ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಒತ್ತಡ ಹಾಕಿದ್ದ ಕಾಂಗ್ರೆಸ್ ನಾಯಕರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಿರುಗೇಟು

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ ನಂತರ ರಾಜ್ಯಪಾಲರು ಹಾಗೂ ಕಾಂಗ್ರೆಸ್ ಸರ್ಕಾರದ ಮಧ್ಯೆ ಶುರುವಾದ ಜಟಾಪಟಿ ಇದೀಗ ಮತ್ತೊಂದು ಆಯಾಮ ಪಡೆದುಕೊಳ್ಳುವ ಸುಳಿವು ದೊರೆತಿದೆ. ಇದಕ್ಕೆ ಕಾರಣ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವುದು. ಆ ಪತ್ರದಲ್ಲೇನಿದೆ? ರಾಜ್ಯಪಾಲರ ಈ ನಡೆಯ ಹಿಂದಿನ ಮರ್ಮವೇನು? ಇಲ್ಲಿದೆ ವಿವರ.

ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಒತ್ತಡ ಹಾಕಿದ್ದ ಕಾಂಗ್ರೆಸ್ ನಾಯಕರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಿರುಗೇಟು
ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (ಸಂಗ್ರಹ ಚಿತ್ರ)
Follow us
| Updated By: ಗಣಪತಿ ಶರ್ಮ

Updated on:Sep 17, 2024 | 9:27 AM

ಬೆಂಗಳೂರು, ಸೆಪ್ಟೆಂಬರ್ 17: ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ರಾಜ್ಯಪಾಲರು ಅನುಮತಿ ನೀಡಿದ್ದು ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿತ್ತು. ಸಿಎಂ ವಿರುದ್ಧ ಪ್ರಾಸಿಕ್ಯೂಷನ್​ಗೆ ತರಾತುರಿಯಲ್ಲಿ ಅನುಮತಿ ನೀಡಿದಂತೆಯೇ ಹಿಂದಿನ ಇತರ ಬಾಕಿ ಪ್ರಕರಣಗಳ ಬಗ್ಗೆಯೂ ಗಮನಹರಿಸಿ ಎಂದು ಕಾಂಗ್ರೆಸ್ ನಾಯಕರು ರಾಜಭವನಕ್ಕೆ ತೆರಳಿ ಮನವಿ ಸಲ್ಲಿಸಿದ್ದರು. ಬಿಜೆಪಿ ಅವಧಿಯ ಹಗರಣಗಳ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡುವಂತೆ ಆಗ್ರಹಿಸಿದ್ದರು. ಆದರೆ, ಇದು ಈಗ ಕಾಂಗ್ರೆಸ್​​ಗೇ ಮುಳುವಾಯಿತೇ? ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರವೊಂದು ಈ ಪ್ರಶ್ನೆ ಹುಟ್ಟುಹಾಕಿದೆ.

ಮುಖ್ಯ ಕಾರ್ಯದರ್ಶಿಗೆ ರಾಜ್ಯಪಾಲರು ಬರೆದ ಪತ್ರದಲ್ಲೇನಿದೆ?

ಸರ್ಕಾರಿ ಅಧಿಕಾರಿ / ನೌಕರರ ವಿರುದ್ಧ ಅಭಿಯೋಜನಾ‌‌ ಮಂಜೂರಾತಿಗಾಗಿ ಲೋಕಾಯುಕ್ತ ಸಂಸ್ಥೆಯಿಂದ ಸ್ವೀಕೃತವಾಗಿರುವ ಪ್ರಕರಣಗಳ ಮಾಹಿತಿ ನೀಡುವಂತೆ ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ರಾಜ್ಯಪಾಲರು ಉಲ್ಲೇಖಿಸಿದ್ದಾರೆ.

