ಕೆಇಎ ಸೀಟ್​ ಬ್ಲಾಕಿಂಗ್​ ಹಗರಣ: 10 ಆರೋಪಿಗಳ ಬಂಧನ

| Updated By: ವಿವೇಕ ಬಿರಾದಾರ

Updated on: Dec 03, 2024 | 4:41 PM

ಬೆಂಗಳೂರಿನ ಮಲ್ಲೇಶ್ವರಂ ಪೊಲೀಸರು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸೀಟ್ ಬ್ಲಾಕಿಂಗ್ ಹಗರಣಕ್ಕೆ ಸಂಬಂಧಿಸಿದಂತೆ 10 ಜನರನ್ನು ಬಂಧಿಸಿದ್ದಾರೆ. ಹಗರಣದಲ್ಲಿ ಭಾಗಿಯಾದವರು ಕೆಇಎ ನೌಕರರ ಸಹಾಯದಿಂದ ಪಾಸ್‌ವರ್ಡ್ ಪಡೆದು ಸೀಟ್‌ಗಳನ್ನು ಬ್ಲಾಕ್ ಮಾಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಹಗರಣದಲ್ಲಿ ಪ್ರತಿಷ್ಠಿತ ಕಾಲೇಜುಗಳ ಭಾಗಿಯಾಗಿರುವ ಶಂಕೆ ಇದೆ.

ಕೆಇಎ ಸೀಟ್​ ಬ್ಲಾಕಿಂಗ್​ ಹಗರಣ: 10 ಆರೋಪಿಗಳ ಬಂಧನ
ಕೆಇಎ
Follow us on

ಬೆಂಗಳೂರು, ಡಿಸೆಂಬರ್​ 03: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಸೀಟ್​ ಬ್ಲಾಕಿಂಗ್ ಹಗರಣಕ್ಕೆ (Seat blocking Scam) ಸಂಬಂಧಿಸಿದಂತೆ 10 ಆರೋಪಿಗಳನ್ನು ಮಲ್ಲೇಶ್ವರಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಗರಣದ ಕಿಂಗ್​ಪಿನ್ ಹರ್ಷ, ರವಿಶಂಕರ್, ಪುನೀತ್, ಶಶಿಕುಮಾರ್, ಪುರುಷೋತ್ತಮ್​, ಪ್ರಕಾಶ್, ಅವಿನಾಶ್ ಸೇರಿದಂತೆ 10 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕೆಇಎನಲ್ಲಿ ಕೌನ್ಸೆಲಿಂಗ್​ಗೆ ಆಯ್ಕೆಯಾಗಿ ಕಾಲೇಜು ಸೆಲೆಕ್ಟ್ ಮಾಡಿಕೊಳ್ಳದವರ ಸೀಟ್​ಗಳು ಹಾಗೂ ಸರ್ಕಾರದ ಅಡಿಯಲ್ಲಿ ಖಾಸಗಿ ಕಾಲೇಜಿನಲ್ಲಿ ಸೀಟ್ ಪಡೆದು, ದಾಖಲಾತಿ ಪಡೆಯದ ವಿದ್ಯಾರ್ಥಿಗಳ ಸೀಟ್​ಗಳನ್ನು ಗ್ಯಾಂಗ್ ಬ್ಲಾಕ್ ಮಾಡುತಿತ್ತು. ಆರೋಪಿಗಳು ಕೆಇಎ ನೌಕರ ಅವಿನಾಶ್​ ಎಂಬುವರ ಸಹಾಯದಿಂದ ಪಾಸ್‌ವರ್ಡ್ ಪಡೆದು ಸೀಟ್ ಬ್ಲಾಕಿಂಗ್ ಮಾಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಪಿಎಸ್​ಐ ನೇಮಕಾತಿ ಪರೀಕ್ಷೆ: ತಪ್ಪು ಪ್ರಶ್ನೆಗಳನ್ನು ನೀಡಿ ಅದರಿಂದಲೂ ಸಾವಿರಾರು ರೂ. ಸುಲಿಗೆಗೆ ಮುಂದಾದ ಕೆಇಎ

ನಂತರ ಲಕ್ಷಾಂತರ ರೂಪಾಯಿಗೆ ಮ್ಯಾನೇಜ್ ಮೆಂಟ್ ಕೋಟಾದಡಿ ಮಧ್ಯವರ್ತಿಗಳ ಸಹಾಯದಿಂದ ಡೀಲ್ ಮಾಡುತ್ತಿದ್ದರು. ಈ ಡೀಲ್​ನಲ್ಲಿ ಪ್ರತಿಷ್ಠಿತ ಕಾಲೇಜುಗಳ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

ಹಗರಣ ಸಂಬಂಧ ಕೆಇಎ ಆಡಳಿತಾಧಿಕಾರಿ ಇಸಾಲುದ್ದೀನ್ ಜೆ ಗಾಡಿಯಲ್ ನವೆಂಬರ್ 13ರಂದು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಾಗುತಿದ್ದಂತೆ ಆರೋಪಿ ಪ್ರಕಾಶ್ ತನ್ನ ಲ್ಯಾಪ್​ ಟಾಪ್​ಗಳನ್ನು ಕಡೂರಿನ ತನ್ನ ಜಮೀನಿನಲ್ಲಿ ಸುಟ್ಟು ಹಾಕಿದ್ದನು. ಮಲ್ಲೇಶ್ವರಂ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:10 am, Tue, 3 December 24