ಜಿ ಕೃಷ್ಣಯ್ಯ ಹಂತಕರ ಬಿಡುಗಡೆ; ಬಿಹಾರ ಸರ್ಕಾರದ ನಿರ್ಧಾರ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ಕರ್ನಾಟಕ ಐಎಎಸ್ ಅಧಿಕಾರಿಗಳ ಸಂಘಟನೆ

ಜೈಲು ನಿಯಮ ತಿದ್ದುಪಡಿ ಮಾಡಿದ ನಿರ್ಧಾವನ್ನು ಮತ್ತೊಮ್ಮೆ ಪರಿಶೀಲಿಸಬೇಕು ಎಂದು ನಾವು ಬಿಹಾರ ಸರ್ಕಾರವನ್ನು ಕೇಳಿಕೊಳ್ಳುತ್ತೇವೆ ಎಂದು ಸಂಘಟನೆ ಒತ್ತಾಯಿಸಿದೆ.

ಜಿ ಕೃಷ್ಣಯ್ಯ ಹಂತಕರ ಬಿಡುಗಡೆ; ಬಿಹಾರ ಸರ್ಕಾರದ ನಿರ್ಧಾರ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ಕರ್ನಾಟಕ ಐಎಎಸ್ ಅಧಿಕಾರಿಗಳ ಸಂಘಟನೆ
ನಿತೀಶ್ ಕುಮಾರ್
Follow us
ರಶ್ಮಿ ಕಲ್ಲಕಟ್ಟ
|

Updated on:Apr 27, 2023 | 4:39 PM

ಗೋಪಾಲ್​​ಗಂಜ್​​ನ (Gopalganj) ಮಾಜಿ ಜಿಲ್ಲಾ ಮೆಜಿಸ್ಟ್ರೇಟ್ ಐಎಎಸ್  ಜಿ. ಕೃಷ್ಣಯ್ಯ(IAS G Krishnaiah) ಅವರ ಹಂತಕರನ್ನು ಬಿಡುಗಡೆ ಮಾಡಿದ ಬಿಹಾರದ (Bihar) ಸರ್ಕಾರದ ನಿರ್ಧಾರ ಬಗ್ಗೆ ಕರ್ನಾಟಕ ಐಎಎಸ್ ಅಧಿಕಾರಿಗಳ ಸಂಘಟನೆ ಅತೃಪ್ತಿ ವ್ಯಕ್ತಪಡಿಸಿದೆ. ಜೈಲು ನಿಯಮಕ್ಕೆ ತಿದ್ದುಪಡಿ ಮಾಡಿದ ನಂತರ ಬಿಹಾರ ಸರ್ಕಾರ ಹಂತಕರನನ್ನು ಬಿಡುಗಡೆ ಮಾಡಿದೆ. ಈ ರೀತಿ ಮಾಡಿದ್ದು ಕರ್ತವ್ಯ ನಿರತರಾಗಿರುವಾಗಲೇ ಹತ್ಯೆಗೀಡಾದ ಸರ್ಕಾರಿ ಅಧಿಕಾರಿಗೆ ನ್ಯಾಯ ನಿರಾಕರಣೆಗೆ ಸಮವಾಗಿದೆ. ಬಿಹಾರ ಸರ್ಕಾರದ ಈ ನಿರ್ಧಾರವು ಸರ್ಕಾರಿ ಅಧಿಕಾರಿಗಳ ಸ್ಥೈರ್ಯವನ್ನು ಕುಗ್ಗಿಸುತ್ತದೆ. ಜೈಲು ನಿಯಮ ತಿದ್ದುಪಡಿ ಮಾಡಿದ ನಿರ್ಧಾವನ್ನು ಮತ್ತೊಮ್ಮೆ ಪರಿಶೀಲಿಸಬೇಕು ಎಂದು ನಾವು ಬಿಹಾರ ಸರ್ಕಾರವನ್ನು ಕೇಳಿಕೊಳ್ಳುತ್ತೇವೆ ಎಂದು ಸಂಘಟನೆ ಒತ್ತಾಯಿಸಿದೆ.

