎಂದರು.

ಇನ್ನು ಲೋಕಸಭೆ ಚುನಾವಣೆ ಸಂಬಂಧ ಅಭ್ಯರ್ಥಿಗಳ ಪರವಾಗಿ ಏಪ್ರಿಲ್​ 1ರಿಂದ ಪ್ರಚಾರಕ್ಕೆ ಹೋಗುತ್ತೇನೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 3:52 pm, Sat, 23 March 24