Ramya: 8 ಕೋಟಿ ವಂಚಿಸಿ ಎಲ್ಲಿಗೂ ಓಡಿಹೋಗಿಲ್ಲ, ಸುಮ್ಮನಿದ್ದಿದ್ದೇ ನನ್ನ ದೊಡ್ಡ ತಪ್ಪು; ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಸಿಡಿದೆದ್ದ ರಮ್ಯಾ

Ramya: 8 ಕೋಟಿ ವಂಚಿಸಿ ಎಲ್ಲಿಗೂ ಓಡಿಹೋಗಿಲ್ಲ, ಸುಮ್ಮನಿದ್ದಿದ್ದೇ ನನ್ನ ದೊಡ್ಡ ತಪ್ಪು; ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಸಿಡಿದೆದ್ದ ರಮ್ಯಾ
ರಮ್ಯಾ

Divya Spandana: ತನ್ನ ವಿರುದ್ಧ ಟ್ರೋಲ್ ಮಾಡುತ್ತಿರುವ ಡಿಕೆ ಶಿವಕುಮಾರ್ ಬೆಂಬಲಿಗರಿಗೆ ಖಡಕ್ ಆಗಿಯೇ ಉತ್ತರ ನೀಡಿರುವ ನಟಿ ರಮ್ಯಾ ಇಷ್ಟು ದಿನ ಮೌನವಾಗಿದ್ದುದೇ ನಾನು ಮಾಡಿದ ದೊಡ್ಡ ತಪ್ಪು, ನಾನು ಯಾವ ವಂಚನೆಯನ್ನೂ ಮಾಡಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

TV9kannada Web Team

| Edited By: Sushma Chakre

May 12, 2022 | 4:16 PM

ಬೆಂಗಳೂರು: ಕಳೆದ ಕೆಲವು ವರ್ಷಗಳಿಂದ ಚಿತ್ರರಂಗ ಮತ್ತು ರಾಜಕೀಯದಿಂದ ದೂರವೇ ಉಳಿದಿದ್ದ ನಟಿ ರಮ್ಯಾ (ದಿವ್ಯ ಸ್ಪಂದನ) ಕೆಲವು ತಿಂಗಳ ಹಿಂದೆ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿದ್ದರು. ಚಿತ್ರರಂಗದಲ್ಲಿ ಸಕ್ರಿಯರಾಗಿಲ್ಲದಿದ್ದರೂ ರಮ್ಯಾ ( Actress Ramya) ಅವರ ಅಭಿಮಾನಿಗಳ ಪಾಲಿಗೆ ಇಂದಿಗೂ ಅವರೇ ಸ್ಯಾಂಡಲ್​ವುಡ್ ಕ್ವೀನ್. ಕಾಂಗ್ರೆಸ್​ನ ಮಾಜಿ ಸಂಸದೆಯೂ ಆಗಿದ್ದ ನಟಿ ರಮ್ಯಾ ಕೊನೆಗೆ ರಾಜಕೀಯದಿಂದಲೂ ದೂರವೇ ಉಳಿದಿದ್ದರು. ಆದರೆ, ಕೆಲವು ದಿನಗಳಿಂದ ಕಾಂಗ್ರೆಸ್ ಪಾಳಯದಲ್ಲಿ ಮತ್ತೆ ರಮ್ಯಾ ಅವರ ಹೆಸರು ಹರಿದಾಡುತ್ತಿದೆ. ರಮ್ಯಾ ಕಾಂಗ್ರೆಸ್​ನಿಂದ 8 ಕೋಟಿ ರೂ. ದೋಚಿಕೊಂಡು ಪರಾರಿಯಾಗಿದ್ದಾರೆ ಎಂಬ ಸುದ್ದಿಗಳು ಕೂಡ ಹರಿದಾಡುತ್ತಿವೆ. ಇದಕ್ಕೆ ಕೋಪಗೊಂಡಿರುವ ಸ್ಯಾಂಡಲ್​ವುಡ್ ಪದ್ಮಾವತಿ ರಮ್ಯಾ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಬಹಿರಂಗವಾಗಿಯೇ ಕಿಡಿ ಕಾರಿದ್ದಾರೆ. ಅಲ್ಲದೆ, ಈ ವಿಚಾರವಾಗಿ ಸ್ಪಷ್ಟನೆ ನೀಡಿ ನನಗೆ ಸಹಾಯ ಮಾಡಿ ಎಂದು ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ (KC Venugopal) ಅವರಲ್ಲಿ ರಮ್ಯಾ ಮನವಿ ಮಾಡಿದ್ದಾರೆ.

