ಆರ್​ಬಿ ತಿಮ್ಮಾಪುರ ಆಪ್ತನಿಂದ ವಂಚನೆ ಆರೋಪ: ರಾಜ್ಯಪಾಲರಿಗೆ ದೂರು ನೀಡಿದ್ದೇ ಅಬಕಾರಿ ಇಲಾಖೆಯ ಅಧಿಕಾರಿ!

| Updated By: Ganapathi Sharma

Updated on: Nov 07, 2024 | 7:52 AM

Karnataka Excise Scam: ಅಬಕಾರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿ ರಾಜ್ಯಪಾಲರಿಗೆ ದೂರು ಸಲ್ಲಿಸಲಾಗಿತ್ತು, ಆದರೆ ಈ ದೂರನ್ನು ಸಲ್ಲಿಸಿದ್ದು ಯಾರೋ ಸಾಮಾಜಿಕ ಹೋರಾಟಗಾರನಲ್ಲ, ಅಸಲಿಗೆ ಆತ ಅಬಕಾರಿ ಇಲಾಖೆಯ ಅಧಿಕಾರಿಯೇ ಎಂಬುದು ಈಗ ತಿಳಿದುಬಂದಿದೆ. ಹಾಗಾದರೆ, ಇಲಾಖೆಯ ಅಧಿಕಾರಿಯೇ ರಾಜ್ಯಪಾಲರಿಗೆ ದೂರು ನೀಡಿದ್ದೇಕೆ? ದೂರಿನಲ್ಲೇನಿದೆ? ಮದ್ಯ ಮಾರಾಟಗಾರರು ಹೇಳುವುದೇನು? ಸಮಗ್ರ ಮಾಹಿತಿ ಇಲ್ಲಿದೆ.

ಆರ್​ಬಿ ತಿಮ್ಮಾಪುರ ಆಪ್ತನಿಂದ ವಂಚನೆ ಆರೋಪ: ರಾಜ್ಯಪಾಲರಿಗೆ ದೂರು ನೀಡಿದ್ದೇ ಅಬಕಾರಿ ಇಲಾಖೆಯ ಅಧಿಕಾರಿ!
ಆರ್​ಬಿ ತಿಮ್ಮಾಪುರ ಆಪ್ತನಿಂದ ವಂಚನೆ ಆರೋಪ: ರಾಜ್ಯಪಾಲರಿಗೆ ದೂರು ನೀಡಿದ್ದೇ ಅಬಕಾರಿ ಇಲಾಖೆಯ ಅಧಿಕಾರಿ!
Follow us on

ಬೆಂಗಳೂರು, ನವೆಂಬರ್ 7: ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿ ರಾಜ್ಯಪಾಲರಿಗೆ ದೂರು ಸಲ್ಲಿಕೆಯಾಗಿದ್ದು, ಇಲಾಖೆಯ ಅಧಿಕಾರಿಯೇ ದೂರು ನೀಡಿದ್ದರು ಎಂಬುದು ಈಗ ಬೆಳಕಿಗೆ ಬಂದಿದೆ. ಅಧಿಕಾರಿಯು ಅಬಕಾರಿ ಸಚಿವರ ಆಪ್ತನಿಗೆ ಹಣ ಕೊಟ್ಟು ಮೋಸ ಹೋಗಿದ್ದರಂತೆ. ಹಾಗಾಗಿ ವಿವರವಾದ ಮಾಹಿತಿಯನ್ನು ರಾಜ್ಯಪಾಲರಿಗೆ ಮೇಲ್ ಮಾಡುವ ಮೂಲಕ ದೂರು ಸಲ್ಲಿಸಿದರೆ, ಇತ್ತ ಅಬಕಾರಿ ಸಚಿವರ ಆಪ್ತ ಅಂತ ಹೇಳಿಕೊಂಡು ವ್ಯಕ್ತಿಯೊಬ್ಬ ಮದ್ಯ ಮಾರಾಟಗಾರರ ಬಳಿ ಕೋಟ್ಯಂತರ ರೂಪಾಯಿ ತೆಗೆದುಕೊಂಡು ವಂಚಿಸಿರುವ ಆರೋಪ ಕೂಡ ಕೇಳಿ ಬಂದಿದೆ.