20-05-2023 ರಿಂದ ಇಂದಿನವರೆಗೆ ಲೋಕಾಯುಕ್ತ ಸಂಸ್ಥೆಯಿಂದ ಸ್ವೀಕೃತವಾಗಿರುವ ಸ್ವೀಕೃತಗೊಂಡಿರುವ ಪ್ರಕರಣಗಳ ಮಾಹಿತಿ ನೀಡುವಂತೆ ರಾಜ್ಯಪಾಲರು ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೇ ಎಲ್ಲಾ ಇಲಾಖೆಗಳ ಅಪರ ಮುಖ್ಯ, ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಮುಖ್ಯ ಕಾರ್ಯದರ್ಶಿಗಳು, ತುರ್ತು ಎಂದು ಪರಿಗಣಿಸಿ ಒಂದು ವಾರದೊಳಗೆ ಮಾಹಿತಿ ನೀಡುವಂತೆ ಸೂಚನೆ ನೀಡಿದ್ದಾರೆ.

ರಾಜ್ಯಪಾಲರು ಉದ್ದೇಶಪೂರ್ವಕವಾಗಿ ಕಾಂಗ್ರೆಸ್ ಸರ್ಕಾರ ರಚನೆ ಆದ ನಂತರದ ಪ್ರಕರಣಗಳ ಕುರಿತು ಮಾಹಿತಿ ಕೇಳಿದರೇ? ಆ ಮೂಲಕ, ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಒತ್ತಡ ಹಾಕಿದ್ದ ‘ಕೈ’ ನಾಯಕರಿಗೆ ಪರೋಕ್ಷವಾಗಿ ತಿರುಗೇಟು ನೀಡಿದರೇ ಎಂಬ ಪ್ರಶ್ನೆ ಉದ್ಭವಿಸಿದೆ.

ಮುಡಾ ರಾಜಕೀಯ ಗುದ್ದಾಟಕ್ಕೆ ಮತ್ತೊಂದು ಸ್ವರೂಪ!

ಇಷ್ಟೇ ಅಲ್ಲದೆ, ರಾಜ್ಯಪಾಲರು ವರ್ಸಸ್ ಸರ್ಕಾರದ ಜಟಾಪಟಿ ಮುಂದುವರಿಯುವ ಸಾಧ್ಯತೆಯೂ ಹೆಚ್ಚಾಗಿದ್ದು, ಮುಡಾ ಪ್ರಕರಣದ ಗುದ್ದಾಟ ಮತ್ತೊಂದು ಸ್ವರೂಪ ಪಡೆಯುವ ಎಲ್ಲ ಲಕ್ಷಣಗಳಿವೆ.

ಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ ಬೆನ್ನಲ್ಲೇ ರಾಜ್ಯಪಾಲರ ಮೇಲೆ ಕಾಂಗ್ರೆಸ್ ನಾಯಕರ ಒತ್ತಡ ಹೆಚ್ಚಾಗಿತ್ತು. ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದರು. ಜೆಡಿಎಸ್, ಬಿಜೆಪಿ ನಾಯಕರ ಬಾಕಿಯಿರುವ ಪ್ರಕರಣಗಳ ಇತ್ಯರ್ಥಕ್ಕೆ ಒತ್ತಾಯಿಸಿದ್ದರು. ಆ ಮೂಲಕ ರಾಜ್ಯಪಾಲರನ್ನು ಇಕ್ಕಟ್ಟಿಗೆ ಸಿಲುಕಿಸುವ ರಾಜಕೀಯ ದಾಳವನ್ನು ಕಾಂಗ್ರೆಸ್ ನಾಯಕರು ಹೂಡಿದ್ದರು.

ಇದನ್ನೂ ಓದಿ: ದಲಿತ ವ್ಯಕ್ತಿಗೆ ಹಂಚಿಕೆಯಾಗಿದ್ದ ಸೈಟ್​​ನಲ್ಲಿ​ ಮನೆ ನಿರ್ಮಾಣ: ಸಿಎಂ ವಿರುದ್ಧ ಕುಮಾರಸ್ವಾಮಿ ಮತ್ತೊಂದು ಗಂಭೀರ ಆರೋಪ‌

ಆದರೆ, ಇದೀಗ ‘ಕೈ’ ಕಲಿಗಳ ರಾಜಕೀಯ ಚದುರಂಗದಾಟಕ್ಕೆ ರಾಜ್ಯಪಾಲರು‌ ತಿರುಗೇಟು ಆರಂಭಿಸಿದರೇ ಎಂಬ ಅನುಮಾನ ಉಂಟಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:00 am, Tue, 17 September 24