ಡಿಕೆ ಶಿವಕುಮಾರ್ ಅವರ ಬೆಂಬಲಿಗರು ನಟಿ ರಮ್ಯಾ ವಿರುದ್ಧ ವದಂತಿಗಳನ್ನು ಹರಡುತ್ತಿದ್ದಾರೆ, ಅವರನ್ನು ಟಾರ್ಗೆಟ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ ಎಂಬ ಸುದ್ದಿಗಳು ಕೆಲವು ದಿನಗಳಿಂದ ಓಡಾಡುತ್ತಿವೆ. 2 ದಿನಗಳ ಹಿಂದೆ ಡಿಕೆ ಶಿವಕುಮಾರ್ ವಿರುದ್ಧವಾಗಿ ರಮ್ಯಾ ಟ್ವೀಟ್ ಮಾಡಿದ್ದರು. ಈ ವಿವಾದ ಶುರುವಾಗಿದ್ದೇ ಅಲ್ಲಿಂದ. ಕಾಂಗ್ರೆಸ್ ನಾಯಕ ಎಂಬಿ ಪಾಟೀಲ್​ ಬಿಜೆಪಿ ಸಚಿವ ಅಶ್ವತ್ಥ್​ ನಾರಾಯಣ ಅವರನ್ನು ಭೇಟಿ ಮಾಡಿದ ವಿಚಾರದಲ್ಲಿ ಡಿಕೆ ಶಿವಕುಮಾರ್​​ ನೀಡಿರುವ ಹೇಳಿಕೆ ನನಗೆ ಅಚ್ಚರಿ ಮೂಡಿಸಿದೆ ಎಂದು ರಮ್ಯಾ ಟ್ವೀಟ್​ನಲ್ಲಿ ತಿಳಿಸಿದ್ದರು.

ಇದಾದ ಕೆಲವೇ ಗಂಟೆಗಳಲ್ಲಿ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ ಮಾಡಲಾಗಿತ್ತು. ಈ ಟ್ರೋಲ್​ ಅನ್ನು ಡಿಕೆ ಶಿವಕುಮಾರ್ ಅವರೇ ಮಾಡಿಸಿದ್ದಾರೆ ಎಂದು ಮಾಜಿ ಸಂಸದೆ ನೇರ ಆರೋಪ ಮಾಡಿದ್ದರು. ಕಾಂಗ್ರೆಸ್ ಕಚೇರಿಯಿಂದಲೇ ಕಾರ್ಯಕರ್ತರಿಗೆ ನನ್ನನ್ನು ಟ್ರೋಲ್ ಮಾಡಲು ಸೂಚನೆ ಹೋಗಿದೆ ಎಂದು ರಮ್ಯಾ ನೇರವಾಗಿ ಟ್ವೀಟ್ ಮೂಲಕ ಆರೋಪ ಮಾಡಿದ್ದರು. ಇದಕ್ಕೆ ಸಮಜಾಯಿಷಿ ನೀಡಿದ್ದ ಡಿಕೆ ಶಿವಕುಮಾರ್, ಎಂಬಿ ಪಾಟೀಲ್ ಮತ್ತು ರಮ್ಯಾ ಇಬ್ಬರೂ ನಮ್ಮ ಪಕ್ಷದ ನಾಯಕರಾಗಿದ್ದವರು. ಅವರ ಬಗ್ಗೆ ನಾನು ಯಾವುದೇ ಅವಹೇಳನಕಾರಿ ಹೇಳಿಕೆ ನೀಡಿಲ್ಲ. ಇಲ್ಲೇನೋ ಮಿಸ್​ಫೈರ್ ಆಗಿದೆ ಎಂದು ಸ್ಪಷ್ಟನೆ ನೀಡಿದ್ದರು.

