AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಧಾನಸಭೆಯಲ್ಲಿ ಇಂದು ಮತಾಂತರ ನಿಷೇಧ ವಿಧೇಯಕ ಮಂಡನೆ-ಚರ್ಚೆ; ಸದನದಲ್ಲಿ ಕದನ ಕುತೂಹಲ

ಕಳೆದೊಂದು ತಿಂಗಳಿನಿಂದ ರಾಜ್ಯದಲ್ಲಿ ಭಾರಿ ಸದ್ದು ಮಾಡಿದ, ತೀವ್ರ ವಿವಾದ ಎಬ್ಬಿಸಿದ ಮತಾಂತರ ನಿಷೇಧ ವಿಧೇಯಕ ವಿಧಾನಸಭೆಯಲ್ಲಿ ಮಂಡನೆಯಾಗಿದೆ. ಆದ್ರೆ ವಿಧೇಯಕವನ್ನ ಮಂಡಿಸಿದ ರೀತಿಗೆ, ಪ್ರತಿಪಕ್ಷಗಳು ತೀವ್ರ ಆಕ್ಷೇಪ ಹೊರಹಾಕಿವೆ.

ವಿಧಾನಸಭೆಯಲ್ಲಿ ಇಂದು ಮತಾಂತರ ನಿಷೇಧ ವಿಧೇಯಕ ಮಂಡನೆ-ಚರ್ಚೆ; ಸದನದಲ್ಲಿ ಕದನ ಕುತೂಹಲ
ಕರ್ನಾಟಕ ಮತಾಂತರ ನಿಷೇಧ ವಿಧೇಯಕ 2021 (ಪ್ರಾತಿನಿಧಿಕ ಚಿತ್ರ)
TV9 Web
| Updated By: ಆಯೇಷಾ ಬಾನು|

Updated on: Dec 22, 2021 | 9:46 AM

Share

ಕಳೆದೊಂದು ತಿಂಗಳಿನಿಂದ ಆಡಳಿತ ಪಕ್ಷ ಮತ್ತು ವಿಪಕ್ಷದ ನಡುವಿನ ಮತಾಂತರ ಮಹಾಯುದ್ಧ ಮುಗಿಯುವ ಹಂತಕ್ಕೆ ಬಂದಿದೆ. ಸರ್ಕಾರ ತಾನು ಅಂದುಕೊಂಡಂತೆ ನಿನ್ನೆ ವಿಧಾನಸಭೆಯಲ್ಲಿ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ರಕ್ಷಣಾ ವಿಧೇಯಕ ಅರ್ಥಾತ್ ಮತಾಂತರ ನಿಷೇಧದ ವಿಧೇಯಕವನ್ನ ಮಂಡಿಸಿದೆ. ಇದು ವಿಪಕ್ಷಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ದೊಡ್ಡ ಕೋಲಾಹಲವೇ ಎದ್ದಿದೆ.

ಬೆಳಗಾವಿ ಸುರ್ವಣಸೌಧದಲ್ಲಿ ನಡೀತಿರೊ ಚಳಿಗಾಲದ ಅಧಿವೇಶನ ನಿನ್ನೆ ಅಕ್ಷರಶಃ ಕಾವೇರಿತ್ತು. ವಿಧಾನಸಭೆಯ ಕಲಾಪ ಆಡಳಿತ ಪಕ್ಷ ಮತ್ತು ಪ್ರತಿಪಕ್ಷದ ನಡುವಿನ ಫೈಟ್ಗೆ ಸಾಕ್ಷಿಯಾಗಿತ್ತು. ವಿಪಕ್ಷ ನಾಯಕ ಸಿದ್ದರಾಮಯ್ಯ ಸಿಡಿದೇಳುತ್ತಿದ್ರೆ, ಡಿಕೆಶಿ ಶಿವಕುಮಾರ್ ಪೇಪರ್ ಹರಿದು ಆಕ್ರೋಶ ಹೊರಹಾಕಿದ್ರು. ಸಚಿವ ಮಾಧುಸ್ವಾಮಿ ಸಿದ್ದು ಮಧ್ಯೆ ಮಾತಿನ ಮಲ್ಲಯುದ್ಧವೇ ನಡೆದು ಹೋಗಿತ್ತು. ಸರ್ಕಾರದ ವಿರುದ್ಧ ವಿಧಾನಸಭೆಯಲ್ಲೇ ಶೇಮ್ ಶೇಮ್ ಅನ್ನೋ ಘೋಷಣೆ ಮೊಳಗಿದ್ವು.

ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆ ಕಳೆದೊಂದು ತಿಂಗಳಿನಿಂದ ರಾಜ್ಯದಲ್ಲಿ ಭಾರಿ ಸದ್ದು ಮಾಡಿದ, ತೀವ್ರ ವಿವಾದ ಎಬ್ಬಿಸಿದ ಮತಾಂತರ ನಿಷೇಧ ವಿಧೇಯಕ ವಿಧಾನಸಭೆಯಲ್ಲಿ ಮಂಡನೆಯಾಗಿದೆ. ಆದ್ರೆ ವಿಧೇಯಕವನ್ನ ಮಂಡಿಸಿದ ರೀತಿಗೆ, ಪ್ರತಿಪಕ್ಷಗಳು ತೀವ್ರ ಆಕ್ಷೇಪ ಹೊರಹಾಕಿವೆ. ಕಲಾಪದಲ್ಲೇ ದೊಡ್ಡ ಪ್ರತಿಭಟನೆಯನ್ನ ವ್ಯಕ್ತ ಪಡಿಸಿವೆ. ನಿನ್ನೆ ಭೋಜನ ವಿರಾಮದ ಬಳಿಕ ಕಲಾಪ ಆರಂಭವಾಗುತ್ತಲೇ ಸ್ಪೀಕರ್ ಕಾಗೇರಿ ವಿಧೇಯಕ ಮಂಡಿಸೋಕೆ ಹೇಳಿದ್ರು. ಗೃಹ ಸಚಿವ ಆರಗ ಜ್ಞಾನೇಂದ್ರ ವಿಧೇಯಕವನ್ನ ಮಂಡಿಸಿದ್ರು. ವಿಧೇಯಕದ ಇಂಟ್ರಡಕ್ಷನ್ ಅನ್ನ ಮತಕ್ಕೆ ಹಾಕಿದ್ದ ಸ್ಪೀಕರ್ ವಿಧೇಯಕವನ್ನ ಮಂಡಿಸಲಾಯ್ತು ಅಂತಾ ಹೇಳಿ ಮುಗಿಸಿದ್ರು. ಈ ಕ್ಷಿಪ್ರಗತಿಯ ವಿಧೇಯಕ ಮಂಡನೆಗೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿತು. ಸಿದ್ದರಾಮಯ್ಯ ಇದು ಸಂವಿಧಾನ ವಿರೋಧಿ ಅಂದ್ರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕದ್ದು ಮುಚ್ಚಿ ಬಿಲ್ ಮಂಡಿಸ್ತಿದೆ ಅಂತಾ ಆಕ್ರೋಶ ಹೊರಹಾಕಿದ್ರು.

ಡಿಕೆಶಿ ಕದ್ದು ಮುಚ್ಚಿ ಹೇಳಿಕೆಗೆ ಸ್ಪೀಕರ್ ಅಸಮಾಧಾನ ಹೊರಹಾಕಿದ್ರು. ಈ ಮೊದಲೇ ಎಲ್ಲರಿಗೂ ಬಿಲ್ ಕೊಟ್ಟಿದ್ದೇವೆ, ಮಂಡಿಸೋದು ಇದೆ ಅಂತಾನೂ ಹೇಳಿದ್ದೇವೆ ಈಗ ಬಂದು ಹೀಗೆ ಗಲಾಟೆ ಮಾಡಿದ್ರೆ ಹೇಗೆ ಅಂತಾ ಪ್ರಶ್ನಿಸಿದ್ರು. ಆಗ ಸಿದ್ದರಾಮಯ್ಯ ಕೂಡಾ ಸರ್ಕಾರ ಕಳ್ಳತನದಿಂದ ಬಿಲ್ ಮಂಡಿಸ್ತಿದೆ ಅಂತಾ ಗುಡುಗಿದ್ರು. ನಿಮಗೆ ಮೆಜಾರಿಟಿ ಇದೆ ಅಂತಾ ಮನಸ್ಸಿಗೆ ಬಂದಂತೆ ಮಾಡ್ತೀರಾ.. ಸದನವನ್ನ ಬುಲ್ಡೋಜ್ ಮಾಡ್ತೀರಾ ಅಂತಾ ಖಾರವಾಗಿ ಪ್ರಶ್ನಿಸಿದ್ರು. ಒಂದ್ಕಡೆ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸ್ತಿರುವಾಗಲೇ, ಡಿಕೆಶಿ ಕಲಾಪದಲ್ಲೇ ಬಿಲ್ ಹರಿದು ಹಾಕಿದ್ರು.

