AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವೋಸ್​​ನಲ್ಲಿ ಭಾರತ ಹೊಗಳಿದ ಡಿ.ಕೆ. ಶಿವಕುಮಾರ್​: ರಾಹುಲ್​​ ಕಾಲೆಳೆದ ಕರ್ನಾಟಕ ಬಿಜೆಪಿ

ದಾವೋಸ್‌ನಲ್ಲಿ ಡಿ.ಕೆ. ಶಿವಕುಮಾರ್ ಅವರು ಭಾರತದ ಆರ್ಥಿಕತೆ ಪ್ರಗತಿಯನ್ನು ಶ್ಲಾಘಿಸಿರೋದು ಹಲವರ ಹುಬ್ಬೇರಿಸಿದೆ. ಇದೇ ವಿಚಾರವನ್ನು ಇಟ್ಟುಕೊಂಡು ಕರ್ನಾಟಕ ಬಿಜೆಪಿ ರಾಹುಲ್​​ ಗಾಂಧಿ ಕಾಲೆಳಿದಿದೆ. ಸತ್ತಿರೋದು ಭಾರತದ ಆರ್ಥಿಕತೆಯಲ್ಲ, ನಿಮ್ಮ ಹೈಕಮಾಂಡ್​​ನ ವಾಸ್ತವದ ಜ್ಞಾನ ಎಂಬುದನ್ನು ದೃಢಪಡಿಸಿದ್ದಕ್ಕೆ ಡಿಕೆಶಿಗೆ ಧನ್ಯವಾದ ಎಂದಿದೆ. ಭಾರತದದ್ದು ‘ಸತ್ತ ಆರ್ಥಿಕತೆ’ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ಈ ಹಿಂದೆ ರಾಹುಲ್​​ ಗಾಂಧಿ ಕೂಡ ಸಹಮತ ವ್ಯಕ್ತಪಡಿಸಿದ್ದಿದ್ದು ಭಾರಿ ಚರ್ಚೆಗೆ ಗ್ರಾಸವಾಗಿತ್ತು.

ದಾವೋಸ್​​ನಲ್ಲಿ ಭಾರತ ಹೊಗಳಿದ ಡಿ.ಕೆ. ಶಿವಕುಮಾರ್​: ರಾಹುಲ್​​ ಕಾಲೆಳೆದ ಕರ್ನಾಟಕ ಬಿಜೆಪಿ
ವರ್ಲ್ಡ್​​ ಎಕನಾಮಿಕ್​​ ಫೋರಂನಲ್ಲಿ ಡಿಕೆಶಿ.
ಪ್ರಸನ್ನ ಹೆಗಡೆ
|

Updated on:Jan 23, 2026 | 12:08 PM

Share

ಬೆಂಗಳೂರು, ಜನವರಿ 23: ಭಾರತದ ಆರ್ಥಿಕತೆ ಬಗ್ಗೆ ಕಾಂಗ್ರೆಸ್​​ ನಾಯಕ ರಾಹುಲ್​​ ಗಾಂಧಿ ಟೀಕೆ ನಡುವೆ ದಾವೋಸ್​​ನಲ್ಲಿ ನಡೆದ ವರ್ಲ್ಡ್​​ ಎಕನಾಮಿಕ್​​ ಫೋರಂನಲ್ಲಿ ಭಾಗಿಯಾಗಿದ್ದ ಕರ್ನಾಟಕ ಡಿಸಿಎಂ ಡಿ.ಕೆ. ಶಿವಕುಮಾರ್​​ ಆಡಿರುವ ಮಾತುಗಳೀಗ ಬಿಜೆಪಿಗೆ ಅಸ್ತ್ರವಾಗಿ ಮಾರ್ಪಟ್ಟಿದೆ. ವಿಶ್ವ ಆರ್ಥಿಕ ವೇದಿಕೆಯಲ್ಲಿ ಮಾತನಾಡಿರುವ ಡಿಕೆಶಿ, ಇಂದು ಜಗತ್ತು ಭಾರತವನ್ನು ಹೆಚ್ಚಿನ ವಿಶ್ವಾಸದೊಂದಿಗೆ ನೋಡುತ್ತಿದೆ. ನಮ್ಮ ಸಾಧನೆಗಳ ಮೇಲೂ, ಮುಂದೆ ಸಾಗುತ್ತಿರುವ ನಮ್ಮ ನಿರಂತರ ವೇಗದ ಮೇಲೂ ಜಾಗತಿಕ ವಿಶ್ವಾಸ ಹೆಚ್ಚುತ್ತಿದೆ ಎಂದಿದ್ದರು. ಇದೇ ವಿಚಾರವನ್ನಿಟ್ಟುಕೊಂಡು ಕಾಂಗ್ರೆಸ್​​ಗೀಗ ಬಿಜೆಪಿ ತಿವಿದಿದೆ.

ಡಿಕೆಶಿಗೆ ಧನ್ಯವಾದ ಹೇಳಿದ ಬಿಜೆಪಿ!

