
ಬೆಂಗಳೂರು, ಜನವರಿ 30: ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಹಿಂದುಳಿದ ವರ್ಗಗಳಿಗೆ (OBC/BCM-A) ಸೂಕ್ತ ಪ್ರಾತಿನಿಧ್ಯ ನೀಡುತ್ತಿಲ್ಲ ಎಂದು ಬೆಂಗಳೂರು ವಕೀಲರ ಸಂಘ (AAB) ಅಸಮಾಧಾನ ವ್ಯಕ್ತಪಡಿಸಿದ್ದು, ಕರ್ನಾಟಕ ಹೈಕೋರ್ಟ್‌ನ (Karnataka High Court) ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರಿಗೆ ಪತ್ರ ಬರೆದಿದೆ. ಇತ್ತೀಚಿನ ನೇಮಕಾತಿ ಪ್ರಕ್ರಿಯೆಯಲ್ಲಿ ಸಾಮಾಜಿಕ ನ್ಯಾಯವನ್ನು ಕಡೆಗಣಿಸಲಾಗಿದೆ ಎಂದು ಸಂಘವು ಜನವರಿ 28 ರಂದು ಬರೆದ ಈ ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದೆ.
ವಕೀಲರ ಕೋಟಾದಡಿ (Bar Quota) ಇತ್ತೀಚೆಗೆ ಶಿಫಾರಸು ಮಾಡಲಾದ 10 ಅಭ್ಯರ್ಥಿಗಳಲ್ಲಿ ಒಬ್ಬರೂ ಒಬಿಸಿ ಅಥವಾ ಬಿಸಿಎಂ-ಎ ವರ್ಗಕ್ಕೆ ಸೇರಿದವರಿಲ್ಲ ಎಂಬುದು ಸಂಘದ ಮುಖ್ಯ ಆರೋಪವಾಗಿದೆ. ಇದು ಸಂವಿಧಾನದ 15 ಮತ್ತು 16ನೇ ವಿಧಿಗಳ ಅಡಿಯಲ್ಲಿ ನೀಡಲಾದ ಸಮಾನ ಪ್ರಾತಿನಿಧ್ಯದ ಆಶಯಕ್ಕೆ ವಿರುದ್ಧವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಪ್ರಸ್ತುತ ಕರ್ನಾಟಕ ಹೈಕೋರ್ಟ್‌ನಲ್ಲಿರುವ 38 ಜಡ್ಜ್ಗಳ ಪೈಕಿ ಕೇವಲ 2 ರಿಂದ 3 ಮಂದಿ ಮಾತ್ರ ಒಬಿಸಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ರಾಜ್ಯದ ಜನಸಂಖ್ಯೆಯಲ್ಲಿ ಒಬಿಸಿ ಸಮುದಾಯದ ಪಾಲು ಶೇಕಡಾ 25ಕ್ಕಿಂತ ಹೆಚ್ಚಿದ್ದರೂ, ನ್ಯಾಯಾಂಗದಲ್ಲಿ ಅವರ ಪ್ರಾತಿನಿಧ್ಯ ಕೇವಲ ಶೇಕಡಾ 5 ರಿಂದ 7 ರಷ್ಟಿದೆ ಎಂದು ಸಂಘವು ಅಂಕಿ-ಅಂಶಗಳ ಸಮೇತ ವಿವರಿಸಿದೆ.
ಜಿಲ್ಲಾ ನ್ಯಾಯಾಧೀಶರ ಕೋಟಾದಲ್ಲಿ ಅವಕಾಶ ಕೊಟ್ಟು ಹಿಂದುಳಿದ ವರ್ಗಗಳ ನೇಮಕಾತಿಯನ್ನು ಸರಿದೂಗಿಸುವ ಪ್ರಯತ್ನ ಮಾಡಬಾರದು. ಏಕೆಂದರೆ ಅದು ಹಿರಿತನದ ಮೇಲೆ ಆಧಾರಿತವಾಗಿರುತ್ತದೆ. ಆದರೆ ವಕೀಲರ ಕೋಟಾದಡಿ ನೇಮಕ ಮಾಡುವಾಗ ಅರ್ಹ ಮತ್ತು ಪ್ರತಿಭಾವಂತ ಒಬಿಸಿ ವಕೀಲರಿಗೆ ಹೆಚ್ಚಿನ ಅವಕಾಶ ನೀಡಬೇಕು ಎಂದು ಸಂಘ ಒತ್ತಾಯಿಸಿದೆ.
ಇದನ್ನೂ ಓದಿ: ಕೊನೆಗೂ ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಗ್ರೀನ್ ಸಿಗ್ನಲ್ ನೀಡಿದ ಹೈಕೋರ್ಟ್
ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಹೆಚ್.ವಿ. ಪ್ರವೀಣ್ ಗೌಡ ಮತ್ತು ಇತರ ಪದಾಧಿಕಾರಿಗಳು ಈ ಪತ್ರಕ್ಕೆ ಸಹಿ ಹಾಕಿದ್ದು, ಈಗಾಗಲೇ ಸಿದ್ಧಪಡಿಸಲಾದ ಪಟ್ಟಿಗೆ ಒಬಿಸಿ ಸಮುದಾಯದ ಇಬ್ಬರು ಹೆಚ್ಚುವರಿ ಅಭ್ಯರ್ಥಿಗಳನ್ನು ಸೇರಿಸಿ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿದ್ದಾರೆ. ನ್ಯಾಯಾಂಗದಲ್ಲಿ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಲು ಈ ಕ್ರಮ ಅನಿವಾರ್ಯ ಎಂದು ಅವರು ಪ್ರತಿಪಾದಿಸಿದ್ದಾರೆ.