ರಾಜ್ಯ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ: ಗ್ರಾಮ ಸಹಾಯಕರ ವೇತನ ಹೆಚ್ಚಳ
Grama Sahayaka Salary Hike: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜ್ಯ ಕಾಂಗ್ರೆಸ್ ಸಾರ್ವಜನಿಕರಿಗೆ ಒಂದೊಂದೇ ಬಂಪರ್ ಗಿಫ್ಟ್ಗಳನ್ನೇ ನೀಡುತ್ತಿದೆ. ಗ್ಯಾರಂಟಿ ಯೋಜನೆಗಳ ಜೊತೆಯಲ್ಲೇ ವಿದ್ಯುತ್ ದರ ಇಳಿಕೆ ಮಾಡಿದೆ. ಇದರ ಬೆನ್ನಲ್ಲೇ ಇದೀಗ ಗ್ರಾಮ ಸಹಾಯಕರ ವೇತನವನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.
ಬೆಂಗಳೂರು, (ಫೆಬ್ರವರಿ 28): ಕರ್ನಾಟಕ ರಾಜ್ಯ ಸರ್ಕಾರಿ ಕಂದಾಯ ಇಲಾಖಾ ಗ್ರಾಮ ಸಹಾಯಕರ (Grama Sahayaka) ಸಂಘದ ವತಿಯಿಂದ ಗ್ರಾಮ ಸಹಾಯಕರ ಹಲವು ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆಗಳು ನಡೆಸುತ್ತಿದ್ದಾರೆ.ಅದರಲ್ಲೂ ಮುಖ್ಯವಾಗಿ ತಮ್ಮನ್ನು ಡಿ ದರ್ಜೆ ನೌಕರರೆಂದು (D Group Employees) ಪರಿಗಣಿಸಬೇಕೆಂಬ ಬೇಡಿಕೆಯನ್ನು ಇಟ್ಟಿದೆ. ಆದ್ರೆ, ಇದೀಗ ರಾಜ್ಯ ಸರ್ಕಾರ (Karnataka Government) ಅವರ ವೇತನವನ್ನು 2 ಸಾವಿರ ರೂ. ಹೆಚ್ಚಳ ಮಾಡಿದೆ (Salary Hike). ಆದ್ರೆ, ಅವರ ಡಿ ದರ್ಜೆ ಬೇಡಿಕೆಯನ್ನು ಸದ್ಯಕ್ಕೆ ಪರಿಗಣಿಸಲಾಗದು ಎಂದು ತಿಳಿಸಿದೆ.
ಕಂದಾಯ ಇಲಾಖೆಯಲ್ಲಿ 40 ವರ್ಷಗಳಿಂದ ಕೆಲಸ ಮಾಡುತ್ತಿರುವ ಗ್ರಾಮ ಸಹಾಯಕರ ಹುದ್ದೆಯನ್ನು ಡಿ ದರ್ಜೆ ಎಂದು ಪರಿಗಣಿಸಬೇಕು ಎಂದು ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ (Bangalore Freedom Park) ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನು ಸರ್ಕಾರದ ವೇತನ ಹೆಚ್ಚಳ ಆದೇಶದಲ್ಲೇನಿದೆ ಎನ್ನುವ ವಿವರ ಈ ಕೆಳಗಿನಂತಿದೆ.
ಇದನ್ನೂ ಓದಿ: ರಾಜ್ಯದ ವಿದ್ಯುತ್ ಬಳಕೆದಾರರಿಗೆ ಗುಡ್ ನ್ಯೂಸ್: ವಿದ್ಯುತ್ ದರ ಇಳಿಕೆ ಮಾಡಿ ಸರ್ಕಾರ ಆದೇಶ
ವೇತನ ಹೆಚ್ಚಳ ಆದೇಶದಲ್ಲಿ ಏನಿದೆ?
- ಗ್ರಾಮ ಸಹಾಯಕರಿಗೆ ಗೌರವಧನ ಹೆಚ್ಚಳ, ಸೇವಾ ಭದ್ರತೆ ಹಾಗೂ ‘ಡಿ ದರ್ಜೆ ನೌಕರರೆಂದು ಪರಿಗಣಿಸುವ ಸಂಬಂಧ ಆಡಳಿತ ಇಲಾಖೆಯು ಸಲ್ಲಿಸಿರುವ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿದೆ.
- ಕಂದಾಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 10,450 ಗ್ರಾಮ ಸಹಾಯಕರ ಹುದ್ದೆಗಳನ್ನು ಮಿತವೇತನದ ಆಧಾರದ ಮೇಲೆ ತಾತ್ಕಾಲಿಕವಾಗಿ ಮಂಜೂರು ಮಾಡಲಾಗಿದೆ.
- ಕಂದಾಯ ಇಲಾಖೆಯಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ 9903 ಗ್ರಾಮ ಸಹಾಯಕರ ಮಿತವೇತನವನ್ನು ದಿನಾಂಕ:1.4.2024 ರಿಂದ ಅನ್ವಯವಾಗುವಂತೆ ಮಾಸಿಕ 13,000 ರೂ.ಗಳಿಂದ 15,000 ರೂಪಾಯಿಗೆ ಪರಿಷ್ಕರಿಸಲು ಆರ್ಥಿಕ ಇಲಾಖೆಯು ಸಹಮತಿ ನೀಡಿದೆ.
- ಮುಂದುವರೆದು, ಗ್ರಾಮ ಸಹಾಯಕರಿಗೆ ಸೇವಾ ನಿಯಮಾವಳಿಯನ್ನು ರೂಪಿಸಿ ಸೇವಾ ಭದ್ರತೆಯನ್ನು ನೀಡುವ ಬಗ್ಗೆ ಇಲಾಖೆಯ ಹಂತದಲ್ಲಿ ಪರಿಶೀಲಿಸಿ, ಇದೇ ರೀತಿ ಗೌರವಧನ (ಸಂಚಿತ ವೇತನ) ಪಡೆಯುತ್ತಿರುವ ನೌಕರರುಗಳಿಗೆ ಇತರೆ ಇಲಾಖೆಗಳಲ್ಲಿ ಸೇವಾ ಭದ್ರತೆಗಾಗಿ ಯಾವ ರೀತಿ ನಿಯಮಾವಳಿ ರೂಪಿಸಿದ್ದಾರೆ ಎಂಬುದನ್ನು ಪರಿಶೀಲಿಸಿ ನಿರ್ದಿಷ್ಟ ಪ್ರಸ್ತಾವನೆಯನ್ನು ಸಲ್ಲಿಸುವಂತೆ ತಿಳಿಸಿದೆ.
- ಗ್ರಾಮ ಸಹಾಯಕರನ್ನು ಡಿ ದರ್ಜೆ ನೌಕರರೆಂದು ಪರಿಗಣಿಸುವ ಪ್ರಸ್ತಾವನೆಯನ್ನು ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ಪರಿಗಣಿಸಲು ಸಾಧ್ಯವಿಲ್ಲವೆಂದು ತಿಳಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.