ಹಳೆಯ ವಾಹನ ಸ್ಕ್ರ್ಯಾಪ್ ಮಾಡಿ ಇವಿ ತಗೊಂಡರೆ ಸಿಗಲಿದೆ ಭರ್ಜರಿ ತೆರಿಗೆ ರಿಯಾಯಿತಿ: ಇಲ್ಲಿದೆ ವಿವರ
‘ನೋಂದಾಯಿತ ವಾಹನಗಳ ಸ್ಕ್ರ್ಯಾಪಿಂಗ್ ನೀತಿ 2022’ ರ ನಿಬಂಧನೆಗಳ ಪ್ರಕಾರ, ಹಳೆಯ ವಾಹನವನ್ನು ಸ್ಕ್ರ್ಯಾಪ್ ಮಾಡಿ ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ತೆರಿಗೆ ವಿನಾಯಿತಿ ನೀಡುವುದಾಗಿ ಕರ್ನಾಟಕ ಸರ್ಕಾರ ಘೋಷಿಸಿದೆ. ಯಾವ ವಾಹನಕ್ಕೆ ಎಷ್ಟು ತೆರಿಗೆ ವಿನಾಯಿತಿ ಸಿಗಲಿದೆ ಎಂಬ ಮಾಹಿತಿ ಇಲ್ಲಿದೆ.
ಬೆಂಗಳೂರು, ಜನವರಿ 19: ಜೀವಿತಾವಧಿ ಕೊನೆಗೊಂಡಿರುವ ಹಳೆಯ ವಾಹನವನ್ನು ಸ್ಕ್ರ್ಯಾಪ್ ಮಾಡಿ ಹೊಸ ಎಲೆಕ್ಟ್ರಿಕ್ ವಾಹನಗಳನ್ನು (Electric Vehicle) ಖರೀದಿಸುವ ಗ್ರಾಹಕರಿಗೆ 1,000 ರೂಪಾಯಿಯಿಂದ 40,000 ರೂಪಾಯಿಗಳವರೆಗೆ ತೆರಿಗೆ ರಿಯಾಯಿತಿ ನೀಡಲು ಕರ್ನಾಟಕ ಸರ್ಕಾರ (Karnataka Government) ಮುಂದಾಗಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಈ ಬಗ್ಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್‌ಕೆ ಪಾಟೀಲ್ ಮಾಹಿತಿ ನೀಡಿದ್ದಾರೆ.
ದ್ವಿಚಕ್ರ ವಾಹನಗಳಿಗೆ 1,000 ರೂ.ನಿಂದ 5,000 ರೂ.ವರೆಗೆ ತೆರಿಗೆ ರಿಯಾಯಿತಿ ಇರುತ್ತದೆ ಎಂದು ಪಾಟೀಲ್ ಹೇಳಿದ್ದಾರೆ. 1 ಲಕ್ಷ ರೂ. ವರೆಗಿನ ವಾಹನಗಳಿಗೆ 1,000 ರೂ., 2 ಲಕ್ಷ ರೂ.ವರೆಗಿನ ವಾಹನಗಳಿಗೆ 2,000 ರೂ. ರಿಯಾಯಿತಿ ಮತ್ತು 4-5 ಲಕ್ಷ ರೂ. ವಾಹನಗಳಿಗೆ 5,000 ರೂ.ವರೆಗೆ ತೆರಿಗೆ ರಿಯಾಯಿತಿ ಸಿಗಲಿದೆ.
ಹೊಸ ಎಲೆಕ್ಟ್ರಿಕ್ ನಾಲ್ಕು-ಚಕ್ರ ವಾಹನಗಳಿಗಾಗಿ ಹಳೆಯ ನಾಲ್ಕು-ಚಕ್ರ ವಾಹನಗಳನ್ನು ಸ್ಕ್ರ್ಯಾಪ್ ಮಾಡುವವರಿಗೂ ಇದೇ ರೀತಿಯ ಪ್ರಯೋಜನಗಳು ದೊರೆಯಲಿವೆ. 5 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ನಾಲ್ಕು ಚಕ್ರದ ವಾಹನಗಳಿಗೆ 10,000 ರೂ., 5-10 ಲಕ್ಷ ಬೆಲೆಯ ವಾಹನಗಳಿಗೆ 20,000 ರೂ., 10-15 ಲಕ್ಷ ರೂ. ವಾಹನಗಳಿಗೆ 30,000 ರೂ., 15-20 ಲಕ್ಷ ರೂ. ವಾಹನಗಳಿಗೆ 40,000 ರೂ. ಮತ್ತು 20 ಲಕ್ಷಕ್ಕಿಂತ ಹೆಚ್ಚಿನ ಬೆಲೆಯ ವಾಹನಗಳಿಗೆ 50,000 ರೂ. ವರೆಗೆ ರಿಯಾಯಿತಿ ದೊರೆಯಲಿದೆ.
ಈ ರಿಯಾಯಿತಿಯು ಎಲೆಕ್ಟ್ರಿಕ್ ಟ್ರಾನ್ಸ್ಪೋರ್ಟ್ ವಾಹನಗಳಿಗೂ ಅನ್ವಯಿಸಲಿದೆ. ‘ನೋಂದಾಯಿತ ವಾಹನಗಳ ಸ್ಕ್ರ್ಯಾಪಿಂಗ್ ನೀತಿ 2022’ ರ ನಿಬಂಧನೆಗಳ ಪ್ರಕಾರ ರಿಯಾಯಿತಿಗಳನ್ನು ನೀಡಲಾಗಿದೆ.
ಮೋಟಾರು ಸಾರಿಗೆ ಮತ್ತು ಸಂಬಂಧಿತ ವಲಯಗಳ ಕಾರ್ಮಿಕರ ಕಲ್ಯಾಣಕ್ಕಾಗಿ ಸೆಸ್ ಸಂಗ್ರಹಿಸಲು ಸರ್ಕಾರಕ್ಕೆ ಅನುಮತಿ ನೀಡುವ ಸುಗ್ರೀವಾಜ್ಞೆಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ. ಇದು ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ರಚಿಸಲು ಸರ್ಕಾರಕ್ಕೆ ಅವಕಾಶ ನೀಡುತ್ತದೆ.
ಇದನ್ನೂ ಓದಿ: ಪರಿಶಿಷ್ಟ ಜಾತಿ ಒಳ ಮೀಸಲಾತಿ ಕುರಿತು ಕೇಂದ್ರಕ್ಕೆ ಶಿಫಾರಸು ಮಾಡಲು ಸಂಪುಟ ಅಸ್ತು
ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ವಿವಿಧ ಸಮುದಾಯಗಳಿಗೆ ಒಳಮೀಸಲಾತಿಯನ್ನು ಕಲ್ಪಿಸಲು ಸಂವಿಧಾನಕ್ಕೆ ತಿದ್ದುಪಡಿ ತರುವಂತೆ ಕೇಂದ್ರಕ್ಕೆ ಶಿಫಾರಸು ಮಾಡುವುದೂ ಸೇರಿದಂತೆ ಇನ್ನೂ ಅನೇಕ ನಿರ್ಧಾರಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