Local Body Elections: ಒಬಿಸಿ ಮೀಸಲಾತಿಗಾಗಿ ಹೋರಾಟ ಮಾಡ್ತೀವಿ ಎಂದ ರಾಜ್ಯ ಸಚಿವ ಸಂಪುಟ, ಚುನಾವಣಾ ಆಯೋಗದ ರಿಟ್ ಅರ್ಜಿ ಮೇ 17 ಕ್ಕೆ ಹೈಕೋರ್ಟ್ನಲ್ಲಿ ವಿಚಾರಣೆ
Supreme Court: 1983ರಿಂದ ನಾವು ಅನುಸರಿಸಿಸುತ್ತಿರುವ ಒಬಿಸಿ ಮೀಸಲಾತಿ ಪ್ರಕಾರವೇ ಚುನಾವಣೆಗೆ ಅನುಮತಿ ನೀಡುವಂತೆ ಕೋರ್ಟ್ಗೆ ಕೇಳುತ್ತೇವೆ. ಇದಕ್ಕೆ 3 ತಿಂಗಳು ಸಮಯ ಕೇಳಿ, ಮೇಲ್ಮನವಿ ಸಲ್ಲಿಕೆಗೆ ನಿರ್ಧರಿಸಿದ್ದೇವೆ. ಹೊಸ ಮೀಸಲಾತಿಯೋ ಅಥವಾ ಹಳೇ ಮೀಸಲಾತಿಯಡಿಯೇ ಚುನಾವಣೆ ನಡೆಸಬೇಕೇ ಎಂಬುದರ ಬಗ್ಗೆ ಸುಪ್ರೀಂ ಕೋರ್ಟ್ ಗೆ ನಾವು ಮೇಲ್ಮನವಿ ಸಲ್ಲಿಸುತ್ತೇವೆ.
ಬೆಂಗಳೂರು: ನಿನ್ನೆಯಷ್ಟೆ ಸುಪ್ರೀಂಕೋರ್ಟ್ (Supreme Court) ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ದೀರ್ಘ ಕಾಲದಿಂದ ಪೆಂಡಿಂಗ್ ಇರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು (Local Body Elections) ಯಾವುದೇ ಸಬೂಬು ಹೇಳದೆ ತಕ್ಷಣ ಮಾಡಿ ಎಂದು ಎಲ್ಲ ರಾಜ್ಯಗಳಿಗೂ ಅನ್ವಯವಾಗುವಂತೆ ಆದೇಶ ಹೊರಡಿಸಿದೆ. ಇದರಿಂದ ಬೆಂಗಳೂರು ಬಿಬಿಎಂಪಿ (BBMP) ಸೇರಿದಂತೆ ರಾಜ್ಯದಲ್ಲಿ ಶೀಘ್ರವೇ ಬಾಕಿಯಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ರಾಜ್ಯ ಸರ್ಕಾರ ನಡೆಸಲಿದೆ ಎಂದು ಆಕಾಂಕ್ಷಿ ಅಭ್ಯರ್ಥಿಗಳು ಆಶಿಸಿದ್ದರು. ಆದರೆ ಇದಕ್ಕೆ ತಣ್ಣೀರು ಎರಚುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ನೇತೃತ್ವದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯು ಮೀಸಲಾತಿ ನೀಡದೇ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವುದಿಲ್ಲ ಎಂಬ ತೀರ್ಮಾನಕ್ಕೆ ಬಂದಿದೆ (JC Madhuswamy).
ಇ ಕುರಿತು ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ವಿಧಾನಸೌಧದಲ್ಲಿ ಮಾತನಾಡಿದ ಕಾನೂನು ಸಚಿವ ಮಾಧುಸ್ವಾಮಿ ಹೆಚ್ಚಿನ ಮಾಹಿತಿ ನೀಡಿದರು. 2 ವಾರದಲ್ಲಿ ಚುನಾವಣೆ ನಡೆಸಲು ಸುಪ್ರೀಂಕೋರ್ಟ್ ಹೇಳಿದೆ. ಈಗಿರುವ ಇರುವ ಮೀಸಲಾತಿಯಲ್ಲಿಯೇ ಚುನಾವಣೆ ಮಾಡಲು ಹೇಳಿದೆ. 51 ಪಂಚಾಯಿತಿಗಳು ಪಟ್ಟಣ ಪಂಚಾಯಿತಿಗಳಾಗಿ ಮೇಲ್ದರ್ಜೆಗೆ ಏರಿವೆ. ಆ 51 ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ಮಾಡಲು ಆಗಲ್ಲ. ಬೆಂಗಳೂರು ನಗರಕ್ಕೆ ಹೊಸದಾಗಿ 110 ಗ್ರಾಮಗಳು ಸೇರ್ಪಡೆಗೊಂಡಿವೆ. ಇದಕ್ಕೆ ಏನ್ ಮಾಡಬೇಕೆಂದು ನಮಗೂ ತಕ್ಷಣಕ್ಕೆ ಗೊತ್ತಾಗುತ್ತಿಲ್ಲ ಎಂದು ತಮ್ಮ ಆತಂಕ ಹೊರಹಾಕಿದರು.
