ಸಮಗ್ರ ಕರ್ನಾಟಕ ವರದಿ: ಯಾವ ಜಿಲ್ಲೆಯಲ್ಲಿ ಎಷ್ಟು ದಿನ ಲಾಕ್​ಡೌನ್? ಜಿಲ್ಲಾವಾರು ನಿಯಮಗಳು ಹೇಗಿವೆ? ಇಲ್ಲಿದೆ ಸಂಪೂರ್ಣ ಮಾಹಿತಿ

District Lockdown Updates: ಕರ್ನಾಟಕದಲ್ಲಿ ಜಿಲ್ಲಾ ಮಟ್ಟದಲ್ಲಿ ಲಾಕ್​ಡೌನ್​ ವಿಸ್ತರಣೆ, ಸಡಿಲಿಕೆ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಸದ್ಯ ಯಾವ ಜಿಲ್ಲೆಗಳಲ್ಲಿ ಎಷ್ಟು ದಿನ ಲಾಕ್​ಡೌನ್​ ಇರಲಿದೆ. ಯಾವೆಲ್ಲಾ ನಿಯಮಗಳು ಜಾರಿಯಲ್ಲಿವೆ ಎಂಬ ವಿವರ ಇಲ್ಲಿದೆ.

ಸಮಗ್ರ ಕರ್ನಾಟಕ ವರದಿ: ಯಾವ ಜಿಲ್ಲೆಯಲ್ಲಿ ಎಷ್ಟು ದಿನ ಲಾಕ್​ಡೌನ್? ಜಿಲ್ಲಾವಾರು ನಿಯಮಗಳು ಹೇಗಿವೆ? ಇಲ್ಲಿದೆ ಸಂಪೂರ್ಣ ಮಾಹಿತಿ
ಪ್ರಾತಿನಿಧಿಕ ಚಿತ್ರ
Follow us
Skanda
| Updated By: Digi Tech Desk

Updated on:May 31, 2021 | 9:39 AM

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆ ಸಂಪೂರ್ಣ ನಿಯಂತ್ರಣಕ್ಕೆ ಬರುವ ತನಕವೂ ಜನ ಸಂಚಾರವನ್ನು ಹದ್ದುಬಸ್ತಿನಲ್ಲಿಡಲು ಸರ್ಕಾರ ಆಲೋಚಿಸುತ್ತಿದೆ. ಲಾಕ್​ಡೌನ್​ನಿಂದ ಆರ್ಥಿಕವಾಗಿ ನಷ್ಟವಾಗುತ್ತಿದೆ ನಿಯಮ ಸಡಿಲಿಸಿ ಎಂದು ಕೆಲವರು ಅಭಿಪ್ರಾಯಪಡುತ್ತಿರುವರಾದರೂ ಹೆಚ್ಚಿನ ಸಚಿವರು ಹಾಗೂ ಅಧಿಕಾರಿಗಳು ಸದ್ಯದ ಪರಿಸ್ಥಿತಿಯಲ್ಲಿ ಲಾಕ್​ಡೌನ್​ ಮುಂದುವರಿಸುವುದೇ ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಕಾರಣಗಳಿಂದಾಗಿ ಜಿಲ್ಲಾ ಮಟ್ಟದಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿಕೊಂಡು ಆಯಾ ಜಿಲ್ಲೆಗಳ ಪರಿಸ್ಥಿತಿ ನಿರ್ವಹಣೆಗೆ ಅನುವಾಗುವಂತೆ ನಿಯಮ ರೂಪಿಸಿಕೊಳ್ಳಲಾಗುತ್ತಿದೆ. ಆದರೆ, ಹಲವು ಜಿಲ್ಲೆಗಳಲ್ಲಿ ವಾರಪೂರ್ತಿ ಲಾಕ್​ಡೌನ್​ ಮಾಡಿ ಜನರನ್ನು ಮನೆಯೊಳಗೆ ಕೂರಿಸಿದರೂ, ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಿದ ಕೂಡಲೇ ಜನ ಗುಂಪುಗುಂಪಾಗಿ ಮಾರುಕಟ್ಟೆಗಳತ್ತ ದೌಡಾಯಿಸುತ್ತಿರುವುದು ಲಾಕ್​ಡೌನ್​ನ ಮೂಲ ಉದ್ದೇಶವೇ ವ್ಯರ್ಥವಾಗುವಂತೆ ಆಗುತ್ತಿದೆ.