ಜೀವನ್ ಶೆಟ್ಟಿ ವಿರುದ್ಧ ಮತ್ತೊಂದು ಆರೋಪ

ಅಬಕಾರಿ ಸಚಿವ ಆರ್​​ಬಿ ತಿಮ್ಮಾಪುರ ಆಪ್ತ ಜೀವನ್ ಶೆಟ್ಟಿ ವಿರುದ್ಧ ಬಾರ್ ಮಾಲೀಕರು ಹೊಸ ಆರೋಪ ಮಾಡಿದ್ದಾರೆ. ಅಬಕಾರಿ ಇಲಾಖೆಯಲ್ಲಿ ಇಷ್ಟೊಂದು ಅಕ್ರಮ ನಡೆಯಲು ಜೀವನ್ ಶೆಟ್ಟಿಯೇ ಕಾರಣ ಎಂದು ಆರೋಪಿಸಲಾಗಿದೆ. ಈತ ಸಿಎಲ್- 2 ಲೈಸೆನ್ಸ್ ಕೊಡಿಸುತ್ತೇನೆ ಎಂದು ಬಾರ್ ಮಾಲೀಕರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದಾನಂತೆ. ಆರ್​ಬಿ ತಿಮ್ಮಾಪುರ ಹಿಂದೆ ಅಬಕಾರಿ ಸಚಿವರಾಗಿದ್ದನಿಂದಲೂ ಅವರ ಆಪ್ತನಾಗಿ ಜೀವನ್ ಶೆಟ್ಟಿ ಗುರುತಿಸಿಕೊಂಡಿದ್ದ ಎನ್ನಲಾಗಿದೆ. ಅಂದಿನಿಂದಲೂ ಬಾರ್ ಮಾಲೀಕರಿಗೆ ಸಿಎಲ್- 2 ಲೈಸೆನ್ಸ್ ಕೊಡಿಸುತ್ತೇನೆ ಎಂದು ನೂರಾರು ‌ಮದ್ಯ ಮಾರಾಟಗಾರರ ಬಳಿ ಕೋಟ್ಯಂತರ ರೂಪಾಯಿ ವಸೂಲಿ ಮಾಡಿದ್ದಾನೆ ಎನ್ನಲಾಗಿದೆ. ಆದರೆ ಇಲ್ಲಿಯವರೆಗೆ ಒಬ್ಬನೇ ಒಬ್ಬ ಮದ್ಯ ಮಾರಾಟಗಾರನಿಗೂ ಒಂದೂ ಲೈಸೆನ್ಸ್ ಕೂಡ ಕೊಡಿಸಿಲ್ಲ. ಹಣ ಕೊಟ್ಟವರು ಹಣವನ್ನು ವಾಪಸ್ ಕೇಳಿದರೆ, ನಿಮ್ಮ ಹಣವನ್ನು ತಿಮ್ಮಾಪುರ ಅವರಿಗೆ ನೀಡಿದ್ದೇನೆ ಎಂದಿದ್ದ.

ಅಬಕಾರಿ ಇಲಾಖೆ ಅಧಿಕಾರಿಗಳಿಗೂ ವಂಚನೆ

ಜೀವನ್ ಶೆಟ್ಟಿ ಮದ್ಯ ಮಾರಾಟಗಾರರಿಗೆ ಮಾತ್ರವಲ್ಲ, ಅಬಕಾರಿ ಇಲಾಖೆಯ ಅನೇಕ ಅಧಿಕಾರಿಗಳಿಗೇ ವರ್ಗಾವಣೆ, ಬಡ್ತಿ ಕೊಡಿಸುತ್ತೇನೆ ಎಂದು ಒಂದೇ ಪೋಸ್ಟ್​​​ಗೆ ನಾಲ್ಕೈದು ಅಧಿಕಾರಿಗಳಿಂದ ಹಣ ಪಡೆದು ಮೋಸ ಮಾಡಿದ್ದಾನೆ ಎಂಬ ಆರೋಪವಿದೆ.

ತಿಮ್ಮಾಪುರ ಜತೆ ಜೀವನ್ ಶೆಟ್ಟಿಯನ್ನು ಹಲವು ಬಾರಿ ನೋಡಿದ್ದೆ: ಬಾರ್ ಮಾಲೀಕ

ಜೀವನ್ ಶೆಟ್ಟಿಗೆ 25 ಲಕ್ಷ ರೂ. ಕೊಟ್ಟು ವಂಚನೆಗೆ ಒಳಗಾದ ಬಾರ್ ಮಾಲೀಕ ರಾಮಕೃಷ್ಣ ಮಾತನಾಡಿ, ಪರವಾನಗಿ ಕೊಡಿಸುತ್ತೇನೆ ಎಂದು ಮೊದಲಿಗೆ 15 ಲಕ್ಷ, ಮತ್ತೊಂದು ಬಾರಿ 10 ಲಕ್ಷ ಒಟ್ಟು 25 ಲಕ್ಷ ರೂಪಾಯಿ ನಗದು ರೂಪದಲ್ಲಿ ಹಣವನ್ನು ತೆಗೆದುಕೊಂಡಿದ್ದಾರೆ. ನಾನು ಸಾಕಷ್ಟು ಬಾರಿ ಆರ್​​​ಬಿ ತಿಮ್ಮಾಪುರ ಜೊತೆಯಲ್ಲಿ ಜೀವನ್ ಶೆಟ್ಟಿಯನ್ನು ನೋಡಿದ್ದೇನೆ ಎಂದಿದ್ದಾರೆ.

