ಈ 3 ಕಾರಿಡಾರ್‌ಗಳಲ್ಲಿ ಕೈಗಾರಿಕಾ ಟೌನ್‌ಶಿಪ್ ಸ್ಥಾಪನೆಗೆ ತಾತ್ವಿಕ ಒಪ್ಪಿಗೆ ನೀಡಿದ ರಾಜ್ಯ ಸರ್ಕಾರ
ಮೂರು ಕೈಗಾರಿಕಾ ಟೌನ್ಶಿಪ್ಗಳಿಂದ ಅಂದಾಜು 10 ಸಾವಿರ ಕೋಟಿ ಖಾಸಗಿ ಬಂಡವಾಳ ಆಕರ್ಷಿಸಲು ಉದ್ದೇಶಿಸಲಾಗಿದೆ. ಟೌನ್ಶಿಪ್ಗಳ ನಿರ್ಮಾಣದಿಂದ ಐದು ಲಕ್ಷ ಉದ್ಯೋಗಾಕಾಶ ಸೃಷ್ಟಿಯಾಗುವ ನಿರೀಕ್ಷೆಯಿದೆ.
ಬೆಂಗಳೂರು: ಬೆಂಗಳೂರು-ಮುಂಬೈ, ಬೆಂಗಳೂರು-ಚೆನ್ನೈ ಕಾರಿಡಾರ್‌ಗಳಲ್ಲಿ ಕೈಗಾರಿಕಾ ಟೌನ್‌ಶಿಪ್ ಸ್ಥಾಪನೆಗೆ ಕರ್ನಾಟಕ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಈ ಕೈಗಾರಿಕಾ ಕಾರಿಡಾರ್‌ಗಳು ಈಮುನ್ನ ಬಜೆಟ್‌ನಲ್ಲಿ ಘೋಷಿಸಲ್ಪಟ್ಟಿದ್ದವು. ತಲಾ ಕನಿಷ್ಠ 500 ಎಕರೆ ಜಾಗದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಕೈಗಾರಿಕಾ ಟೌನ್ ಶಿಪ್ ನಿರ್ಮಾಣಗೊಳ್ಳಲಿವೆ. ಅಂದಾಜು 10 ಸಾವಿರ ಕೋಟಿ ಖಾಸಗಿ ಬಂಡವಾಳ ಆಕರ್ಷಿಸಲು ಉದ್ದೇಶಿಸಲಾಗಿದೆ. ಟೌನ್ಶಿಪ್ಗಳ ನಿರ್ಮಾಣದಿಂದ ಐದು ಲಕ್ಷ ಉದ್ಯೋಗಾಕಾಶ ಸೃಷ್ಟಿಯಾಗುವ ನಿರೀಕ್ಷೆಯಿದೆ.
ಕೈಗಾರಿಕಾ ಪ್ರದೇಶದಲ್ಲಿ ರೆಸಿಡೆನ್ಷಿಯಲ್ ಟೌನ್ಶಿಪ್ ನಿರ್ಮಾಣ; ಸಚಿವ ಮುರುಗೇಶ್ ನಿರಾಣಿ ನಿರ್ಧಾರ ಇನ್ನು ಮುಂದೆ ಕೈಗಾರಿಕಾ ಪ್ರದೇಶಗಳಲ್ಲಿ ಶೇ.10ರಿಂದ 15ರಷ್ಟು ಜಾಗವನ್ನು ವಸತಿ ಬಡಾವಣೆ (ರೆಸಿಡೆನ್ಸಿಯಲ್ ಟೌನ್‍ಶಿಪ್)ಗಳ ನಿರ್ಮಾಣದ ಉದ್ದೇಶಕ್ಕಾಗಿ ಮೀಸಲಿಡಲು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಇಲಾಖೆ ಸಚಿವ ಮುರುಗೇಶ್ ನಿರಾಣಿ ನಿರ್ಧರಿಸಿದ್ದಾರೆ. ಈ ಸಂಬಂಧ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ. ರಮಣ ರೆಡ್ಡಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ(ಕೆಐಎಡಿಬಿ) ಮುಖ್ಯ ಕಾರ್ಯ ನಿರ್ವಹಣಾಕಾರಿ (ಸಿಇಒ) ಎನ್. ಶಿವಶಂಕರ ಸೇರಿದಂತೆ ಮತ್ತಿತರ ಅಧಿಕಾರಿಗಳ ಜೊತೆ ಆಗಸ್ಟ್ 20ರಂದು ನಡೆಸಿದ ಸಭೆಯಲ್ಲಿ ಈ ಮಹತ್ವದ ತೀರ್ಮಾನವನ್ನು ಕೈಗೊಂಡಿದ್ದಾರೆ.
ಮೀಸಲಿರಿಸಿದ ಜಾಗದಲ್ಲಿ ಶಾಲಾ-ಕಾಲೇಜುಗಳು, ಆರೋಗ್ಯ ಕೇಂದ್ರ, ವಾಣಿಜ್ಯ ಸಂಕೀರ್ಣಗಳು, ಉದ್ಯಾನವನ ಸೇರಿದಂತೆ ಸಾರ್ವಜನಿಕರಿಗೆ ಅನುಕೂಲವಾಗುವ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಯೋಜನೆ ರೂಪಿಸಬೇಕೆಂದು ಅಧಿಕಾರಿಗಳಿಗೆ ಸಲಹೆ ಮಾಡಿದ್ದಾರೆ. ಸಮಗ್ರ ಕೈಗಾರಿಕಾ ನಿವಾಸಿಗಳ ನಗರ (ಇಂಟಿಗ್ರೇಟೆಡ್ ಇಂಡಸ್ಟ್ರಿಯಲ್ ರೆಸಿಡೆನ್ಸಿಯಲ್ ಟೌನ್‍ಶಿಪ್) ಪರಿಕಲ್ಪನೆಯಲ್ಲಿ ಕೈಗಾರಿಕಾ ಪ್ರದೇಶದಲ್ಲಿನ ಜಾಗವನ್ನು ಶೇ. 10ರಿಂದ 15ರಷ್ಟು ವಸತಿ ಬಡಾವಣೆಯ ಉದ್ದೇಶಕ್ಕಾಗಿ ಕಾಯ್ದಿರಿಸಬೇಕೆಂದು ಮುರುಗೇಶ್ ನಿರಾಣಿ ಸೂಚಿಸಿದ್ದಾರೆ.
ವಾಕ್ -ಟು -ವರ್ಕ್ ಎಂಬ ಪರಿಕಲ್ಪನೆಯಡಿ ಕೈಗಾರಿಕಾ ಪ್ರದೇಶಗಳಲ್ಲಿ ವಾಸ ಮಾಡುವ ಜನರಿಗೆ ಅಗತ್ಯವಿರುವ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕೆಂಬ ಯೋಜನೆ ಹಾಕಿಕೊಳ್ಳಲಾಗಿದೆ. ಕೈಗಾರಿಕೆಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ತಾವು ವಾಸಿಸುವ ಪ್ರದೇಶದಿಂದ ಬಂದು ಹೋಗಲು ಸಂಚಾರ ದಟ್ಟಣೆ, ವಾಹನಗಳ ಸಮಸ್ಯೆ, ಸಮಯದ ಅಭಾವ ಹೀಗೆ ನಾನಾ ರೀತಿಯ ಸಮಸ್ಯೆಗಳು ಎದುರಾಗುತ್ತಿವೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಈ ವಿನೂತನ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.
ಬೆಂಗಳೂರಿನಲ್ಲಿ ಕೈಗಾರಿಕೆಗಳಿದ್ದರೆ ದೇವನಹಳ್ಳಿ, ನೆಲಮಂಗಲ, ಹೊಸಕೋಟೆ ಸೇರಿದಂತೆ ದೂರದಿಂದ ಬರಲು ಸಿಬ್ಬಂದಿಗಳಿಗೆ ಅನಾನುಕೂಲವಾಗಲಿವೆ. ಕೈಗಾರಿಕಾ ಪ್ರದೇಶದಲ್ಲೇ ವಸತಿಗಳನ್ನು ನಿರ್ಮಿಸಿಕೊಟ್ಟರೆ ಸಮಯದ ಉಳಿತಾಯ ಹಾಗೂ ದಕ್ಷತೆಯಿಂದ ಕೆಲಸ ಮಾಡಲು ಅನುಕೂಲವಾಗುತ್ತದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಇದನ್ನೂ ಓದಿ:
ಐಟಿ ದಾಳಿಯಲ್ಲಿ 750 ಕೋಟಿ ಅಕ್ರಮ ಆಸ್ತಿ ಪತ್ತೆ: ಅಧಿಕೃತ ವಿವರ ನೀಡಿದ ಐಟಿ ಇಲಾಖೆ
2022ರ ನವೆಂಬರ್ 2ರಿಂದ ಬೆಂಗಳೂರಿನಲ್ಲಿ ಹೂಡಿಕೆದಾರರ ಸಮಾವೇಶ; ಸಚಿವ ಮುರುಗೇಶ್ ನಿರಾಣಿ ಘೋಷಣೆ