ಮತಾಂತರ ನಿಷೇಧ ಬಿಲ್ ವಿರೋಧಿಸಿ ‘ಕೈ’ ಸಭಾತ್ಯಾಗ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಬೆನ್ನಲ್ಲೇ, ಬಿಲ್ ಕುರಿತು ಬುಧವಾರ ಅಂದ್ರೆ ಇವತ್ತು ಚರ್ಚೆಗೆ ಅವಕಾಶ ಕೊಡೋದಾಗಿ ಸ್ಪೀಕರ್ ಹೇಳಿದ್ರು. ಅದಕ್ಕೊಪ್ಪಿ ಕಾಂಗ್ರೆಸ್ ಸದಸ್ಯರು ಸುಮ್ಮನಾಗಿದ್ರು. ಇತ್ತ ಸಚಿವ ಆರ್.ಅಶೋಕ್ ಅತಿವೃಷ್ಠಿ ಮೇಲಿನ ಚರ್ಚೆಗೆ ಉತ್ತರ ಕೊಡ್ತಾ ಇದ್ರು. ಆದ್ರೆ ಏಕಾ ಏಕಿ ಎದ್ದು ನಿಂತು ಸಿದ್ದರಾಮಯ್ಯ, ಇದು ಸಂವಿಧಾನ ಬಾಹಿರ ಸರ್ಕಾರ, ಇವ್ರ ಉತ್ತರ ನಾವ್ ಕೇಳಲ್ಲ ಅಂತಾ ಸಭಾತ್ಯಾಗ ಮಾಡಿದ್ರು. ಕಾಂಗ್ರೆಸ್ ಸಭಾತ್ಯಾಗಕ್ಕೆ ಟಾಂಗ್ ಕೊಟ್ಟ ಸಚಿವ ಈಶ್ವರಪ್ಪ, ಮುಸ್ಲಿಂರಿಗೆ, ಕ್ರಿಶ್ಚಿಯನ್ನರಿಗೆ ತೃಪ್ತಿ ಪಡಿಸೋದಕ್ಕೆ ಸಭಾತ್ಯಾಗ ಮಾಡ್ತಿದ್ದಾರೆ ಅಂತಾ ವಾಗ್ದಾಳಿ ನಡೆಸಿದ್ರು. ಇಷ್ಟಕ್ಕೆ ಸುಮ್ಮನಾಗದೇ ಕಾಂಗ್ರೆಸ್ನವರಿಗೆ ಉತ್ತರ ಕರ್ನಾಟಕದ ಸಮಸ್ಯೆಗಳು ಬೇಕಿಲ್ಲ, ಇವ್ರಿಗೆ ಮತಾಂತರ ಬೇಕು ಹಿಂದೂಗಳ ದೇಶವನ್ನ ಪಾಕಿಸ್ತಾನ ಮಾಡೋಕೆ ಹೊರಟಿದ್ದಾರೆ ಅಂತೆಲ್ಲ ವಾಗ್ದಾಳಿ ನಡೆಸಿದ್ರು.

