ವಿದ್ಯಾರ್ಥಿಗಳ ಸಮಸ್ಯೆ ಪರಿಹಾರ, ಶಿಕ್ಷಣ ಸುಧಾರಣೆಗೆ ಡಿಕೆಶಿ ಸರ್ಕಾರ ಮಹತ್ವದ ಕ್ರಮ: ಖಾದರ್ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚನೆ

ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಶಿಕ್ಷಣ ಕ್ಷೇತ್ರದ ಸುಧಾರಣೆಗಳ ಕುರಿತು ಅಧ್ಯಯನ ನಡೆಸಲು ಕರ್ನಾಟಕ ಸರ್ಕಾರ ಸಂಪುಟ ಉಪಸಮಿತಿ ರಚಿಸಿದೆ. ಸಚಿವ ಯುಟಿ ಖಾದರ್ ಅಧ್ಯಕ್ಷತೆಯ ಸಮಿತಿಯಲ್ಲಿ ಐವರು ಸಚಿವರಿದ್ದು, ಪರೀಕ್ಷಾ ಅಕ್ರಮ, ಶಿಕ್ಷಣ ವೆಚ್ಚ, ಮೂಲಸೌಕರ್ಯ, ಕೌಶಲ್ಯಾಭಿವೃದ್ಧಿ, ವಿದ್ಯಾರ್ಥಿಗಳ ಕ್ಷೇಮ ಹಾಗೂ ಸಮಾನ ಅವಕಾಶಗಳ ಕುರಿತು ಪರಿಶೀಲನೆ ನಡೆಸಲಿದೆ.

ವಿದ್ಯಾರ್ಥಿಗಳ ಸಮಸ್ಯೆ ಪರಿಹಾರ, ಶಿಕ್ಷಣ ಸುಧಾರಣೆಗೆ ಡಿಕೆಶಿ ಸರ್ಕಾರ ಮಹತ್ವದ ಕ್ರಮ: ಖಾದರ್ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚನೆ
ಸಂಪುಟ ಉಪಸಮಿತಿ ರಚನೆ (ಸಾಂದರ್ಭಿಕ ಚಿತ್ರ)
Image Credit source: tv9

Updated on: Aug 27, 2026 | 12:55 PM

ಮುಖ್ಯಾಂಶಗಳು

  • ವಿದ್ಯಾರ್ಥಿ ಸಮಸ್ಯೆಗಳಿಗೆ ಸಂಪುಟ ಉಪಸಮಿತಿ ರಚನೆ
  • ಪರೀಕ್ಷಾ ಅಕ್ರಮ ತಡೆಗೆ ಸಮಿತಿ ಶಿಫಾರಸು
  • ಶಿಕ್ಷಣ ಸುಧಾರಣೆ ಕುರಿತು ಒಂದು ತಿಂಗಳೊಳಗೆ ವರದಿ

ಬೆಂಗಳೂರು, ಆಗಸ್ಟ್ 27: ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಶಿಕ್ಷಣ ಕ್ಷೇತ್ರದ ಸುಧಾರಣೆಗಳ ಕುರಿತು ಸಮಗ್ರವಾಗಿ ಅಧ್ಯಯನ ನಡೆಸಿ ಶಿಫಾರಸುಗಳನ್ನು ನೀಡಲು ಕರ್ನಾಟಕ ಸರ್ಕಾರ (Karnataka Government) ಸಂಪುಟ ಉಪಸಮಿತಿಯನ್ನು ರಚಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯುಟಿ ಖಾದರ್ (UK Khader) ಅಧ್ಯಕ್ಷತೆಯಲ್ಲಿ ಈ ಸಮಿತಿ ಕಾರ್ಯನಿರ್ವಹಿಸಲಿದ್ದು, ಶಿಕ್ಷಣ ವ್ಯವಸ್ಥೆಯಲ್ಲಿನ ಪ್ರಮುಖ ಸವಾಲುಗಳ ಕುರಿತು ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಲಿದೆ.

