ಮಾನನಷ್ಟ ಮೊಕದ್ದಮೆ ಪ್ರಕರಣ; ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್​ಗೆ ಹೈಕೋರ್ಟ್​ನಿಂದ ಬಿಗ್ ರಿಲೀಫ್

| Updated By: ಸುಷ್ಮಾ ಚಕ್ರೆ

Updated on: Jun 15, 2022 | 1:55 PM

ಪರಪ್ಪನ ಅಗ್ರಹಾರದಲ್ಲಿ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್​ಗೆ ವಿಐಪಿ ಸೌಲಭ್ಯ ನೀಡಲಾಗುತ್ತಿದೆ ಎಂದು ರೂಪಾ ಮೌದ್ಗಿಲ್ ವರದಿಯಲ್ಲಿ ತಿಳಿಸಿದ್ದರು. ಅಲ್ಲದೆ, ಜೈಲಿನ ಅಕ್ರಮಗಳ ಬಗ್ಗೆ ದೂರು ನೀಡಿದ್ದರು.

ಮಾನನಷ್ಟ ಮೊಕದ್ದಮೆ ಪ್ರಕರಣ; ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್​ಗೆ ಹೈಕೋರ್ಟ್​ನಿಂದ ಬಿಗ್ ರಿಲೀಫ್
ಡಿ.ರೂಪಾ ಮೌದ್ಗಿಲ್
Follow us on

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಅವ್ಯವಹಾರ, ಅಕ್ರಮ ನಡೆಯುತ್ತಿದೆ ಎಂದು ಪತ್ರ ಬರೆದಿದ್ದ ಕರಕುಶಲ ನಿಗಮದ ಎಂಡಿ ಡಿ. ರೂಪಾ ಮೌದ್ಗಿಲ್ (D Roopa Moudgil) ವಿರುದ್ಧ ನಿವೃತ್ತ ಐಪಿಎಸ್​ ಅಧಿಕಾರಿ ಹೆಚ್​ಎನ್​ ಸತ್ಯನಾರಾಯಣ ರಾವ್ (HN Sathyanarayan Rao) ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಹೈಕೋರ್ಟ್​ ರೂಪಾ ಮೌದ್ಗಿಲ್​ಗೆ ಬಿಗ್ ರಿಲೀಫ್‌ ನೀಡಿದೆ. ಐಪಿಎಸ್ ಅಧಿಕಾರಿ ಡಿ. ರೂಪಾ ಅವರ ವಿರುದ್ಧದ ಮಾನನಷ್ಟ ಪ್ರಕರಣವನ್ನು ಹೈಕೋರ್ಟ್ (Karnataka High Court) ರದ್ದುಪಡಿಸಿದೆ. ಈ ಮೂಲಕ ಇಬ್ಬರು ಪೊಲೀಸ್ ಅಧಿಕಾರಿಗಳ ಜಗಳಕ್ಕೆ ಪೂರ್ಣವಿರಾಮ ಬಿದ್ದಿದೆ.

ಪರಪ್ಪನ ಅಗ್ರಹಾರದಲ್ಲಿ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್​ಗೆ ವಿಐಪಿ ಸೌಲಭ್ಯ ನೀಡಲಾಗುತ್ತಿದೆ ಎಂದು ರೂಪಾ ಮೌದ್ಗಿಲ್ ವರದಿಯಲ್ಲಿ ತಿಳಿಸಿದ್ದರು. ಅಲ್ಲದೆ, ಜೈಲಿನ ಅಕ್ರಮಗಳ ಬಗ್ಗೆ ದೂರು ನೀಡಿದ್ದರು. ಈ ದೂರಿಗೂ ಮೊದಲು ಸರ್ಕಾರದ ಪೂರ್ವಾನುಮತಿ ಪಡೆಯದ ಹಿನ್ನೆಲೆ ನಿವೃತ್ತ IPS ಅಧಿಕಾರಿ ಸತ್ಯನಾರಾಯಣರಾವ್ ಡಿ. ರೂಪಾ ಮೌದ್ಗಿಲ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ಇದನ್ನೂ ಓದಿ: ಮುಖ್ಯ ಕಾರ್ಯದರ್ಶಿಗೆ ಗೃಹ ಕಾರ್ಯದರ್ಶಿ ರೂಪಾ ಪತ್ರ : ನಿಂಬಾಳ್ಕರ್ ಮೇಲೆ ಗಂಭೀರ ಆರೋಪ

ಆ ಸಂದರ್ಭದಲ್ಲಿ ಕಾರಾಗೃಹ ಡಿಜಿಪಿ ಐಜಿಯಾಗಿದ್ದ ಹೆಚ್.ಎನ್. ಸತ್ಯನಾರಾಯಣ ರಾವ್ ವಿರುದ್ಧ ಕಾರಾಗೃಹ ಡಿಐಜಿ ಆಗಿದ್ದಾಗ ಡಿ. ರೂಪಾ ಪತ್ರ ಬರೆದಿದ್ದರು. ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತು ಪತ್ರದಲ್ಲಿ ಆರೋಪ ಮಾಡಿದ್ದರು. ಜಯಲಲಿತಾ ಆಪ್ತೆ ಶಶಿಕಲಾಗೆ ಅಡುಗೆಮನೆಯ ವಿಶೇಷ ಸವಲತ್ತು ನೀಡಲಾಗಿದೆ. 2 ಕೋಟಿ ಹಣ ಪಡೆದು ವಿಶೇಷ ಸವಲತ್ತು ಕಲ್ಪಿಸಲಾಗಿದೆ ಎಂದು ಅವರು ಪತ್ರದಲ್ಲಿ ಆರೋಪ ಮಾಡಿದ್ದರು.

