
ಬೆಂಗಳೂರು, (ಜನವರಿ 26): ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನ (Karnataka Assembly Session) ಉದ್ದೇಶಿಸಿ ಭಾಷಣ ಮಾಡಿದ ಸಂದರ್ಭದಲ್ಲಿ ನಡೆದಿದ್ದ ಘಟನೆಗಳಿಗೆ ಸಂಬಂಧಿಸಿದಂತೆ ವಾಸ್ತವ ಅಂಶಗಳ ಪ್ರತ್ಯೇಕ ವರದಿಯೊಂದನ್ನು ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ (governor thawar chand gehlot) ಅವರು ರಾಷ್ಟ್ರತಪಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಜಂಟಿ ಅಧಿವೇಶನದಲ್ಲಿ ಭಾಷಣ ಮುಗಿಸಿದ ನಂತರ ಆಡಳಿತ ಪಕ್ಷ ಕಾಂಗ್ರೆಸ್ ಸದಸ್ಯರು ತಮ್ಮ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ತೋರಿದ ದುರ್ವರ್ತನೆ, ವಿಧಾನಸಭೆಯಿಂದ ತಮಗೆ ಘೇರಾವ್ ಹಾಕುವ ಪ್ರಯತ್ನ, ಇದರಿಂದ ತಮ್ಮ ಮೇಲೆ ಉಂಟಾದ ಒತ್ತಡಗಳ ಬಗ್ಗೆ ತಮ್ಮ ವರದಿಯಲ್ಲಿ ವಿವರವಾಗಿ ಉಲ್ಲೇಖಿಸಿದ್ದಾರೆ ಎಂದು ಲೋಕಭವನ ಮೂಲಗಳು ತಿಳಿಸಿವೆ.
ಸಾಮಾನ್ಯವಾಗಿ ಪ್ರತಿ ವಾರ, ತಿಂಗಳಿಗೊಮ್ಮೆ ಲೋಕಭವನದಿಂದ ರಾಷ್ಟ್ರಪತಿಗೆ ವರದಿ ಹೋಗುತ್ತದೆ. ರಾಜಕೀಯ, ಸಾಮಾಜಿಕ, ಅಭಿವೃದ್ಧಿ ಚಟುವಟಿಕೆಗಳ ಸೇರಿದಂತೆ ರಾಜ್ಯದ ಆಗುಹೋಗುಗಳ ಪ್ರಸಕ್ತ ವಿದ್ಯಮಾನ ಬೆಳವಣಿಗೆ ಬಗ್ಗೆ ವಾರ, ತಿಂಗಳಿಗೊಮ್ಮೆ ರಾಜ್ಯಪಾಲರು ರಾಷ್ಟ್ರಪತಿಗೆ ವರದಿ ನೀಡುತ್ತಾರೆ. ಆದ್ರೆ, ಈ ವರದಿ ಅಲ್ಲದೇ ಪ್ರತ್ಯೇಕವಾಗಿ ಅಧಿವೇಶನವನ್ನು ಉದ್ದೇಶಿಸಿ ತಾವು ಭಾಷಣ ಮಾಡುವ ಮೊದಲು ಹಾಗೂ ನಂತರ ನಡೆದ ಎಲ್ಲಾ ಬೆಳವಣಿಗೆ, ಘಟನೆಗಳ ಕುರಿತು ಸವಿವರವಾದ ವರದಿಯನ್ನು ರಾಷ್ಟ್ರಪತಿಯವರಿಗೆ ರವಾನಿಸಿದ್ದು, ಸಂಚಲನಕ್ಕೆ ಕಾರಣವಾಗಿದೆ.
ರಾಜ್ಯಪಾಲರು ತಮ್ಮ ವರದಿಯಲ್ಲಿ ಸರ್ಕಾರ ಸಿದ್ಧಪಡಿಸಿ ಕಳುಹಿಸಿದ ಭಾಷಣ, ಅದರಲ್ಲಿದ್ದ ಕೇಂದ್ರ ಸರ್ಕಾರದ ವಿರುದ್ಧದ ಟೀಕೆಗಳ ಬದಲಾವಣೆಗೆ ತಾವು ನೀಡಿದ ಸಲಹೆ, ಭಾಷಣ ಬದಲಾವಣೆಗೆ ಒಪ್ಪದ ಸರ್ಕಾರದ ನಡೆ, ಈ ಹಿನ್ನೆಲೆಯಲ್ಲಿ ಭಾಷಣ ಓದಲು ತಾವು ಸಾಂವಿಧಾನಿಕವಾಗಿ ಕೈಗೊಂಡ ನಿರ್ಧಾರ, ಜಂಟಿ ಅಧೀವೇಶನದಲ್ಲಿ ತಾವು ಮಾಡಿದ ಭಾಷಣ, ಭಾಷಣ ಓದಿದ ಬಳಿಕ ಆಡಳಿತ ಪಕ್ಷದ ಸದಸ್ಯರು ನಡೆದುಕೊಂಡ ರೀತಿ, ನಂತರ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರು ನೀಡಿರುವ ಹೇಳಿಕೆಗಳು. ಹೀಗೆ ಎಲ್ಲಾ ಎಲ್ಲಾ ಮಾಹಿತಿಯನ್ನೂ ಪಟ್ಟಿ ಮಾಡಿ ವರದಿಯಲ್ಲಿ ಪ್ರಸ್ತಾಪಿಸಿದ್ದಾರೆ.