ಕರ್ನಾಟಕ ಸರ್ಕಾರದ ಅಧಿಕೃತ ಜ್ಞಾಪನಪತ್ರದ ಪ್ರಕಾರ, ವಿದ್ಯಾರ್ಥಿಗಳ ಸಮಸ್ಯೆಗಳು ಮತ್ತು ಶಿಕ್ಷಣ ಸುಧಾರಣೆಗಳ ಕುರಿತು ವರದಿ ನೀಡಲು ಈ ಸಂಪುಟ ಉಪಸಮಿತಿ ರಚಿಸಲಾಗಿದೆ. ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಗೃಹ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಹಾಗೂ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸಮಿತಿಯ ಸದಸ್ಯರಾಗಿದ್ದಾರೆ.

ಪರೀಕ್ಷೆ, ನೇಮಕಾತಿ ಪಾರದರ್ಶಕತೆಗೆ ಒತ್ತು

ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮ ಹಾಗೂ ನೇಮಕಾತಿ ಪ್ರಕ್ರಿಯೆಯಲ್ಲಿನ ಅಕ್ರಮಗಳನ್ನು ತಡೆಯುವುದು ಸಮಿತಿಯ ಪ್ರಮುಖ ಹೊಣೆಗಾರಿಕೆಗಳಲ್ಲಿ ಒಂದಾಗಿದೆ. ರಾಜ್ಯದ ಪರೀಕ್ಷೆ ಮತ್ತು ನೇಮಕಾತಿ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆ, ನ್ಯಾಯಸಮ್ಮತತೆ ಹಾಗೂ ಹೊಣೆಗಾರಿಕೆ ಖಚಿತಪಡಿಸುವ ಕುರಿತು ಸಮಿತಿ ಶಿಫಾರಸು ಮಾಡಲಿದೆ. ನಿಗದಿತ ಅವಧಿಯ ಪರೀಕ್ಷೆ ಮತ್ತು ನೇಮಕಾತಿ ವೇಳಾಪಟ್ಟಿಯನ್ನು ರೂಪಿಸುವ ಬಗ್ಗೆಯೂ ಪರಿಶೀಲನೆ ನಡೆಯಲಿದೆ.

ಶಿಕ್ಷಣ ವೆಚ್ಚ, ಶುಲ್ಕ ಮತ್ತು ಕೋಚಿಂಗ್‌ಗೂ ನಿಯಂತ್ರಣ

ಖಾಸಗಿ ಶಿಕ್ಷಣ ಸಂಸ್ಥೆಗಳು ವಿಧಿಸುವ ಶುಲ್ಕ, ಕೋಚಿಂಗ್‌ ಕೇಂದ್ರಗಳ ಮೇಲ್ವಿಚಾರಣೆ ಮತ್ತು ನಿಯಂತ್ರಣದ ಬಗ್ಗೆಯೂ ಸಮಿತಿ ಗಮನಹರಿಸಲಿದೆ. ಶಿಕ್ಷಣದ ವೆಚ್ಚದಿಂದ ವಿದ್ಯಾರ್ಥಿಗಳು ಮತ್ತು ಕುಟುಂಬಗಳ ಮೇಲೆ ಬೀಳುತ್ತಿರುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ಕ್ರಮಗಳನ್ನು ಶಿಫಾರಸು ಮಾಡುವ ಉದ್ದೇಶ ಹೊಂದಿದೆ.

ಸರ್ಕಾರಿ ಶಿಕ್ಷಣ ಸಂಸ್ಥೆಗಳ ಗುಣಮಟ್ಟ ಪರಿಶೀಲನೆ

ಸರ್ಕಾರಿ ಶಾಲೆಗಳು, ಪಿಯು ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಮೂಲಸೌಕರ್ಯ ಹಾಗೂ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವ ಕುರಿತೂ ಸಮಿತಿ ಅಧ್ಯಯನ ನಡೆಸಲಿದೆ. ಶಿಕ್ಷಕರ ಕೊರತೆ, ಪ್ರಯೋಗಾಲಯ, ಗ್ರಂಥಾಲಯ, ಹಾಸ್ಟೆಲ್ ಸೇರಿದಂತೆ ಅಗತ್ಯ ಸೌಲಭ್ಯಗಳ ಲಭ್ಯತೆಯನ್ನು ಪರಿಶೀಲಿಸುವ ಜವಾಬ್ದಾರಿಯೂ ಸಮಿತಿಗಿದೆ.

