ಬೆಂಗಳೂರು: ರಾಜ್ಯ ಸರ್ಕಾರ ನೂತನ ತಂತ್ರಾಂಶ ಇ-ಸಹಮತಿಯನ್ನು ಸಿದ್ಧಪಡಿಸಿದೆ. ಇ-ಸಹಮತಿಗೆ ಮಾರ್ಗಸೂಚಿ ಪ್ರಕಟವಾಗಿದ್ದು, ಇನ್ನು ಮುಂದೆ ಜನರ ದಾಖಲೆಗಳ ಮಾಹಿತಿ ಡಿಜಿಟಲೀಕರಣ ಮಾಡಲಾಗುವುದು. ದಾಖಲೆಗಳನ್ನು ಕಂಪನಿಗಳು ವೇರಿಫೈ ಮಾಡಲು ಇ-ಸಹಮತಿ ಆ್ಯಪ್ ಬಳಕೆ ಮಾಡಲಾಗುವುದು. ಜನರ ಅನುಮತಿ ಮೇರೆಗೆ ಹಲವು ಇಲಾಖೆಗಳ ದಾಖಲೆ ವರ್ಗಾವಣೆ ಮಾಡಲಾಗುವುದು.
ಶಿಕ್ಷಣ ಸಂಸ್ಥೆ, ಪೊಲೀಸ್, ಸಾರಿಗೆ ಇಲಾಖೆಗಳ ದಾಖಲೆಗಳು ಇ- ಸಹಮತಿಯಲ್ಲಿ ಲಭ್ಯವಾಗಲಿವೆ. ಕೆಲವೇ ದಿನಗಳಲ್ಲಿ ಸಿಎಂ ಬಸವರಾಜ ಬೊಮ್ಮಾಯಿಯವರಿಂದ ಇ-ಸಹಮತಿ ಆ್ಯಪ್ ಉದ್ಘಾಟನೆಯಾಗಲಿದೆ ಎಂದು ಬೆಂಗಳೂರಿನ ಬಹುಮಹಡಿ ಕಟ್ಟಡದಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಪರ ಕಾರ್ಯದರ್ಶಿ ರಾಜೀವ್ ಚಾವ್ಲಾ ಹೇಳಿಕೆ ನೀಡಿದ್ದಾರೆ.
ನಮ್ಮ ಇಲಾಖೆ ಇ-ಸಹಮತಿಗೆ ಮಾರ್ಗಸೂಚಿ ಪ್ರಕಟಿಸಿದೆ. ಇನ್ನು ಮುಂದೆ ಜನರು ತಮ್ಮ ದಾಖಲೆಗಳನ್ನು ಸುಲಭವಾಗಿ ವರ್ಗಾಯಿಸಬಹುದು. ಈ ದಾಖಲೆಯನ್ನು ಸಂಸ್ಥೆ ಅಥವಾ ಕಂಪನಿಗಳು ಸಂಬಂಧಪಟ್ಟ ಇಲಾಖೆಯಿಂದ ಧೃಡೀಕರಣಗೊಳಿಸಬಹುದು. ಹಲವಾರು ಇಲಾಖೆಗಳು, ಸಂಸ್ಥೆಗಳು, ಕಂಪನಿಗಳು ಇ-ಸಹಮತಿಯಡಿ ಬರಲಿವೆ. ಇ-ಸಹಮತಿ ವೇದಿಕೆಗೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇತರ ರಾಜ್ಯಗಳಿಗೂ ಈ ವೇದಿಕೆಯನ್ನು ವಿಸ್ತರಿಸುವುದಾಗಿ ಹೇಳಿದ್ದಾರೆ. ತೆಲಂಗಾಣ ಸರ್ಕಾರ ಈಗಾಗಲೇ ನಮ್ಮ ಇಲಾಖೆಯನ್ನು ಸಂಪರ್ಕಿಸಿದ್ದು ಅಳವಡಿಸಿಕೊಳ್ಳಲು ಆಸಕ್ತಿ ತೋರಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಸರ್ಕಾರದ ತಂತ್ರಾಂಶದಲ್ಲಿ ಎಡವಟ್ಟು; ಲಸಿಕೆ ಪಡೆಯದಿದ್ದರೂ ಸಿಗುತ್ತಿದೆ ಲಸಿಕೆ ಪಡೆದ ಸರ್ಟಿಫಿಕೆಟ್