ತಿಮ್ಮಾಪುರಗೆ ಹೇಳಿಯೇ ಹಣ ಪಡೆದಿದ್ದೆ ಎಂದಿದ್ದ ಶೆಟ್ಟಿ

ಇಷ್ಟು ಜನರ ಬಳಿ ಹಣ ತೆಗೆದುಕೊಂಡು ಮೋಸ ಮಾಡಿದ್ದೀಯಲ್ಲ, ನಾವು ಪೋಲಿಸರಿಗೆ ದೂರು ನೀಡಿದರೆ ಏನು ಮಾಡುತ್ತೀಯ ಎಂದು ಶೆಟ್ಟಿಯನ್ನು ಪ್ರಶ್ನಿಸಿದ್ದೆ. ಅದಕ್ಕೆ, ಆತ, ‘ನಾನು ಈಗಾಗಲೇ ಸಾಕಷ್ಟು ಬಾರಿ ಜೈಲಿಗೆ ಹೋಗಿ ಬಂದಿದ್ದೀನಿ’ ಎಂದಿದ್ದಾನೆ. ಅಲ್ಲದೆ, ನಾನು ಈ ಎಲ್ಲವನ್ನೂ ಆರ್​​​ಬಿ ತಿಮ್ಮಾಪುರ ಅವರಿಗೆ ಹೇಳಿಯೇ ಮಾಡಿದ್ದೇನೆ ಎಂದಿರುವುದಾಗಿ ರಾಮಕೃಷ್ಣ ತಿಳಿಸಿದ್ದಾರೆ.

ಜೀವನ್ ಶೆಟ್ಟಿ ಫೋನ್​ನಿಂದಲೇ ಅಧಿಕಾರಿಗಳ ಫೋನ್ ಕರೆ

ಜೀವನ್ ಶೆಟ್ಟಿ ಫೋನ್​​ನಿಂದಲೇ ಅಬಕಾರಿ ಇಲಾಖೆಯ ಅಧಿಕಾರಿಗಳು ಕಾಲ್ ಮಾಡುತ್ತಾರೆ. ಸಿಎಂ ಸಿದ್ದರಾಮಯ್ಯ ಬಳಿ ನನ್ನದೊಂದು ಮನವಿ, ಪೋಲಿಸರಿಗೆ ಇವನ ಬಗ್ಗೆ ತನಿಖೆ ಮಾಡಲು ಸೂಚನೆ ನೀಡಿದರೆ ಆತ ಎಲ್ಲವನ್ನೂ ಬಾಯಿ ಬಿಡುತ್ತಾನೆ. ಆಗ ಸಾಕಷ್ಟು ಜನರು ಇವನಿಂದ ಮೋಸ ಹೋದವರು ದೂರು ನೀಡಲು ಮುಂದೆ ಬರುತ್ತಾರೆ. ನನ್ನ ಹತ್ತು ಸ್ನೇಹಿತರ ಬಳಿಯೇ ಜೀವನ್ ಶೆಟ್ಟಿ ಕೋಟ್ಯಂತರ ರೂಪಾಯಿ ಹಣ ತೆಗೆದುಕೊಂಡು ಮೋಸ ಮಾಡಿದ್ದಾನೆ ಎಂದು ಬಾರ್ ಮಾಲೀಕ ರಾಮಕೃಷ್ಣ ಆರೋಪ ಮಾಡಿದ್ದಾರೆ.

ರಾಜ್ಯಪಾಲರಿಗೆ ನೀಡಿರುವ ದೂರಿನಲ್ಲೇನಿದೆ?