ಬೆಂಗಳೂರಿನ ಕೆ.ಆರ್.ಮಾರ್ಕೆಟ್‌ನಲ್ಲಿ ಇಂದು (ಮೇ 31) ಎಂದಿನಂತೆ ವ್ಯಾಪಾರ ವಹಿವಾಟು ನಡೆಯುತ್ತಿದೆ. ಬೆಳಗ್ಗೆ 10 ಗಂಟೆ ತನಕ ಅಗತ್ಯವಸ್ತು ಖರೀದಿಗೆ ಅವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ ಬೇರೆ ಬೇರೆ ಭಾಗದಿಂದ ಬಂದಿರುವ ಗ್ರಾಹಕರು ತಮಗೆ ಬೇಕಾದ ಸಾಮಾಗ್ರಿಗಳನ್ನು ಕೊಳ್ಳುತ್ತಿದ್ದಾರೆ. ಟೌನ್​ಹಾಲ್ ನಿಂದ ಚರ್ಚ್ ಸರ್ಕಲ್ ತನಕವೂ ತಳ್ಳುವ ಗಾಡಿಯಲ್ಲಿ ವ್ಯಾಪಾರ ಜೋರಾಗಿ ಸಾಗುತ್ತಿದೆ. ಇತ್ತ ಶಿವಾಜಿನಗರದಲ್ಲಿ ವಾಹನ ಹಾಗೂ ಜನರ ಓಡಾಟ ಕಡಿಮೆ ಇದೆ. ರಸೆಲ್ ಮಾರ್ಕೆಟ್​ನಲ್ಲಿ ಇಲ್ಲಿಯ ತನಕ ಜನರು ವಿರಳವಾಗಿದ್ದು, ಮಾಂಸದ ಅಂಗಡಿಗಳತ್ತ ಹೆಚ್ಚು ಜನರು ಸುಳಿದಿಲ್ಲ. ಅಲ್ಲಲ್ಲಿ ಟೀ ಅಂಗಡಿಗಳ ಮುಂದೆ ಕೆಲ ಮಂದಿ ಸೇರಿರುವುದಷ್ಟೇ ಕಂಡುಬರುತ್ತಿದೆ. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಶಿವಾಜಿನಗರದಲ್ಲಿ ಯುವಕರ ಗುಂಪಂದು ಲಾಕ್​ಡೌನ್​ ಇರುವುದನ್ನೂ ಲೆಕ್ಕಿಸದೇ ರಸ್ತೆಗಳಲ್ಲಿ ನಿಂತು ಫೋಟೋಶೂಟ್ ಮಾಡಿಸಿಕೊಳ್ಳುವ ಮೂಲಕ ಬೇಜವಾಬ್ದಾರಿ ನಡೆ ಪ್ರದರ್ಶಿಸುವುದು ಕಂಡುಬಂದಿದೆ. ರಸ್ತೆ ಕಾಮಗಾರಿಗಾಗಿ ಬಂದಿರುವ ಜೆಸಿಬಿ ಮೇಲೆ ನಿಂತು ವಿವಿಧ ಭಂಗಿಯಲ್ಲಿ ಫೋಟೋಗಳಿಗೆ ಯುವಕರು ಪೋಸ್​ ಕೊಡುತ್ತಿದ್ದಾರೆ.