ಜೈಲು ನಿಯಮದ ತಿದ್ದುಪಡಿ

ಹಿಂದಿನ ನಿಯಮ ಪ್ರಕಾರ ಕರ್ತವ್ಯ ನಿರತ ಸರ್ಕಾರಿ ನೌಕರನ ಹತ್ಯೆಗೆ ಸಂಬಂಧಿಸಿದಂತೆ ಶಿಕ್ಷೆಗೊಳಗಾದವರು ಶಿಕ್ಷೆಗೆ ಅರ್ಹರಾಗಿಲಿಲ್ಲ.ಇದಕ್ಕೆ ಬಿಹಾರ ಸರ್ಕಾರ ತಿದ್ದುಪಡಿ ತಂದಿತ್ತು. ಹಾಗಾಗಿ 14 ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಶಿಕ್ಷೆ ಅನುಭವಿಸಿದ ಕೈದಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿತ್ತು.

ಐಎಎಸ್ ಜಿ ಕೃಷ್ಣಯ್ಯ ಯಾರು? ಏನಿದು ಪ್ರಕರಣ?

1994 ರಲ್ಲಿ, ಆನಂದ್ ಮೋಹನ್ ಅವರ ಬಿಪಿಪಿ ಪಕ್ಷದ ಮುಜಾಫರ್‌ಪುರದ ದರೋಡೆಕೋರ-ರಾಜಕಾರಣಿ ಛೋಟಾನ್ ಶುಕ್ಲಾ ಅವರ ಮೃತದೇಹ ಹೊತ್ತು ಗುಂಪೊಂದು ಪ್ರತಿಭಟನೆ ನಡೆಸುತ್ತಿತ್ತು. ಡಿಸೆಂಬರ್ 4 ರಂದು ಮುಜಾಫರ್‌ಪುರದ ಭಗವಾನ್‌ಪುರ್ ಚೌಕ್‌ನಲ್ಲಿ ಅಪರಿಚಿತ ದುಷ್ಕರ್ಮಿಗಳು ಅವರ ವಾಹನದ ಮೇಲೆ ಗುಂಡು ಹಾರಿಸಿ ಶುಕ್ಲಾ ಸಾವಿಗೀಡಾಗಿದ್ದರು. ಗುಂಡಿನ ದಾಳಿಯಲ್ಲಿ ಓರ್ವ ಪೊಲೀಸ್ ಸಹ ಭಾಗಿಯಾಗಿದ್ದಾನೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ತಿಳಿಸಿದೆ.

ಛೋಟಾನ್ ಹತ್ಯೆಯಲ್ಲಿ ಪೊಲೀಸರೊಬ್ಬರು ಭಾಗಿಯಾಗಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆ ಆತನ ಬೆಂಬಲಿಗರು ನಗರದಲ್ಲಿ ಆಕ್ರೋಶ ವ್ಯಕ್ತಪಡಿಸಿ ವಾಹನಗಳನ್ನು ಧ್ವಂಸಗೊಳಿಸಿದ್ದಾರೆ. ಮರುದಿನ, ಮುಜಫರ್‌ಪುರದಿಂದ ವೈಶಾಲಿಯ ಲಾಲ್‌ಗಂಜ್‌ನಲ್ಲಿರುವ ಅವನ ತಂದೆಯ ಗ್ರಾಮವಾದ ಖಂಜಾಹಚಕ್‌ಗೆ ಛೋಟಾನ್‌ನ ಮೃತದೇಹ ಹೊತ್ತು ಬೆಂಬಲಿಗರು ಹೋಗಿದ್ದರು.

ಆನಂದ್ ಮೋಹನ್ ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡು ನೆರೆದಿದ್ದ ಜನರನ್ನುದ್ದೇಶಿಸಿ ಆವೇಶಭರಿತ ಭಾಷಣ ಮಾಡಿದರು. ಆ ಸಮಯದಲ್ಲಿ ಗೋಪಾಲಗಂಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿದ್ದ ಜಿ ಕೃಷ್ಣಯ್ಯ ಅವರು ಹಾಜಿಪುರದಿಂದ ಗೋಪಾಲಗಂಜ್‌ಗೆ ಹಿಂತಿರುಗುತ್ತಿದ್ದರು. 1985ರ ಬ್ಯಾಚ್‌ನ ಐಎಎಸ್ ಅಧಿಕಾರಿ ಆಗಿರುವ ಜಿ ಕೃಷ್ಣಯ್ಯ ತೆಲಂಗಾಣದ ಮಹೆಬೂಬ್‌ನಗರದವರು.

