Lokayukta Raid: ಕರ್ನಾಟಕದ 62 ಕಡೆ ಲೋಕಾಯುಕ್ತ ದಾಳಿ; ಕೋಟ್ಯಂತರ ನಗದು, ಚಿನ್ನಾಭರಣ, ಅಕ್ರಮ ಆಸ್ತಿ ಪತ್ತೆ

ರಾಜಧಾನಿ ಬೆಂಗಳೂರಿನ 10 ಕಡೆ ದಾಳಿ ನಡೆಸಲಾಗಿದೆ. ಬೆಂಗಳೂರಿನ ಕೆ.ಆರ್​​.ಪುರಂ ತಹಶೀಲ್ದಾರ್ ಆಗಿರುವ ಅಜಿತ್ ರೈ ಮನೆ, ಕಚೇರಿ ಸೇರಿ 11 ಕಡೆ ಲೋಕಾಯುಕ್ತ ದಾಳಿ ನಡೆಸಿದ್ದು, ​ಮನೆಯಲ್ಲಿ 40 ಲಕ್ಷ ನಗದು ಸೇರಿ 1 ಕೋಟಿ 90 ಲಕ್ಷ ಮೌಲ್ಯದ ವಸ್ತುಗಳು, 100 ಎಕರೆಗೂ ಹೆಚ್ಚು ಬೇನಾಮಿ ಆಸ್ತಿ ದಾಖಲೆ ಪತ್ರಗಳು ಪತ್ತೆ ಆಗಿವೆ.

Lokayukta Raid: ಕರ್ನಾಟಕದ 62 ಕಡೆ ಲೋಕಾಯುಕ್ತ ದಾಳಿ; ಕೋಟ್ಯಂತರ ನಗದು, ಚಿನ್ನಾಭರಣ, ಅಕ್ರಮ ಆಸ್ತಿ ಪತ್ತೆ
ಕಲಬುರಗಿಯಲ್ಲಿ ಲೋಕಾಯುಕ್ತ ದಾಳಿ ವೇಳೆ ಪತ್ತೆಯಾದ ನಗದು, ಆಭರಣ
Follow us
TV9 Web
| Updated By: Ganapathi Sharma

Updated on: Jun 28, 2023 | 8:15 PM

ಬೆಂಗಳೂರು: ಕರ್ನಾಟಕ ರಾಜ್ಯದಾದ್ಯಂತ ಲೋಕಾಯುಕ್ತ ಅಧಿಕಾರಿಗಳು ಬುಧವಾರ ಭರ್ಜರಿ ಬೇಟೆಯಾಡಿದ್ದು (Lokayukta Raid), ಭ್ರಷ್ಟ ಕುಳಗಳನ್ನು ಬಯಲಿಗೆಳೆದು ಅವರ ಬಳಿ ಇದ್ದ ಅಪಾರ ಸಂಪತ್ತನ್ನು ಪತ್ತೆ ಮಾಡಿದ್ದಾರೆ.. ಕಂತೆ ಕಂತೆ ನೋಟು, ಕೆ.ಜಿಗಟ್ಟಲೇ ಬೆಳ್ಳಿ ಬಂಗಾರ, ಐಷಾರಾಮಿ ಕಾರು, ವಿದೇಶಿ ಸ್ಕಾಚು, ಆಸ್ತಿ ದಾಖಲೆಗಳ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ. 15 ಮಂದಿ ಲೋಕಾಯುಕ್ತ ಅಧಿಕಾರಿಗಳ ತಂಡ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ 62ಕ್ಕೂ ಹೆಚ್ಚು ಕಡೆ ಬೃಹತ್​ ಬೇಟೆಯನ್ನಾಡಿದೆ.

ರಾಜಧಾನಿ ಬೆಂಗಳೂರಿನ 10 ಕಡೆ ದಾಳಿ ನಡೆಸಲಾಗಿದೆ. ಬೆಂಗಳೂರಿನ ಕೆ.ಆರ್​​.ಪುರಂ ತಹಶೀಲ್ದಾರ್ ಆಗಿರುವ ಅಜಿತ್ ರೈ ಮನೆ, ಕಚೇರಿ ಸೇರಿ 11 ಕಡೆ ಲೋಕಾಯುಕ್ತ ದಾಳಿ ನಡೆಸಿದ್ದು, ​ಮನೆಯಲ್ಲಿ 40 ಲಕ್ಷ ನಗದು ಸೇರಿ 1 ಕೋಟಿ 90 ಲಕ್ಷ ಮೌಲ್ಯದ ವಸ್ತುಗಳು, 100 ಎಕರೆಗೂ ಹೆಚ್ಚು ಬೇನಾಮಿ ಆಸ್ತಿ ದಾಖಲೆ ಪತ್ರಗಳು ಪತ್ತೆ ಆಗಿವೆ. ಜತೆಗೆ 4 ಫಾರ್ಚೂನರ್​, 4 ಥಾರ್​, 1 ಲ್ಯಾಂಡ್​ ಕ್ರೂಸರ್​ ಪತ್ತೆ ಆಗಿದೆ.

