ನಾಡಗೀತೆಗೆ ಸಂಗೀತ ಸಂಯೋಜನೆ ಪ್ರಶ್ನಿಸಿದ್ದ ರಿಟ್ ಅರ್ಜಿ ವಜಾ, ದಶಕಗಳ ಸಮಸ್ಯೆಗೆ ತೆರೆ

| Updated By: ರಮೇಶ್ ಬಿ. ಜವಳಗೇರಾ

Updated on: Apr 24, 2024 | 6:23 PM

ಕರ್ನಾಟಕದ ನಾಡಗೀತೆಗೆ ಸಂಗೀತ ಸಂಯೋಜನೆ ಕುರಿತಂತೆ ಎದ್ದಿರುವ ವಿವಾದಕ್ಕೆ‌ ಕೊನೆಗೂ ತೆರೆ ಬಿದ್ದಿದೆ. ರಾಷ್ಟ್ರ ಕವಿ ಕುವೆಂಪು ವಿರಚಿತ ನಾಡಗೀತೆಗೆ ಸಂಗೀತ ಸಂಯೋಜನೆ ಪ್ರಶ್ನಿಸಿದ್ದ ರಿಟ್ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್​ ವಜಾಗೊಳಿಸಿದೆ. ಇದರೊಂದಿಗೆ ದಶಕಗಳ ಸಮಸ್ಯೆಗೆ ತೆರೆ ಬಿದ್ದಂತಾಗಿದೆ.

ನಾಡಗೀತೆಗೆ ಸಂಗೀತ ಸಂಯೋಜನೆ ಪ್ರಶ್ನಿಸಿದ್ದ ರಿಟ್ ಅರ್ಜಿ ವಜಾ, ದಶಕಗಳ ಸಮಸ್ಯೆಗೆ ತೆರೆ
ಕರ್ನಾಟಕ ಹೈಕೋರ್ಟ್
Follow us on

ಬೆಂಗಳೂರು, (ಏಪ್ರಿಲ್ 24): ರಾಷ್ಟ್ರ ಕವಿ ಕುವೆಂಪು(Kuvempu) ವಿರಚಿತ ನಾಡಗೀತೆಗೆ (Karnataka anthem) ಸಂಗೀತ ಸಂಯೋಜನೆ ಪ್ರಶ್ನಿಸಿದ್ದ ರಿಟ್ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ (Karnataka High Court)​ ವಜಾಗೊಳಿಸಿದೆ. ಮೈಸೂರು ಅನಂತಸ್ವಾಮಿ ಅವರ ಧಾಟಿ ಕಡ್ಡಾಯಗೊಳಿಸಿ ಸರ್ಕಾರ ಆದೇಶವನ್ನು ಪ್ರಶ್ನಿಸಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಅವರು ಹೈಕೋರ್ಟ್​ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಇಂದು(ಏಪ್ರಿಲ್ 24) ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​, ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ. ನಿರ್ದಿಷ್ಟ ರಾಗದಲ್ಲಿ ನಾಡಗೀತೆ ಕಡ್ಡಾಯಗೊಳಿಸಲು ಸರ್ಕಾರಕ್ಕೆ ಅಧಿಕಾರವಿದೆ ಎಂದು ನ್ಯಾಯಮೂರ್ಯಿ ಕೃಷ್ಣ ಎಸ್ ದೀಕ್ಷಿತ್ ರಿದ್ದ ಹೈಕೋರ್ಟ್ ಪೀಠ ಹೇಳಿ ಕಿಕ್ಕೇರಿ ಕೃಷ್ಣಮೂರ್ತಿ ಅರ್ಜಿಯನ್ನು ವಜಾ ಮಾಡಿದೆ. ಸರ್ಕಾರ ಕ್ರಮ ಸಮರ್ಥಿಸಿ ಎಎಜಿ ಎಸ್.ಎ.ಅಹಮದ್ ವಾದ ಮಂಡಿಸಿದರು. ಇದರೊಂದಿಗೆ ದಶಕಗಳ ಸಮಸ್ಯೆಗೆ ಕೊನೆಗೂ ತೆರೆ ಬಿದ್ದಂತಾಗಿದೆ.