ಕೆಲ ಪ್ರದೇಶಗಳಲ್ಲಿ ಜನರು ಬೇಕಾಬಿಟ್ಟಿ ಓಡಾಡುತ್ತಿದ್ದು ವಾಹನ ಸಂಚಾರ ಹೆಚ್ಚುತ್ತಿರುವ ಕಾರಣ ಪೊಲೀಸರು ಅನಗತ್ಯ ಓಡಾಟಕ್ಕೆ ತಡೆಯೊಡ್ಡಲು ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳುವ ಸೂಚನೆ ನೀಡಿದ್ದಾರೆ. ವಾಹನಗಳಲ್ಲಿ ಜನರನ್ನು ತುಂಬಿಸಿಕೊಂಡು, ದೈಹಿಕ ಅಂತರ ಕಾಪಾಡದೇ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸುವುದಾಗಿ ಪದೇ ಪದೇ ಎಚ್ಚರಿಕೆ ನೀಡುತ್ತಿದ್ದಾರೆ. ಕಾರ್​ನಲ್ಲಿ ಡ್ರೈವರ್ ಸೇರಿ ಐದು ಜನರು, ಆಟೋದಲ್ಲಿ ಡ್ರೈವರ್ ಸೇರಿ ನಾಲ್ಕು ಜನರು ಸಂಚರಿಸುತ್ತಿರುವುದು ಕಂಡು ಬರುತ್ತಿದ್ದು ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ.

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯಲ್ಲಿ ಕಠಿಣ ಲಾಕ್​ಡೌನ್​ನಿಂದ ಇಂದು ವಿನಾಯಿತಿ ನೀಡಲಾಗಿದ್ದು, ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಅಗತ್ಯವಸ್ತು ಖರೀದಿಗೆ ಜಿಲ್ಲಾಡಳಿತ ಅವಕಾಶ ನೀಡಿದೆ. ಹೆಚ್ಚಿನ ಒತ್ತಡ ತಪ್ಪಿಸಲು 12 ಗಂಟೆ ತನಕ ಅವಕಾಶ ನೀಡಲಾಗಿದ್ದು, ಮತ್ತೆ ಗುರುವಾರ ಖರೀದಿಗೆ ಅವಕಾಶ ಸಿಗಲಿದೆ. ಹೀಗಾಗಿ ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಗೆ ಬನ್ನಿ. ಇಲ್ಲವಾದರೆ ಮನೆಯಲ್ಲೇ ಸುರಕ್ಷಿತವಾಗಿರಿ. ಮನೆಯಿಂದ ಒಬ್ಬರು ಮಾತ್ರ ಖರೀದಿಗೆ ಬಂದರೆ ಸೂಕ್ತ. ಎಲ್ಲರೂ ಮಾರುಕಟ್ಟೆಗೆ ಬರುವ ಬದಲು ನಿಮ್ಮ ಬಡಾವಣೆಗಳಲ್ಲೇ ತಳ್ಳು ಗಾಡಿಯವರಿಂದ ತರಕಾರಿ ಖರೀದಿಸಿ ಎಂದು ನಗರ ಪೊಲೀಸ್ ಆಯುಕ್ತ ಡಾ ಚಂದ್ರಗುಪ್ತ ಸೂಚನೆ ನೀಡಿದ್ದಾರೆ. ಲಾಕ್‌ಡೌನ್ ವಿನಾಯತಿ ಜನರ ಅನುಕೂಲಕ್ಕಾಗಿ ನೀಡಲಾಗಿದೆ. ಖರೀದಿ ವೇಳೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ, ಮಾಸ್ಕ್ ಸಮರ್ಪಕವಾಗಿ ಧರಿಸಿ, ಕೊವಿಡ್ ನಿಯಮಗಳನ್ನು ಪಾಲಿಸಿ ಎಂದು ತಿಳಿಸಿದ್ದಾರೆ.