ಜಂಟಿ ನಿರ್ದೇಶಕಿ ಮನೆಯಲ್ಲಿ ಅಕ್ರಮ ಹಣದ ‘ಕೃಷಿ’

ಬಾಗಲಕೋಟೆಯಲ್ಲೂ ಲೋಕಾಯುಕ್ತ ಅಧಿಕಾರಿಗಳ ಬೇಟೆ ಜೋರಾಗಿತ್ತು. ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚೇತನಾ ಪಾಟೀಲ್​ ಮನೆ ಮೇಲೆ ಲೋಕಾ ದಾಳಿ ಮಾಡಿದ್ದು, 32 ಲಕ್ಷ ನಗದು, ಚಿನ್ನಾಭರಣ, 31 ವ್ಯಾನಿಟಿ ಬ್ಯಾಗ್, ಬೆಳ್ಳಿ ಫ್ರೇಮ್​ ಇರುವ ಫೋಟೋ, 10ಕ್ಕೂ ಹೆಚ್ಚು ಲಗೇಜ್​ ಬ್ಯಾಗ್, ಚಿನ್ನದ ಬಳೆ, ಸರ, ಎರಡು ಆಮೆಗಳು ಪತ್ತೆ ಆಗಿವೆ. ಇಷ್ಟೇ ಅಲ್ಲ ಬೀಳಗಿ ಸಹಾಯಕ ಕೃಷಿ ನಿರ್ದೇಶಕ ಕೃಷ್ಣಾ ಶಿರೂರುಗೆ ಸೇರಿದ 4 ಕಡೆ ದಾಳಿ ಮಾಡಲಾಗಿದ್ದು, 71.88 ಲಕ್ಷ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಆಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಒಟ್ಟು 4 ಕಡೆ ಲೋಕಾಯುಕ್ತ ದಾಳಿ ನಡೆದಿದೆ. ಜಿಲ್ಲಾ ನಿರ್ಮಿತಿ ಕೇಂದ್ರಗಳ ಯೋಜನಾ ವ್ಯವಸ್ಥಾಪಕ ಗಂಗಾಧರ್​ ಮನೆ, ಹೋಟೆಲ್​, ಪೆಟ್ರೋಲ್​ ಬಂಕ್​ ಮೇಲೆ ದಾಳಿ ಮಾಡಲಾಗಿದೆ. ಈ ವೇಳೆ ಕೋಟ್ಯಂತರ ಮೌಲ್ಯದ 16 ನಿವೇಶನಗಳು, ಎರಡು ಮನೆಗಳು ದಾಖಲೆ ಪತ್ರ, 1 ರೆಸಾರ್ಟ್​, ಚಿನ್ನ ಬೆಳ್ಳಿ ಸಿಕ್ಕಿದೆ. ಒಟ್ಟು 3.76 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಆಗಿದೆ.

ಇದನ್ನೂ ಓದಿ: Lokayukta Raid: ಕರ್ನಾಟಕದಾದ್ಯಂತ ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳ ಮನೆ. ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ

ತುಮಕೂರಿನಲ್ಲಿ ಕೃಷಿ ಇಲಾಖೆ ಜಂಟಿ ಆಯುಕ್ತ ರವಿ ಎಂಬುವವರ ಮನೆ ಮೇಲೆ ದಾಳಿ ಮಾಡಲಾಗಿದೆ. ರವಿ ಅವರ ತುಮಕೂರು ಹಾಗೂ ರಾಮನಗರದ ಮನೆ ಮೇಲೆ ದಾಳಿ ಮಾಡಿದ್ದು, 4.27 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಆಗಿದೆ.

ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಫ್​ಡಿಎ ಆಗಿರುವ ಅಬ್ದುಲ್ ಬಶೀರ್‌ ಬಳಿ 14 ಲಕ್ಷ ನಗದು ಸೇರಿ 1.14 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. 3 ಸ್ಥಳಗಳಲ್ಲಿ ದಾಳಿ ಮಾಡಿದ್ದ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು.

ಹೆಸ್ಕಾಂ ‌ಕಾರ್ಯನಿರ್ವಾಹಕ ಇಂಜಿನಿಯರ್ ಶೇಖರ್ ಬಹುರೂಪಿ ಬಳಿ 3 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ವಿಜಯನಗರ ಜಿಲ್ಲೆ ಹರಪನಹಳ್ಳಿಯಲ್ಲಿ ಕಾರ್ಯನಿರ್ವಹಿಸ್ತಿರುವ ಶೇಖರ್ ಹನುಮಂತ್ ಬಹುರೂಪಿಗೆ ಸೇರಿದ 4 ಕಡೆ ಲೋಕಾಯುಕ್ತ ದಾಳಿ ನಡೆದಿದೆ.

ಕೋಲಾರ, ವಿಜಯಪುರ, ಕಲಬುರಗಿ, ಮಂಗಳೂರು, ಯಾದಗಿರಿ ಸೇರಿದ ಹಲವು ಕಡೆ ಲೋಕಾಯುಕ್ತ ಅಧಿಕಾರಿಗಳು ಮಿಂಚಿನ ಕಾರ್ಯಾಚರಣೆ ಮಾಡಿ, ಅಕ್ರಮ ಆಸ್ತಿ ಗಳಿಸಿದ್ದವರಿಗೆ ಆಘಾತ ನೀಡಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