ದಶಕಗಳ ಸಮಸ್ಯೆ:

ನಾಡಗೀತೆಯ ಧಾಟಿ ಹಾಗೂ ಯಾರ ಸ್ವರ ಸಂಯೋಜನೆ ಬಳಸಬೇಕು ಎಂಬ ಬಗ್ಗೆ ದಶಕಗಳ ಕಾಲ ಪರ- ವಿರೋಧ ಚರ್ಚೆ ಕಾರಣವಾಗಿತ್ತು. 2013ರ ಜೂನ್‌ನಲ್ಲಿ. ಆಗ ವಿದ್ವಾಂಸ ವಸಂತ ಕನಕಾಪುರ ಅವರ ಅಧ್ಯಕ್ಷತೆಯಲ್ಲಿ ನಾಡಗೀತೆಗೆ ನಿರ್ದಿಷ್ಟಧಾಟಿ ಕುರಿತು ನಿರ್ಧರಿಸಲು ನಡೆದಿದ್ದ ಸಭೆ ನಡೆದಿತ್ತು. ಮೈಸೂರು ಅನಂತಸ್ವಾಮಿ ಅವರು ನಾಡಗೀತೆಯ ಒಂದು ಪಲ್ಲವಿ, ಎರಡು ಚರಣಗಳಿಗೆ ಮಾತ್ರ ಸ್ವರ ಸಂಯೋಜನೆ ಮಾಡಿದ್ದು, ಪೂರ್ಣ ಪಾಠಕ್ಕೆ ಮಾಡಿಲ್ಲ. ಅವರ ಪಾಠದಲ್ಲಿ ಭೂದೇವಿಯ ಮಕುಟದ, ಜನನಿಯ ಜೋಗುಳ, ತೈಲಪ ಹೊಯ್ಸಳ ಇವುಗಳನ್ನು ಸೇರಿಸಿಲ್ಲ. ಸ್ವರ ಸಂಯೋಜನೆ ಸುಶ್ರಾವ್ಯವಾಗಿದೆ. ಆದರೆ, ಸಿ.ಅಶ್ವತ್ಥ್‌ ಅವರು ಪೂರ್ಣ ಪಾಠಕ್ಕೆ ಸ್ವರ ಸಂಯೋಜನೆ ಮಾಡಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ಮೈಸೂರು ಅನಂತಸ್ವಾಮಿ ಅವರ ಸ್ವರ ಸಂಯೋಜನೆ ಒಪ್ಪಿದರೆ ಒಂದು ಪಲ್ಲವಿ ಮತ್ತು ಎರಡು ಚರಣವನ್ನು ನಾಡಗೀತೆಯಾಗಿ ಅಂಗೀಕರಿಸಬೇಕು. ಇನ್ನು ಪೂರ್ಣ ಪಾಠವನ್ನು ನಾಡಗೀತೆಯಾಗಿ ಮಾಡಿಕೊಂಡರೆ ಸಿ.ಅಶ್ವತ್ಥ್‌ ಅವರ ಧಾಟಿಯಲ್ಲಿ ಹಾಡಬೇಕೆಂಬ ಬಗ್ಗೆ ಚರ್ಚಿಸಲಾಗಿತ್ತು. ಇದಕ್ಕೆ ಸಹಮತ ಬರದಿದ್ದರಿಂದ 2014ರಲ್ಲಿ ಚೆನ್ನವೀರ ಕಣವಿ ಅಧ್ಯಕ್ಷತೆಯಲ್ಲಿ ಸಭೆ ಸೇರಿದ್ದ ಸಮಿತಿಯು ನಾಡಗೀತೆಯ ಪಠ್ಯವನ್ನು ಅರ್ಥಪೂರ್ಣವಾಗಿ 21 ಸಾಲುಗಳಿಗೆ ಸೀಮಿತಗೊಳಿಸಬೇಕು. ಇದಕ್ಕೆ ಸಿ.ಅಶ್ವತ್ಥ್‌ ರಾಗ ಸಂಯೋಜಿಸಿರುವ ಧಾಟಿ ಬಳಸಬೇಕು. ಆದರೆ, ಅದರಲ್ಲಿನ ಪುನರಾವರ್ತನೆ, ಆಲಾಪನೆ, ಹಿನ್ನೆಲೆ ಸಂಗೀತ ಕೈಬಿಡಬೇಕು ಎಂದು ನಿರ್ಧರಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಆ ನಂತರವೂ ನಾಡಗೀತೆ ಹಾಡುವ ಕಾಲಾವಧಿಯನ್ನು ನಿಗದಿಪಡಿಸುವ ಬಗ್ಗೆ ಅನೇಕ ಸಭೆಗಳು ನಡೆದವು. ಹಿರಿಯರು ತಮ್ಮ ಅಭಿಪ್ರಾಯವನ್ನು ಪ್ರತಿಪಾದಿಸಿದ್ದರು.