Bjp Tweet

ಬಿಜೆಪಿ ಪೋಸ್ಟ್​​

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತದ ಬೆಳವಣಿಗೆ ಎಷ್ಟೊಂದು ವೇಗವಾಗಿದೆ ಎಂಬುದನ್ನು ಈಗ ವಿರೋಧ ಪಕ್ಷವೂ ಸಹ ಒಪ್ಪಿಕೊಳ್ಳಲು ಆರಂಭಿಸಿದೆ. ಒಂದು ಕಡೆ ರಾಹುಲ್​​ ಗಾಂಧಿ ‘ಭಾರತದ ಆರ್ಥಿಕತೆ ಸತ್ತಿದೆ’ ಎಂಬ ಜಪವನ್ನೇ ಮುಂದುವರಿಸುತ್ತಿರುವಾಗ, ಮತ್ತೊಂದು ಕಡೆ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​​ ವಿಶ್ವ ಆರ್ಥಿಕ ವೇದಿಕೆಯಲ್ಲಿ ಅದನ್ನು ಖಂಡಿಸಿರೋದನ್ನು ನೋಡುವುದೇ ಸಂತೋಷಕರವಾಗಿದೆ. ಸತ್ತಿರೋದು ಭಾರತದ ಆರ್ಥಿಕತೆಯಲ್ಲ, ನಿಮ್ಮ ಹೈಕಮಾಂಡ್ನ ವಾಸ್ತವದ ಜ್ಞಾನ ಎಂಬುದನ್ನು ದೃಢಪಡಿಸಿದ್ದಕ್ಕೆ ಧನ್ಯವಾದ ಡಿಕೆಶಿ ಅವರೇ ಎಂದು ಬಿಜೆಪಿ ಎಕ್ಸ್​​ ಪೋಸ್ಟ್​​ ಮಾಡಿದೆ.

ಇದನ್ನೂ ಓದಿ:  ಜಾಗತಿಕ ಹೂಡಿಕೆಗೆ ಭಾರತ ವಿಶ್ವಾಸಾರ್ಹ ತಾಣ; ಹೂಡಿಕೆ ಒಪ್ಪಂದಕ್ಕೆ ಜೋಶಿ ಮಾತುಕತೆ ಫಲಪ್ರದ

‘ಡಿಕೆಶಿ ಸಹನೆಯೂ ಕ್ಷೀಣಿಸುತ್ತಿದೆ’

ಮತ್ತೊಂದೆಡೆ ಡಿಕೆಶಿ ಹೇಳೀಕೆ ಬಗ್ಗೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್​. ಅಶೋಕ್, ಕರ್ನಾಟಕ ಕಾಂಗ್ರೆಸ್‌ನ ಗಾಳಿಯ ದಿಕ್ಕೇ ಬದಲಾಗುತ್ತಿದೆಯೇ? ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​​ ದಾವೋಸ್​​ನಲ್ಲಿ ಭಾರತ ಪ್ರಕಾಶಿಸುತ್ತಿದೆ ಎಂದು ಹೇಳಿದ್ದಾರೆ. ಆ ಮೂಲಕ ತಮ್ಮ ಪಕ್ಷದ ವರಿಷ್ಠ ನಾಯಕನ ಹೇಳಿಕೆಯನ್ನು ಜಾಗತಿಕ ವೇದಿಕೆಯಲ್ಲಿ ನಿಂತು ವಿರೋಧಿಸಿದ್ದಾರೆ. ಡಿ.ಕೆ. ಶಿವಕುಮಾರ್ ಅವರಿಗೆ ಕಾಂಗ್ರೆಸ್​​ ಹೈಕಮಾಂಡ್ ವಿರುದ್ಧ ಅಸಮಾಧಾನಕ್ಕೆ ಕಾರಣಗಳಿವೆ ಎಂಬುದು ಎಲ್ಲರಿಗೂ ಗೊತ್ತಿದೆ . ಅಧಿಕಾರ ಹಂಚಿಕೆಯ ಭರವಸೆಗಳು ಮುಂದೂಡಲ್ಪಟ್ಟಿವೆ, ಅಧಿಕಾರಕ್ಕೂ ಕಡಿವಾಣ ಹಾಕಲಾಗಿದೆ. ಹೀಗಾಗಿ ಅವರ ಸಹನೆಯೂ ನಿಧಾನವಾಗಿ ಕ್ಷೀಣಿಸುತ್ತಿರುವುದು ಸ್ಪಷ್ಟ. ಇದೀಗ ಅವರ ಧಾಟಿಯೇ ಬದಲಾಗಿದೆ. ರಾಹುಲ್ ಗಾಂಧಿ ಕೇಳಲು ನಿರಾಕರಿಸುವ ಸತ್ಯವನ್ನೇ ಅವರೀಗ ಹೇಳುತ್ತಿದ್ದಾರೆ. ಇದು ದೆಹಲಿಗೆ ಡಿಕೆಶಿ ನೀಡುತ್ತಿರುವ ಸೌಮ್ಯ ಎಚ್ಚರಿಕೆಯೇ? ಎಂದು ಪ್ರಶ್ನಿಸಿದ್ದಾರೆ.

ಭಾರತದ ಆರ್ಥಿಕತೆ ‘ಸತ್ತ ಆರ್ಥಿಕತೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಟೀಕಿಸಿದ್ದರು. ಅದಕ್ಕೆ ಬೆಂಬಲ ಸೂಚಿಸಿದ್ದ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಡೊನಾಲ್ಡ್ ಟ್ರಂಪ್ ಸತ್ಯ ಹೇಳಿದ್ದಕ್ಕೆ ಸಂತೋಷವಾಗಿದೆ. ಭಾರತದ ಪ್ರಧಾನಿ ಮತ್ತು ಹಣಕಾಸು ಸಚಿವರನ್ನು ಹೊರತುಪಡಿಸಿ ಎಲ್ಲರಿಗೂ ಭಾರತದ ಆರ್ಥಿಕತೆಯ ಪರಿಸ್ಥಿತಿ ಹೇಗಿದೆ ಎಂಬುದರ ವಾಸ್ತವದ ಅರಿವಿದೆ ಎಂದಿದ್ದರು ಎಂಬುದಿಲ್ಲಿ ಗಮನಾರ್ಹ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 12:02 pm, Fri, 23 January 26