AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿಎಸ್​ಐ ನೇಮಕಾತಿ ಪರೀಕ್ಷೆ: ತಪ್ಪು ಪ್ರಶ್ನೆಗಳನ್ನು ನೀಡಿ ಅದರಿಂದಲೂ ಸಾವಿರಾರು ರೂ. ಸುಲಿಗೆಗೆ ಮುಂದಾದ ಕೆಇಎ

ಸ್ಪರ್ಧಾತ್ಮಕ ನೇಮಕಾತಿ ಪರೀಕ್ಷೆಗಳ ಹೆಸರಿನಲ್ಲಿಯೂ ಬಡ ಅಭ್ಯರ್ಥಿಗಳಿಂದ ಶುಲ್ಕ ಸುಲಿಗೆಗೆ ಸರ್ಕಾರ ಮುಂದಾಯಿತೇ ಎಂಬ ಅನುಮಾನ ಇದೀಗ ಬಲವಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮಾಡಿರುವ ತಪ್ಪಿಗೆ ಆಕ್ಷೇಪಣೆ ಸಲ್ಲಿಸುವುದಕ್ಕೂ ಅಭ್ಯರ್ಥಿಗಳೇ ಸಾವಿರಾರು ರೂಪಾಯಿ ದಂಡ ಕಟ್ಟುವ ಸ್ಥಿತಿ ಎದುರಾಗಿದೆ. ವಿವರ ಇಲ್ಲಿದೆ.

ಪಿಎಸ್​ಐ ನೇಮಕಾತಿ ಪರೀಕ್ಷೆ: ತಪ್ಪು ಪ್ರಶ್ನೆಗಳನ್ನು ನೀಡಿ ಅದರಿಂದಲೂ ಸಾವಿರಾರು ರೂ. ಸುಲಿಗೆಗೆ ಮುಂದಾದ ಕೆಇಎ
ಕೆಇಎ ಕೇಳಿದ್ದೇ ತಪ್ಪು ಪ್ರಶ್ನೆ, ಆಕ್ಷೇಪಣೆ ಸಲ್ಲಿಸಲು ನೀಡ್ಬೇಕು ಸಾವಿರಾರು ರೂಪಾಯಿ!
Vinay Kashappanavar
| Edited By: |

Updated on:Nov 11, 2024 | 7:33 AM

Share

ಬೆಂಗಳೂರು, ನವೆಂಬರ್ 11: ನೇಮಕಾತಿ ಸಂಬಂಧ ಸರ್ಕಾರ ನಡೆಸುವ ಬಹುತೇಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇತ್ತೀಚೆಗೆ ಒಂದಲ್ಲ ಒಂದು ಎಡವಟ್ಟುಗಳು ನಡೆಯುತ್ತಲೇ ಇವೆ. ಎಷ್ಟೇ ನಿಗಾವಹಿಸಿ ಪರೀಕ್ಷೆ ನಡೆಸಿದರೂ ತಪ್ಪುಗಳು ಕಂಡು ಬರುತ್ತಿವೆ. ಆದರೆ, ಈ ತಪ್ಪುಗಳಲ್ಲಿಯೂ ಸರ್ಕಾರ ಬೊಕ್ಕಸ ತುಂಬಿಸಿಕೊಳ್ಳಲು ಮುಂದಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಎಡವಟ್ಟುಗಳಿಗೂ ಅಭ್ಯರ್ಥಿಗಳೇ ದಂಡ ತೆರಬೇಕಾಗಿ ಬಂದಿರುವುದು ಅಭ್ಯರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಅಭ್ಯರ್ಥಿಗಳ ಆಕ್ರೋಶಕ್ಕೆ ಕಾರಣವೇನು?