ಮತಾಂತರ ಬಿಲ್‌ RSS ಅಜೆಂಡಾ ಎಂದು ಸಿದ್ದು ಗುದ್ದು ಸದನದಿಂದ ಹೊರ ಬಂದ ಕಾಂಗ್ರೆಸ್ ನಾಯಕರು, ಬಿಜೆಪಿ ವಿರುದ್ಧ ಮುಗಿಬಿದ್ರು. ಮತಾಂತರ ಬಿಲ್ ಮಂಡನೆ ಮಾಡೋದಕ್ಕೆ ನಮ್ಮ ವಿರೋಧ ಇದೆ. ನಾವು ಇಲ್ಲದೇ ಇರೋ ಟೈಮ್ ನೋಡ್ಕೊಂಡು ಬಿಲ್ ಮಂಡಿಸಿದ್ದಾರೆ ಅಂತಾ ಕಿಡಿಕಾರಿದ್ರು. ಮತಾಂತರ ಬಿಲ್ ಹಿಂದೆ RSS ಅಜೆಂಡಾ ಇದೆ ಅಂತಾ ಬಾಂಬ್ ಸಿಡಿಸಿದ್ರು. ಸಿದ್ದು ಹೊರಗೆ ವಾಗ್ದಾಳಿ ನಡೆಸ್ತಿದ್ದಂತೆ ಅತ್ತ ಬಿಜೆಪಿ ನಾಯಕರು ತಿರುಗೇಟು ಕೊಟ್ರು. ಬಿಲ್ ಮಂಡನೆಗೆ ಆರ್ಜೆಂಟ್ ಏನಿತ್ತು ಅನ್ನೋ ಸಿದ್ದು ಪ್ರಶ್ನೆಗೆ ಉತ್ತರ ಕೊಟ್ಟ ಸಿಎಂ, ಸ್ಪೀಕರ್‌ಗೆ ಸಪ್ಲಿಮೆಂಟರಿ ಅಜೆಂಡಾ ಮಾಡುವ ಅವಕಾಶ ಇದೆ ಅಂತಾ ತಿರುಗೇಟು ಕೊಟ್ರು.

ತನ್ನೆಲ್ಲಾ ಶಾಸಕರಿಗೆ ಬುಲಾವ್ ನೀಡಿದ ಕಾಂಗ್ರೆಸ್ ನಿನ್ನೆ ಬಿಲ್ ಮಂಡನೆ ವಿರೋಧಿಸಿ ಸಭಾತ್ಯಾಗ ಮಾಡಿದ ಕಾಂಗ್ರೆಸ್ ಇಂದು ಆರಂಭದಿಂದಲೇ ಸಮರ ಸಾರಲು ಸಜ್ಜಾಗಿದೆ. ಈಗಾಗಲೇ ತನ್ನೆಲ್ಲಾ ಶಾಸಕರಿಗೆ ಕಡ್ಡಾಯವಾಗಿ ಸದನದಲ್ಲಿರಲು ಸೂಚನೆ ನೀಡಿರುವ ಕಾಂಗ್ರೆಸ್, ದೂರದೂರಿನಲ್ಲಿರುವ ಶಾಸಕರಿಗೂ ಬುಲಾವ್ ನೀಡಿದೆ. ಕಾಂಗ್ರೆಸ್ ಮುಖ್ಯ ಸಚೇತಕ ಅಜೇಯ್ ಸಿಂಗ್, ವಿಪಕ್ಷ ನಾಯಕ ಸಿದ್ಧರಾಮಯ್ಯರ ಕಚೇರಿಯಲ್ಲೇ ಕುಳಿತು, ದೆಹಲಿ ಮುಂಬೈ ಹಾಗೂ ಬೇರೆ ಊರುಗಳಿಗೆ ತೆರಳಿರುವ ಶಾಸಕರಿಗೆ ರಾತ್ರಿಯೇ ವಾಪಸ್ ಆಗುವಂತೆ ಸೂಚನೆ ನೀಡಿದ್ದಾರೆ.