ಕೌಶಲ್ಯ, ಉದ್ಯೋಗ ಮತ್ತು ವಿದ್ಯಾರ್ಥಿಗಳ ಕ್ಷೇಮ

ಉದ್ಯೋಗ ಮಾರುಕಟ್ಟೆಯ ಅಗತ್ಯಕ್ಕೆ ಅನುಗುಣವಾಗಿ ಪಠ್ಯಕ್ರಮ ರೂಪಿಸುವುದು, ಕೌಶಲ್ಯಾಭಿವೃದ್ಧಿ, ಅಪ್ರೆಂಟಿಸ್‌ಶಿಪ್‌ ಹಾಗೂ ಇಂಟರ್ನ್‌ಶಿಪ್‌ಗಳಿಗೆ ಉತ್ತೇಜನ ನೀಡುವುದು ಕೂಡ ಸಮಿತಿಯ ಪರಿಶೀಲನೆಯಲ್ಲಿದೆ. ಶಿಕ್ಷಣ ಸಂಸ್ಥೆಗಳು ಮತ್ತು ಕೈಗಾರಿಕೆಗಳ ನಡುವಿನ ಸಂಪರ್ಕವನ್ನು ಬಲಪಡಿಸುವ ಕುರಿತು ಶಿಫಾರಸುಗಳನ್ನು ಮಾಡಲಿದೆ.

ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಪರೀಕ್ಷಾ ಒತ್ತಡ, ಸಮಾಲೋಚನಾ ವ್ಯವಸ್ಥೆ, ವಿದ್ಯಾರ್ಥಿ ಬೆಂಬಲ ವ್ಯವಸ್ಥೆ ಮತ್ತು ಮಾನಸಿಕ ಕ್ಷೇಮಕ್ಕೂ ಆದ್ಯತೆ ನೀಡಲಾಗಿದೆ. ವಿಶೇಷವಾಗಿ ಕೋಚಿಂಗ್‌ ಕೇಂದ್ರಗಳು, ಹಾಸ್ಟೆಲ್‌ಗಳು ಹಾಗೂ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಕ್ಷೇಮಕ್ಕೆ ಅಗತ್ಯ ಕ್ರಮಗಳ ಬಗ್ಗೆ ಸಮಿತಿ ಪರಿಶೀಲಿಸಲಿದೆ.

ಈ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಎಕ್ಸ್​​ನಲ್ಲಿ ಸಂದೇಶ ಪ್ರಕಟಿಸಿ ಮಾಹಿತಿ ಹಂಚಿಕೊಂಡಿದ್ದಾರೆ.

ಡಿಕೆ ಶಿವಕುಮಾರ್ ಎಕ್ಸ್ ಸಂದೇಶ


ಇದರ ಜೊತೆಗೆ ವಿದ್ಯಾರ್ಥಿವೇತನ, ಆರ್ಥಿಕ ನೆರವು, ಹಾಸ್ಟೆಲ್‌ಗಳ ಸಾಮರ್ಥ್ಯ ವೃದ್ಧಿ ಹಾಗೂ ಬಾಲಕಿಯರ ಶಿಕ್ಷಣಕ್ಕೆ ಉತ್ತೇಜನ ನೀಡುವ ಕ್ರಮಗಳನ್ನೂ ಪರಿಶೀಲಿಸಲಾಗುತ್ತದೆ. ಎಸ್‌ಸಿ, ಎಸ್‌ಟಿ, ಒಬಿಸಿ, ಅಲ್ಪಸಂಖ್ಯಾತರು ಹಾಗೂ ಮೊದಲ ತಲೆಮಾರಿನ ಕಲಿಕಾರ್ಥಿಗಳಿಗೆ ಸೂಕ್ತ ಬೆಂಬಲ ಕಲ್ಪಿಸುವ ಬಗ್ಗೆಯೂ ಗಮನಹರಿಸಲಾಗುತ್ತದೆ.

ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಶಿಕ್ಷಣ ಸಂಸ್ಥೆಗಳು ಸೇರಿದಂತೆ ವಿವಿಧ ಪಾಲುದಾರರೊಂದಿಗೆ ಸಮಿತಿ ವ್ಯಾಪಕ ಸಮಾಲೋಚನೆ ನಡೆಸಲಿದೆ. ಅಗತ್ಯವಿದ್ದರೆ ಸಂಬಂಧಿತ ಕ್ಷೇತ್ರಗಳ ತಜ್ಞರ ನೆರವನ್ನೂ ಪಡೆಯಲು ಅವಕಾಶವಿದೆ. ಒಂದು ತಿಂಗಳೊಳಗೆ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿದೆ. ಉನ್ನತ ಶಿಕ್ಷಣ ಇಲಾಖೆ ಈ ಸಂಪುಟ ಉಪಸಮಿತಿಯ ನೋಡಲ್ ಇಲಾಖೆಯಾಗಿ ಕಾರ್ಯನಿರ್ವಹಿಸಲಿದೆ.

ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದೇನು?
Priyank Kharge: ಪರೀಕ್ಷಾ ಅಕ್ರಮದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ನೀಡುವ ಕಾನೂನು ಜಾರಿಗೆ ತರ್ತೀವಿ! | #TV9D

ಸರ್ಕಾರಿ ನೇಮಕಾತಿಯಲ್ಲಿ ನಡೆಯುವ ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರವು ಕಠಿಣ ಕಾನೂನು ಜಾರಿಗೆ ತರಲು ಸಜ್ಜಾಗಿದೆ ಎಂದು ಸಮಿತಿಯ ಸದಸ್ಯರೂ ಆಗಿರುವ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಈ ಸಂಬಂಧ ಕರಡು ನಿಯಮಗಳನ್ನು ಈಗಾಗಲೇ ಪ್ರಕಟಿಸಲಾಗಿದ್ದು, ತಜ್ಞರು ಹಾಗೂ ಸಾರ್ವಜನಿಕರ ಅಭಿಪ್ರಾಯಗಳನ್ನು ಆಹ್ವಾನಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಯುವಕರ ಭವಿಷ್ಯದೊಂದಿಗೆ ಚೆಲ್ಲಾಟವಾಡಬಾರದು, ನೇಮಕಾತಿಯಲ್ಲಿ ಯಾವುದೇ ಲೋಪಗಳು ನಡೆಯಬಾರದು ಎಂಬ ದೃಷ್ಟಿಯಿಂದ ಈ ಕಾನೂನನ್ನು ರೂಪಿಸಲಾಗುತ್ತಿದೆ. ಕರಡು ನಿಯಮಗಳಲ್ಲಿ ಲೋಪಗಳಿದ್ದರೆ ಅಥವಾ ಸುಧಾರಣೆಗಳಿದ್ದರೆ ಸಲಹೆಗಳನ್ನು ನೀಡುವಂತೆ ಖರ್ಗೆ ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿಗಳ ಸೂಚನೆಯಂತೆ ಈಗಾಗಲೇ 74,000 ಹುದ್ದೆಗಳನ್ನು ಭರ್ತಿ ಮಾಡಲು ಸಿದ್ಧತೆ ನಡೆದಿದೆ. ಇದಕ್ಕೆ ಪೂರಕವಾಗಿ ಒಳಮೀಸಲಾತಿ ವಿಚಾರವೂ ಇತ್ಯರ್ಥವಾಗಿದೆ ಎಂದ ಖರ್ಗೆ, ಕೆಪಿಎಸ್‌ಸಿ ನಡೆದುಬಂದ ಹಾದಿ ಮತ್ತು ಶಿವಶಂಕರಪ್ಪ ಸಾಹುಕಾರ್ ಅವರ ವಿರುದ್ಧ ಸಿಐಡಿ ತನಿಖೆ ಹಾಗೂ ಸಿಬಿಐ, ಐಟಿ, ಇಡಿ ದಾಳಿಗಳನ್ನು ಉಲ್ಲೇಖಿಸಿ, ಯಾವುದೇ ಕಾರಣಕ್ಕೂ ಯುವಕರ ಭವಿಷ್ಯಕ್ಕೆ ಧಕ್ಕೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಯುವಕರಿಗೆ ಹೆಚ್ಚಿನ ಅವಕಾಶಗಳು ಲಭ್ಯವಾಗಲಿದ್ದು, ಪಾರದರ್ಶಕವಾಗಿ ಸರ್ಕಾರಿ ಉದ್ಯೋಗ ದೊರೆಯಲಿದೆ ಎಂದು ಅವರು ವಿವರಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us