ಕೆಂಪು ದೀಪವಿರುವ ಸರ್ಕಾರಿ ವಾಹನದ ನೋಡಿ ರೊಚ್ಚಿಗೆದ್ದ ಪ್ರತಿಭಟನಾಕಾರರು ಖಬ್ರಾ ಗ್ರಾಮದ ಬಳಿ ಕೃಷ್ಣಯ್ಯ ಅವರನ್ನು ಘೇರಾವ್ ಮಾಡಿ ಕಾರಿಗೆ ಕಲ್ಲು ತೂರಾಟ ಆರಂಭಿಸಿದರು. ಈ ನಡುವೆ ಛೋಟಾನ್ ಸಹೋದರ ಭುತ್ಕುನ್ ಶುಕ್ಲಾ ಕೃಷ್ಣಯ್ಯ ಅವರ ಮೇಲೆ ಗುಂಡು ಹಾರಿಸಿದ್ದು, ಜನರ ಗುಂಪು ಕೃಷ್ಣಯ್ಯ ಅವರನ್ನು ಥಳಿಸಿ ಹತ್ಯೆಗೈದಿದೆ.

ಕೃಷ್ಣಯ್ಯ ಅವರನ್ನು ಪೊಲೀಸರು ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಿಲ್ಲ. ಐಎಎಸ್ ಅಧಿಕಾರಿಯನ್ನು ಹತ್ಯೆ ಮಾಡಲು ಆನಂದ್ ಮೋಹನ್ ಜನಸಮೂಹವನ್ನು ಪ್ರಚೋದಿಸಿದರು ಎಂದು ಆರೋಪಿಸಲಾಗಿದೆ. 2007 ರಲ್ಲಿ ಕೆಳ ನ್ಯಾಯಾಲಯವು ಸಿಂಗ್ ಅವರಿಗೆ ಮರಣದಂಡನೆ ವಿಧಿಸಿತು, ಆದರೆ ಪಾಟ್ನಾ ಹೈಕೋರ್ಟ್ ನಂತರ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿತು.

ಇದನ್ನೂ  ಓದಿ:  ಆನಂದ್​ಮೋಹನ್​ ಸಿಂಗ್​ರನ್ನು ಮರಳಿ ಜೈಲಿಗೆ ಕಳುಹಿಸುವಂತೆ ಮೃತ ಐಎಎಸ್ ಅಧಿಕಾರಿ ಪತ್ನಿ ಪ್ರಧಾನಿ ಮೋದಿಗೆ ಮನವಿ

ಆನಂದ್ ಮೋಹನ್ ಸಿಂಗ್ ಯಾರು?

ಈಗ ನಿಷ್ಕ್ರಿಯವಾಗಿರುವ ಬಿಹಾರ್ ಪೀಪಲ್ಸ್ ಪಾರ್ಟಿ (ಬಿಪಿಪಿ) ಅನ್ನು ಸ್ಥಾಪಿಸಿದ ಆನಂದ್ ಮೋಹನ್ ಸಿಂಗ್ ಅವರು ಬಿಹಾರದ ರಾಜಕಾರಣಿಯಾಗಿದ್ದು, 1994 ರಲ್ಲಿ ಗೋಪಾಲ್‌ಗಂಜ್‌ನ ಅಂದಿನ ಜಿಲ್ಲಾ ಮ್ಯಾಜಿಸ್ಟ್ರೇಟ್  ಐಎಎಸ್ ಜಿ ಕೃಷ್ಣಯ್ಯ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದರು.

ಆನಂದ್ ಮೋಹನ್ ಸಿಂಗ್ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದ ಕೈದಿ. ಆದಾಗ್ಯೂ, ಬಿಹಾರ ಸರ್ಕಾರವು ಜೈಲು ನಿಯಮಗಳನ್ನು ತಿದ್ದುಪಡಿ ಮಾಡಿದ ಅವರನ್ನು ಬಿಡುಗಡೆ ಮಾಡಿದೆ. ಆನಂದ್ ಮೋಹನ್ ಜೊತೆಗೆ ನಿತೀಶ್ ಕುಮಾರ್ ಸರ್ಕಾರವು ಇತರ 26 ಕೈದಿಗಳನ್ನು ಬಿಡುಗಡೆ ಮಾಡಿದೆ.

2016 ರಲ್ಲಿ, ನಿತೀಶ್ ಕುಮಾರ್ ಅವರು ಬಿಹಾರ ಜೈಲು ಕೈಪಿಡಿ 2012 ಅನ್ನು ತಿದ್ದುಪಡಿ ಮಾಡಿದ್ದರು. ಆದರೆ ಈಗ ಅವರು ತಮ್ಮದೇ ಆದ ತಿದ್ದುಪಡಿಯನ್ನು ಹಿಂಪಡೆದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:37 pm, Thu, 27 April 23