Kannada News Karnataka Karnataka Government issues order of Rs 4 lakh life and accident insurance of gig workers
ಸ್ವಿಗ್ಗಿ, ಜೊಮಾಟೊನಂತಹ ಗಿಗ್ ಕಾರ್ಮಿಕರಿಗೆ ಸಿಹಿ ಸುದ್ದಿ; ಜೀವ, ಅಪಘಾತ ವಿಮೆ ಜಾರಿಗೊಳಿಸಿದ ಸರ್ಕಾರ
2023-24ನೇ ಸಾಲಿನ ಕರ್ನಾಟಕ ಬಜೆಟ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ್ದಂತಹ ಸ್ವಿಗ್ಗಿ, ಜೊಮಾಟೊ ಮತ್ತು ಅಮೆಜಾನ್‌ನಂತಹ ಇ-ಕಾಮರ್ಸ್ ಡೆಲಿವರಿ ಬಾಯ್ಗಳ ಜೀವ, ಅಪಘಾತ ವಿಮೆ ಯೋಜನೆಯನ್ನು ಸರ್ಕಾರ ಜಾರಿ ಮಾಡಿದೆ. ಆದರೆ ಷರತ್ತುಗಳು ಅನ್ವಯ
ಬೆಂಗಳೂರು ಸೆ.12: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಜುಲೈ ತಿಂಗಳಲ್ಲಿ 2023-24ನೇ ಸಾಲಿನ ಬಜೆಟ್ (2023-24 Budget) ಮಾಡಿದ್ದರು. ಈ ಆಯವ್ಯಯದಲ್ಲಿ ಗಿಗ್ ಕೆಲಸಗಾರರಿಗೆ ಅಂದರೇ ಸ್ವಿಗ್ಗಿ, ಜೊಮಾಟೊ (Zomato) ಮತ್ತು ಅಮೆಜಾನ್‌ನಂತಹ (Amazon) ಇ-ಕಾಮರ್ಸ್ ಡೆವಲರಿ ಬಾಯ್ಗಳಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ 4 ಲಕ್ಷ ರೂ. ಜೀವ ಮತ್ತು ಅಪಘಾತ ವಿಮೆಯನ್ನು ಘೋಷಿಸಿದ್ದರು. ಇದೀಗ ಸರ್ಕಾರ ಸೆ.08 ರಂದು ಅಧಿಕೃತ ಸುತ್ತೋಲೆ ಹೊರಡಿಸುವ ಮೂಲಕ ಯೋಜನೆಯನ್ನು ಜಾರಿ ಮಾಡಿದೆ.
2022 ರ ನೀತಿ ಆಯೋಗದ ವರದಿ ಪ್ರಕಾರ ರಾಜ್ಯದಲ್ಲಿ ಅಂದಾಜು 2.3 ಲಕ್ಷ ಗಿಗ್ ಕೆಲಸಗಾರರಿದ್ದಾರೆ. ಆದರೆ ರಾಜ್ಯ ಕಾರ್ಮಿಕ ಇಲಾಖೆಯು ಈ ಬಗ್ಗೆ ಯಾವುದೇ ನಿಖರ ಅಂಕಿ-ಸಂಖ್ಯೆ ಹೊಂದಿಲ್ಲ. ಸರಕು ಮತ್ತು ಸೇವೆಗಳನ್ನು ನಿಗದಿತ ಸಮಯದಲ್ಲಿ ತಲುಪಿಸಲು ಜೀವವನ್ನು ಪಣಕ್ಕಿಟ್ಟು ಕೆಲಸ ಮಾಡುವ ಕಾರ್ಮಿಕರ ಭದ್ರತೆಗೆ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯ ಪ್ರಯೋಜನ ಪಡೆಯಬೇಕಾದರೇ ಕೆಲವು ಷರತ್ತುಗಳನ್ನು ಸರ್ಕಾರ ವಿಧಿಸಿದೆ. ಅವು ಈ ಕೆಳಗಿನಂತಿದೆ.