ಆದರೆ, ಇಂದು ಮತ್ತೆ ರಮ್ಯಾ ಟ್ವಿಟ್ಟರ್​ನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಹರಿಹಾಯ್ದಿದ್ದು, ‘ನಾನು ಕಾಂಗ್ರೆಸ್​ ಪಕ್ಷದ ನನ್ನ ಜವಾಬ್ದಾರಿಗೆ ರಾಜೀನಾಮೆ ನೀಡಿದ ಬಳಿಕ ನಾನು ಕಾಂಗ್ರೆಸ್​ ಪಕ್ಷಕ್ಕೆ 8 ಕೋಟಿ ವಂಚನೆ ಮಾಡಿ ಓಡಿ ಹೋಗಿದ್ದೇನೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿ ಮಾಡಲಾಯಿತು. ನನ್ನ ನಿಯತ್ತು, ಸ್ವಾಭಿಮಾನವನ್ನು ಹಾಳು ಮಾಡಲೆಂದೇ ಕೆಲವು ಚಾನೆಲ್​ಗಳು ಪ್ರಯತ್ನ ಮಾಡಿದವು. ನಾನು ಯಾವ ಹಣವನ್ನೂ ತೆಗೆದುಕೊಂಡು ಎಲ್ಲಿಗೂ ಓಡಿಹೋಗಿಲ್ಲ. ನಾನು ನನ್ನ ವೈಯಕ್ತಿಕ ಕಾರಣಗಳಿಂದ ನನ್ನ ಹುದ್ದೆಗೆ ರಾಜೀನಾಮೆ ನೀಡಿದೆ. ನಾನು ಮಾಡಿದ ಒಂದೇ ಒಂದು ತಪ್ಪೆಂದರೆ ಇಷ್ಟು ದಿನ ಏನೂ ಮಾತನಾಡದೆ ಸುಮ್ಮನೆ ಇದ್ದಿದ್ದು! ‘ ಎಂದು ರಮ್ಯಾ ಟ್ವೀಟ್ ಮಾಡಿ ಅಸಮಾಧಾನ ಹೊರಹಾಕಿದ್ದಾರೆ.

ಹಾಗೇ, ಇನ್ನೊಂದು ಟ್ವೀಟ್​ನಲ್ಲಿ ತನಗೆ ನ್ಯಾಯ ಕೊಡಿಸಬೇಕೆಂದು ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಅವರಲ್ಲಿ ಮನವಿ ಮಾಡಿದ್ದಾರೆ. ‘ನೀವು ಮುಂದಿನ ಬಾರಿ ಕರ್ನಾಟಕಕ್ಕೆ ಬಂದಾಗ ಈ ವಿಚಾರದ ಕುರಿತು ದಯವಿಟ್ಟು ಮಾಧ್ಯಮಗಳೊಂದಿಗೆ ಮಾತನಾಡಿ, ಸ್ಪಷ್ಟನೆ ನೀಡಿ. ಇದು ನನಗೆ ನೀವು ಮಾಡಲೇಬೇಕಾದ ಕೊನೆಯ ಸಹಾಯ. ನನ್ನ ಜೀವನದುದ್ದಕ್ಕೂ ಈ ರೀತಿ ಬೇರೆಯವರಿಂದ ಟ್ರೋಲ್ ಮಾಡಿಸಿಕೊಂಡು, ಹಣ ಕದ್ದಿದ್ದೇನೆ ಎಂಬ ಆರೋಪ ಹೊರಿಸಿಕೊಂಡು ಬದುಕಲು ನನಗೆ ಇಷ್ಟವಿಲ್ಲ’ ಎಂದು ರಮ್ಯಾ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