ಖರೀದಿ ವೇಳೆ ವ್ಯಾಪಾರಸ್ತರು ಕೊವಿಡ್ ನಿಯಮ ಪಾಲಿಸಬೇಕು. ಜನರು ಗುಂಪು ಸೇರದಂತೆ ಎಚ್ಚರ ವಹಿಸಬೇಕು. ಅಂಗಡಿ‌ ಮುಂದೆ ಗುಂಪು ಕಂಡು ಬಂದರೆ ಅಂಗಡಿ ಮಾಲೀಕರ ವಿರುದ್ದ ಪ್ರಕರಣ ದಾಖಲಿಸಲಾಗುವುದು. ಇಂದು ಸಹ ಪೊಲೀಸರ ತಪಾಸಣೆ ಕಾರ್ಯ ಎಂದಿನಂತೆ ನಡೆಯಲಿದ್ದು, ಅನಗತ್ಯವಾಗಿ ಓಡಾಡುವವರ ವಾಹನ ವಶಕ್ಕೆ ಪಡೆಯಲಾಗುವುದು ಮತ್ತು ಪ್ರಕರಣ ದಾಖಲಿಸಲಾಗುವುದು ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ. ಇಷ್ಟಾದರೂ ಸಂತೆಪೇಟೆ, ಶಿವರಾಂಪೇಟೆ, ಸಯ್ಯಾಜಿರಾವ್ ರಸ್ತೆಯಲ್ಲಿ ಹಣ್ಣು, ಹೂವು, ತರಕಾರಿ, ದಿನಸಿ‌ ಖರೀದಿಗೆ ಜನಜಂಗುಳಿ ಸೇರಿದ್ದು, ದೈಹಿಕ ಅಂತರ ಮರೆತು ಖರೀದಿಯಲ್ಲಿ ತೊಡಗಿದ ಜನರನ್ನು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗಿಳಿದ ವಾಹನಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಗಿದೆ.

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ನಾಳೆ 10 ಗಂಟೆಯಿಂದ ಒಂದು ವಾರ ಕಾಲ ಸಂಪೂರ್ಣ ಲಾಕ್ ಡೌನ್ ಜಾರಿ ಮಾಡಲಾಗಿದೆ. ನಾಳೆಯಿಂದ ಬೆಳಗ್ಗೆ 6ರಿಂದ 8 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ ಇರಲಿದ್ದು, ಮದ್ಯದಂಗಡಿಗಳು ಕೂಡಾ ಬಂದ್ ಆಗಿರಲಿವೆ. ಅನಗತ್ಯವಾಗಿ ಹೊರಗೆ ಬಂದರೆ ವಾಹನಗಳನ್ನು ಜಪ್ತಿ ಮಾಡಿ, ಅರೆಸ್ಟ್ ಮಾಡಿ ಎಂದು ಎಸ್​ಪಿಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರಪ್ಪ ಸೂಚನೆ ನೀಡಿದ್ದಾರೆ. ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ತಾಲ್ಲೂಕುಗಳು ಇಂದಿನಿಂದ ಒಂದು ವಾರ ಸಂಪೂರ್ಣ ಲಾಕ್​ಡೌನ್ ಆಗುತ್ತಿದ್ದು, ನಿನ್ನೆ ಅಗತ್ಯ ವಸ್ತುಗಳ ಖರೀದಿಗಾಗಿ ಜನಜಾತ್ರೆಯೇ ಉಂಟಾಗಿತ್ತು.

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜೂನ್​ 3ರ ಬೆಳಗ್ಗೆ 6 ಗಂಟೆಯಿಂದ ಜೂನ್​ 7ರ ಬೆಳಗ್ಗೆ 6 ಗಂಟೆವರೆಗೆ ಕಠಿಣ ಲಾಕ್​ಡೌನ್ ವಿಧಿಸಲಾಗುವುದು ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಹೀಗಾಗಿ ಇಂದಿನಿಂದ ಮೂರು ದಿನಗಳ ಕಾಲ ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6ರಿಂದ 10ರವರೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಮೂರು ದಿನಗಳ ಕಾಲ ನಿಗದಿ ಪಡಿಸಿದ ಸಮಯದಲ್ಲಿ ದಿನಸಿ, ತರಕಾರಿ ಎಪಿಎಂಸಿ, ಹೂವು ಮಾರುಕಟ್ಟೆ, ಪೆಟ್ರೋಲ್ ಬಂಕ್, ನ್ಯಾಯಬೆಲೆ ಅಂಗಡಿ ತೆರೆದಿರಲಿದ್ದು, ಹೊಟೇಲ್​, ಬಾರ್​ಗಳಲ್ಲಿ ಪಾರ್ಸೆಲ್​ಗೆ ಅವಕಾಶ ನೀಡಲಾಗುವುದು. ಅದಾದ ನಂತರ ಜೂನ್​ 3ರಿಂದ 7ನೇ ತಾರೀಖಿನ ತನಕ ಸಂಪೂರ್ಣ ನಿರ್ಬಂಧ ವಿಧಿಸಲಾಗುವುದು.

ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಜೂ.7ರವರೆಗೆ ಕಠಿಣ ಲಾಕ್‌ಡೌನ್ ಇರಲಿದೆ. ಬೆಳಗ್ಗೆ 6ರಿಂದ 8ರವರೆಗೆ ಮಾತ್ರ ಅಗತ್ಯವಸ್ತು ಖರೀದಿಗೆ ಅವಕಾಶ ಇರಲಿದ್ದು, ಹಾಲು,‌ ಹಣ್ಣು, ತರಕಾರಿ ಖರೀದಿ ಮಾಡಬಹುದಾಗಿದೆ. ಈ ವೇಳೆಯಲ್ಲಿ ಹೊಟೇಲ್​ಗಳು ಪಾರ್ಸೆಲ್​ ನೀಡಲಿದ್ದು, ಬೆಳಿಗ್ಗೆ 8 ರಿಂದ ಸಂಜೆ 4ರವರೆಗೆ ಹೋಮ್ ಡೆಲೆವರಿ ಸೌಲಭ್ಯಕ್ಕೆ ಅವಕಾಶ ನೀಡಲಾಗಿದೆ. ಇದರ ಜತೆಗೆ, ನಾಳೆಯಿಂದ ಜಿಲ್ಲೆಯಲ್ಲಿ ಮದ್ಯ ಮಾರಾಟಕ್ಕೂ ಅನುಮತಿ ಸಿಕ್ಕಿದ್ದು, ಬೆಳಗ್ಗೆ 6ರಿಂದ 8ರವರೆಗೆ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಕೋಲಾರ: ಕೋಲಾರ ಜಿಲ್ಲೆಯಲ್ಲಿ ಮೇ 27ರಿಂದ ಇಂದು ಬೆಳಗ್ಗೆ 6ರವರೆಗೆ ಇದ್ದ 4 ದಿನಗಳ ಕಠಿಣ ಲಾಕ್‌ಡೌನ್ ಅಂತ್ಯವಾಗಿದೆ. ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೂ ಅವಕಾಶ ಇರಲಿಲ್ಲವಾಗಿದ್ದು, ಇಂದಿನಿಂದ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಆದರೆ, ಈಗ ಸರ್ಕಾರದ ಮಾರ್ಗಸೂಚಿಯಂತೆ ಲಾಕ್‌ಡೌನ್ ಮುಂದುವರೆಯಲಿದೆ. ಜನರು ನಿಯಮ ಪಾಲನೆ ಮಾಡಬೇಕು ಎಂದು ಜಿಲ್ಲಾಡಳಿತ ತಿಳಿಸಿದೆ.

ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ಇಂದಿನಿಂದ ಜೂನ್​ 7ರವರೆಗೆ ಕಠಿಣ ಲಾಕ್‌ಡೌನ್ ಜಾರಿಯಲ್ಲಿರಲಿದೆ. ಆದರೂ ಅನಗತ್ಯವಾಗಿ ಸಂಚರಿಸುತ್ತಿರುವ ಜನರು ನಿಯಮಗಳತ್ತ ಗಮನ ಹರಿಸುತ್ತಿಲ್ಲ. ಸಂಪೂರ್ಣ ಲಾಕ್​ಡೌನ್​ ಇರಲಿದೆ ಎಂದು ಆದೇಶವಿದ್ದರೂ ಪೊಲೀಸರು ಸಹ ವಾಹನಗಳ ತಪಾಸಣೆ ನಡೆಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಅಂಗಡಿ ಮುಂಗಟ್ಟು ಸಂಪೂರ್ಣ ಬಂದ್ ಆಗಿದ್ದರೂ ಜನರ ಓಡಾಟ ಮಾತ್ರ ನಿಂತಿಲ್ಲ.

ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ‌ ಕೊರೊನಾ ಸೋಂಕು ವ್ಯಾಪಿಸಿದ ಹಿನ್ನೆಲೆಯಲ್ಲಿ ಇಂದಿನಿಂದ ಜೂನ್ 7ರ ತನಕ ಸಂಪೂರ್ಣ ಲಾಕ್​ಡೌನ್ ಜಾರಿಯಲ್ಲಿರಲಿದೆ. ಅಲ್ಲದೇ, ಜೂನ್ 5 ರಿಂದ ಮುಂದಿನ 15 ದಿನಗಳ ಕಾಲ ಮದುವೆ, ಧಾರ್ಮಿಕ ಸಮಾರಂಭಗಳನ್ನು ಕೂಡ ಸಂಪೂರ್ಣ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾಹಿತಿ ನೀಡಿದ್ದಾರೆ. ಇಂದು ಹಾಗೂ ಜೂನ್ 3 ರಂದು ಮಾತ್ರ ಬೆಳಿಗ್ಗೆ 6 ರಿಂದ 12 ರವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ ಕೊಡಲಾಗಿದೆ.

ಮಂಡ್ಯ: ಮಂಡ್ಯದಲ್ಲಿ ಇಂದಿನಿಂದ 4 ದಿನ ಕಠಿಣ ಲಾಕ್‌ಡೌನ್ ವಿಧಿಸಲಾಗಿದೆ. ಜಿಲ್ಲೆಯಲ್ಲಿ 4 ದಿನ ಬ್ಯಾಂಕ್‌ ಸೇವೆಗಳಿಗೂ ನಿರ್ಬಂಧ ಹೇರಲಾಗಿದ್ದು, ಹಾಲಿನ ಬೂತ್, ಕೃಷಿ ಚಟುವಟಿಕೆಗೆ ಪೂರಕ ಅಂಗಡಿ, ನ್ಯಾಯಬೆಲೆ ಅಂಗಡಿಗಳಿಗೆ ಮಾತ್ರ ಅವಕಾಶ ಕೊಡಲಾಗಿದೆ. ಲಾಕ್​ಡೌನ್​ ಇರುವ ನಾಲ್ಕು ದಿನಗಳ ಕಾಲ ದಿನಸಿ, ತರಕಾರಿ ಖರೀದಿಗೂ ಅವಕಾಶ ಇಲ್ಲ . ಹೊಟೇಲ್‌, ಮದ್ಯದಂಗಡಿ ಸಹ ಸಂಪೂರ್ಣ ಬಂದ್ ಎಂದು ಜಿಲ್ಲಾಧಿಕಾರಿ ಅಶ್ವತಿ ಮಾಹಿತಿ ನೀಡಿದ್ದಾರೆ.

ಚಿತ್ರದುರ್ಗ: ಚಿತ್ರದುರ್ಗ ನಗರದಲ್ಲಿ ಜನರು ಇಂದು ತರಕಾರಿ ಖರೀದಿಗೆ ಮುಗಿಬಿದ್ದಿದ್ದಾರೆ. ಜಯದೇವ ಕ್ರೀಡಾಂಗಣದ ತರಕಾರಿ ಮಾರುಕಟ್ಟೆಯಲ್ಲಿ ದೈಹಿಕ ಅಂತರ ಮರೆತು ತರಕಾರಿ, ಸೊಪ್ಪು ಖರೀದಿ ನಡೆಯುತ್ತಿದೆ. ದಿನಬಿಟ್ಟು ದಿನ ಸಂಪೂರ್ಣ ಲಾಕ್​ಡೌನ್ ಹಿನ್ನೆಲೆ ಇಂದು ತರಕಾರಿ ಮಾರುಕಟ್ಟೆಯಲ್ಲಿ ಜನಸಂದಣಿ ಹೆಚ್ಚಿದ್ದು, ದೈಹಿಕ ಅಂತರ ಕಾಯ್ದುಕೊಳ್ಳಲು ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ.

