ಇನ್ಮುಂದೆ ವಾಹನಗಳಲ್ಲಿ ಎಮರ್ಜೆನ್ಸಿ ಪ್ಯಾನಿಕ್ ಬಟನ್ ಅಳವಡಿಕೆ ಕಡ್ಡಾಯಗೊಳಿಸಿದ ಸರ್ಕಾರ
Emergency Panic Button Installation : ಸರ್ಕಾರ ಹಾಗೂ ಪೊಲೀಸ್ ಇಲಾಖೆ ಯಾವುದೇ ರೀತಿ ಕ್ರಮ ಕೈಗೊಂಡರೂ ಸಹ ಸಾರ್ವಜನಿಕ ಸೇವಾ ವಾಹನಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯದಂತಹ ಘಟನೆಗಳು ನಡೆಯುತ್ತಲೇ ಇವೆ. ಹೀಗಾಗಿ ಸರ್ಕಾರ ಎಮರ್ಜೆನ್ಸಿ ಪ್ಯಾನಿಕ್ ಬಟನ್ ಕಡ್ಡಾಯಗೊಳಿಸಿದೆ. ಹಾಗಾದ್ರೆ, ಈ ಬಟನ್ ಅಳವಡಿಕೆ ದರವೆಷ್ಟು? ಯಾವ್ಯಾವ ವಾಹನಗಳಿಗೆ ಇದು ಅನ್ವಯ ಎನ್ನುವ ವಿವರ ಈ ಕೆಳಗಿನಂತಿದೆ.
ಬೆಂಗಳೂರು, (ನವೆಂಬರ್ 28): ಟ್ಯಾಕ್ಸಿ, ಕ್ಯಾಬ್ ಸೇರಿದಂತೆ ಸಾರ್ವಜನಿಕ ಸೇವಾ ವಾಹನಗಳಿಗೆ ವೆಹಿಕಲ್ ಲೋಕೇಷನ್ ಟ್ರ್ಯಾಕಿಂಗ್ ಡಿವೈಸ್ (ವಿಎಲ್ಟಿ) ಮತ್ತು ಎಮರ್ಜೆನ್ಸಿ ಪ್ಯಾನಿಕ್ ಬಟನ್ (emergency panic button installation )ಅಳವಡಿಕೆ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಡಿಸೆಂಬರ್ 1ರಿಂದ ಈ ಆದೇಶ ಜಾರಿಗೆ ಬರಲಿದೆ. ಆದ್ರೆ, ಎಲ್ಲಾ ಅಳವಡಿಕೆಗೆ 2024ರ ನವೆಂಬರ್ 30ರವರೆಗೆ ಅಂದರೆ ಒಂದು ವರ್ಷ ಅವಧಿಯ ಅವಕಾಶವನ್ನು ನೀಡಿದೆ.
ರಾಜ್ಯದಲ್ಲಿ ಮಹಿಳೆಯರು, ಮಕ್ಕಳು ಹಾಗೂ ಪ್ರಯಾಣಿಕರ ಸುರಕ್ಷತೆಗಾಗಿ ಸಾರ್ವಜನಿಕ ಸೇವೆ ಇರುವ ಖಾಸಗಿ ವಾಹನಗಳಿಗೆ ಎಮರ್ಜೆನ್ಸಿ ಪ್ಯಾನಿಕ್ ಬಟನ್ ಅಳವಡಿಸುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಕೆಲಸ ಶೀಘ್ರವಾಗಿ ಆಗಬೇಕಿರುವುದರಿಂದ ಆರ್ಟಿಒಗಳಲ್ಲಿ ಈ ಯೋಜನೆಗೆ ಒಳಪಡುವ ವಾಹನಗಳಿಗೆ ಮಾತ್ರ ಎಫ್.ಸಿ ನವೀಕರಣಕ್ಕೆ ಸೂಚನೆ ನೀಡಲಾಗಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ 60:40 ಅನುಪಾತದ ಸಹಭಾಗಿತ್ವದಲ್ಲಿ ಸಾರ್ವಜನಿಕ ಸೇವಾ ವಾಹನಗಳಲ್ಲಿ ಈ ಡಿವೈಸ್ ಅಳವಡಿಕೆಗೆ ಒಪ್ಪಿಗೆ ನೀಡಲಾಗಿದೆ. ಈ ಯೋಜನೆ ಜಾರಿಗೆ 2035.90 ಲಕ್ಷಗಳ ವೆಚ್ಚಕ್ಕೆ ಅನುಮೋದನೆ ನೀಡಲಾಗಿದ್ದು, ವಾಹನ ಮಾಲೀಕರು ಅರ್ಹ ಕಂಪನಿಗಳಿಂದ ಪ್ಯಾನಿಕ್ ಬಟನ್ ಅಳವಡಿಸಬೇಕು ಎಂದು ತಿಳಿಸಲಾಗಿದೆ.