ಜಂಟಿ ಅಧಿವೇಶನ ಹಿಂದಿನ ದಿನ ಅಂದರೆ ಜನವರಿ 21 ಮತ್ತು ಮರುದಿನ (ಜನವರಿ 22) ನಡೆದ ವಿದ್ಯಮಾನಗಳನ್ನು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ರಾಜ್ಯ ಸರ್ಕಾರ ಕಳುಹಿಸಿದ್ದ ಭಾಷಣವನ್ನು ಯಥಾವತ್ತಾಗಿ ಓದಲು ರಾಜ್ಯಪಾಲರು ನಿರಾಕರಿಸಿದ್ದರು. ವಿಬಿ ಜಿ ರಾಮ್ ಜಿ ಕಾಯ್ದೆಯೂ ಸೇರಿದಂತೆ ಕೇಂದ್ರ ಸರ್ಕಾರವನ್ನು ಟೀಕಿಸಲಾಗಿತ್ತು. ಈ ಭಾಗವನ್ನು ಪರಿಷ್ಕರಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಲಾಗಿತ್ತು. ಬಳಿಕ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಹಾಗೂ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್ಕೆ ಪಾಟೀಲ್, ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಜತೆ ನಡೆಸಿದ ಮಾತುಕತೆ ಬಗ್ಗೆಯೂ ಥಾವರ್ ಚೆಂದ್ ಗೆಹ್ಲೋಟ್ ವರದಿಯಲ್ಲಿ ತಿಳಿಸಿದ್ದಾರೆ. ಜಂಟಿ ಅಧಿವೇಶವನ್ನು ಉದ್ದೇಶಿಸಿ ಭಾಷಣ ಮಾಡಬೇಕಾದ ಸಂವಿಧಾನಬದ್ಧ ಕರ್ತವ್ಯ ನಿಭಾಯಿಸಿದ್ದೇನೆ ಎಂದೂ ವರದಿಯಲ್ಲಿ ಪ್ರಸ್ತಾಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭಾಷಣ ಮುಗಿಸಿ ವಿಧಾನಸಭೆಯಿಂದ ಹೊರ ಹೋಗುವ ಸಂದರ್ಭದಲ್ಲಿ ರಾಜ್ಯಪಾಲರ ವಿರುದ್ಧ ಘೋಷಣೆ ಕೂಗಿ ಒತ್ತಡ ಹೇಲು ಪ್ರಯತ್ನಸಿದ ಕಾಂಗ್ರೆಸ್ ಸದಸ್ಯರ ವರ್ತನೆ ಬಗ್ಗೆಯೂ ವರದಿಯಲ್ಲಿ ಉಲ್ಲೇಖವಿದೆ. ಘಟನೆ ನಂತರ ಸದನದಲ್ಲಿ ಆಡಳಿತ ಪಕ್ಷದ ಸದಸ್ಯರು ಹಾಗೂ ವಿಪಕ್ಷ ಸದಸ್ಯರ ಜಟಾಪಟಿ, ಅಭಿಪ್ರಾತಗಳನ್ನೂ ಸಹ ವರದಿಯಲ್ಲಿ ಪ್ರಸ್ತಾಪಿಸಿದ್ದಾರೆ.
ಒಟ್ಟಿನಲ್ಲಿ ಏನೇನು ನಡೆಯಿತು. ತಾವು ಏನೆಲ್ಲಾ ಮುಜುಗರ ಅನುಭವಿಸಿದರು ಎನ್ನುವ ಎಲ್ಲಾ ಅಂಶಗಳನ್ನು ಸಹ ಸವಿವರಾಗಿ ವರದಿ ಮೂಲಕ ರಾಷ್ಟ್ರಪತಿಗೆ ಮುಟ್ಟಿಸಿದ್ದು, ಈ ವರದಿ ಆಧಾರದ ಮೇಲೆ ರಾಷ್ಟ್ರಪತಿ ಏನಾದರೂ ಕ್ರಮ ಕೈಗೊಳ್ಳುತ್ತಾರಾ ಎನ್ನುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
Published On - 5:37 pm, Mon, 26 January 26