ರಾಹುಲ್ ಗಾಂಧಿ ಒಬ್ಬರೇ ನನಗೆ ಅವಕಾಶ ನೀಡಿದ್ದು:

ನಾನು ರಾಷ್ಟ್ರೀಯ ಕಾಂಗ್ರೆಸ್​ನ ಸಾಮಾಜಿಕ ಜಾಲತಾಣದ ಹುದ್ದೆ ತ್ಯಜಿಸಿದ ಬಳಿಕ ಪಕ್ಷಕಕೆ 8 ಕೋಟಿ ವಂಚನೆ ಮಾಡಿ ಓಡಿ ಹೋದೆ ಎಂದು ಕೆಲವು ಮಾಧ್ಯಮಗಳು ತಿಳಿಸಿವೆ. ಇದು ನನ್ನ ವಿಶ್ವಾಸಾರ್ಹತೆಯನ್ನು ನಾಶಮಾಡುವ ಪ್ರಯತ್ನವಾಗಿದೆ. ನಾನು ನನ್ನ ಖಾಸಗಿ ಕಾರಣಗಳಿಂದಾಗಿ ರಾಜೀನಾಮೆ ನೀಡಿದೆ. ಈಗ ಸಾಮಾಜಿಕ ಜಾಲತಾಣದಲ್ಲಿ ನನ್ನ ಬಗ್ಗೆ ಕೆಟ್ಟದಾಗಿ ಟ್ರೋಲ್ ಮಾಡಲಾಗುತ್ತಿದೆ. ಕಾಂಗ್ರೆಸ್​ನಲ್ಲಿ ನನಗೆ ಅವಕಾಶ ನೀಡಿದವರು ರಾಹುಲ್ ಗಾಂಧಿ. ಅವರೇ ನನ್ನ ಪರವಾಗಿ ನಿಂತುಕೊಂಡವರು. ನನಗೆ ತಾವೇ ಅವಕಾಶ ನೀಡಿರುವುದಾಗಿ ಹೇಳಿಕೊಳ್ಳುವ ಬೇರೆಯವರೆಲ್ಲ ಅವಕಾಶವಾದಿಗಳು. ಈ ಅವಕಾಶವಾದಿಗಳು ಬೆನ್ನಿಗೆ ಚೂರಿ ಹಾಕಿದ್ದಾರೆ, ನನ್ನನ್ನು ತುಳಿಯಲು ಪ್ರಯತ್ನಿಸಿದ್ದಾರೆ ಎಂದು ಡಿಕೆ ಶಿವಕುಮಾರ್​ಗೆ ನಟಿ ರಮ್ಯಾ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಡಿಕೆ ಶಿವಕುಮಾರ್ ಬೆಂಬಲಿಗರು ಎನ್ನಲಾದ ಕೆಲವರು ರಮ್ಯಾ ವಿರುದ್ಧ ಅವಹೇಳನಕಾರಿಯಾಗಿ ಪೋಸ್ಟ್​ಗಳನ್ನು ಮಾಡಿದ್ದರು. ಅವಕಾಶ ಕೊಟ್ಟ ನಾಯಕರಿಗೆ ಬೆಲೆ ಕೊಡಲಿಲ್ಲ, ಅವಕಾಶ ಕೊಟ್ಟ ಜನರಿಗೂ ನ್ಯಾಯ ಕೊಡಲಿಲ್ಲ, ಇದೀಗ ಪ್ರತ್ಯಕ್ಷವಾಗಲು ಕಾರಣವೇನು? ದಯವಿಟ್ಟು ನಾಡಿನ ಜನತೆ ಮತ್ತು ಪಕ್ಷದ ಕಾರ್ಯಕರ್ತರು ನಿಮ್ಮ ಉತ್ತರಕ್ಕೆ ಕಾಯುತ್ತಿದ್ದಾರೆ. ಸತ್ಯ ಏನೆಂದು ತಿಳಿಯದೆ ಒಬ್ಬ ನಾಯಕರನ್ನು ಮೆಚ್ಚಿಸಲು ನೀವು ಮಾತನಾಡುತ್ತಿರುವುದು