
ಬೆಂಗಳೂರು, (ಜುಲೈ 07): ಕರ್ನಾಟಕದಲ್ಲಿ (Karnataka) ಇನ್ಮುಂದೆ ಶಾಶ್ವತ ನಿವಾಸ ಪ್ರಮಾಣ ಪತ್ರ (permanent resident certificate) ಸಿಗಲಿದೆ. ಹೌದು…ಶಾಶ್ವತ ನಿವಾಸ ಪ್ರಮಾಣ ಪತ್ರ ನೀಡಲು ರಾಜ್ಯ ಸರ್ಕಾರವೇ ಅಧಿಕೃತ ಆದೇಶಿಸಿದ್ದು, ಮಾರ್ಗಸೂಚಿಗಳನ್ನೂ ಸಹ ಬಿಡುಗಡೆ ಮಾಡಿದೆ. ಸತತ ಕನಿಷ್ಠ 10 ವರ್ಷ ಕರ್ನಾಟಕದಲ್ಲಿ ವಾಸವಿದ್ದವರಿಗೆ ಶಾಶ್ವತ ನಿವಾಸ ಪ್ರಮಾಣ ಪತ್ರ ನೀಡಲು ಮುಂದಾಗಿದೆ. 7 ದಿನಗಳೊಳಗೆ ಶಾಶ್ವತ ಪ್ರಮಾಣಪತ್ರ ನೀಡುವ ಪ್ರಕ್ರಿಯೆ ಆರಂಭಿಸಲು ಸರ್ಕಾರದ ಸೂಚಿಸಿದ್ದು, ಆಯಾ ಜಿಲ್ಲಾಧಿಕಾರಿಗಳಿಗೆ ಮೇಲ್ವಿಚಾರಣೆ ವಹಿಸಿದೆ. ಇನ್ನು, ಇದು ಕೇವಲ ಆಡಳಿತಾತ್ಮಕ ಉದ್ದೇಶದ ಪುರಾವೆಯಾಗಿದ್ದು, ಉದ್ಯೋಗ ಅಥವಾ ಭೂ ಮಂಜೂರಾತಿಯ ಮೀಸಲಾತಿಗೆ ಅನ್ವಯಿಸುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿದೆ.
ಎಲ್ಲಾ ಜಿಲ್ಲಾಧಿಕಾರಿಗಳು ಅಧಿಕೃತಗೊಳಿಸಲಾದ ತಹಶೀಲ್ದಾರ್ ಅಥವಾ ಉಪ ತಹಸೀಲ್ದಾರ್ ಅಥವಾ ಇತರೆ ಯಾವುದೇ ಅಧಿಕಾರಿ ಪ್ರಮಾಣಪತ್ರ ನೀಡುವ ಪ್ರಾಧಿಕಾರವಾಗಿರುತ್ತಾರೆ. ಸಹಾಯಕ ಆಯುಕ್ತರು (ಎಸಿ)ಮೇಲ್ಮನವಿ ಪ್ರಾಧಿಕಾರವಾಗಿದ್ದರೆ, ಜಿಲ್ಲಾಧಿಕಾರಿಗಳು ಪುನರ್ ಪರಿಶೀಲನಾ ಪ್ರಾಧಿಕಾರವಾಗಿರುತ್ತಾರೆ. ಪ್ರಮಾಣ ಪತ್ರ ನೀಡುವ ಪ್ರಾಧಿಕಾರವು ಅಗತ್ಯ ವಿಚಾರಣೆ, ಪರಿಶೀಲನೆ ನಂತರ ಅರ್ಜಿದಾರರು ರಾಜ್ಯದ ನಿಜವಾದ ಮತ್ತು ಶಾಶ್ವತ ನಿವಾಸಿಯಾಗಿದಾರೆಂಬುದರ ಬಗ್ಗೆ ಖಚಿತಪಡಿಸಿಕೊಂಡು ಶಾಶ್ವತ ನಿವಾಸಿ ಪ್ರಮಾಣಪತ್ರ ನೀಡಬಹುದು ಎಂದು ಕಂದಾಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಂದರ್‌ಕುಮಾರ್ ಕಟಾರಿಯಾ ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಅರ್ಜಿದಾರರು ರಾಜ್ಯದಲ್ಲಿ ಜನಿಸಿರಬೇಕು ಅಥವಾ ಕನಿಷ್ಠ 10 ವರ್ಷ ವಾಸವಿರಬೇಕು ಹಾಗೂ ಇಲ್ಲಿಯೇ ಪಿಯುಸಿ ತನಕ ಓದಿರಬೇಕು ಸೇರಿದಂತೆ ವಿವಿಧ ಅಂಶಗಳನ್ನು ಪರಿಗಣಿಸಿ ಎಲ್ಲಾ ಜಿಲ್ಲಾಧಿಕಾರಿಗಳು ಅಧಿಕೃತಗೊಳಿಸಲಾದ ತಹಶೀಲ್ದಾರ್ ಅಥವಾ ಉಪ ತಹಶೀಲ್ದಾರ್ ಈ ಪ್ರಮಾಣಪತ್ರ ನೀಡಲಿದ್ದಾರೆ. ಕರ್ನಾಟಕವೇ ಅರ್ಜಿದಾರರ ಪ್ರಮುಖ ಹಾಗೂ ಶಾಶ್ವತ ವಾಸಸ್ಥಳವಾಗಿದೆ ಎಂಬುದನ್ನು ದೃಢೀಕರಿಸುವ ಯಾವುದೇ ವಿಶ್ವಾಸಾರ್ಹ ದಾಖಲಾತಿ, ವಿದ್ಯುನ್ಮಾನ ಅಥವಾ ಮೌಖಿಕ ಸಾಕ್ಷ್ಯಗಳನ್ನು ಇತರೆ ಪುರಾವೆಗಳೆಂದು ಪರಿಗಣಿಸುವಂತೆ ಆದೇಶ ಮಾಡಲಾಗಿದೆ. ಕಂದಾಯ ಇಲಾಖೆ ತೀರ್ಮಾನವೇ ಅಂತಿಮ ಎಂಬುದನ್ನ ಸಹ ಸ್ಪಷ್ಟಪಡಿಸಿದೆ.
