ನವೆಂಬರ್ 1ರಿಂದ ಅನಕ್ಷರಸ್ಥ ಖೈದಿಗಳಿಗೆ ಶಿಕ್ಷಣ; ಜೈಲಿನೊಳಗಿನ ಅಕ್ಷರಸ್ಥರಿಂದಲೇ ಪಾಠ: ಗೃಹ ಸಚಿವ ಆರಗ ಜ್ಞಾನೇಂದ್ರ
Araga Jnanendra: ಹೆಬ್ಬೆಟ್ಟು ಒತ್ತಿ ಜೈಲಿನ ಒಳಗೆ ಬಂದವರು ಸಹಿ ಹಾಕಿ ಹೊರಗೆ ಹೋಗಬೇಕು ಎಂಬ ಉದ್ದೇಶದಿಂದ ನವೆಂಬರ್ 1ರಿಂದ ಜೈಲಿನೊಳಗಿನ ಅನಕ್ಷರಸ್ಥರಿಗೆ ಪಾಠ ಹೇಳಲಾಗುತ್ತದೆ. ಈ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.
ನವೆಂಬರ್ 1ರಿಂದ ರಾಜ್ಯದ ಜೈಲಿನಲ್ಲಿರುವ ಅನಕ್ಷರಸ್ಥ ಖೈದಿಗಳಿಗೆ ಶಿಕ್ಷಣ ನೀಡುತ್ತೇವೆ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ 6 ಸಾವಿರ ಅನಕ್ಷರಸ್ಥ ಕೈದಿಗಳಿದ್ದಾರೆ ಎಂಬ ಮಾಹಿತಿ ಇದ್ದು, ಅವರಿಗೆ ಶಿಕ್ಷಣ ಕೊಡುವ ಕೆಲಸ ಮಾಡಲಾಗುವುದು ಎಂದು ಆರಗ ನುಡಿದಿದ್ದಾರೆ. ಹೆಬ್ಬೆಟ್ಟು ಒತ್ತಿ ಜೈಲಿನ ಒಳಗೆ ಬಂದವರು ಸಹಿ ಹಾಕಿ ಹೊರಗೆ ಹೋಗಬೇಕು ಎಂಬ ಉದ್ದೇಶವಿದೆ. ಜೈಲಿನ ಒಳಗಿರುವ ಅಕ್ಷರಸ್ಥರನ್ನು ಬಳಸಿಕೊಂಡು ಪಾಠ ಮಾಡುತ್ತೇವೆ. ವಿನೂತನ ಕಾರ್ಯಕ್ರಮದ ಮುಖಾಂತರ ಖೈದಿಗಳನ್ನು ಅಕ್ಷರಸ್ಥರನ್ನಾಗಿ ಮಾಡುವ ಉದ್ದೇಶ ಹೊಂದಿದ್ದೇವೆ ಎಂದು ಆರಗ ಹೇಳಿದ್ದಾರೆ.
ಕವಾಯತು ವೇಳೆ ಇನ್ಮುಂದೆ ಕನ್ನಡದಲ್ಲಿ ಸೂಚನೆ ನೀಡುತ್ತೇವೆ. ನವೆಂಬರ್ 1ರಿಂದ ಕನ್ನಡದಲ್ಲಿಯೇ ಸೂಚನೆ ನೀಡಲಾಗುತ್ತದೆ ಎಂದು ಇದೇ ವೇಳೆ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಈ ಮೊದಲು ಕವಾಯತು ವೇಳೆ ಆಂಗ್ಲ ಭಾಷೆಯಲ್ಲಿ ಸೂಚನೆ ನೀಡಲಾಗುತ್ತಿತ್ತು. ಇನ್ನು ಮುಂದೆ ಇದು ಕನ್ನಡದಲ್ಲಿರಲಿದೆ ಎಂದು ಗೃಹ ಸಚಿವರು ಅಧಿಕೃತವಾಗಿ ತಿಳಿಸಿದ್ದಾರೆ.