ಬೇರೆ ವಿಚಾರಗಳ ಚರ್ಚೆಗೆ ಅವಕಾಶ ನೀಡದಂತೆ ಪಟ್ಟು? ಸದನದಲ್ಲಿ ಪ್ರಶ್ನೋತ್ತರ ಕಲಾಪದ ಬಳಿಕ ಬಾವಿಗಿಳಿದ ಹೋರಾಟ ಮಾಡಲು ಕಾಂಗ್ರೆಸ್ ತುದಿಗಾಲಲ್ಲಿ ನಿಂತಿದೆ.. ಯಾವುದೇ ಕಾರಣಕ್ಕೂ ಬೇರೆ ವಿಚಾರಗಳ ಚರ್ಚೆಗೆ ಅವಕಾಶ ನೀಡಬಾರದು ಅನ್ನೋದು ಕಾಂಗ್ರೆಸ್ ನಿಲುವು.. ಆದ್ರೆ, ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳನ್ನು ಚರ್ಚೆಗೆ ಕೈಗೆತ್ತಿಕೊಂಡರೆ ಚರ್ಚೆ ಮಾಡೋಣ ಅಂತಾ ಹಿರಿಯ ನಾಯಕರು ಹೇಳಿದ್ದಾರೆ.. ಹೀಗಾಗಿ, ಮತಾಂತರ ನಿಷೇಧ ವಿಧೇಯಕ ಚರ್ಚೆಗೆ ಕೈಗೆತ್ತಿಕೊಂಡಾಗ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ರಮೇಶ್ ಕುಮಾರ್, ಕೃಷ್ಣ, ಭೈರೇಗೌಡ ಸೇರಿ ಹಿರಿಯರು ಸಮಗ್ರವಾಗಿ ಕೌಂಟರ್ ಕೊಡಲು ಪ್ಲ್ಯಾನ್ ಮಾಡಿದ್ದಾರೆ.. ಹೀಗಾಗಿ, ಚರ್ಚೆ ಬಳಿಕ ವಿಧೇಯಕವನ್ನು ಮತಕ್ಕೆ ಹಾಕಲು ಪಟ್ಟು ಹಿಡಿಯಲು ಸಹ ಕಾಂಗ್ರೆಸ್ ನಿರ್ಧರಿಸಿದೆ.

ಸಮರ ಸಾರಿದ ಕೈ ಪಡೆಗೆ ಕಮಲ ಪಂಥಾಹ್ವಾನ ಮತ್ತೊಂದ್ಕಡೆ, ಕಾಂಗ್ರೆಸ್ಗೆ ಪಂಥಾಹ್ವಾನ ನೀಡಿರುವ ಆಡಳಿತಾರೂಢ ಬಿಜೆಪಿ, ಎಂತಹ ಸವಾಲಿಗೂ ಸೈ ಅಂದಿದೆ. ಅದ್ರಲ್ಲೂ ವಿಪಕ್ಷ ನಾಯಕ ಸಿದ್ದರಾಮಯ್ಯರಿಗೆ ರಣವೀಳ್ಯ ನೀಡಿರುವ ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ, ಸದನದಲ್ಲಿ ನಮ್ಮಿಬ್ಬರ ಮಾತಿಗಿಂತ ದಾಖಲೆಗಳೇ ಹೆಚ್ಚು ಮಾತನಾಡಲಿದೆ ಅಂತಾ ಗುಟುರು ಹಾಕಿದ್ದಾರೆ.. ಅಲ್ದೆ, ಈ ವಿಧೇಯಕ ಬಿಜೆಪಿಯ ಚಿಂತನೆ ಅಲ್ಲ. 2016ರಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಲಾ ಕಮಿಷನ್ ಕಾನೂನು ರೂಪಿಸಿತ್ತು. ಅಂದಿನ ಕಾನೂನು ಮತ್ತು ಸಂಸದೀಯ ಸಚಿವ ಟಿ.ಬಿ.ಜಯಚಂದ್ರ ಇದಕ್ಕೆ ತಾತ್ವಿಕ ಒಪ್ಪಿಗೆಯನ್ನೂ ನೀಡಿದ್ದಾರೆ. ಆದ್ರೆ ಮತಬ್ಯಾಂಕ್ ಮೇಲೆ ದೃಷ್ಟಿಯಿಟ್ಟು ಕಾಂಗ್ರೆಸ್ ವಿಧೇಯಕ ಮಂಡಿಸಲಿಲ್ಲ ಅಂತಾ ಬಿಜೆಪಿ ವಾದಿಸುತ್ತಿದೆ.

ಇದನ್ನೂ ಓದಿ: ತರಾತುರಿಯಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆ: ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