ಸಿದ್ದರಾಮಯ್ಯ ಕನಸಿನ ಯೋಜನೆಯಾದ ಅನ್ನಭಾಗ್ಯಕ್ಕೆ ಆಹಾರ ಇಲಾಖೆಯಿಂದ ಹೊಸ ಪ್ರಯೋಗ

| Updated By: ರಮೇಶ್ ಬಿ. ಜವಳಗೇರಾ

Updated on: Sep 08, 2023 | 7:33 AM

ಕಾಂಗ್ರೆಸ್​ ಸರ್ಕಾರದ ಯೋಜನೆಗಳಲ್ಲಿ ಮಹತ್ವದ ಯೋಜನೆಯಾದ ಅನ್ನಭಾಗ್ಯ ಯೋಜನೆ ಬಗ್ಗೆ ಆಹಾರ ಇಲಾಖೆ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಜಿಲ್ಲಾ ಮಟ್ಟದಲ್ಲಿ ಅಕ್ಕಿಯನ್ನು ಕೊಡಬೇಕಾ? ಅಥವಾ ಬೇಡ್ವಾ ಎನ್ನುವ ಬಗ್ಗೆ ಸರ್ವೇ ನಡೆಸಲು ಸೂಚನೆ ನೀಡಲಾಗಿದ್ದು, ಸರ್ವೇಯಲ್ಲಿ ಜನರಿಗೆ ಅಕ್ಕಿ ಅವಶ್ಯಕತೆ ಇದೆಯಾ ಅಥವಾ ಅಕ್ಕಿ ಬದಲಿಗೆ ಡಿಬಿಟಿ ಹಣದ ಬಗ್ಗೆ ಒಲವು ಇದ್ಯಾ? ಎನ್ನುವ ಬಗ್ಗೆ ಸರ್ಕಾರ ತಿಳಿದುಕೊಳ್ಳಲು ಮುಂದಾಗಿದ್ದು, ಎಲ್ಲಾ ಅಭಿಪ್ರಾಯ ಸಂಗ್ರಹಿಸಿ ಬಳಿಕ ಮಹತ್ವದ ತೀರ್ಮಾನ ಕೈಗೊಳ್ಳಲಿದೆ.

ಸಿದ್ದರಾಮಯ್ಯ ಕನಸಿನ ಯೋಜನೆಯಾದ ಅನ್ನಭಾಗ್ಯಕ್ಕೆ ಆಹಾರ ಇಲಾಖೆಯಿಂದ ಹೊಸ ಪ್ರಯೋಗ
ಅನ್ನಭಾಗ್ಯ
Follow us on

ಬೆಂಗಳೂರು, (ಸೆಪ್ಟೆಂಬರ್ 08): ಸಿದ್ದರಾಮಯ್ಯನವರ (Siddaramaiah) ಕನಸಿನ ಮಹತ್ವಕಾಂಕ್ಷಿ ಯೋಜನೆಯಾದ ಅನ್ನಭಾಗ್ಯ ಯೋಜನೆ(Anna Bhagya Scheme) ಬಗ್ಗೆ ಆಹಾರ ಇಲಾಖೆ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಅನ್ನಭಾಗ್ಯ ಮುಂದುವರಿಸುವ ಬಗ್ಗೆ ಸರ್ಕಾರದಿಂದ ಸರ್ವೇ ನಡೆಸಲು ತೀರ್ಮಾನಿಸಲಾಗಿದ್ದು, ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಅಕ್ಕಿಯನ್ನು ಕೊಡಬೇಕಾ? ಅಥವಾ ಬೇಡ್ವಾ ಎನ್ನುವ ಬಗ್ಗೆ ಸರ್ವೇ ನಡೆಸಲು ಸೂಚನೆ ನೀಡಲಾಗಿದೆ. ಸರ್ಕಾರದ ಸೂಚನೆಯಂತೆ ಆಹಾರ ಇಲಾಖೆಯಿಂದ, ಬೆಂಗಳೂರು ನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸರ್ವೇ ಆರಂಭವವಾಗಿದೆ.

ಸರ್ವೇಯಲ್ಲಿ ಪ್ರತಿ ಜಿಲ್ಲೆ ಹಾಗೂ ನಗರದ ನ್ಯಾಯಬೆಲೆ ಅಂಗಡಿಗಳಿಗೆ ಬರುವ ಜನರಿಂದ ಮಾಹಿತಿ ಕಲೆಹಾಕುತ್ತಿದ್ದು, ಅನ್ನಭಾಗ್ಯದ ಬಗ್ಗೆ ಜನರಿಗೆ ಒಲವು ಇದೆಯಾ ಅಥವಾ ಡಿಬಿಟಿ ಹಣದ ಬಗ್ಗೆ ಒಲವು ಇದೆಯಾ ಎನ್ನುವ ಬಗ್ಗೆ ಸರ್ವೇ ನಡೆಸಲಾಗುತ್ತಿದೆ. ಸರ್ವೇಯಲ್ಲಿ ಯಾವುದಕ್ಕೆ ಹೆಚ್ಚು ಜನರು ಒತ್ತು ನೀಡುತ್ತಾರೆ ಎನ್ನುವುದನ್ನ ನೋಡಿಕೊಂಡು ಯೋಜನೆ ಮುಂದುವರಿಸಬೇಕಾ ಅಥವಾ ನಿಲ್ಲಿಸುವ ಬಗ್ಗೆ ಸರ್ಕಾರದ ನಿರ್ಧರಿಸಲಿದೆ.

ಇದನ್ನೂ ಓದಿ: ಕರ್ನಾಟಕಕ್ಕೆ ಅಕ್ಕಿ ಕೊಡಲು ಮೂರು ರಾಜ್ಯಗಳ ಒಪ್ಪಿಗೆ; ಒಂದು ವಾರದಲ್ಲಿ ಖರೀದಿ ಫೈನಲ್ ಆಗಲಿದೆ ಎಂದ ಮುನಿಯಪ್ಪ

ಸದ್ಯ ಎರಡು ತಿಂಗಳಿನಿಂದ ಡಿಬಿಟಿ ಯೋಜನೆ ಮುಂದುವರಿಯುತ್ತಿದ್ದು, ಆಗಸ್ಟ್ ತಿಂಗಳಿನಲ್ಲಿ 95% ರಷ್ಟು ಡಿಬಿಟಿ ಯೋಜನೆಯ ಹಣ ಜನರಿಗೆ ತಲುಪಿದೆ. ಮತ್ತೊಂದೆಡೆ ಅನ್ನಭಾಗ್ಯದ ಅಕ್ಕಿ ನೀಡಲು ಹಲವು ರಾಜ್ಯಗಳ ಜೊತೆ ಚರ್ಚೆ ನಡೆಯುತ್ತಿದ್ದು, ಅಕ್ಕಿ ಸಿಗದಿದ್ದರೆ ಡಿಬಿಟಿಯನ್ನೇ ಮುಂದುವರಿಸುವ ಚಿಂತನೆಯಲ್ಲಿ ಸರ್ಕಾರ ಇದೆ.

ಸದ್ಯ ರಾಜ್ಯದಲ್ಲಿ 1.27 ಕೋಟಿಯಷ್ಟು ಬಿಪಿಎಲ್ ಕುಟುಂಬಗಳಿದ್ದು , ಈ ಕುಟುಂಬಗಳಿಗೆ ಡಿಬಿಟಿ ಮಾಡಲು 776 ಕೋಟಿ ರೂಪಾಯಿ ಖರ್ಷು ತಗುಲಿದೆ. ಇನ್ನು 1.27 ಕೋಟಿ ಕುಟುಂಬಗಳಿಗೆ ಅಕ್ಕಿ ನೀಡಲು ಒಟ್ಟು 2 ಲಕ್ಷದ 40 ಸಾವಿರ ಮೆಟ್ರಿಕ್ ಟನ್ ಬೇಕಾಗಲಿದೆ. ಇದಕ್ಕೆ ಅಂದಾಜು 900 ಕೋಟಿ ರೂಪಾಯಿ ಹಣ ಖರ್ಚಾಗಲಿದೆ. ಹೀಗಾಗಿ ಜನರ ಆಸಕ್ತಿಯನ್ನ‌ ಆಧಾರಿಸಿ ಯೋಜನೆ ಮುಂದುವರಿಸಲು ಸರ್ಕಾರ ಪ್ಲಾನ್ ಮಾಡಿಕೊಂಡಿದೆ.

ಇನ್ನಷ್ಟು ನಿಮ್ಮ ಜಿಲ್ಲೆಗಳ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:31 am, Fri, 8 September 23