ಪ್ಯಾನಿಕ್ ಬಟನ್ ಒಳಗೊಂಡ ವೆಹಿಕಲ್ ಲೊಕೇಷನ್ ಟ್ರ್ಯಾಕಿಂಗ್ ಡಿವೈಸ್ ಅಳವಡಿಸಲು 7,599 ರೂಪಾಯಿ ನಿಗದಿ ಮಾಡಲಾಗಿದೆ. ಡಿಸೆಂಬರ್ 1 ರಿಂದಲೇ ಈ ಯೋಜನೆ ಪ್ರಾರಂಭವಾಗಲಿದೆ. ಒಂದು ವರ್ಷದೊಳಗೆ(30/11/24 ) ಪರ್ಮಿಟ್ ವಾಹನಗಳು ಈ ಸಾಧನಗಳನ್ನ ಅಳವಡಿಸಿರಬೇಕು. ಇಲ್ಲವಾದಲ್ಲಿ ಸಾರಿಗೆ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೇ ಡಿವೈಸ್ ಅಳವಡಿಕೆ ಮಾಡದಿದ್ದರೆ ಎಫ್ ಸಿ ನವೀಕರಣವಾಗಲ್ಲ ಎಂದು ರಾಜ್ಯ ಸಾರಿಗೆ ಇಲಾಖೆ ಆದೇಶದಲ್ಲಿ ಉಲ್ಲೇಖಿಸಿದೆ.
ಯಾವ್ಯಾವ ವಾಹನಗಳಿಗೆ ಕಡ್ಡಾಯ?
ಎಲ್ಲ ರೀತಿಯ ಸಾರ್ವಜನಿಕ ಸೇವಾ ವಾಹನಗಳು ಅಂದರೆ ಯೆಲ್ಲೋ ಬೋರ್ಡ್ನ ಟ್ಯಾಕ್ಸಿಗಳು, ಕ್ಯಾಬ್ಗಳು, ಖಾಸಗಿ ಬಸ್ಗಳು, ನ್ಯಾಷನಲ್ ಪರ್ವಿುಟ್ ಹೊಂದಿರುವ ಗೂಡ್ಸ್ ವಾಹನಗಳಿಗೆ ಈ ಆದೇಶ ಅನ್ವಯವಾಗಲಿದ್ದು, ಇನ್ನು ಒಂದು ವರ್ಷದ ಅವಧಿಯೊಳಗೆ ಈ ವಾಹನಗಳ ಮಾಲೀಕರು ಪ್ಯಾನಿಕ್ ಬಟನ್ ಹಾಗೂ ವಿಎಲ್ಟಿ ಅಳವಡಿಸಬೇಕಿದೆ. ಇನ್ನು ವಾಹನಗಳಿಗೆ ವಿಎಲ್ಟಿ ಸೇರಿದಂತೆ ಪ್ಯಾನಿಕ್ ಬಟನ್ ಅಳವಡಿಕೆಗೆ 7,599 ರೂಪಾಯಿ ಖರ್ಚಾಗಲಿದೆ. ಜಿಎಸ್‌ಟಿ ಹೊರತುಪಡಿಸಿ ಈ ಬೆಲೆಯನ್ನು ನಿಗದಿ ಮಾಡಲಾಗಿದೆ.
ವಿಎಲ್ಟಿ ಹಾಗೂ ಪ್ಯಾನಿಕ್ ಬಟನ್ ಕೆಲಸ ಹೇಗೆ?
ವಿಎಲ್ಟಿ ಹಾಗೂ ಪ್ಯಾನಿಕ್ ಬಟನ್ ಅಳವಡಿಕೆಯ ನಂತರ ಮಾನಿಟರಿಂಗ್ ನಕ್ಷೆಯಲ್ಲಿ ವಾಹನದ ಲೊಕೇಷನ್ ಟ್ರ್ಯಾಕಿಂಗ್ ಆರಂಭವಾಗುತ್ತದೆ. ಇದು ನಿರ್ಬಂಧಿತ ಪ್ರದೇಶ, ಸಂಚಾರ ನಿಯಮಗಳ ಉಲ್ಲಂಘನೆ ಹಾಗೂ ಅತಿ ವೇಗದ ಎಚ್ಚರಿಕೆ ಕೂಡ ಕೊಡಲಿದೆ. ಇಂತಹ ವಾಹನಗಳಲ್ಲಿ ಪ್ರಯಾಣಿಸುವಾಗ ಆರೋಗ್ಯದಲ್ಲಿ ಏರುಪೇರು, ಲೈಂಗಿಕ ದೌರ್ಜನ್ಯ ಸೇರಿದಂತೆ ಯಾವುದೇ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಪ್ಯಾನಿಕ್ ಬಟನ್ ಒತ್ತಿದರೆ ಕಮಾಂಡ್ ಸೆಂಟರ್ಗೆ ಎಚ್ಚರಿಕೆ ಸಂದೇಶ ರವಾನೆಯಾಗುತ್ತದೆ. ಇದರಿಂದ ಕಮಾಂಡ್ ಸೆಂಟರ್ ವಾಹನದ ಲೊಕೇಷನ್ ಸಮೇತವಾಗಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಿದ್ದು ಇದರಿಂದ ಸಂಭವಿಸಬಹುದಾದ ಅನಾಹುತ ತಡೆಯಬಹುದಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:05 am, Tue, 28 November 23