ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆ ಉಲ್ಬಣಿಸುತ್ತಿದ್ದು ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದಾಗಿ ಅನೇಕ ಅವಘಡಗಳೂ ಸಂಭವಿಸಿವೆ. ಕೆಲ ಹಣಬಾಕರು ಇದೇ ಸಂದರ್ಭವನ್ನೇ ಉಪಯೋಗಿಸಿಕೊಂಡು ಹಣ ಮಾಡಿದ್ದೂ ಆಗಿದೆ. ಅದರಲ್ಲೂ ಕೊರೊನಾ ಸೋಂಕಿತರಿಗೆ ಜೀವ ರಕ್ಷಕ ಎಂದು ಬಿಂಬಿಸಲ್ಪಟ್ಟಿರುವ ರೆಮ್‌ಡಿಸಿವಿರ್ ಇಂಜೆಕ್ಷನ್ಗೆ ಈ ಬಾರಿ ಬೇಡಿಕೆ ಹೆಚ್ಚಿದ್ದು ಅದನ್ನೇ ಅಕ್ರಮವಾಗಿ ಮಾರಾಟ ಮಾಡಿ ಹಣ ಹುಟ್ಟಿಸಿಕೊಳ್ಳುವ ದೊಡ್ಡ ದಂಧೆಯೂ ನಡೆಯುತ್ತಿದೆ. ಹೀಗಾಗಿ ಇಂತಹ ಅಕ್ರಮಗಳಿಗೆ ತಡೆಯೊಡ್ಡಲೋಸುಗ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಹೊಸ ಯೋಜನೆ ರೂಪಿಸಿದೆ.
ಕಾಳಸಂತೆಯಲ್ಲಿ ರೆಮ್‌ಡಿಸಿವಿರ್ ಬಿಕರಿಯಾಗುವುದನ್ನು ತಡೆಯಲು ಮುಂದಾಗಿರುವ ಆರೋಗ್ಯ ಇಲಾಖೆ, ಕೊರೊನಾ ಸೋಂಕಿತರ ಮೊಬೈಲ್ಗೆ ರೆಮ್‌ಡಿಸಿವಿರ್ ಇಂಜೆಕ್ಷನ್ ವಿತರಣೆಯ ಬಗ್ಗೆ ಸಂದೇಶ ಕಳುಹಿಸಲು ನಿರ್ಧರಿಸಿದೆ. ಇದರಿಂದಾಗಿ ಸೋಂಕಿತರಿಗೆ ನೇರವಾಗಿ ರೆಮ್‌ಡಿಸಿವಿರ್ ಇಂಜೆಕ್ಷನ್ ಸರಬರಾಜಾಗಲಿದ್ದು, ಚುಚ್ಚುಮದ್ದು ಬಿಡುಗಡೆಯಾಗುತ್ತಿದ್ದಂತೆಯೇ ಮೊಬೈಲ್ಗೆ ಸಂದೇಶ ರವಾನೆ ಆಗಲಿದೆ. ಈ ಯೋಜನೆ ಸಮರ್ಪಕವಾಗಿ ಜಾರಿಯಾದಲ್ಲಿ ಸುಳ್ಳು ಮಾಹಿತಿ ನೀಡುವ ಮೂಲಕ ರೆಮ್‌ಡಿಸಿವಿರ್ ಹೆಸರಲ್ಲಿ ದುಡ್ಡು ಮಾಡುತ್ತಿದ್ದ ದಂಧೆಯನ್ನು ಮಟ್ಟಹಾಕಲು ಪರಿಣಾಮಕಾರಿ ಅಸ್ತ್ರ ಸಿಕ್ಕಂತಾಗುತ್ತದೆ.
ಸದ್ಯ ಕೆಲ ಖಾಸಗಿ ಆಸ್ಪತ್ರೆಗಳು ಸೋಂಕಿತರ ಹೆಸರಲ್ಲಿ ರೆಮ್‌ಡಿಸಿವಿರ್ ಪಡೆದು ದುಪ್ಪಟ್ಟು ಹಣಕ್ಕೆ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ. ಅಲ್ಲದೇ ಸರ್ಕಾರದಿಂದ ರೆಮ್‌ಡಿಸಿವಿರ್ ವಿತರಣೆ ಆಗೇ ಇಲ್ಲವೆಂದು ಸುಳ್ಳು ಹೇಳುತ್ತಿರುವ ಈ ಆಸ್ಪತ್ರೆಗಳು ತಮಗೆ ಸಿಕ್ಕ ಚುಚ್ಚುಮದ್ದನ್ನು ಬೇಕಾದಂತೆ ಮಾರಾಟ ಮಾಡುತ್ತಿವೆ. ಇತ್ತ ಸೋಂಕಿತರ ಹೆಸರಲ್ಲಿ ರೆಮ್‌ಡಿಸಿವಿರ್ ಇಂಜೆಕ್ಷನ್ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಕೂಡ ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಇದೀಗ ಈ ಎಲ್ಲಾ ಅಕ್ರಮಗಳಿಗೂ ಕಡಿವಾಣ ಹಾಕಲು ಅಂತಿಮವಾಗಿ ಆರೋಗ್ಯ ಇಲಾಖೆಯೇ ಯೋಜನೆ ರೂಪಿಸಿದೆ.