ಹಾಸ್ಯಾಸ್ಪದವಾಗಿದೆ. ಅಂದು ಅಂಬರೀಷ್‌ ಅಂತ್ಯ ಸಂಸ್ಕಾರಕ್ಕೂ ಬಾರದ ನೀವು ಇಂದು ಒಬ್ಬ ಅಧ್ಯಕ್ಷರನ್ನು ಪ್ರಶ್ನೆ ಮಾಡುವ ನೈತಿಕತೆ ಉಳಿಸಿಕೊಂಡಿದ್ದೀರಾ? ಒಮ್ಮೆ ನಿಮ್ಮನ್ನು ನೀವೇ ಪ್ರಶ್ನೆ ಮಾಡಿಕೊಳ್ಳಿ. ನಿಮಗೆ ಅವಕಾಶ ಕೊಟ್ಟ ನಾಯಕರನ್ನೇ ಮರೆತು ಮಾತನಾಡುತ್ತಿದ್ದೀಯಾ? ಏಣಿ ಹತ್ತಿದ ಮೇಲೆ ಒದೆಯುವುದು ಎಂದರೆ ಇದೇ. ನಮ್ಮ ನಾಯಕರ ಬಗ್ಗೆ ನೀವು ಮಾತನಾಡುವ ಅಗತ್ಯ ಇಲ್ಲ. ಡಿಕೆ ಶಿವಕುಮಾರ್‌ ಅವರೇ ನಿಮ್ಮನ್ನು 2010ರಲ್ಲಿ ಸದಸ್ಯತ್ವ ನೋಂದಣಿಯ ಕಾರ್ಯಕ್ರಮದ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಪರಿಚಯಿಸಿದವರು. ಈಗ ನೀವೇ ಅವರಿಗೆ ಪಕ್ಷದ ಆಗುಹೋಗುಗಳ ಬಗ್ಗೆ ಪಾಠ ಮಾಡುತ್ತಿದ್ದೀರಾ? ರಮ್ಯಾ ಅವರೇ, ನಿಮ್ಮನ್ನು ಪಕ್ಷಕ್ಕೆ ಪರಿಚಯಿಸಿ ಅವಕಾಶ ನೀಡಿದವರು ಡಿಕೆ ಶಿವಕುಮಾರ್‌. ಪಕ್ಷಕ್ಕಾಗಿ ಅವರ ತ್ಯಾಗ ಮತ್ತು ಸೇವೆಗಳ ಅರಿವಿದೆಯೇ ನಿಮಗೆ? ಮಂಡ್ಯದಲ್ಲಿ ಜನಪರ ಕೆಲಸ ಮಾಡಲಿಲ್ಲ, ಪಕ್ಷಕ್ಕಾಗಿ ದುಡಿಯಲು ಇಲ್ಲ, ಈಗ ನಾಯಕರ ಮಧ್ಯೆ ತುಪ್ಪ ಸುರಿಯುವ ಕೆಲಸವೇಕೆ? ರಮ್ಯಾ ಅವರೇ ನಿಮಗೆ ರಾಜಕೀಯಕ್ಕೆ ನೆಲೆ ಕೊಟ್ಟವರು ಯಾರು ಎಂದು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಿ ಎಂಬಿತ್ಯಾದಿ ಪೋಸ್ಟ್​ಗಳ ಮೂಲಕ ರಮ್ಯಾ ಅವರನ್ನು ಟ್ರೋಲ್ ಮಾಡಲಾಗಿತ್ತು. ಇದಕ್ಕೆ ರಮ್ಯಾ ತಿರುಗಿ ಬಿದ್ದಿದ್ದಾರೆ.

ಇತರೆ ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada