ವ್ಯಾಪಕ ಮಳೆಯಿಂದ ಬೆಳೆ ಹಾನಿ; ರೈತರ ಖಾತೆಗೆ ಸರ್ಕಾರದಿಂದ ಪರಿಹಾರ ಹಣ ನೀಡುವ ಬಗ್ಗೆ ಬಿಸಿ ಪಾಟೀಲ್ ಹೇಳಿಕೆ
Karnataka Rains: ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್‌ನಿಂದ ಪರಿಹಾರ ಹಂಚಿಕೆ ಮಾಡಲಾಗುವುದು. ಪರಿಹಾರ ಹಣ ಪರಿಷ್ಕರಣೆ ಬಗ್ಗೆ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದೇವೆ. ಗೈಡ್‌ಲೈನ್ಸ್ ಬಂದ ಬಳಿಕ ಪರಿಹಾರ ಮೊತ್ತ ಘೋಷಿಸುತ್ತೇವೆ ಎಂದು ದಾವಣಗೆರೆಯಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ.
ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ವ್ಯಾಪಕ ಮಳೆಯಿಂದ ಬೆಳೆ ಹಾನಿ ಆಗಿರುವ ಹಿನ್ನೆಲೆಯಲ್ಲಿ ಬೆಳೆ ಹಾನಿ ಬಗ್ಗೆ ತಕ್ಷಣ ಸರ್ವೆ ನಡೆಸುವಂತೆ ಸೂಚಿಸಿದ್ದೇನೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿಕೆ ನೀಡಿದ್ದಾರೆ. ವರದಿ ಬಳಿಕ ರೈತರ ಖಾತೆಗೆ ಸರ್ಕಾರದಿಂದ ಪರಿಹಾರ ಹಣ ನೀಡಲಾಗುವುದು. ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್‌ನಿಂದ ಪರಿಹಾರ ಹಂಚಿಕೆ ಮಾಡಲಾಗುವುದು. ಪರಿಹಾರ ಹಣ ಪರಿಷ್ಕರಣೆ ಬಗ್ಗೆ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದೇವೆ. ಗೈಡ್‌ಲೈನ್ಸ್ ಬಂದ ಬಳಿಕ ಪರಿಹಾರ ಮೊತ್ತ ಘೋಷಿಸುತ್ತೇವೆ ಎಂದು ದಾವಣಗೆರೆಯಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ.
ರಾಜ್ಯದ ವಿವಿಧೆಡೆ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಬೆಂಗಳೂರು ಸಹಿತ ಕೆಲವು ಜಿಲ್ಲೆಗಳಲ್ಲಿ ಮಳೆ ಅಪಾರ ಹಾನಿ ಉಂಟುಮಾಡಿದೆ. ಜನಜೀವನ ಅಸ್ತವ್ಯಸ್ತವಾಗುವಂತೆ ಮಾಡಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಳೆ ಹಿನ್ನೆಲೆಯಲ್ಲಿ ಸಂಜೆ 7 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆ ನಡೆಸುವ ಸಾಧ್ಯತೆ ಇದೆ. ಗೃಹಕಚೇರಿ ಕೃಷ್ಣಾದಲ್ಲಿ ಅಧಿಕಾರಿಗಳ ಜತೆ ಸಭೆ ಸಾಧ್ಯತೆ ಎಂಬ ಬಗ್ಗೆ ಮಾಹಿತಿ ಲಭಿಸಿದೆ. ಮಳೆ ಅನಾಹುತ, ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗುವುದು. ಸಭೆಯಲ್ಲಿ ಕೆಲ ಸಚಿವರು ಸಹ ಭಾಗಿಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಮಹಾಲಕ್ಷ್ಮಿ ಕ್ಲಬ್ ಹಿಂಭಾಗ ಧರೆಗುರುಳಿದ ಮರಗಳು ಸತತ ಸುರಿಯುತ್ತಿರುವ ಮಳೆಯಿಂದಾಗಿ 3 ಬೃಹದಾಕಾರದ ಮರಗಳು ಧರೆಗುರುಳಿದೆ. ಮಧ್ಯಾಹ್ನ 2:30 ಕ್ಕೆ ಮರಗಳು ಧರೆಗುರುಳಿದ್ದು ಮನೆಯ ಬಾಲ್ಕನಿಯ ಗೋಡೆ, 4 ಬೈಕ್ ಗಳಿಗೆ ಹಾನಿ ಆಗಿದೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಿಬಿಎಂಪಿ ಸಿಬ್ಬಂದಿಗಳು ಆಗಮಿಸಿದ್ದಾರೆ. ಧರೆಗುರುಳಿದ ಮರಗಳ ತೆರವು ಕಾರ್ಯ ನಡೆಯುತ್ತಿದೆ. ಸಂಜೆ 4:30, 5 ಗಂಟೆ ಸುಮಾರಿಗೆ ತೆರವು ಕಾರ್ಯ ಪ್ರಾರಂಭಿಸಿದ್ದು, ಮಹಾಲಕ್ಷ್ಮಿ ಕ್ಲಬ್ ಹಿಂಭಾಗದಲ್ಲಿ ಘಟನೆ ನಡೆದಿದೆ. ಮರ ತೆರವು ಕಾರ್ಯ ವೇಳೆ ಸಿಬ್ಬಂದಿಗಳು ಪ್ರದೇಶದ ವಿದ್ಯುತ್ ಸರಬರಾಜು ಕಡಿತಗೊಳಿಸಿದ್ದಾರೆ. ಸುಮಾರು 2 ಗಂಟೆಯಿಂದ ಮಹಾಲಕ್ಷ್ಮಿ ಲೇಔಟ್ನಲ್ಲಿ ವಿದ್ಯುತ್ ವ್ಯತ್ಯಯವಾಗಿದೆ.
ಉಡುಪಿ ಜಿಲ್ಲೆಯಾದ್ಯಂತ ಬಾರೀ ಮಳೆ ಉಡುಪಿ ಜಿಲ್ಲೆಯ ಹಲವೆಡೆ ಇಂದು ಮಧ್ಯಾಹ್ನದಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಉಡುಪಿ ನಗರ ಸೇರಿದಂತೆ ಕಾರ್ಕಳ, ಕಾಪು, ಕುಂದಾಪುರದ ಬೈಂದೂರು ಭಾಗಗಳಲ್ಲೂ ವರುಣನ ಅಬ್ಬರ ಜೋರಾಗಿದೆ. ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದ ವಾಹನ ಸವಾರರ ಪರದಾಟ ಕಂಡುಬಂದಿದೆ.
ಇದನ್ನೂ ಓದಿ: ಜೋರು ಮಳೆ, ಪೊಲೀಸ್ ಕಾರ್ಯಾಚರಣೆ; ಬಾವಿಗೆ ಬಿದ್ದ ಆರೋಪಿ, ಪೊಲೀಸರಿಂದಲೇ ರಕ್ಷಣೆ
ಇದನ್ನೂ ಓದಿ: ದೇವನಹಳ್ಳಿ ಸುತ್ತಮುತ್ತ ಭಾರಿ ಮಳೆ; ಮನೆ ಕುಸಿದು ಆರು ಮೇಕೆ ಸಾವು, ಕುಟುಂಬಸ್ಥರು ಪಾರು