Heat Waves: ಬಿಸಿಲಿಗೆ ಬಳಲಿ ಬೆಂಡಾದ ಉತ್ತರ ಕರ್ನಾಟಕ ಜನ, ಜಿಲ್ಲೆಗಳಲ್ಲಿ ಹನಿ ನೀರಿಗೂ ಶುರುವಾಯ್ತು ಪರದಾಟ

Karnataka Heat Waves: ಕರ್ನಾಟಕದಲ್ಲಿ ತಾಪಮಾನ ದಾಖಲೆ ಮಟ್ಟಕ್ಕೆ ಏರಿಕೆಯಾಗಿದ್ದು, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಜನ ಉಷ್ಣ ಅಲೆಯಿಂದ ಕಂಗೆಟ್ಟಿದ್ದಾರೆ. ರಾಯಚೂರು, ಕೋಲಾರದಲ್ಲಿ ಉಷ್ಣ ಅಲೆ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಅತ್ತ ಬೆಳಗಾವಿ, ಧಾರವಾಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕುಡಿಯುವ ನೀರಿಗಾಗಿ ಜನ ಕಿಲೋಮೀಟರ್‌ಗಟ್ಟಲೆ ಅಲೆಯುತ್ತಿದ್ದಾರೆ.

Heat Waves: ಬಿಸಿಲಿಗೆ ಬಳಲಿ ಬೆಂಡಾದ ಉತ್ತರ ಕರ್ನಾಟಕ ಜನ, ಜಿಲ್ಲೆಗಳಲ್ಲಿ ಹನಿ ನೀರಿಗೂ ಶುರುವಾಯ್ತು ಪರದಾಟ
ಯಾದಗಿರಿಯ ಸುಭಾಷ್ ವೃತ್ತದಲ್ಲಿ ಬಿಸಿಲಿನಿಂದ ರಕ್ಷಣೆಗಾಗಿ ‘ಗ್ರೀನ್ ನೆಟ್’ ಅಳವಡಿಸಿರುವುದು
Image Credit source: tv9

Updated on: Apr 22, 2026 | 2:40 PM

ಬೆಂಗಳೂರು, ಏಪ್ರಿಲ್ 22: ಕರ್ನಾಟಕದಲ್ಲಿ (Karnataka) ಬಿಸಿಲ ತಾಪ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಉತ್ತರ ಕರ್ನಾಟಕದ ಜಿಲ್ಲೆಗಳಂತೂ ಬಳಲಿ ಬೆಂಡಾಗಿವೆ. ಬೆಂಗಳೂರಿನಿಂದ ಬೆಳಗಾವಿವರೆಗೆ, ಬೀದರ್‌ನಿಂದ ಚಾಮರಾಜನಗರದವರೆಗೆ ಉಷ್ಣ ಅಲೆಗೆ (Karnataka Heatwave) ಜನ ಬೇಸತ್ತಿದ್ದಾರೆ. ರಣಬಿಸಿಲಿನಿಂದ ರಕ್ಷಣೆ ಪಡೆಯಲು ಜಿಲ್ಲಾಡಳಿತಗಳು ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದರೆ, ಹಳ್ಳಿಗಳಲ್ಲಿ ಕುಡಿಯುವ ನೀರಿಗಾಗಿ ಜನ ಕಿಲೋಮೀಟರ್‌ಗಟ್ಟಲೆ ಅಲೆಯುವಂತಾಗಿದೆ.

ಬಿಸಿಲ ತಾಪದಿಂದ ಬಚಾವಾಗಲು ‘ಗ್ರೀನ್ ನೆಟ್’ ಮೊರೆ

ಯಾದಗಿರಿಯಲ್ಲಿ ಬಿಸಿಲಿನ ತಾಪ ಎಷ್ಟಿದೆಯೆಂದರೆ, ಸಿಗ್ನಲ್‌ಗಳಲ್ಲಿ ನಿಲ್ಲುವ ವಾಹನ ಸವಾರರಿಗೆ ನೆರಳು ನೀಡಲು ಸುಭಾಷ್ ವೃತ್ತದಲ್ಲಿ ‘ಗ್ರೀನ್ ನೆಟ್’ ಅಳವಡಿಸಲಾಗಿದೆ. ಇದು ದ್ವಿಚಕ್ರ ವಾಹನ ಸವಾರರಿಗೆ ಕೊಂಚ ನಿರಾಳತೆ ತಂದಿದೆ. ಇತ್ತ ಕಲಬುರಗಿಯಲ್ಲಿ ಜನ ಶಾಖದಿಂದ ಬಚಾವಾಗಲು ಸ್ವಿಮ್ಮಿಂಗ್ ಪೂಲ್‌ಗಳ ಮೊರೆ ಹೋಗುತ್ತಿದ್ದಾರೆ.

ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ

ರಾಯಚೂರಿನಲ್ಲಿ ಉಷ್ಣ ಅಲೆಯ ಪರಿಣಾಮ ನವಜಾತ ಶಿಶುಗಳ ಮೇಲೆ ಬೀರುತ್ತಿದ್ದು, ಮಕ್ಕಳಿಗೆ ಡಿಹೈಡ್ರೇಶನ್, ವಾಂತಿ-ಬೇಧಿ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಮಧ್ಯಾಹ್ನ 12 ರಿಂದ 4 ಗಂಟೆಯವರೆಗೆ ಮಕ್ಕಳನ್ನು ಹೊರಗೆ ಕರೆತರದಂತೆ ವೈದ್ಯರು ಎಚ್ಚರಿಸಿದ್ದಾರೆ. ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಬಿಸಿಲಿನಿಂದ ಹೀಟ್ ಸ್ಟ್ರೋಕ್​ಗೆ ತುತ್ತಾದವರಿಗಾಗಿ ಪ್ರತ್ಯೇಕ 10 ಹಾಸಿಗೆಗಳ ವಾರ್ಡ್ ತೆರೆಯಲಾಗಿದೆ. ಬಿಸಿಲಿಗೆ ಹುತ್ತದೊಳಗೆ ಇರಲಾಗದೆ ಹಾವುಗಳು ಹೊರಬರುತ್ತಿರುವುದು ಚಾಮರಾಜನಗರ ಮತ್ತು ಚಿಕ್ಕಬಳ್ಳಾಪುರ ಭಾಗದಲ್ಲಿ ಆತಂಕ ಮೂಡಿಸಿದೆ.

ನೀರಡಿಕೆಯಿಂದ ತತ್ತರಿಸಿದ ಕರುನಾಡು

ಒಂದೆಡೆ ಬಿಸಿಲು ಸುಡುತ್ತಿದ್ದರೆ, ಮತ್ತೊಂದೆಡೆ ನೀರಿನ ಹಾಹಾಕಾರ ಮಿತಿಮೀರಿದೆ.

  • ಬೆಳಗಾವಿ: ಚಿಕ್ಕೋಡಿ ತಾಲೂಕಿನ ನರಲಗುಡ್ಡದಲ್ಲಿ ಮಹಿಳೆಯರು 2 ಕಿ.ಮೀ ದೂರ ಹೋಗಿ ನೀರು ತರುವಂತಾಗಿದೆ.
  • ಧಾರವಾಡ: ಕುಂದಗೋಳದ ಬೆನಕನಹಳ್ಳಿಯಲ್ಲಿ 300 ಮನೆಗಳಿಗೆ ಒಂದೇ ನಲ್ಲಿ ಇದ್ದು, ಒಂದು ಕೊಡ ನೀರಿಗಾಗಿ ಜನ 3 ಗಂಟೆ ಕಾಯುತ್ತಿದ್ದಾರೆ.
  • ಉಡುಪಿ: ಬೈಂದೂರಿನ ಅತ್ತಿಕೋಣೆಯಲ್ಲಿ ಸೌಪರ್ಣಿಕಾ ನದಿಯನ್ನು ದೋಣಿ ಮೂಲಕ ದಾಟಿ ನೀರು ತರುವ ಹೀನಾಯ ಸ್ಥಿತಿ ಎದುರಾಗಿದೆ.
  • ಜಲಾಶಯಗಳ ಸ್ಥಿತಿ: ತುಂಗಭದ್ರಾ ಜಲಾಶಯದಲ್ಲಿ ಕೇವಲ 12 ಟಿಎಂಸಿ ನೀರು ಬಾಕಿ ಇದ್ದು, ಕೊಪ್ಪಳ, ಬಳ್ಳಾರಿ, ರಾಯಚೂರು ಮತ್ತು ವಿಜಯನಗರ ಜಿಲ್ಲೆಗಳಿಗೆ ಕುಡಿಯುವ ನೀರಿನ ಆತಂಕ ಶುರುವಾಗಿದೆ.

ಇದನ್ನೂ ಓದಿ: ಮುಂದಿನ 7 ದಿನ ಕರ್ನಾಟಕ ಕೂಲ್​ ಕೂಲ್: ಈ ಜಿಲ್ಲೆಗಳಿಗೆ ಬರಲಿದ್ದಾನೆ ವರುಣ; ಬಿಸಿಲ ಧಗೆಯಿಂದ ಸಿಗಲಿದೆ ಮುಕ್ತಿ!

ಕೇವಲ ಮನುಷ್ಯರಷ್ಟೇ ಅಲ್ಲದೆ, ಪ್ರಾಣಿ-ಪಕ್ಷಿಗಳು ಕೂಡ ನೀರಿಲ್ಲದೆ ಪರದಾಡುತ್ತಿವೆ. ಚಾಮರಾಜನಗರದಲ್ಲಿ ಕಾಡಾನೆಗಳು ನೀರನ್ನು ಹುಡುಕುತ್ತಾ ಪಾಲಾರ್ ಹಳ್ಳದತ್ತ ಗುಳೆ ಹೋಗುತ್ತಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us