ಚಿಕ್ಕಮಗಳೂರು: ಸಾರಿಗೆ ಬಸ್- ಕಾರು ಮುಖಾಮುಖಿ ಡಿಕ್ಕಿ, 9 ಜನರಿಗೆ ಗಂಭೀರ ಗಾಯ
ಇಂದು (ಸೆಪ್ಟೆಂಬರ್ 12) ಬೆಳ್ಳಂಬೆಳಗ್ಗೆ ಕರ್ನಾಟಕದ ಹಲವೆಡೆ ರಸ್ತೆ ಅಪಘಾತಗಳು ಸಂಭವಿಸಿವೆ. ಚಿಕ್ಕಮಗಳೂರಿನಲ್ಲಿ ಸಾರಿಗೆ ಬಸ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ 9 ಜನರಿಗೆ ಗಂಭೀರ ಗಾಯಗಳಾಗಿವೆ. ಇನ್ನೊಂದೆಡೆ ಮೈಸೂರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ. ಮತ್ತೊಂದೆಡೆ ಚಿಕ್ಕಬಳ್ಳಾಪುರದಲ್ಲಿ ರಕ್ತಚಂದನ ಸಾಗಿಸುತ್ತಿದ್ದ ಕಾರು ಉರುಳಿ ಬಿದ್ದಿದ್ದು ಮೂವರಿಗೆ ಗಾಯಗಳಾಗಿವೆ. ಈ ಮೂರು ಅಪಘಾತಗಳ ಸುದ್ದಿ ವಿವರ ಇಲ್ಲಿದೆ.
ಚಿಕ್ಕಮಗಳೂರು, (ಸೆಪ್ಟೆಂಬರ್ 12): ಜಿಲ್ಲೆಯ ತರೀಕೆರೆ ತಾಲೂಕಿನ ಬಿಲ್ಲೇನಹಳ್ಳಿ ಗ್ರಾಮದ ಬಳಿ ಕೆಎಸ್ಆರ್ಟಿಸಿ ಬಸ್ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ 9 ಜನರಿಗೆ ಗಂಭೀರ ಗಾಯಗಳಾಗಿವೆ. ಶಿವಮೊಗ್ಗದಿಂದ(Shivamogga) ತರೀಕೆರೆಗೆ ಬರುತ್ತಿದ್ದ KSRTC ಬಸ್ ಹಾಗೂ ತರೀಕೆರೆಯಿಂದ ಭದ್ರಾವತಿಗೆ ತೆರಳುತ್ತಿದ್ದ ಕಾರು ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಇಂದು(ಸೆಪ್ಟೆಂಬರ್ 12) ಬೆಳಗ್ಗೆ ಮುಖಾಮುಖಿ ಡಿಕ್ಕಿಯಾಗಿವೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಇನ್ನು ಗಾಯಗೊಂಡಿರುವ ಭದ್ರಾವತಿ ಮೂಲದ 9 ಜನರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಕಾರು
ಮೈಸೂರು: ಮತ್ತೊಂದೆಡೆ ಮೈಸೂರಿನ ಬೋಗಾದಿ ಬಡಾವಣೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ಹೊಡೆದಿದ್ದು, ಕಾರಿನಲ್ಲಿ ಸಿಲುಕಿದ್ದ ರಾಘವನ್ ಹಾಗೂ ನಿಶ್ಚಲ್ ಸಾಯಿ ಎನ್ನುವರನ್ನು ರಕ್ಷಣೆ ಮಾಡಲಾಗಿದೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, 3 ವಿದ್ಯುತ್ ಕಂಬಗಳು ಜಖಂಗೊಂಡಿವೆ. ಸದ್ಯ ಗಾಯಾಳುಗಳಿಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಈ ಬಗ್ಗೆ ಕೃಷ್ಣರಾಜ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶ್ರೀಗಂಧದ ತುಂಡು ಸಾಗಿಸುತ್ತಿದ್ದ ಕಾರು ಪಲ್ಟಿ
ಇನ್ನೊಂದೆಡೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶ್ರೀಗಂಧದ ತುಂಡು ಸಾಗಿಸುತ್ತಿದ್ದ ಕಾರು ಪಲ್ಟಿಯಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಸಾದಲಿ ಗೇಟ್ ಬಳಿ ಈ ಘಟನೆ ನಡೆದಿದ್ದು, ಕಾರಿನಲ್ಲಿದ್ದ ಮೂವರಿಗೆ ಗಂಭೀರ ಗಾಯಗಳಾಗಿವೆ. ಅಕ್ರಮವಾಗಿ ಆಂಧ್ರದಿಂದ ಬೆಂಗಳೂರಿಗೆ ರಕ್ತಚಂದನ ಸಾಗಿಸುತ್ತಿದ್ದರು ಎಂದು ತಿಳಿದುಬಂದಿದೆ. ಇನ್ನು ಗಾಯಾಳುಗಳನ್ನು ಚಿಕ್ಕಬಳ್ಳಾಫುರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ಯಾಂಟರ್ ವಾಹನ ಹರಿದು ಪೌರ ಕಾರ್ಮಿಕ ಸಾವು
ಬೆಂಗಳೂರಿನ ಟಿ.ದಾಸರಹಳ್ಳಿಯ ಕೆರೆ ರಸ್ತೆಯಲ್ಲಿ ಕ್ಯಾಂಟರ್ ವಾಹನ ಹರಿದು ಪೌರ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಪೌರ ಕಾರ್ಮಿಕ ಗಂಗಾಧರ(50) ಮೃತ ದುರ್ದೈವಿ. ಅಪಘಾತದ ಬಳಿಕ ಸ್ಥಳದಲ್ಲೇ ಕ್ಯಾಂಟರ್ ನಿಲ್ಲಿಸಿ ಚಾಲಕ ಪರಾರಿಯಾಗಿದ್ದಾನೆ.
ನಿಮ್ಮ ಜಿಲ್ಲೆಗಳ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