ಬಳ್ಳಾರಿ: ಬಳ್ಳಾರಿಯಲ್ಲಿ ಇಂದಿನಿಂದ ಎರಡು ದಿನ ಲಾಕ್​ಡೌನ್ ಸಡಿಲಿಕೆ ಹಿನ್ನೆಲೆ ಅಗತ್ಯ ವಸ್ತುಗಳ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ಬಳ್ಳಾರಿಯ ದಿನಸಿ, ಹೋಲ್​ಸೇಲ್​ ಮಾರುಕಟ್ಟೆಗಳಲ್ಲಿ ಜನಜಾತ್ರೆಯೇ ಉಂಟಾಗಿದ್ದು, ವಾಹನಗಳ ದಟ್ಟಣೆಯಿಂದ ಟ್ರಾಫಿಕ್ ಜಾಮ್ ಆಗಿದೆ. ತಾತ್ಕಾಲಿಕ ತರಕಾರಿ ಮಾರುಕಟ್ಟೆಯಲ್ಲೂ ಜನರು ಮುಗಿಬಿದ್ದಿದ್ದು, ನಾಳೆ ಮಧ್ಯಾಹ್ನ 12 ಗಂಟೆಯಿಂದ ಜೂನ್ 7 ರವರೆಗೆ ಸಂಪೂರ್ಣ ಲಾಕ್​ಡೌನ್ ಹಿನ್ನೆಲೆ ಇವತ್ತು ಮತ್ತು ನಾಳೆ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿರುವುದರಿಂದ ಜನ ಮಾರುಕಟ್ಟೆಗಳಿಗೆ ಲಗ್ಗೆ ಇಟ್ಟಿದ್ದಾರೆ.

ರಾಯಚೂರು: ರಾಯಚೂರಿನಲ್ಲಿ ಲಾಕ್​ಡೌನ್​ ವಿಸ್ತರಣೆ ಮಾಡಲಾಗಿದ್ದು, ಇಂದು ಮಧ್ಯಾಹ್ನ 2 ಗಂಟೆಯಿಂದ ಜೂನ್ 3ರವರೆಗೆ ಸಂಪೂರ್ಣ ಲಾಕ್​ಡೌನ್ ಘೋಷಿಸಲಾಗಿದೆ. ಈ ವೇಳೆ ಅನಗತ್ಯವಾಗಿ ಸಂಚರಿಸುವುದಾಗಲೀ, ನಿಯಮ ಉಲ್ಲಂಘಿಸುವುದಾಗಲೀ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಾಸನ: ಹಾಸನ ಜಿಲ್ಲೆಯಲ್ಲಿ ಮತ್ತೆ ಒಂದು ವಾರ ಲಾಕ್​ಡೌನ್​ ವಿಸ್ತರಣೆ ಮಾಡಲಾಗಿದೆ. ಆದರೆ, ವಾರದಲ್ಲಿ ಮೂರು ದಿನ ಅಗತ್ಯ ವಸ್ತು ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ. ಜೂನ್ 7ರವರೆಗೆ ಕಠಿಣ ಲಾಕ್​ಡೌನ್ ಜಾರಿಯಲ್ಲಿರಲಿದ್ದು, ಸೋಮವಾರ, ಬುಧವಾರ, ಶುಕ್ರವಾರ ಈ ಮೂರು ದಿನಗಳ ಕಾಲ ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಉಳಿದ ದಿನಗಳಲ್ಲಿ ಅಂಗಡಿಗಳು ಸಂಪೂರ್ಣ ಬಂದ್ ಆಗಲಿವೆ.

ಮಡಿಕೇರಿ: ಮಂಜಿನನಗರಿ ಮಡಿಕೇರಿಯಲ್ಲಿ ಜೂನ್ 7ರವರೆಗೆ ಲಾಕ್​ಡೌನ್ ವಿಸ್ತರಣೆ ಮಾಡಲಾಗಿದೆ. ಮಂಗಳವಾರ, ಗುರುವಾರ, ಶನಿವಾರ, ಭಾನುವಾರ ಸಂಪೂರ್ಣ ಬಂದ್ ಮಾಡಲಾಗುತ್ತಿದ್ದು, ದಿನ ಬಿಟ್ಟು ದಿನ ಅಂದರೆ ಸೋಮವಾರ, ಬುಧವಾರ, ಶುಕ್ರವಾರ ಬೆಳಗ್ಗೆ 6 ರಿಂದ 10 ರವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ ಕೊಡಲಾಗಿದೆ.

