ಬೆಂಗಳೂರು: ಕೋಲಾರದ ನರಸಾಪುರದಲ್ಲಿರುವ ವಿಸ್ಟ್ರಾನ್ ಇನ್ಫೊಕಾಂನ iPhone ಉತ್ಪಾದನಾ ಘಟಕದಲ್ಲಿ ನಡೆದ ಹಿಂಸಾಚಾರದ ಹಿನ್ನೆಲೆಯಲ್ಲಿ ಕರ್ನಾಟಕ ಕಾರ್ಮಿಕ ಇಲಾಖೆ ನಡೆಸಿದ ತನಿಖೆ ಮುಗಿದಿದ್ದು, ಸರ್ಕಾರಕ್ಕೆ ಸಲ್ಲಿಸಿರುವ ವರದಿ ಪ್ರಕಾರ, ಕೆಲವು ಕಾರ್ಮಿಕರು ಮತ್ತು ಗುತ್ತಿಗೆ ಆಧಾರಿತ ಕಾರ್ಮಿಕರನ್ನು ತಂದ ಗುತ್ತಿಗೆದಾರ ಇಬ್ಬರೂ ತಪ್ಪು ಮಾಡಿದ್ದಾರೆ. ಇದರಿಂದಾಗಿ ಅಲ್ಲಿ ಹಿಂಸಾಚಾರವಾಗಿ ರೂ. 25 ಕೋಟಿಗೂ ಹೆಚ್ಚಿನ ಹಾನಿ ಸಂಭವಿಸಿದೆ.
ಕಾರ್ಮಿಕ ಇಲಾಖೆ ಬರೀ ಕಾರ್ಮಿಕರ ವಿಚಾರವನ್ನಿಟ್ಟುಕೊಂಡು ತನಿಖೆ ನಡೆಸಿದೆ ಮತ್ತು ಇದಕ್ಕೂ ಪೊಲೀಸ್ ತನಿಖೆಗೂ ಯಾವ ಸಂಬಂಧವೂ ಇಲ್ಲ. ಕಾರ್ಮಿಕ ಇಲಾಖೆ ವರದಿ ಪ್ರಕಾರ, ಕಾರ್ಖಾನೆಯ ಸ್ಥಳೀಯ ಮುಖ್ಯಸ್ಥರದ್ದು ಯಾವ ತಪ್ಪೂ ಇರಲಿಲ್ಲ.
ಕಾರ್ಮಿಕ ಇಲಾಖೆಯ ಮೂಲಗಳ ಪ್ರಕಾರ, ಇಲಾಖೆಯು ಕಾರ್ಮಿಕರು ಮತ್ತು ಸ್ಥಳೀಯ ಮಾಲೀಕರ ನಡುವೆ ಮಾತುಕತೆ ನಡೆಸಲು ಅನುವು ಮಾಡಿಕೊಟ್ಟಿದ್ದು ಅದು ಈಗ ಫಲ ನೀಡುವ ಹಂತಕ್ಕೆ ಬಂದಿದೆ. ಆ ಪ್ರಕಾರ, ಸ್ಥಳೀಯ ಮಾಲೀಕರು ಯಾವ ಉದ್ಯೋಗಿಯನ್ನು ಕೆಲಸದಿಂದ ತೆಗೆದು ಹಾಕದಂತೆ ಮನವೊಲಿಸಲಾಗಿದೆ ಮತ್ತು ಕಾರ್ಮಿಕರಿಗೆ ಬಾಕಿ ಇರುವ ಹಣವನ್ನು ಆದಷ್ಟು ಬೇಗನೇ ನೀಡಲು ಒಪ್ಪಿಸಲಾಗಿದೆ.
ಪ್ರಾಯಶಃ ಇನ್ನು ಮೂರು ಅಥವಾ ನಾಲ್ಕು ದಿನಗಳಲ್ಲಿ ಈ ಎಲ್ಲಾ ವಿಚಾರಕ್ಕೆ ಸಂಬಂಧಿಸಿದಂತೆ, ಎರಡು ಕಡೆಯವರು ಒಂದು ಒಪ್ಪಂದಕ್ಕೆ ಬರಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆ ಪ್ರಕಾರ, ಇನ್ನು ಮುಂದೆ ಎಲ್ಲ ಕಾರ್ಮಿಕರನ್ನು ಕಂಪೆನಿ ನೇರವಾಗಿ ಉದ್ಯೋಗಕ್ಕೆ ತೆಗೆದುಕೊಳ್ಳಲಿದೆ. ಮತ್ತು ಇಷ್ಟು ದಿನ ಯಾವ ಗುತ್ತಿಗೆದಾರ ಸಂಸ್ಥೆ ಈ ಕಾರ್ಮಿಕರನ್ನು ಪೂರೈಸುತ್ತಿತ್ತೋ, ಅದನ್ನು ಆ ಜವಾಬ್ದಾರಿಯಿಂದ ತೆಗೆದು ಹಾಕಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮತ್ತು ಬಾಕಿ ಇರುವ ವೇತನ ಮತ್ತು ಇನ್ನಿತರೆ ಸೌಲಭ್ಯವನ್ನು ಆದಷ್ಟು ಬೇಗ ನೀಡಲು ನಿರ್ಧರಿಸಲಾಗಿದೆ. ಇನ್ನು ಮುಂದೆ ಕಾರ್ಮಿಕರನ್ನು ತೆಗೆದುಕೊಳ್ಳುವಾಗ ಅವರನ್ನು ಗುತ್ತಿಗೆ ಆಧಾರಿತವಾಗಿ ತೆಗೆದುಕೊಳ್ಳಬೇಕೋ? ಆಥವಾ ಖಾಯಂ ಉದ್ಯೋಗಿಯಾಗಿ ತೆಗೆದುಕೊಳ್ಳಬೇಕೋ ಎಂಬ ವಿಚಾರ ಮಾತ್ರ ಇನ್ನೂ ನಿರ್ಣಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಆದರೆ, ಪೊಲೀಸರು ನಡೆಸುತ್ತಿರುವ ತನಿಖೆಯಲ್ಲಿ ಕಾರ್ಮಿಕ ಇಲಾಖೆ ಯಾವ ಹಸ್ತಕ್ಷೇಪವನ್ನೂ ಮಾಡುವುದಿಲ್ಲ. ಯಾರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದೆಯೋ ಅದನ್ನು ಹಿಂತೆಗೆದುಕೊಳ್ಳುವ ಕುರಿತಾಗಿ ಕಾರ್ಮಿಕ ಇಲಾಖೆಯು ಪೊಲೀಸ್ ತನಿಖೆಯಲ್ಲಿ ಮೂಗು ತೂರಿಸುವುದಿಲ್ಲ ಎಂದೂ ಮೂಲಗಳು ಹೇಳಿವೆ.
Published On - 3:30 pm, Mon, 21 December 20