ಕರ್ನಾಟಕದಲ್ಲಿ ಮತಾಂತರ ನಿಷೇಧ ಮಸೂದೆಗೆ ಸಂಪುಟ ಒಪ್ಪಿಗೆ; ಅಲ್ಲಿಯವರೆಗೆ ಸುಗ್ರೀವಾಜ್ಞೆ ಜಾರಿ ಎಂದ ಆರಗ ಜ್ಞಾನೇಂದ್ರ
ಮತಾಂತರ ವಿರೋಧಿ ಮಸೂದೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಅದನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಲಾಗುವುದು. ಅಲ್ಲಿಯವರೆಗೆ ಸುಗ್ರೀವಾಜ್ಞೆ ಜಾರಿಯಲ್ಲಿರುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಬೆಂಗಳೂರು: ಸುಗ್ರೀವಾಜ್ಞೆ ಮೂಲಕ ಕರ್ನಾಟಕದಲ್ಲಿ ಮತಾಂತರ ನಿಷೇಧ ಮಸೂದೆಯನ್ನು (Anti-Conversion Bill) ಅಂಗೀಕರಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದ್ದಾರೆ. ಸದ್ಯಕ್ಕೆ ಅಧಿವೇಶನ ನಡೆಯದಿರುವ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಮಸೂದೆಯನ್ನು ಜಾರಿಗೊಳಿಸಲು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ. ಈ ಮಸೂದೆಯು ಬಲವಂತವಾಗಿ ಅಥವಾ ಪ್ರಚೋದನೆಯ ಮೂಲಕ ಧಾರ್ಮಿಕ ಮತಾಂತರವನ್ನು ತಡೆಯುವ ಉದ್ದೇಶವನ್ನು ಹೊಂದಿದೆ.
“ಮತಾಂತರ ವಿರೋಧಿ ಮಸೂದೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಅದನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಲಾಗುವುದು. ಅಲ್ಲಿಯವರೆಗೆ ಸುಗ್ರೀವಾಜ್ಞೆ ಜಾರಿಯಲ್ಲಿರುತ್ತದೆ” ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸುದ್ದಿ ಸಂಸ್ಥೆ ANIಗೆ ತಿಳಿಸಿದ್ದಾರೆ. ರಾಜ್ಯ ಗೃಹ ಇಲಾಖೆ ಕರಡು ಟಿಪ್ಪಣಿಯನ್ನು ಸಿದ್ಧಪಡಿಸಿದ್ದು, ಇಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅದನ್ನು ಚಲಾವಣೆ ಮಾಡಲಾಗುವುದು ಎನ್ನಲಾಗಿದೆ. ಧರ್ಮ ಸ್ವಾತಂತ್ರ್ಯದ ಹಕ್ಕು ಕರ್ನಾಟಕ ರಕ್ಷಣೆ ಮಸೂದೆಯನ್ನು ಸುಗ್ರೀವಾಜ್ಞೆಯ ಮಾರ್ಗದ ಮೂಲಕ ಜಾರಿಗೆ ತರಲಾಗುವುದು ಎಂದು ತಿಳಿಸಲಾಗಿದೆ.
ಸುಗ್ರೀವಾಜ್ಞೆ ಮಾರ್ಗದ ಮೂಲಕ ವಿಧೇಯಕಕ್ಕೆ ಜೀವ ತುಂಬಲು ಯಾವುದೇ ಕಾನೂನು ತೊಡಕುಗಳಿಲ್ಲ ಎಂದು ಕಾನೂನು ಇಲಾಖೆ ತನ್ನ ಅಭಿಪ್ರಾಯದಲ್ಲಿ ತಿಳಿಸಿದೆ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.