ಹಾವೇರಿ: ಹಾವೇರಿ ಜಿಲ್ಲೆಯಲ್ಲಿ ಈಗಾಗಲೇ ಮೇ 21ರಿಂದ ಜೂನ್ 7ರವರೆಗೆ ಲಾಕ್​ಡೌನ್ ಘೋಷಣೆ ಆಗಿದೆ. ವಾರದಲ್ಲಿ ಮೂರು ದಿನ ಅಂದರೆ ಮಂಗಳವಾರ, ಗುರುವಾರ ಮತ್ತು ಶನಿವಾರ ಮಾತ್ರ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ತರಕಾರಿ, ದಿನಸಿ ಅಂಗಡಿಗಳಿಗೆ ಅವಕಾಶ ನೀಡಲಾಗಿದೆ.

ಯಾದಗಿರಿ: ಯಾದಗಿರಿಯಲ್ಲಿ ನಾಲ್ಕು ದಿನಗಳ ಲಾಕ್​ಡೌನ್​ ಜಾರಿಯಲ್ಲಿದೆ. ಇಂದಿನಿಂದ ಜೂನ್ 3 ರ ಬೆಳಿಗ್ಗೆ 6 ಗಂಟೆವರೆಗೆ ಸಂಪೂರ್ಣ ಲಾಕ್​ಡೌನ್ ಜಾರಿಯಲ್ಲಿರಲಿದೆ. ಈ ವೇಳೆ ಅನಗತ್ಯವಾಗಿ ಸಂಚರಿಸುವುದಾಗಲೀ, ನಿಯಮ ಉಲ್ಲಂಘಿಸುವುದಾಗಲೀ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನುಳಿದಂತೆ ಉಡುಪಿ, ತುಮಕೂರು, ಬಾಗಲಕೋಟೆ, ವಿಜಯಪುರ, ಬೀದರ್ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಸರ್ಕಾರದ ಆದೇಶದಂತೆ ಜೂನ್ 7ರವರೆಗೆ ಲಾಕ್​ಡೌನ್ ಜಾರಿಯಲ್ಲಿರಲಿದೆ. ಎಂದಿನಂತೆ ಬೆಳಗ್ಗೆ 6ರಿಂದ 10 ಗಂಟೆವರೆಗೆ ಖರೀದಿಗೆ ಅವಕಾಶವಿರಲಿದೆ. ಇತ್ತ ಚಿಕ್ಕಮಗಳೂರಿನಲ್ಲಿ ಮೇ 20ರಿಂದ ಜಾರಿಮಾಡಲಾಗಿರುವ ಸಂಪೂರ್ಣ ಲಾಕ್​ಡೌನ್ ನಾಳೆಗೆ ಅಂತ್ಯವಾಗಲಿದೆ. ಹೀಗಾಗಿ ಮುಂದಿನ ಆದೇಶವನ್ನು ಇಂದು ಸಂಜೆಯೊಳಗೆ ಜಿಲ್ಲಾಧಿಕಾರಿಗಳು ಹೊರಡಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: ಸ್ಥಿತಿಗತಿ ನೋಡಿಕೊಂಡು ಲಾಕ್​ಡೌನ್​ ಬಗ್ಗೆ ತೀರ್ಮಾನ, ಜೂನ್ 7ರವರೆಗೆ ಎಂದಿನಂತೆ ಲಾಕ್​ಡೌನ್​ ಇರುತ್ತದೆ: ಸಿಎಂ ಬಿ.ಎಸ್.ಯಡಿಯೂರಪ್ಪ 

ಕರ್ನಾಟಕ ಲಾಕ್​ಡೌನ್ ಹಿನ್ನೆಲೆ; ಮೇ ತಿಂಗಳ ಮೋಟಾರು ವಾಹನ ತೆರಿಗೆಗೆ ರಾಜ್ಯದಲ್ಲಿ ವಿನಾಯಿತಿ ಘೋಷಣೆ

Published On - 8:39 am, Mon, 31 May 21

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