ಕರೀಂ ಲಾಲಾ ತೆಲಗಿ ಸೇವೆಗೆ ಸಹಕೈದಿಗಳ ಬಳಕೆ ಬಗ್ಗೆಯೂ ರೂಪಾ ಆರೋಪ ಮಾಡಿದ್ದರು. ಈ ಆರೋಪಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಡಿಜಿಪಿ ಐಜಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಹೆಚ್​ಎನ್​ ಸತ್ಯನಾರಾಯಣ ರಾವ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ಪ್ರಕರಣ ರದ್ದು ಕೋರಿ ಡಿ. ರೂಪಾ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ವ್ಯಕ್ತಿಗಳ ನಡುವಿನ ಅಧಿಕೃತ ಪತ್ರ ವ್ಯವಹಾರ ಮಾನನಷ್ಟವಾಗುವುದಿಲ್ಲ ಎಂದು ನ್ಯಾ.ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಏಕಸದಸ್ಯಪೀಠ ಆದೇಶ ಹೊರಡಿಸಿದೆ.

ಏನಿದು ಪ್ರಕರಣ?:

2017ರಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಗಹದ ಡಿಜಿಪಿಯಾಗಿದ್ದ ಸತ್ಯನಾರಾಯಣ ರಾವ್ ಜೈಲಿನಲ್ಲಿದ್ದ ವಿ.ಕೆ ಶಶಿಕಲಾ ಅವರಿಂದ 2 ಕೋಟಿ ರೂ. ಲಂಚ ಪಡೆದು ಅವರಿಗೆ ವಿಶೇಷ ಆತಿಥ್ಯ ನೀಡುತ್ತಿದ್ದಾರೆಂದು ಡಿಐಜಿ ಡಿ. ರೂಪಾ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ಇದು ಪೊಲೀಸ್ ಇಲಾಖೆ ಮತ್ತು ಆಗಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಭಾರೀ ಸಂಚಲನ ಉಂಟುಮಾಡಿತ್ತು. ಪೊಲೀಸ್ ಅಧಿಕಾರಿಯ ಮೇಲೆ ಮತ್ತೋರ್ವ ಪೊಲೀಸ್ ಅಧಿಕಾರಿಯೇ ಆರೋಪ ಹೊರಿಸಿದ್ದರಿಂದ ಪೊಲೀಸ್ ಇಲಾಖೆ ಮುಜುಗರಕ್ಕೊಳಗಾಗಿತ್ತು.

ಸತ್ಯನಾರಾಯಣ ರಾವ್ ಹೇಳಿದ್ದೇನು?:
ಐಪಿಎಸ್ ಅಧಿಕಾರಿ ಡಿ. ರೂಪಾಗೆ ಕಾರಾಗೃಹದ ಕಾನೂನಿನ ಬಗ್ಗೆ ಏನು ಗೊತ್ತು? ಎರಡು ಕೋಟಿ ಲಂಚ ಪಡೆದಿದ್ದೇನೆಂದು ಅವರು ಮಾಡಿರುವ ಆರೋಪದ ಬಗ್ಗೆ ಯಾವುದೇ ತನಿಖೆಗೆ ನಾನು ಸಿದ್ದ. ಬಾಯಿಗೆ ಬಂದಂತೆ ಬರೆದು, ಇಲಾಖೆಯ ಕಾನೂನು ಉಲ್ಲಂಘಿಸಿರುವುದರಿಂದ ರೂಪಾ ವಿರುದ್ದ ಕ್ರಮ ತೆಗೆದುಕೊಳ್ಳಬೇಕೆಂದು ಡಿಜಿಪಿ ಸತ್ಯನಾರಾಯಣ ರಾವ್ ಆಗ್ರಹಿಸಿದ್ದರು. ಅಲ್ಲದೆ, ಅವರ ಬಗ್ಗೆ ಮಾನನಷ್ಟ ಮೊಕದ್ದಮೆಯನ್ನೂ ದಾಖಲಿಸಿದ್ದರು.

ಆದರೆ, ಇದಕ್ಕೆ ಸ್ಪಷ್ಟನೆ ನೀಡಿದ್ದ ರೂಪಾ ಮೌದ್ಗಿಲ್, 17 ವರ್ಷದಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಪರಪ್ಪನ ಅಗ್ರಹಾರದಲ್ಲಿ ಏನೇನು ನಡೆಯುತ್ತಿದೆ, ಕಾರಾಗೃಹದ ಕಾನೂನು ಏನು ಎನ್ನುವುದನ್ನು ಅರಿತೇ ನಾನು ವರದಿ ನೀಡಿದ್ದೇನೆ. ನಾನು ನೀಡಿರುವ ವರದಿಯನ್ನು ಪರಿಶೀಲನೆ ಮಾಡಲಿ ಎಂದು ಡಿಐಜಿ ರೂಪಾ ಮೌದ್ಗಿಲ್ ಸ್ಪಷ್ಟನೆ ನೀಡಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:44 pm, Wed, 15 June 22