‘ಬಿಟ್ ಕಾಯಿನ್, ಡ್ರಗ್ಸ್ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು. ವಿಪಕ್ಷ ನಾಯಕರಿಗೆ ಯಾವುದೇ ಮಾಹಿತಿ ಇದ್ದರೂ ನೀಡಬಹುದು’: ಆರಗ ಜ್ಞಾನೇಂದ್ರ ಬಿಟ್ ಕಾಯಿನ್, ಡ್ರಗ್ಸ್ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಈ ಪ್ರಕರಣಗಳಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ತನಿಖೆಯ ಸಂದರ್ಭದಲ್ಲಿ ಎಲ್ಲ ವಿಚಾರ ಹೇಳಲು ಆಗಲ್ಲ. ವಿಪಕ್ಷ ನಾಯಕರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಈ ಪ್ರಕರಣಗಳ ಕುರಿತು ವಿಪಕ್ಷ ನಾಯಕರಿಗೆ ಯಾವುದೇ ಮಾಹಿತಿ ಇದ್ದರೂ ನೀಡಬಹುದು. ನೇರವಾಗಿ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಬಹುದು. ಈ ಪ್ರಕರಣಗಳಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಆರಗ ಜ್ಞಾನೇಂದ್ರ ನುಡಿದಿದ್ದಾರೆ.
ಕರ್ನಾಟಕ ಸಿನಿಮಾ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತರಲಾಗುವುದು: ಆರಗ ಜ್ಞಾನೇಂದ್ರ ಕರ್ನಾಟಕ ಸಿನಿಮಾ ನಿಯಂತ್ರಣ ಕಾಯ್ದೆ ತಿದ್ದುಪಡಿ ಮಾಡುತ್ತೇವೆ ಎಂದು ವಿಕಾಸಸೌಧದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ. ಕರ್ನಾಟಕ ಸಿನಿಮಾ ನಿಯಂತ್ರಣ ನಿಯಮ ಸಭೆ ಬಳಿಕ ಅವರು ಮಾತನಾಡಿದರು. ಪರವಾನಗಿ ಶುಲ್ಕ ರಿಯಾಯಿತಿ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ಲಾಕ್‌ಡೌನ್ ಮಾಡಿದ ಹಿನ್ನೆಲೆ ರಿಯಾಯಿತಿ ಸಂಬಂಧ ಹಾಗೂ ಚಿತ್ರಮಂದಿರ ಶುಲ್ಕ ಪರಿಷ್ಕರಣೆಯ ಬಗ್ಗೆ ಚರ್ಚೆ ಮಾಡಿದ್ದೇವೆ. 5 ವರ್ಷಕ್ಕೊಮ್ಮೆ ಶುಲ್ಕ ಪರಿಷ್ಕರಣೆ ಆಗಬೇಕೆಂದು ಚರ್ಚೆಯಾಗಿದೆ ಎಂದು ಆರಗ ನುಡಿದಿದ್ದಾರೆ.
ಪೈರಸಿ ಕುರಿತು ಮಾತನಾಡಿದ ಅವರು, ಅದರಿಂದ ಸಿನಿಮಾ ನಿರ್ಮಾಪಕರಿಗೆ ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ ಸಿಸಿಬಿ, ಸೈಬರ್ ವಿಭಾಗದಿಂದ ಜಂಟಿ ಕಾರ್ಯಾಚರಣೆ ನಡೆಸಲು ಒಂದು ಪಡೆ ರಚನೆ ಮಾಡಿದ್ದೇವೆ. ನಿಯಮಾವಳಿಯಲ್ಲಿ ಶಿಕ್ಷೆಯ ಪ್ರಮಾಣ ಇದ್ದು, ಅದರಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. ಸೌಂದರ್ಯ ಜಗದೀಶ್ ಪುತ್ರನ ಪುಂಡಾಟ ಪ್ರಕರಣಕ್ಕೆ ಸಂಬಂಧಪಟ್ಟ ಪ್ರಶ್ನೆಗೆ ಅವರು, ಮಾಹಿತಿ ಪಡೆದು ಉತ್ತರಿಸುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:
ಪ್ರಧಾನಿ ಸೂಚನೆಯಂತೆ ಅನಗತ್ಯ ಕಡತಗಳ ವಿಲೇವಾರಿ; ಕೇಂದ್ರ ಸರ್ಕಾರಕ್ಕೆ 4.29 ಕೋಟಿ ರೂ. ಆದಾಯ
ಒಟ್ಟಿಗೇ ಮದ್ಯಪಾನ ಮಾಡಲು ಲಿಕ್ಕರ್ ಶಾಪ್ಗೆ ಹೋದ ಸ್ನೇಹಿತರು; 10 ರೂ.ಗಾಗಿ ನಡೆದೇ ಹೋಯ್ತು ಭೀಕರ ಕೊಲೆ
Published On - 3:32 pm, Thu, 28 October 21