ಬೆಂಗಳೂರು, (ಆಗಸ್ಟ್ 27): 7ನೇ ವೇತನ ಆಯೋಗದ ವರದಿ ಶಿಫಾರಸುಗಳನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಂಗೀಕರಿಸಿ ಜಾರಿಗೊಳಿಸಿ ರಾಜ್ಯ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದೆ. ಅಲ್ಲದೇ ಎನ್ಪಿಎಸ್ ರದ್ದುಗೊಳಿಸಿ ಓಪಿಎಸ್ ಜಾರಿಗೊಳಿಸುವ ಬಗ್ಗೆಯೂ ಸಮಿತಿಯನ್ನು ರಚಿಸಲಾಗಿದೆ. ಇದರ ಬೆನ್ನಲ್ಲೇ ಇದೀಗ ರಾಜ್ಯ ಸರ್ಜಾರಿ ಮತ್ತೊಂದು ಸಿಹಿ ಸುದ್ದಿ ನೀಡಿದೆ. ವೈದ್ಯಕೀಯ ಭತ್ಯೆ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆರೋಗ್ಯ ಸಂಜೀವಿನಿ ಯೋಜನೆ ಜಾರಿವರೆಗೂ ಮಾಸಿಕ 200 ರೂಪಾಯಿಂದ 500 ರೂ.ಗೆ ಹೆಚ್ಚಿಸಿ ಆದೇಶಿಸಿದೆ.
ಈ ಬಗ್ಗೆ ಆರ್ಥಿಕ ಇಲಾಖೆಯ ಜಂಟಿ ಕಾರ್ಯದರ್ಶಿ ಆದೇಶ ಹೊರಡಿಸಿದ್ದು, ರಾಜ್ಯ ಸರ್ಕಾರದ ನೀತಿ ನಿರ್ಣಯದಂತೆ 05-09-2022ರ ಸರ್ಕಾರಿ ಆದೇಶದಲ್ಲಿ ನಗದುರಹಿತ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು (ಕೆ.ಎ.ಎಸ್.ಎಸ್) ಅನುಷ್ಠಾನಗೊಳಿಸಲು ಆದೇಶಗಳನ್ನು ಹೊರಡಿಸಲಾಗಿರುತ್ತದೆ. ಅದರಂತೆ, ಸರ್ಕಾರದ ನೀತಿಯಲ್ಲಿ ವಿವರಿಸಿರುವಂತೆ ಸದರಿ ಯೋಜನೆಯನ್ನು ಅನುಷ್ಠಾನಗೊಳಿಸಲು ವಿಸ್ತೃತವಾದ ಮಾರ್ಗಸೂಚಿಗಳನ್ನು ಸಹ ಹೊರಡಿಸಲಾಗಿರುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಸರ್ಕಾರ ಭರವಸೆ ಕೊಟ್ಟ ಹಳೆಯ ಪಿಂಚಣಿ ಯೋಜನೆ ಏನಾಯಿತು? ಯಾವಾಗ ಜಾರಿಯಾಗುತ್ತೆ?
ದಿನಾಂಕ 22-07-2024ರ ಸರ್ಕಾರಿ ಆದೇಶದಲ್ಲಿ ವೇತನ ಶ್ರೇಣಿಗಳ ಮತ್ತು ವೇತನಕ್ಕೆ ಹೊಂದಿಕೊಂಡಿರುವ ನಿರ್ದಿಷ್ಟ ಭತ್ಯೆಗಳ ಪರಿಷ್ಕರಣೆ ಮತ್ತು ಪಿಂಚಣಿ ಪರಿಷ್ಕರಣೆ ಕುರಿತಂತೆ 7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಲು ಆದೇಶಗಳನ್ನು ಹೊರಡಿಸಲಾಗಿರುತ್ತದೆ. ಅದರಂತೆ ದಿನಾಂಕ 23-08-2024ರ ಸರ್ಕಾರಿ ಆದೇಶದಲ್ಲಿ ಪರಿಷ್ಕೃತ ವೇತನ ಶ್ರೇಣಿಗಳನ್ನು ಅನುಷ್ಠಾನಗೊಳಿಸಿ ವಿಸ್ತೃತವಾದ ಆದೇಶಗಳನ್ನು ಹೊರಡಿಸಲಾಗಿರುತ್ತದೆ.
ಗ್ರೂಪ್ -ಸಿ ಮತ್ತು ಗ್ರೂಪ್-ಡಿ ವೃಂದದ ರಾಜ್ಯ ಸರ್ಕಾರಿ ನೌಕರರುಗಳಿಗೆ ಲಭ್ಯವಿರುವ ವೈದ್ಯಕೀಯ ಭತ್ಯೆ ದರಗಳ ಪರಿಷ್ಕರಣೆ ಕುರಿತಂತೆ 7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸುಗಳನ್ನು ಸರ್ಕಾರವು ಅಂಗೀಕರಿಸಿರುತ್ತದೆ. ಅದರಂತೆ ಈ ಕೆಳಕಂಡ ಆದೇಶವನ್ನು ಹೊರಡಿಸಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