ಪ್ರಮಾಣ ಪತ್ರ ನೀಡುವ ಪ್ರಾಧಿಕಾರವು ಅಗತ್ಯ ವಿಚಾರಣೆ ಹಾಗೂ ಪರಿಶೀಲನೆಯ ನಂತರ ಅರ್ಜಿದಾರರು ಕರ್ನಾಟಕ ರಾಜ್ಯದ ನಿಜವಾದ ಮತ್ತು ಶಾಶ್ವತ ನಿವಾಸಿಯಾಗಿದ್ದಾರೆ ಎಂಬ ಬಗ್ಗೆ ಖಚಿತಪಡಿಸಿಕೊಂಡು ಶಾಶ್ವತ ನಿವಾಸ ಪ್ರಮಾಣ ಪತ್ರವನ್ನು ನೀಡಬಹುದು. ವಾಸಸ್ಥಳ ಅರ್ಜಿದಾರರು ಅಥವಾ ಅವರ ತಂದೆ,ತಾಯಿ ಅಥವಾ ಕಾನೂನುಬದ್ಧ ಪಾಲಕರು ಕರ್ನಾಟಕ ರಾಜ್ಯದಲ್ಲಿ ಸತತವಾಗಿ ಕನಿಷ್ಠ 10 ವರ್ಷಗಳ ಕಾಲ ಕರ್ನಾಟಕದಲ್ಲಿ ವಾಸವಿರಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಇನ್ನು ಶಾಸ್ವತ ನಿವಾಸಿ ಪ್ರಮಾಣಪತ್ರ ಪಡೆಯಲು ಯಾವೆಲ್ಲಾ ದಾಖಲೆಗಳು ಬೇಕು ಎನ್ನುವುದನ್ನು ನೋಡಿದರೆ, ಮತದಾರರ ಪಟ್ಟಿ, ಆಧಾರ್, ಪಡಿತರ ಚೀಟಿ, ಕಂದಾಯ ದಾಖಲೆಗಳು ಅಥವಾ ಇತರೆ ಸರ್ಕಾರಿ ದಾಖಲೆಗಳಲ್ಲಿ ಅರ್ಜಿದಾರರು ಅಥವಾ ಅವರ ಪೋಷಕರ ಹೆಸರು ಸಾಮಾನ್ಯ ನಿವಾಸಿಯಾಗಿ ದಾಖಲಾಗಿರಬೇಕು. ಅರ್ಜಿದಾರರು ಕರ್ನಾಟಕದಲ್ಲಿ ವಾಸಿಸುವ ವ್ಯಕ್ತಿಯನ್ನು ವಿವಾಹವಾಗಿದ್ದು, ರಾಜ್ಯದಲ್ಲಿ ವಾಸವಿದ್ದರೆ ಸಂಬಂಧಪಟ್ಟ ದಾಖಲೆ ನೀಡಬೇಕು.
ಇನ್ನು, ಇದು ಕೇವಲ ಆಡಳಿತಾತ್ಮಕ ಉದ್ದೇಶದ ಪುರಾವೆಯಾಗಿದ್ದು, ಉದ್ಯೋಗ ಅಥವಾ ಭೂ ಮಂಜೂರಾತಿಯ ಮೀಸಲಾತಿಗೆ ಅನ್ವಯಿಸುವುದಿಲ್ಲ ಎಂಬುದನ್ನು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಪ್ರತಿ ಗ್ರಾಪಂ ಹಾಗೂ ಪ್ರತಿಯೊಂದು ನಗರ ಸ್ಥಳೀಯ ಸಂಸ್ಥೆಯ ವಾರ್ಡ್ ಕಚೇರಿಯಲ್ಲಿ ಸಹಾಯ ಮತ್ತು ಸೌಲಭ್ಯ ಕೌಂಟರ್ ಸ್ಥಾಪಿಸಬೇಕು. ಅಟಲ್ ಜನಸ್ನೇಹಿ ಕೇಂದ್ರ, ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್, ಸಿಎಸ್‌ಸಿಗಳು ಮತ್ತು ಇತರೆ ಅಧಿಕೃತ ಕೇಂದ್ರಗಳು ಅರ್ಜಿಗಳ ಪ್ರಕ್ರಿಯೆ ನಡೆಸಬೇಕು. ಆದೇಶ ಆದ ಒಂದು ವಾರದಲ್ಲಿ ಎಲ್ಲಾ ಕೌಂಟರ್‌ಗಳ ವ್ಯವಸ್ಥೆ ಆಗಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಅರ್ಹ ಅರ್ಜಿದಾರರು ಸೇವಾ ಸಿಂಧು ಪೋರ್ಟಲ್, ಅಟಲ್ ಜನಸ್ನೇಹಿ ಕೆಂದ್ರ (ಎಜೆಎಸ್‌ಕೆ) ಪೋರ್ಟಲ್ ಅಥವಾ ಸರ್ಕಾರ ಕಾಲಕಾಲಕ್ಕೆ ಅಧಿಸೂಚಿಸುವ ಇತರೆ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು.
Published On - 10:45 pm, Tue, 7 July 26