ಈಗಾಗಲೇ ಸ್ಪರ್ಧಾತ್ಮಕ ನೇಮಕಾತಿ ಪರೀಕ್ಷೆಗಳ ಶುಲ್ಕವನ್ನು ಏರಿಕೆ ಮಾಡಲಾಗಿದೆ. ಇದು ಸಾಲದು ಎಂಬಂತೆ, ಕೆಇಎ ತಾನು ಪರೀಕ್ಷೆಗಳಲ್ಲಿ ಎಡವಟ್ಟು ಮಾಡಿ ಹಾಗೂ ತಪ್ಪಾದ ಪ್ರಶ್ನೆಗಳನ್ನು ನೀಡಿ ಸುಲಿಗೆಗೆ ಮುಂದಾಗಿದೆ! ಅಕ್ಷೇಪಣೆಯ ಹೆಸರಲ್ಲಿ ಕೋಟ್ಯಂತಂ ರೂಪಾಯಿ ಹಣ ವಸೂಲಿ ಮಾಡಲಾಗುತ್ತಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಳೆದ ವಾರ 402 ಪಿಎಸ್ಐ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ 10ಕ್ಕೂ ಹೆಚ್ಚು ತಪ್ಪಾದ ಪ್ರಶ್ನೆಗಳನ್ನು ಕೇಳಿದೆ. ಈ ಪ್ರಶ್ನೆಗಳಿಗೆ ಅಭ್ಯರ್ಥಿಗಳು ಆಕ್ಷೆಪಣೆಗಳಿದ್ದರೆ ಸಲ್ಲಿಸುವಂತೆ ಕೋರಿದೆ. ಆದರೆ, ಆಕ್ಷೆಪಣೆ ಸಲ್ಲಿಸುವ ಪ್ರತಿ ಒಂದು ಪ್ರಶ್ನೆಗೂ ನೂರು ರೂಪಾಯಿ ಶುಲ್ಕ ವಿಧಿಸಿದೆ.

ತಪ್ಪು ಪ್ರಶ್ನೆ ನೀಡಿ, ಆಕ್ಷೇಪಣೆಗಳಿಗೆ ಹಣ ವಸೂಲಿ!

ಪ್ರತಿಯೊಂದು ತಪ್ಪಾದ ಪ್ರಶ್ನೆಗೆ ಆಕ್ಷೇಪಣೆ ಸಲ್ಲಿಸಲು 100 ರೂಪಾಯಿ ಹಣ ಕಟ್ಟಬೇಕು. ಅಂದರೆ, 10 ತಪ್ಪಾದ ಪ್ರಶ್ನೆಗಳಿಗೆ, ಪರೀಕ್ಷೆ ಬರೆದ ಲಕ್ಷಂತಾರ ಅಭ್ಯರ್ಥಿಗಳು 1,000 ರೂ.ನಷ್ಟು ಹೆಚ್ಚು ಹಣ ಪಾವತಿಸಿ ಆಕ್ಷೇಪಣೆ ಸಲ್ಲಿಸಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.

ಪರೀಕ್ಷಾ ಪ್ರಾಧಿಕಾರದಿಂದ ನಡೆದ ಎಡವಟ್ಟಿಗೂ ತಪ್ಪಾದ ಪ್ರಶ್ನೆಗಳಿಗೆ ಆಕ್ಷೇಪಣೆ ಸಲ್ಲಿಸಬೇಕು ಎಂದರೂ ಸಾವಿರಾರೂ ರೂಪಾಯಿ ಶುಲ್ಕ ಕಟ್ಟಬೇಕಾಗಿದ್ದು, ಅಭ್ಯರ್ಥಿಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೇಂದ್ರ ಸರ್ಕಾರ ನಡೆಸುವ ಐಎಎಸ್ ಹಾಗೂ ಇತರ ಪರೀಕ್ಷೆಗಳಿಗೆ ಇರುವಂತೆ ಶುಲ್ಕ ಕಡಿಮೆ ಮಾಡಬೇಕು, ಆಕ್ಷೇಪಣೆ ಶುಲ್ಕವನ್ನು ತೆಗದು ಹಾಕಬೇಕೆಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕ ವಿವಿಗಳ ವಿದ್ಯಾರ್ಥಿಗಳಿಗೆ ಲಂಡನ್ ಭಾಗ್ಯ: ಸರ್ಕಾರದ ವತಿಯಿಂದ ಈಸ್ಟ್ ಲಂಡನ್ ವಿವಿಗೆ ಶೈಕ್ಷಣಿಕ ಪ್ರವಾಸ

ಒಟ್ಟಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸುವ ಪ್ರಾಧಿಕಾರಗಳು ಒಂದಲ್ಲ ಒಂದು ಎಡವಟ್ಟುಗಳನ್ನು ಮಾಡುತ್ತಲೇ ಇವೆ. ಮಂಡಳಿ ಮಾಡುವ ತಪ್ಪುಗಳಿಗೂ ಅಭ್ಯರ್ಥಿಗಳಿಂದ ಹಣ ಸುಲಿಗೆ ಮಾಡುತ್ತಿರುವುದು ಅಭ್ಯರ್ಥಿಗಳ ಪಾಲಿಗೆ ಸಂಕಷ್ಟ ತಂದಿದೆ. ಇನ್ನಾದರೂ ಸರ್ಕಾರದ ಇತ್ತ ಗಮನಹರಿಸಬೇಕಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:28 am, Mon, 11 November 24