ಇದನ್ನೂ ಓದಿ: ನಾಡಗೀತೆಗೆ ಸಂಗೀತ ಸಂಯೋಜನೆ ವಿವಾದ: ಮೈಸೂರು ಅನಂತಸ್ವಾಮಿ ಅವರ ಧಾಟಿ ಅಳವಡಿಕೆಗೆ ಆಕ್ಷೇಪ

ಸಿ.ಅಶ್ವತ್ಥ್‌ ದಾಟಿ ಬಳಕೆಗೆ ಆಗ್ರಹ

ಈ ನಡುವೆ ಕುವೆಂಪು ಅವರ ವಾರಸುದಾರರ ಅಭಿಪ್ರಾಯ ಪಡೆದಿದ್ದ ರಾಜ್ಯ ಸರ್ಕಾರ, ನಾಡಗೀತೆಯ ಯಾವುದೇ ಸಾಲಿಗೆ ಕತ್ತರಿ ಹಾಕದೆ ಪೂರ್ಣ ಪಾಠವನ್ನೇ ಹಾಡಲು 2016ರಲ್ಲಿ ಮಾನ್ಯತೆ ನೀಡಿತ್ತು. ಹಾಗಾಗಿ ಸಿ.ಅಶ್ವತ್ಥ್‌ ಅವರ ದಾಟಿಯನ್ನೇ ಬಳಕೆ ಮಾಡಬೇಕೆಂಬ ಕೂಗುಕೇಳಿ ಬಂದಿತ್ತು.

ಪೂರ್ತಿ ಗೀತೆಗೆ ಅನಂತಸ್ವಾಮಿ ರಾಗ

2018ರಲ್ಲಿ ಕಸಾಪ ಅಧ್ಯಕ್ಷ ಮನು ಬಳಿಗಾರ್‌ ಅಧ್ಯಕ್ಷತೆಯಲ್ಲಿ ಸಭೆ ಸೇರಿ, 2.30 ನಿಮಿಷದಲ್ಲಿ ಹಾಡಿ ಮುಗಿಸಲು ಸಹಮತ ಸೂಚಿಸಲಾಗಿತ್ತು. ಅಂದಿನ ಸಭೆಯ ನಡಾವಳಿಯನ್ನು ಆಗಿನ ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದರೂ ಸಕಾರಾತ್ಮಕ ಪ್ರತಿಕ್ರಿಯೆ ಬಂದಿರಲಿಲ್ಲ. ಆ ನಂತರ ಮೈಸೂರಿನ ಸುಗಮ ಸಂಗೀತ ಹಿರಿಯ ಕಲಾವಿದೆ ಎಚ್‌.ಆರ್‌.ಲೀಲಾವತಿ ಅಧ್ಯಕ್ಷತೆಯಲ್ಲಿ ನಡೆದ ಸಾಹಿತಿ, ಸಂಗೀತ ಕಲಾವಿದರ ತಜ್ಞರ ಸಮಿತಿ ನಾಡಗೀತೆಗೆ ಮೈಸೂರು ಅನಂತಸ್ವಾಮಿ ಅವರ ರಾಗ ಸಂಯೋಜನೆಯ ಧಾಟಿ ಅಳವಡಿಸಿಕೊಂಡು 2.30 ನಿಮಿಷಗಳ ಕಾಲಮಿತಿಯಲ್ಲಿ ಕವನದ ಪೂರ್ಣಪಾಠವನ್ನು ಹಾಡಬಹುದು ಎಂದು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:22 pm, Wed, 24 April 24