
ಬೆಂಗಳೂರು, ಮೇ 31: ಕರ್ನಾಟಕ ರೇಷ್ಮೆ ಮಾರುಕಟ್ಟೆ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಐಪಿಎಸ್ ಮಹಿಳಾ ಅಧಿಕಾರಿ ಡಿ.ರೂಪಾ ಮೌದ್ಗಿಲ್ (D. Roopa Moudgil) ಅವರಿಗೆ ರಾಜ್ಯ ಸರ್ಕಾರ (Karnataka Government) ಮುಂಬಡ್ತಿ ನೀಡಿ ಆದೇಶ ಹೊರಡಿಸಿದೆ. 2000ನೇ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿರುವ ರೂಪಾ ಅವರನ್ನು ಐಜಿಪಿಯಿಂದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕಿಯಾಗಿ (ಎಡಿಜಿಪಿ) ಸರ್ಕಾರವು ಮುಂಬಡ್ತಿ ನೀಡಿ, ಈಗ ಇರುವ ಹುದ್ದೆಯಲ್ಲೇ ಮುಂದುವರೆಸಿದೆ.
ಮುಂಬಡ್ತಿ ಸಂಬಂಧ ಡಿ. ರೂಪಾ ಅವರು ಏಪ್ರಿಲ್ 25 ರಂದು ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯವಾಗಿ ತಮಗೆ ಸಿಗಬೇಕಾದ ಬಡ್ತಿ ನೀಡುವ ಕುರಿತು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠವು, “ಮುಂಬಡ್ತಿ ಸಂಬಂಧ ಹೊಸದಾಗಿ ಅರ್ಜಿ ಸಲ್ಲಿಸುವಂತೆ ರೂಪಾ ಅವರಿಗೆ ಸೂಚಿಸಿತ್ತು. ಇದೇ ವೇಳೆ, ಮನವಿ ಸಂಬಂಧ ಸರ್ಕಾರವು ಎಂಟು ವಾರಗಳಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕು” ಎಂದು ಆದೇಶಿಸಿ ಅರ್ಜಿಯನ್ನು ಇತ್ಯರ್ಥಪಡಿಸಿತ್ತು.
ಇದನ್ನೂ ಓದಿ: IPS ಅಧಿಕಾರಿಗಳ ಕಿತ್ತಾಟ: ವರ್ತಿಕಾ ವರ್ಗಾವಣೆ ಬೆನ್ನಲ್ಲೇ ರೂಪಾ ಮೌದ್ಗಿಲ್ ಎತ್ತಂಗಡಿ
ಹೈಕೋರ್ಟ್‌ನ ಗಡುವಿಗೆ ಮಣಿದ ಸರ್ಕಾರ ಡಿ. ರೂಪಾ ಅವರಿಗೆ ಮುಂಬಡ್ತಿ ನೀಡಿ ಆದೇಶ ಹೊರಡಿಸಿದೆ.ಆದರೆ, ಪೊಲೀಸ್ ಇಲಾಖೆಗೆ ಸಂಬಂಧಿಸದ ರೇಷ್ಮೇ ಇಲಾಖೆಯ ಹುದ್ದೆಯಲ್ಲಿಯೇ ಹಿರಿಯ ಐಪಿಎಸ್ ಅಧಿಕಾರಿಯನ್ನು ಮುಂದುವರೆಸಿದ್ದನ್ನು ನೋಡಿದರೇ ಸರ್ಕಾರದ ನಿರ್ಧಾರದ ಬಗ್ಗೆ ಅನೇಕ ಪ್ರಶ್ನೆಗಳು ಉದ್ಭವಿಸುತ್ತವೆ.
Published On - 8:29 pm, Sat, 31 May 25