Cabinet has approved the anti-conversion bill, it will be tabled in the next session, till then ordinance will be in place: Karnataka Home Minister Araga Jnanendra
(File Pic) pic.twitter.com/h94G1EOwBt
— ANI (@ANI) May 12, 2022
ಇದೇ ವೇಳೆ, ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಆಡಳಿತಾರೂಢ ಬೊಮ್ಮಾಯಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಮತಾಂತರ ವಿರೋಧಿ ಮಸೂದೆಯನ್ನು ಪ್ರತಿಪಕ್ಷಗಳು ವಿರೋಧಿಸುತ್ತವೆ ಎಂದು ಅವರು ಹೇಳಿದ್ದಾರೆ.
ಮಸೂದೆಯ ಪ್ರಕಾರ, ಬಲವಂತದ ಮತಾಂತರಕ್ಕೆ 25,000 ರೂ. ದಂಡದೊಂದಿಗೆ 3ರಿಂದ 5 ವರ್ಷಗಳ ಜೈಲು ಶಿಕ್ಷೆಯನ್ನು ನೀಡಲಾಗುತ್ತದೆ. ಅಪ್ರಾಪ್ತ ಮಹಿಳೆ ಅಥವಾ ಎಸ್‌ಸಿ/ಎಸ್‌ಟಿ ವ್ಯಕ್ತಿಯನ್ನು ಮತಾಂತರಿಸಿದರೆ 3ರಿಂದ 10 ವರ್ಷಗಳ ಜೈಲು ಶಿಕ್ಷೆ ಮತ್ತು 50,000 ರೂ. ದಂಡ ವಿಧಿಸಲಾಗುತ್ತದೆ. ಸಾಮೂಹಿಕ ಮತಾಂತರಕ್ಕೆ 3ರಿಂದ 10 ವರ್ಷಗಳ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತದೆ.
ಹಿಂದಿನ ವರ್ಷದ ಡಿಸೆಂಬರ್‌ನಲ್ಲಿ ಕರ್ನಾಟಕ ವಿಧಾನಸಭೆಯು ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ರಕ್ಷಣೆ ಮಸೂದೆ, 2021 ಅನ್ನು ಧ್ವನಿ ಮತದೊಂದಿಗೆ ಅಂಗೀಕರಿಸಿತ್ತು.
ಮತಾಂತರ ನಿಷೇಧ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಇಂದು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದರು. ಈ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ಎರಡು ತೀರ್ಪುಗಳನ್ನು ಸಂಪೂರ್ಣ ವಿಶ್ಲೇಷಣೆ ಮಾಡಲಾಗುವುದು. ಅದರ ಜೊತೆಗೆ ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ ಕೊಡುವ ನಿಟ್ಟಿನಲ್ಲಿ ಆಯೋಗ ರಚನೆ ಮಾಡಲಾಗಿದ್ದು, ಅದರ ಬಗ್ಗೆಯೂ ಚರ್ಚೆ ನಡೆಸಲಾಗುವುದು ಎಂದು ಹೇಳಿದ್ದರು.
ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮಧ್ಯ ಪ್ರದೇಶ ಸರ್ಕಾರ ಮತ್ತೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದೆ. ನಮ್ಮ ಕಡೆಯಿಂದ ಏನೆಲ್ಲಾ ಪ್ರಯತ್ನ ಕ್ರಮ ಆಗಬೇಕು ಕಾನೂನು ಪ್ರಕಾರ ಮಾಡುತ್ತೇವೆ. ನಮ್ಮಲ್ಲಿ ಹಲವು ವರದಿಗಳು ಇವೆ. ಅವುಗಳನ್ನು ಬಳಸಿಕೊಂಡು ಹೇಗೆ ಮೀಸಲಾತಿ ನೀಡಬೇಕು ಎಂಬ ನಿಟ್ಟಿನಲ್ಲಿ ಚರ್ಚೆ ನಡೆಸುತ್ತೇವೆ. ಸುಪ್ರಿಂ ಕೋರ್ಟ್ ಆದೇಶದ ಒಟ್ಟು ಪರಿಣಾಮದ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದರು.
ಇತರೆ ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