ಯಾವ ಹುದ್ದೆಗೆ ಎಷ್ಟು ಹಣವನ್ನು ಅಬಕಾರಿ ಸಚಿವರ ಕಚೇರಿಯ ಅಧಿಕಾರಿಗಳು ಪಡೆದುಕೊಂಡಿದ್ದಾರೆ ಎಂಬ ಸಂಪೂರ್ಣ ಮಾಹಿತಿಯೊಂದಿಗೆ ರಾಜ್ಯಪಾಲರಿಗೆ ಪತ್ರ ಬರೆಯಲಾಗಿದೆ. ಅಬಕಾರಿ ಸಚಿವ ತಿಮ್ಮಾಪುರ ಕಚೇರಿಯ ಕೆಲ ಅಧಿಕಾರಿಗಳು, ಅಬಕಾರಿ ಇಲಾಖೆಯ ಅಧಿಕಾರಿಗಳಿಂದ, ಅಕ್ರಮವಾಗಿ 16 ಕೊಟಿ ರೂಪಾಯಿ ಹಣ ಸಂಗ್ರಹಿಸಿದ್ದಾರೆ. 3 ಅಬಕಾರಿ ಉಪ ಆಯುಕ್ತರು, 9 ಸೂಪರಿಡೆಂಟ್, 13 ಡೆಪ್ಯೂಟಿ ಸೂಪರಿಡೆಂಟ್, 20 ಅಬಕಾರಿ ಇನ್​​ಸ್ಪೆಕ್ಟರ್ ಅಧಿಕಾರಿಗಳಿಂದ ತಲಾ ಇಂತಿಷ್ಟು ಎಂಬ ಲೆಕ್ಕದಲ್ಲಿ ಹಣ ಸಂಗ್ರವಾಗಿರುವ ಮಾಹಿತಿಯನ್ನೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸುವಂತೆ ರಾಜ್ಯಪಾಲರಿಗೆ ಇ-ಮೇಲ್ ಮೂಲಕ ಮನವಿ ಮಾಡಲಾಗಿದೆ. ಇದೇ ಮೇಲ್​ ಅನ್ನು, ಸಿಎಂ ಕಚೇರಿ, ಲೋಕಾಯುಕ್ತ ಬೆಂಗಳೂರು, ಎಡಿಜಿಪಿ ಲೋಕಾಯುಕ್ತ ಬೆಂಗಳೂರು ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ, ವಿಪಕ್ಷ ನಾಯಕರಾದ ಆರ್.ಅಶೋಕ್ ಅವರಿಗೂ ಕಳುಹಿಸಲಾಗಿದೆ.

ಇದನ್ನೂ ಓದಿ: ಅಬಕಾರಿ ಸಚಿವ ತಿಮ್ಮಾಪುರರಿಂದ ವಾರಕ್ಕೆ 18 ಕೋಟಿ ರೂ. ಹಫ್ತಾ ವಸೂಲಿ: ಆರ್ ಅಶೋಕ ವಾಗ್ದಾಳಿ

ವರ್ಗಾವಣೆಗೆ 40 ರಿಂದ 50 ಲಕ್ಷ ರೂ.

ಬಸವರಾಜ್ ಸಂದಿವಾಡ ಎಂಬಾತನೇ ಡೀಲ್ ಹಣ ಸಂಗ್ರಹಿಸಿ ಅಬಕಾರಿ ಸಚಿವರಿಗೆ ನೀಡಿದ್ದಾನೆ. ಬೆಂಗಳೂರು ಜಿಲ್ಲೆಗೆ ಅಬಕಾರಿ ಇನ್​ಸ್ಪೆಕ್ಟರ್​ಗಳ ವರ್ಗಾವಣೆಗೆ ಒಬ್ಬರಿಂದ 40 ರಿಂದ 50 ಲಕ್ಷ ರೂ, ಸೂಪರಿಡೆಂಟ್ ಅಧಿಕಾರಿಗಳ ವರ್ಗಾವಣೆಗೆ 25 ರಿಂದ 35 ಲಕ್ಷ ಮತ್ತು ಉಪ ಆಯುಕ್ತರ ವರ್ಗಾವಣೆಗೆ ತಲಾ 2.5 ರಿಂದ 3.5 ಕೋಟಿ ರೂಪಾಯಿ ಹಣ ಸಂಗ್ರಹ ಮಾಡಲಾಗಿದೆ ಎಂದು ಇ-ಮೇಲ್‌ನಲ್ಲಿ ಆರೋಪಿಸಲಾಗಿದೆ.

ಇದನ್ನೂ ಓದಿ: ಅಬಕಾರಿ ಅಧಿಕಾರಿಗಳ ಲಂಚಕ್ಕೆ ಬೇಸತ್ತ ಮಾಲೀಕರು, ರಾಜ್ಯಾದ್ಯಂತ ಈ ದಿನ ಮದ್ಯ ಮಾರಾಟ ಬಂದ್​ಗೆ ನಿರ್ಧಾರ

ಈ ಬಗ್ಗೆ ಮಾತಾನಾಡಿದ ರಾಜ್ಯ ಮದ್ಯ ಮಾರಾಟಗಾರರ ಸಂಘದ ಉಪಾಧ್ಯಕ್ಷ ಕರುಣಾಕರ ಹೆಗ್ಡೆ, ಜೀವನ್ ಶೆಟ್ಟಿ ಬಗ್ಗೆ ಮದ್ಯಮಾರಾಟಗಾರರು ಸಾಕಷ್ಟು ಬಾರಿ ಆರೋಪ ಮಾಡಿದ್ದಾರೆ. ಈತ ಹಿಂದಿನಿಂದಲೂ ಅಬಕಾರಿ ಸಚಿವ ಆರ್​​ಬಿ ತಿಮ್ಮಾಪುರ ಜೊತೆಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದಿದ್ದಾರೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