18-60 ವರ್ಷ ವಯಸ್ಸಿನ ಯಾವುದೇ ವ್ಯಕ್ತಿ ಮತ್ತು ಕನಿಷ್ಠ ಒಂದು ವರ್ಷದ ಅವಧಿಯವರೆಗೆ ಯಾವುದೇ ಆನ್‌ಲೈನ್ ಆಹಾರ ವಿತರಣೆ ಅಥವಾ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಕಂಪನಿಯಲ್ಲಿ ಗಿಗ್ ಕೆಲಸಗಾರರಾಗಿ ಕೆಲಸ ಮಾಡುತ್ತಿರಬೇಕು.
ಅಪಘಾತದಲ್ಲಿ ಮೃತಪಟ್ಟರೇ 4 ಲಕ್ಷ ರೂಪಾಯಿಗಳನ್ನು ಒದಗಿಸಲಾಗುತ್ತದೆ. ಇದರಲ್ಲಿ 2 ಲಕ್ಷ ರೂಪಾಯಿ ಅಪಘಾತ ಕವರೇಜ್ ಕೂಡ ಸೇರಿದೆ. ಒಂದು ವೇಳೆ ಅಪಘಾತದಿಂದ ಗಾಯ ಮತ್ತು ಅಂಗವೈಕಲ್ಯರಾದರೆ ಅದರ ಪ್ರಮಾಣವನ್ನು ಆಧರಿಸಿ ಗಿಗ್ ಕೆಲಸಗಾರರಿಗೆ ಹಣ ನೀಡಲಾಗುತ್ತದೆ.
ಆಸ್ಪತ್ರೆಗೆ ದಾಖಲಾದರೆ, 1 ಲಕ್ಷದವರೆಗಿನ ಮೊತ್ತವನ್ನು ಮರುಪಾವತಿ ಮಾಡಲಾಗುತ್ತದೆ.
ಗಿಗ್ ಕಾರ್ಮಿಕರು ಆದಾಯ ತೆರಿಗೆ ಪಾವತಿಸುತ್ತಿದ್ದರೆ, ಭವಿಷ್ಯ ನಿಧಿ ಅಥವಾ ಇಎಸ್‌ಐ ಹೊಂದಿದ್ದರೆ ಹಂತವರು ಯೋಜನೆಗೆ ಅರ್ಹರಾಗಿರುವುದಿಲ್ಲ.
ಕೆಲಸದಲ್ಲಿರುವಾಗ ಗಿಗ್ ಕಾರ್ಮಿಕ ಮದ್ಯಪಾನ ಅಥವಾ ಡ್ರಗ್ಸ್‌ನ ಅಮಲಿನಲ್ಲಿ ಅಪಘಾತ ಅಥವಾ ಮೃತಪಟ್ಟರೆ ಯೋಜನೆಯ ಪ್ರಯೋಜನಗಳಿಗೆ ಅರ್ಹರಾಗಿರುವುದಿಲ್ಲ.
ಗಿಗ್ ಕಾರ್ಮಿಕ ಆತ್ಮಹತ್ಯೆಯಿಂದ ಸತ್ತರೆ, ಉದ್ದೇಶಪೂರ್ವಕವಾಗಿ ಯಾರನ್ನಾದರೂ ನೋಯಿಸಲು ಅಪಘಾತದ ಕೃತ್ಯವನ್ನು ಮಾಡಿದರೆ ಅಥವಾ ಮಾನಸಿಕ ಅಸ್ಥಿರತೆಯಿಂದ ಅಪಘಾತ ಸಂಭವಿಸಿದಲ್ಲಿ ಯೋಜನೆಯ ಪ್ರಯೋಜನೆ ಪಡೆಯಲು ಸಾಧ್ಯವಿಲ್ಲ.
ಅಪಘಾತ ಅಥವಾ ಸಾವಿನ ಒಂದು ವರ್ಷದೊಳಗೆ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವುದು ಹೇಗೆ
ರಾಜ್ಯ ಸರ್ಕಾರದ ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬೇಕು.
ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ ಮತ್ತು ಇ-ಲೇಬರ್ ಐಡೆಂಟಿಟಿ ಕಾರ್ಡ್ ಸೇರಿದಂತೆ ವೈಯಕ್ತಿಕ ದಾಖಲೆ ಮತ್ತು ಬ್ಯಾಂಕ್ ಖಾತೆ ವಿವರ ನೀಡಿ ನೋಂದಾಯಿಸಿಬೇಕು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