ಕೊನೆಗೂ ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಗ್ರೀನ್ ಸಿಗ್ನಲ್ ನೀಡಿದ ಹೈಕೋರ್ಟ್
Bike Taxi in Bangalore: ಕೊನೆಗೂ ಬೈಕ್ ಟ್ಯಾಕ್ಸಿ ಸೇವೆ ಸಂಬಂಧ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಇದರಿಂದಾಗಿ ಇನ್ಮುಂದೆ ಬೈಕ್ ಟ್ಯಾಕ್ಸಿ ಸೇವೆ ಅಧಿಕೃತವಾಗಿ ಪುನರಾರಂಭಗೊಳ್ಳಲಿದೆ. ಬೈಕ್ ಟ್ಯಾಕ್ಸಿ ಸೇವೆ ಒದಗಿಸುತ್ತಿದ್ದವರಿಗೆ ಈ ತೀರ್ಪು ನಿರಾಳತೆ ಉಂಟುಮಾಡಿದರೆ, ಸಾರ್ವಜನಿಕರಿಗೂ ಕಡಿಮೆ ದರದಲ್ಲಿ ಸೇವೆಗಳು ದೊರೆತು ಅನುಕೂಲವಾಗಲಿದೆ.

ಬೆಂಗಳೂರು, ಜನವರಿ 23: ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ (Bike Taxi) ಸೇವೆಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ (Karnataka High Court) ಮಹತ್ವದ ತೀರ್ಪು ನೀಡಿದೆ. ಬೈಕ್ ಟ್ಯಾಕ್ಸಿಗಳಿಗೆ ಲೈಸೆನ್ಸ್ ನೀಡುವುದನ್ನು ಸರ್ಕಾರ ನಿರಾಕರಿಸುವಂತಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಬೈಕ್ ಟ್ಯಾಕ್ಸಿ ಅಗ್ರಿಗೇಟರ್‌ಗಳು ಅನುಮತಿ ಕೋರಿ ಅರ್ಜಿ ಸಲ್ಲಿಸಿದರೆ, ಆ ಅರ್ಜಿಗಳನ್ನು ಪರಿಗಣಿಸಿ ಪರವಾನಗಿ ನೀಡಬೇಕು ಎಂದು ಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಬೈಕ್ ಟ್ಯಾಕ್ಸಿ ಸಂಸ್ಥೆಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ.
ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ. ಬೈಕ್ ಟ್ಯಾಕ್ಸಿ ಸೇವೆಗಳು ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಒಂದು ಭಾಗವಾಗಿದ್ದು, ಕಾನೂನು ಚೌಕಟ್ಟಿನೊಳಗೆ ಅವುಗಳನ್ನು ನಿರ್ಬಂಧಿಸುವಂತಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಈ ತೀರ್ಪಿನಿಂದ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳ ಅಧಿಕೃತ ಪುನರಾರಂಭಕ್ಕೆ ಅವಕಾಶ ದೊರೆತಂತಾಗಿದ್ದು, ಉದ್ಯೋಗಾವಕಾಶಗಳು ಕೂಡ ಹೆಚ್ಚುವ ಸಾಧ್ಯತೆ ಇದೆ. ಜೊತೆಗೆ, ಪ್ರಯಾಣಿಕರಿಗೆ ಕಡಿಮೆ ವೆಚ್ಚದ ಹಾಗೂ ಸುಲಭ ಸಾರಿಗೆ ಸೌಲಭ್ಯ ಲಭ್ಯವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ, ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಬೈಕ್ ಟ್ಯಾಕ್ಸಿ ನೀತಿಗೆ ಸಂಬಂಧಿಸಿದಂತೆ ಸ್ಪಷ್ಟ ಮಾರ್ಗಸೂಚಿಗಳನ್ನು ಪ್ರಕಟಿಸುವ ಸಾಧ್ಯತೆ ಇದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿಗೆ ಮತ್ತೆ ಕಂಟಕ: ಸುರಕ್ಷಿತವಲ್ಲ, ಕಾನೂನು ಬಾಹಿರವೆಂದು ಹೈಕೋರ್ಟ್‌ಗೆ ಹೈಪವರ್ ಕಮಿಟಿ ವರದಿ
ಬೈಕ್ ಟ್ಯಾಕ್ಸಿಗಳು ಅಸುರಕ್ಷಿತ ಹಾಗೂ ಕಾನೂನು ಬಾಹಿರ ಎಂದು ಸರ್ಕಾರ ರಚಿಸಿದ್ದ ಹೈ ಪವರ್ ಕಮಿಟಿ 2025ರ ನವೆಂಬರ್ 26 ರಂದು ಹೈಕೋರ್ಟ್‌ಗೆ ವರದಿ ಸಲ್ಲಿಸಿತ್ತು. ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಲು ಸಾಧ್ಯವಿಲ್ಲ. ಇದು ಕೇಂದ್ರ ಮೋಟಾರು ವಾಹನ ಕಾಯ್ದೆಯ ಉಲ್ಲಂಘನೆಯಾಗಲಿದೆ. ಬೈಕ್ ಟ್ಯಾಕ್ಸಿಗಳು ನಗರದಲ್ಲಿ ವಿಪರೀತ ಸಂಚಾರ ದಟ್ಟಣೆಗೆ ಕಾರಣವಾಗುತ್ತವೆ. ಅಲ್ಲದೆ, ಸಾರ್ವಜನಿಕರ ಸುರಕ್ಷತೆಗೆ ಧಕ್ಕೆ ತರುವ ಸಾಧ್ಯತೆಗಳಿವೆ ಎಂದು ವರದಿಯಲ್ಲಿ ಹೈ ಪವರ್ ಕಮಿಟಿ ಉಲ್ಲೇಖಿಸಿತ್ತು. ಆದರೆ, ಇದೀಗ ಅಂತಿಮವಾಗಿ ಬೈಕ್ ಟ್ಯಾಕ್ಸಿ ಸಂಸ್ಥೆಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ಪುರಸ್ಕರಿಸಿದೆ.
ಆದೇಶದ ಬಗ್ಗೆ ಚರ್ಚಿಸಿ ಮುಂದಿನ ತೀರ್ಮಾನ: ರಾಮಲಿಂಗಾ ರೆಡ್ಡಿ
ಹೈಕೋರ್ಟ್ ಆದೇಶದ ಬಗ್ಗೆ ಬೆಂಗಳೂರಿನಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯೆ ನೀಡಿದ್ದು, ಆದೇಶ ಪ್ರತಿ ನೋಡಿದ ಬಳಿಕ ಕಮಿಷನರ್ ಜತೆ ಮಾತನಾಡುತ್ತೇನೆ. ಆದೇಶ ಬಗ್ಗೆ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ. ಏಕಸದಸ್ಯ ಪೀಠದಲ್ಲಿ ನಿಷೇಧಿಸಿತ್ತು, ವಿಭಾಗೀಯ ಪೀಠ ತೆರವುಗೊಳಿಸಿದೆ. ರಿಟ್ ಅರ್ಜಿಗೂ ಅವಕಾಶ ಇದೆ. ಕಾನೂನು ಸಲಹೆ ಪಡೆದುಕೊಂಡು ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:25 am, Fri, 23 January 26