ಒಬಿಸಿ ಮೀಸಲಾತಿಗಾಗಿ ಹೋರಾಟ ಮಾಡ್ತೀವಿ: 1983ರಿಂದ ನಾವು ಅನುಸರಿಸಿಸುತ್ತಿರುವ ಒಬಿಸಿ ಮೀಸಲಾತಿ ಪ್ರಕಾರವೇ ಚುನಾವಣೆಗೆ ಅನುಮತಿ ನೀಡುವಂತೆ ಕೋರ್ಟ್ಗೆ ಕೇಳುತ್ತೇವೆ. ಇದಕ್ಕೆ 3 ತಿಂಗಳು ಸಮಯ ಕೇಳಿ, ಮೇಲ್ಮನವಿ ಸಲ್ಲಿಕೆಗೆ ನಿರ್ಧರಿಸಿದ್ದೇವೆ. ಹೊಸ ಮೀಸಲಾತಿಯೋ ಅಥವಾ ಹಳೇ ಮೀಸಲಾತಿಯಡಿಯೇ ಚುನಾವಣೆ ನಡೆಸಬೇಕೇ ಎಂಬುದರ ಬಗ್ಗೆ ಸುಪ್ರೀಂ ಕೋರ್ಟ್ ಗೆ ನಾವು ಮೇಲ್ಮನವಿ ಸಲ್ಲಿಸುತ್ತೇವೆ. ಈಗಾಗಲೇ ಭಕ್ತ ವತ್ಸಲ ಕಮಿಷನ್ ನೇಮಕ ಮಾಡಿದ್ದೇವೆ. 2-3 ತಿಂಗಳಲ್ಲಿ ವರದಿ ನೀಡುವಂತೆ ಅವರಿಗೆ ಸೂಚಿಸಿದ್ದೇವೆ. ಭಕ್ತ ವತ್ಸಲ ಆಯೋಗದ ವರದಿ ಮೇಲೆ ಮೀಸಲಾತಿ ನಿರ್ಧಾರ ಮಾಡಲಾಗುವುದು. ಒಬಿಸಿ ಮೀಸಲಾತಿಗಾಗಿ ಹೋರಾಟ ಮಾಡ್ತೀವಿ. ಈ ನಿಟ್ಟಿನಲ್ಲಿ ವಿಪಕ್ಷಗಳನ್ನ ವಿಶ್ವಾಸಕ್ಕೆ ತೆಗೆದುಕೊಂಡು ಹೋರಾಟ ಮುಂದುವರಿಸುತ್ತೇವೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಸ್ಪಷ್ಟಪಡಿಸಿದರು.
ಕರ್ನಾಟಕ ಚುನಾವಣಾ ಆಯೋಗದ ರಿಟ್ ಅರ್ಜಿ ಮೇ 17 ಕ್ಕೆ ಹೈಕೋರ್ಟ್ನಲ್ಲಿ ವಿಚಾರಣೆ: ಸುಪ್ರೀಂ ಕೋರ್ಟ್ ನಿರ್ದೇಶನದ ಬೆನ್ನಲ್ಲೇ ಅಖಾಡಕ್ಕಿಳಿದ ರಾಜ್ಯ ಚುನಾವಣಾ ಆಯೋಗವು ಹೈಕೋರ್ಟ್ ಗೆ ಮೆಮೋ ಸಲ್ಲಿಸಿದೆ. ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆ ಕೋರಿದ್ದ ರಿಟ್ ವಿಚಾರಣೆಗೆ ಮನವಿ ಸಲ್ಲಿಸಿದೆ. ಅದರ ತುರ್ತು ವಿಚಾರಣೆ ಕೋರಿ ಆಯೋಗದಿಂದ ಹೈಕೋರ್ಟ್ ಗೆ ಮೆಮೋ ಸಲ್ಲಿಸಲಾಗಿದೆ. ಸ್ಥಳೀಯ ಪಂಚಾಯಿತಿ ಚುನಾವಣೆ ವಿಳಂಬ ಮಾಡದಂತೆ ಮಧ್ಯಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಎಲ್ಲಾ ರಾಜ್ಯಗಳೂ ಸಂವಿಧಾನದ 243 U ಪಾಲಿಸುವಂತೆ ಸೂಚಿಸಿದೆ. ಹೀಗಾಗಿ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಲು ಆಯೋಗದ ಪರ ಹಿರಿಯ ವಕೀಲ ಕೆ.ಎನ್. ಫಣೀಂದ್ರ ಮನವಿ ಮಾಡಿದ್ದಾರೆ. ರಾಜ್ಯ ಸರ್ಕಾರ ಕ್ಷೇತ್ರ ಪುನರ್ವಿಂಗಡಣೆಗಾಗಿ ಆಯೋಗ ರಚಿಸಿದೆ. ಆದರೆ ಸರ್ಕಾರದ ಈ ಕ್ರಮವನ್ನು ಚುನಾವಣಾ ಆಯೋಗ ಪ್ರಶ್ನೆ ಮಾಡಿದೆ. ಈ ಹಿಂದೆಯೇ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಮನವಿ ಸಲ್ಲಿಸಿದೆ. ಕರ್ನಾಟಕ ಹೈಕೋರ್ಟ್ ವಿಚಾರಣೆ ಮೇ 17 ಕ್ಕೆ ನಿಗದಿಪಡಿಸಿದೆ.
ಇತರೆ ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:05 pm, Thu, 12 May 22