AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೃಹ ಸಚಿವರೇ ಅಸಹಾಯಕರಾಗಿದ್ದಾರೆ: ಅಕ್ರಮ ಮರಳು ಸಾಗಣೆಗೆ ಹೈಕೋರ್ಟ್ ತೀವ್ರ ಕಳವಳ, ಸರ್ಕಾರಕ್ಕೆ ನೋಟಿಸ್

ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಮರಳು ಸಾಗಾಟ ಮತ್ತು ಗೃಹ ಸಚಿವರ ಅಸಹಾಯಕತೆ ಬಗ್ಗೆ ಕರ್ನಾಟಕ ಹೈಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ಅಲ್ಲದೆ, ಕೇಂದ್ರ ತನಿಖಾ ಸಂಸ್ಥೆ ಅಥವಾ ಎಸ್​ಐಟಿ ಮೂಲಕ ಕೋರ್ಟ್​ ಉಸ್ತುವಾರಿಯಲ್ಲಿ ಪ್ರಕರಣಗಳ ತನಿಖೆಯಾಗಲಿ ಎಂದಿದ್ದು, ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ವಿವರವಾದ ಉತ್ತರ ಸಲ್ಲಿಸುವಂತೆ ನೋಟಿಸ್ ನೀಡಿದೆ.

ಗೃಹ ಸಚಿವರೇ ಅಸಹಾಯಕರಾಗಿದ್ದಾರೆ: ಅಕ್ರಮ ಮರಳು ಸಾಗಣೆಗೆ ಹೈಕೋರ್ಟ್ ತೀವ್ರ ಕಳವಳ, ಸರ್ಕಾರಕ್ಕೆ ನೋಟಿಸ್
ಗೃಹ ಸಚಿವರೇ ಅಸಹಾಯಕರಾಗಿದ್ದಾರೆ: ಅಕ್ರಮ ಮರಳು ಸಾಗಣೆಗೆ ಹೈಕೋರ್ಟ್ ತೀವ್ರ ಕಳವಳImage Credit source: tv9
Ramesha M
| Edited By: |

Updated on: Jan 31, 2026 | 1:06 PM

Share

ಬೆಂಗಳೂರು, ಜನವರಿ 31: ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಮರಳು ಸಾಗಣೆ ಪ್ರಕರಣಗಳ ಬಗ್ಗೆ ಕರ್ನಾಟಕ ಹೈಕೋರ್ಟ್ (Karnataka High Court) ಗಂಭೀರ ಕಳವಳ ವ್ಯಕ್ತಪಡಿಸಿದೆ. ಈ ವಿಚಾರದಲ್ಲಿ ಸ್ವಯಂಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ದಾಖಲಿಸಿಕೊಂಡಿರುವ ಹೈಕೋರ್ಟ್, ಅಕ್ರಮ ಮರಳು ಗಣಿಗಾರಿಕೆ (Illegal Sand Mining) ನಿಯಂತ್ರಣಕ್ಕೆ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ. ವಿಧಾನಸಭೆಯಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿದ ನ್ಯಾಯಾಲಯ, ‘ಅಕ್ರಮ ಮರಳು ಸಾಗಣೆಯನ್ನು ತಡೆಯಲು ಗೃಹ ಸಚಿವರೇ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ ಎಂದರೆ ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂಬುದು ಸ್ಪಷ್ಟ’ ಎಂದು ಹೇಳಿದೆ.

ಅಕ್ರಮ ಮರಳು ದಂಧೆಯಲ್ಲಿ ರಾಜಕೀಯ ಪಕ್ಷಗಳ ಪ್ರಭಾವಿಗಳು ಭಾಗಿಯಾಗಿರುವ ಶಂಕೆಯೂ ಇದೆ ಎಂಬ ಮಾತುಗಳೂ ಕೇಳಿಬಂದಿವೆ. ಅಕ್ರಮ ಮರಳು ಸಾಗಣೆಯಿಂದ ಕೃಷಿ ಜಮೀನುಗಳು ಹಾಳಾಗುತ್ತಿವೆ, ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ ಹಾಗೂ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಕೋರ್ಟ್ ಆತಂಕ ವ್ಯಕ್ತಪಡಿಸಿದೆ. ಈ ಎಲ್ಲದನ್ನು ತಡೆಯಲು ರಚಿಸಲಾದ ಸ್ಪೆಷಲ್ ಟಾಸ್ಕ್ ಫೋರ್ಸ್ (STF) ಕೇವಲ ಹೆಸರಿಗಷ್ಟೇ ಇದ್ದು, ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದನ್ನೂ ನ್ಯಾಯಾಲಯ ಟೀಕಿಸಿದೆ.

ರಾಯಚೂರು ಜಿಲ್ಲೆಯ ಮಹಿಳಾ ಶಾಸಕರಿಗೆ ಅಕ್ರಮ ಮರಳು ದಂಧೆಗಾರರಿಂದ ಜೀವ ಬೆದರಿಕೆ ಹಾಕಿರುವ ವರದಿಯನ್ನೂ ಕೋರ್ಟ್ ಉಲ್ಲೇಖಿಸಿದೆ. ಮರಳು ಗಣಿಗಾರಿಕೆಗೆ ಕಾನೂನುಬದ್ಧವಾಗಿ ಗುತ್ತಿಗೆ ನೀಡಿದರೆ ಸರ್ಕಾರಕ್ಕೆ ಆದಾಯವೂ ಬರುತ್ತದೆ, ಅಕ್ರಮವೂ ಕಡಿಮೆಯಾಗಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಈ ಹಿನ್ನೆಲೆಯಲ್ಲಿ, ಅಕ್ರಮ ಮರಳು ಸಾಗಣೆ ಪ್ರಕರಣಗಳ ತನಿಖೆಯನ್ನು ಕೋರ್ಟ್ ಉಸ್ತುವಾರಿಯಲ್ಲಿ ಕೇಂದ್ರ ತನಿಖಾ ಸಂಸ್ಥೆ ಅಥವಾ ವಿಶೇಷ ತನಿಖಾ ತಂಡ (SIT) ಮೂಲಕ ನಡೆಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್ ಮತ್ತು ತಾರಾ ವಿತಸ್ತ ಗಂಜು ಅವರಿದ್ದ ಪೀಠ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಮಾಂಜ್ರಾ ನದಿ ಒಡಲು ಬಗೆಯುತ್ತಿರುವ ದಂಧೆಕೋರರು: ಹಗಲು-ರಾತ್ರಿ ಎನ್ನದೆ ಮರಳು ಮಾಫಿಯಾ

ಈ ಸಂಬಂಧ ಗೃಹ ಇಲಾಖೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದ್ದು, ಅಕ್ರಮ ಮರಳು ಸಾಗಣೆ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ವಿವರವಾದ ಉತ್ತರ ನೀಡುವಂತೆ ಸೂಚಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